ಪ್ರಸ್ತುತ ವಿಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ (India vs West Indies) ಪರ ಟೆಸ್ಟ್ ಕ್ರಿಕೆಟ್ಗೆ ಪರ್ದಾಪಣೆ ಮಾಡಿರುವ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal), ಆಡಿರುವ ಎರಡೂ ಟೆಸ್ಟ್ ಪಂದ್ಯಗಳಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಕೆರಿಬಿಯನ್ ದೈತ್ಯರನ್ನು ದಿಟ್ಟವಾಗಿ ಎದುರಿಸಿರುವ ಯಶಸ್ವಿಗೆ ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಖಾಯಂ ಸಿಗುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಭವಿಷ್ಯದ ಟಿ20 ತಂಡವನ್ನು ಕಟ್ಟುವ ಸಲುವಾಗಿ ಬಿಸಿಸಿಐಗೆ (BCCI) ಕಿವಿಮಾತೊಂದನ್ನು ಹೇಳಿರುವ ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ (Gautam Gambhir), ಯಶಸ್ವಿ ಜೈಸ್ವಾಲ್ ಅವರನ್ನು ಟೆಸ್ಟ್ ತಂಡ ಮಾತ್ರವಲ್ಲದೆ, ಟಿ20 ಹಾಗೂ ಏಕದಿನ ತಂಡಕ್ಕೂ ಆಯ್ಕೆ ಮಾಡಬೇಕು ಎಂದಿದ್ದಾರೆ. ಅಲ್ಲದೆ ಮುಂದಿನ ವರ್ಷ ನಡೆಯಲ್ಲಿರುವ ಟಿ20 ವಿಶ್ವಕಪ್‌ಗೆ (T20 World Cup) ಜೈಸ್ವಾಲ್ ಟೀಂ ಇಂಡಿಯಾದ ಖಾಯಂ ಸದಸ್ಯನಾಗಿರಬೇಕು ಎಂದಿದ್ದಾರೆ.
ಯಶಸ್ವಿ ಆಯ್ಕೆಯ ಬಗ್ಗೆ ಸೂಕ್ತ ಕಾರಣವನ್ನೂ ನೀಡಿರುವ ಗಂಭೀರ್, ಜೈಸ್ವಾಲ್ ಐಪಿಎಲ್ ಮಾತ್ರವಲ್ಲದೆ ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರವಾಗಿ ರನ್ ಕಲೆಹಾಕಿದ್ದಾರೆ. ಹೀಗಾಗಿ ಅವರಿಗೆ ಭಾರತ ತಂಡದಲ್ಲಿ ಮೂರು ಮಾದರಿಯಲ್ಲೂ ಸ್ಥಾನ ನೀಡಬೇಕು ಎಂದಿದ್ದಾರೆ. ಪ್ರಸ್ತುತ ವಿಂಡೀಸ್ ಪ್ರವಾಸಕ್ಕೆ ಮಾತ್ರವಲ್ಲದೆ ಜೈಸ್ವಾಲ್ರನ್ನು ಮುಂದಿನ ವರ್ಷ ನಡೆಯಲ್ಲಿರುವ ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡಬೇಕು ಎಂದಿದ್ದಾರೆ.
Yashasvi Jaiswal: 228 ರನ್ ಕಲೆಹಾಕಿ ಧವನ್ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್..!
ಮುಂದುವರೆದು ಮಾತನಾಡಿದ ಗಂಭೀರ್, ಟೀಂ ಇಂಡಿಯಾಕ್ಕೆ ಆಟಗಾರರನ್ನು ಆಯ್ಕೆ ಮಾಡುವಾಗ ಕೇವಲ ಐಪಿಎಲ್ ಪ್ರದರ್ಶನವೊಂದನ್ನೇ ಗಣನೆಗೆ ತೆಗೆದುಕೊಳ್ಳಬಾರದು. ಭಾರತದಲ್ಲಿ, ಸಮಸ್ಯೆಯೆಂದರೆ ನಾವು 2 ತಿಂಗಳ ಐಪಿಎಲ್ ಅನ್ನು ಎಷ್ಟು ಗಂಭೀರವಾಗಿ ಪರಿಗಣಿಸುತ್ತೇವೆ ಎಂದರೆ ಯಾರು ಉತ್ತಮವಾಗಿ ಆಡುತ್ತಾರೋ ಅವರನ್ನು ನಾವು ಭಾರತ ತಂಡಕ್ಕೆ ಆಯ್ಕೆ ಮಾಡುತ್ತೇವೆ. ಆದರೆ ಜೈಸ್ವಾಲ್ ಐಪಿಎಲ್‌ನಲ್ಲಿ ಮಾತ್ರವಲ್ಲದೆ ದೇಶೀಯ ಕ್ರಿಕೆಟ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ.
ಅವರು ದೇಶೀಯ ಕ್ರಿಕೆಟ್‌ನಲ್ಲಿ ದ್ವಿಶತಕ ಮತ್ತು ಟ್ರಿಪಲ್ ಸೆಂಚುರಿಯನ್ನು ಸಿಡಿಸಿದ್ದಾರೆ. ಅಲ್ಲದೆ ವಿಜಯ್ ಹಜಾರೆ ಟ್ರೋಫಿಯಲ್ಲಿ ದ್ವಿಶತಕ ಬಾರಿಸಿದ್ದಾರೆ. ಅವರು ಐಪಿಎಲ್‌ನಲ್ಲಿ ಮಾಡಿರುವುದು ಕೇಕ್ ಮೇಲಿನ ಐಸಿಂಗ್ ಮಾತ್ರ ಆದ್ದರಿಂದ ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತ ತಂಡದ ಭಾಗವಾಗಲು ಅರ್ಹರು ಎಂದು ಗಂಭೀರ್ ಹೇಳಿದ್ದಾರೆ.
ಇನ್ನು ಗೇಮ್ ಫಿನಿಶರ್ ರಿಂಕು ಸಿಂಗ್ ಬಗ್ಗೆಯೂ ಮಾತನಾಡಿರುವ ಗಂಭೀರ್, ರಿಂಕು ಸಿಂಗ್ ವಿಷಯದಲ್ಲ ಆಯ್ಕೆದಾರರು ಮತ್ತು ತಂಡದ ಆಡಳಿತ ಮಂಡಳಿ ಎಚ್ಚರ ವಹಿಸಬೇಕು ಎಂದಿದ್ದಾರೆ. ಜೈಸ್ವಾಲ್‌ನಂತೆ, ರಿಂಕು ಕೂಡ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಗೇಮ್ ಫಿನಿಶರ್ ಆಗಿ ಕೆಲವು ಅದ್ಭುತ ನಾಕ್‌ಗಳನ್ನು ಆಡಿದರು. ಆದಾಗ್ಯೂ, ಟಿ20 ತಂಡದಲ್ಲಿ ರಿಂಕು ಸ್ಥಾನ ಪಡೆಯಬೇಕೆಂದರೆ ಅವರು ಮುಂದಿನ ಸೀಸನ್ನ ದೇಶೀಯ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿ ಇದೇ ರೀತಿಯ ಸ್ಥಿರತೆಯನ್ನು ಪ್ರದರ್ಶಿಸುವ ಅಗತ್ಯವಿದೆ ಎಂದು ಗಂಭೀರ್ ನಂಬಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ