ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಸರ್ಕಸ್, ಅಲ್ಲಿ ಕೆಲಸ ಮಾಡೋರು ಜೋಕರ್ಸ್: ಯಾಸಿರ್ ಅರಾಫತ್

|

Updated on: Sep 10, 2024 | 8:50 AM

ಬಾಂಗ್ಲಾದೇಶ್ ವಿರುದ್ಧ ಟೆಸ್ಟ್ ಸರಣಿ ಸೋತಿರುವ ಪಾಕಿಸ್ತಾನ್ ತಂಡವು ಇದೀಗ ದೇಶೀಯ ಅಂಗಳದಲ್ಲಿ ಚಾಂಪಿಯನ್ಸ್ ಕಪ್ ಏಕದಿನ ಟೂರ್ನಿ ಆಡಲು ಸಜ್ಜಾಗುತ್ತಿದೆ. ಕುತೂಹಲಕಾರಿ ವಿಷಯ ಎಂದರೆ ಈ ಟೂರ್ನಿಯ ಬಳಿಕ ಪಾಕ್ ತಂಡವು ಮತ್ತೆ ಟೆಸ್ಟ್ ಆಡಲಿದೆ. ಪಿಸಿಬಿಯ ಈ ನಿರ್ಧಾರವನ್ನು ಪಾಕಿಸ್ತಾನ್ ತಂಡದ ಮಾಜಿ ಆಟಗಾರ ಯಾಸಿರ್ ಅರಾಫತ್ ಪ್ರಶ್ನಿಸಿದ್ದಾರೆ.

ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಸರ್ಕಸ್, ಅಲ್ಲಿ ಕೆಲಸ ಮಾಡೋರು ಜೋಕರ್ಸ್: ಯಾಸಿರ್ ಅರಾಫತ್
Yasir Arafat
Follow us on

ಬಾಂಗ್ಲಾದೇಶ್ ವಿರುದ್ಧ ಹೀನಾಯವಾಗಿ ಟೆಸ್ಟ್ ಸರಣಿ ಸೋತಿರುವ ಪಾಕಿಸ್ತಾನ್ ತಂಡದ ವಿರುದ್ಧ ಟೀಕಾಸ್ತ್ರಗಳು ಮುಂದುವರೆದಿದೆ. ಅದರಲ್ಲೂ ಕಳಪೆ ತಂಡವನ್ನು ಆಯ್ಕೆ ಮಾಡಿರುವ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ವಿರುದ್ಧ ಮಾಜಿ ಆಟಗಾರ ಯಾಸಿರ್ ಅರಾಫತ್ ಕಿಡಿಕಾರಿದ್ದಾರೆ. ಅದು ಸಹ ಪಿಸಿಬಿ ಯನ್ನು ಸರ್ಕಸ್​ ಅಡ್ಡ ಎನ್ನುವ ಮೂಲಕ ಎಂಬುದೇ ಅಚ್ಚರಿ.

ಈ ಬಗ್ಗೆ ಮಾತನಾಡಿರುವ ಯಾಸಿರ್ ಅರಾಫತ್, ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ನಿಜವಾಗಿಯೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಒಂದು ಪಂದ್ಯಾವಳಿಗೆ ಸಮಯ ನಿಗದಿ ಹೇಗೆ ಮಾಡಬೇಕೆಂಬುದು ಸಹ ಅವರಿಗೆ ಗೊತ್ತಿಲ್ಲ. ಇನ್ನೆಲ್ಲಿ ಉತ್ತಮ ತಂಡವನ್ನು ಆಯ್ಕೆ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಬಾಂಗ್ಲಾದೇಶ್ ವಿರುದ್ಧ ತವರಿನಲ್ಲಿ ಪಿಸಿಬಿ ಕಳಪೆ ತಂಡವನ್ನು ಕಣಕ್ಕಿಳಿಸಿತ್ತು. ಇದೀಗ ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ಸಜ್ಜಾಗುತ್ತಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಪಾಕಿಸ್ತಾನವು ಮುಂದಿನ ವರ್ಷ ಚಾಂಪಿಯನ್ಸ್ ಟ್ರೋಫಿ ಆಡಲಿದೆ. ಆದರೆ ಈಗ ಕೇವಲ ಟೆಸ್ಟ್ ಸರಣಿಗಳನ್ನು ಆಯೋಜಿಸಲಾಗುತ್ತಿದೆ. ಪಿಸಿಬಿ ಏನು ಮಾಡ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಯಾಸಿರ್ ಅರಾಫತ್ ಹೇಳಿದ್ದಾರೆ.

ಇಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಎಂದರೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಸೆಪ್ಟೆಂಬರ್ 12 ರಿಂದ 29 ರವರೆಗೆ ದೇಶೀಯ ಚಾಂಪಿಯನ್ಸ್ ಏಕದಿನ ಕಪ್ ಟೂರ್ನಿಯನ್ನು ಆಯೋಜಿಸುತ್ತಿದೆ. ಆದರೆ ಇದಾದ ಬಳಿಕ ಪಾಕ್ ತಂಡವು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲಿದೆ. ಅಂದರೆ ಇಲ್ಲಿ ಚಾಂಪಿಯನ್ಸ್ ಏಕದಿನ ಕಪ್ ಟೂರ್ನಿಯನ್ನು ಆಯೋಜಿಸುತ್ತಿರುವ ಉದ್ದೇಶವೇನು? ಈ ಟೂರ್ನಿಯ ಬಳಿಕ ಪಾಕಿಸ್ತಾನ್ ತಂಡ ಟೆಸ್ಟ್ ಆಡುತ್ತಿರುವ ಕಾರಣ ಇಲ್ಲಿ ಏಕದಿನ ಟೂರ್ನಿಯ ಆಯೋಜನೆಯ ಅವಶ್ಯಕತೆ ಇದೆಯೇ ಎಂದು ಯಾಸಿರ್ ಅರಾಫತ್ ಪ್ರಶ್ನಿಸಿದ್ದಾರೆ.

ನನ್ನ ಪ್ರಕಾರ, ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಈಗ ಸರ್ಕಸ್ ಆಗಿ ಮಾರ್ಪಟ್ಟಿದೆ. ಅಲ್ಲಿ ಕೆಲಸ ಮಾಡುತ್ತಿರುವವರೆಲ್ಲರೂ ಜೋರ್ಕಸ್. ಹೀಗಾಗಿಯೇ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ದೇಶೀಯ ಏಕದಿನ ಟೂರ್ನಿಯನ್ನು ಆಯೋಜಿಸುತ್ತಿದೆ. ಪಿಸಿಬಿಯ ಈ ನಿರ್ಧಾರಗಳನ್ನು ನೋಡಿದರೆ ನಿಜಕ್ಕೂ ತಮಾಷೆಯೆನಿಸುತ್ತಿದೆ ಎಂದು ಯಾಸಿರ್ ಅರಾಫತ್ ಹೇಳಿದ್ದಾರೆ.

ಇದನ್ನೂ ಓದಿ: ಒಂದೇ ವರ್ಷ ಟೀಮ್ ಇಂಡಿಯಾದ 8 ಆಟಗಾರರು ನಿವೃತ್ತಿ..!

ಪಾಕಿಸ್ತಾನ್ ತಂಡವು ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 2-0 ಅಂತರದಿಂದ ಸೋಲನುಭವಿಸಿದೆ. ಇದರ ಬೆನ್ನಲ್ಲೇ ಪಾಕ್ ಕ್ರಿಕೆಟ್ ಮಂಡಳಿ ದೇಶೀಯ ಅಂಗಳದಲ್ಲಿ ಚಾಂಪಿಯನ್ಸ್ ಕಪ್ ಏಕದಿನ ಟೂರ್ನಿಯನ್ನು ಆಯೋಜಿಸಲು ಮುಂದಾಗಿದೆ. ಆದರೆ ಈ ಟೂರ್ನಿಯ ಬಳಿಕ ಪಾಕಿಸ್ತಾನ್ ತಂಡ ಮತ್ತೆ ಟೆಸ್ಟ್ ಸರಣಿಗಳನ್ನು ಆಡಲಿದೆ. ಹೀಗಾಗಿಯೇ ಪಿಸಿಬಿಯ ನಿರ್ಧಾರಗಳನ್ನು ಮಾಜಿ ಕ್ರಿಕೆಟಿಗ ಯಾಸಿರ್ ಅರಾಫತ್ ವ್ಯಂಗ್ಯವಾಡಿದ್ದಾರೆ.

 

Published On - 8:49 am, Tue, 10 September 24