ICC Test Rankings: ಕೇವಲ 8 ಪಂದ್ಯಗಳಿಂದ 12ನೇ ಸ್ಥಾನಕ್ಕೇರಿದ ಯಶಸ್ವಿ ಜೈಸ್ವಾಲ್

| Updated By: ಝಾಹಿರ್ ಯೂಸುಫ್

Updated on: Feb 28, 2024 | 2:37 PM

Yashasvi Jaiswal: 2023ರಲ್ಲಿ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದ ಯಶಸ್ವಿ ಜೈಸ್ವಾಲ್ ಇದುವರೆಗೆ ಆಡಿರುವುದು ಕೇವಲ 8 ಟೆಸ್ಟ್ ಪಂದ್ಯಗಳನ್ನು ಮಾತ್ರ. ಈ ವೇಳೆ ಕಣಕ್ಕಿಳಿದ 15 ಇನಿಂಗ್ಸ್​ಗಳಲ್ಲಿ 2 ದ್ವಿಶತಕ, 3 ಶತಕ ಹಾಗೂ 3 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಇದೀಗ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲೂ ಟಾಪ್-15 ರೊಳಗೆ ಕಾಣಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ICC Test Rankings: ಕೇವಲ 8 ಪಂದ್ಯಗಳಿಂದ 12ನೇ ಸ್ಥಾನಕ್ಕೇರಿದ ಯಶಸ್ವಿ ಜೈಸ್ವಾಲ್
Yashasvi Jaiswal
Follow us on

ICC Test Cricket Rankings: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಟೆಸ್ಟ್ ಬ್ಯಾಟರ್​ಗಳ​ ಹೊಸ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಕೂಡ ನ್ಯೂಝಿಲೆಂಡ್​ನ ಕೇನ್ ವಿಲಿಯಮ್ಸನ್ (Kane Williamson) ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಹಾಗೆಯೇ ಆಸ್ಟ್ರೇಲಿಯಾ ಬ್ಯಾಟರ್ ಸ್ಟೀವ್ ಸ್ಮಿತ್ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ. ವಿಶೇಷ ಎಂದರೆ ಇಂಗ್ಲೆಂಡ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿರುವ ಯಶಸ್ವಿ ಜೈಸ್ವಾಲ್ (Yashasvi Jaiswal) ಈ ಬಾರಿ ಮತ್ತೆರಡು ಸ್ಥಾನ ಮೇಲೆರಿದ್ದಾರೆ. ಅಂದರೆ ಕಳೆದ ಬಾರಿ 14ನೇ ಸ್ಥಾನದಲ್ಲಿದ್ದ ಯುವ ದಾಂಡಿಗ ಹೊಸ ಶ್ರೇಯಾಂಕ ಪಟ್ಟಿಯಲ್ಲಿ 12ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಯಶಸ್ವಿ ಜೈಸ್ವಾಲ್ ಇದುವರೆಗೆ ಆಡಿರುವುದು ಕೇವಲ 8 ಟೆಸ್ಟ್ ಪಂದ್ಯಗಳನ್ನು ಮಾತ್ರ ಎಂಬುದು. ಈ ವೇಳೆ ಬ್ಯಾಟ್ ಬೀಸಿದ 15 ಇನಿಂಗ್ಸ್​ಗಳಿಂದ ಒಟ್ಟು 971 ರನ್ ಕಲೆಹಾಕಿ, ಒಂದೇ ವರ್ಷದಲ್ಲಿ ಟೆಸ್ಟ್ ಕ್ರಿಕೆಟ್​ನಲ್ಲಿ 12ನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ.

ವಿಶೇಷ ಎಂದರೆ ನೂತನ ಟೆಸ್ಟ್ ಬ್ಯಾಟರ್​ಗಳ ಟಾಪ್-10 ಪಟ್ಟಿಯಲ್ಲಿ ಟೀಮ್ ಇಂಡಿಯಾದ ಏಕೈಕ ಆಟಗಾರ ಮಾತ್ರ ಕಾಣಿಸಿಕೊಂಡಿದ್ದಾರೆ. ಅದು ಕೂಡ ವಿರಾಟ್ ಕೊಹ್ಲಿ ಎಂಬುದು ಇಲ್ಲಿ ಮತ್ತೊಂದು ವಿಶೇಷ. ಅಂದರೆ ಕಿಂಗ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಇದಾಗ್ಯೂ ಹಿಂದಿನ ರೇಟಿಂಗ್​ನೊಂದಿಗೆ 9ನೇ ಸ್ಥಾನದಲ್ಲಿ ಕಾಣಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಟೆಸ್ಟ್ ಬ್ಯಾಟರ್​ಗಳ ನೂತನ ಶ್ರೇಯಾಂಕ ಪಟ್ಟಿ:

  1. ಕೇನ್ ವಿಲಿಯಮ್ಸನ್ (ನ್ಯೂಝಿಲೆಂಡ್)- 893 ಪಾಯಿಂಟ್ಸ್​
  2. ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)- 818 ಪಾಯಿಂಟ್ಸ್​
  3. ಜೋ ರೂಟ್ (ಇಂಗ್ಲೆಂಡ್)- 799 ಪಾಯಿಂಟ್ಸ್ ​
  4. ಡೇರಿಲ್ ಮಿಚೆಲ್ (ನ್ಯೂಝಿಲೆಂಡ್)- 780 ಪಾಯಿಂಟ್ಸ್
  5. ಬಾಬರ್ ಆಝಂ (ಪಾಕಿಸ್ತಾನ್)- 768 ಪಾಯಿಂಟ್ಸ್​
  6. ಉಸ್ಮಾನ್ ಖ್ವಾಜಾ (ಆಸ್ಟ್ರೇಲಿಯಾ)- 765 ಪಾಯಿಂಟ್ಸ್
  7. ದಿಮುತ್ ಕರುಣರತ್ನೆ (ಶ್ರೀಲಂಕಾ)- 750 ಪಾಯಿಂಟ್ಸ್
  8. ಮಾರ್ನಸ್ ಲಾಬುಶೇನ್ (ಆಸ್ಟ್ರೇಲಿಯಾ)- 746 ಪಾಯಿಂಟ್ಸ್​​
  9. ವಿರಾಟ್ ಕೊಹ್ಲಿ (ಭಾರತ)- 744 ಪಾಯಿಂಟ್ಸ್​​
  10. ಹ್ಯಾರಿ ಬ್ರೂಕ್ (ಇಂಗ್ಲೆಂಡ್)- 743 ಪಾಯಿಂಟ್ಸ್​.

ಟಾಪ್-15 ನಲ್ಲಿರುವ ಭಾರತೀಯರು:

  • 12. ಯಶಸ್ವಿ ಜೈಸ್ವಾಲ್ – 727 ಪಾಯಿಂಟ್ಸ್​
  • 13. ರೋಹಿತ್ ಶರ್ಮಾ – 720 ಪಾಯಿಂಟ್ಸ್​
  • 14. ರಿಷಭ್ ಪಂತ್ – 699 ಪಾಯಿಂಟ್ಸ್​.

ಇದನ್ನೂ ಓದಿ: ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಶತಕ ಬಾರಿಸಿದ ಟಾಪ್-5 ಬ್ಯಾಟರ್​ಗಳ ಪಟ್ಟಿ ಇಲ್ಲಿದೆ

ಮುಂದಿನ ವಾರ ಮಹತ್ವದ ಬದಲಾವಣೆ:

ನ್ಯೂಝಿಲೆಂಡ್-ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯು ಫೆಬ್ರವರಿ 29 ರಿಂದ ಶುರುವಾಗಲಿದೆ. ಹಾಗೆಯೇ ಅಫ್ಘಾನಿಸ್ತಾನ್ ಮತ್ತು ಐರ್ಲೆಂಡ್ ನಡುವೆ ಟೆಸ್ಟ್ ಪಂದ್ಯ ನಡೆಯುತ್ತಿದೆ. ಇನ್ನು ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಮಾರ್ಚ್ 7 ರಿಂದ ಶುರುವಾಗಲಿದೆ. ಹೀಗಾಗಿ ಮುಂದಿನ ವಾರದ ಐಸಿಸಿ ಶ್ರೇಯಾಂಕದಲ್ಲಿ ಮಹತ್ವದ ಬದಲಾವಣೆ ಕಂಡು ಬರುವ ಸಾಧ್ಯತೆಯಿದೆ.

 

 

Published On - 2:00 pm, Wed, 28 February 24