ಇನ್ನೊಂದು ವಾರದಲ್ಲಿ, 2023 ವರ್ಷವು (Year End 2023) ಕೊನೆಗೊಳ್ಳುತ್ತದೆ. 2024ನ್ನು ಅದ್ಧೂರಿಯಾಗಿ ಸ್ವಾಗತಿಸಲು ಎಲ್ಲರೂ ತಯಾರಾಗುತ್ತಿದ್ದಾರೆ. ಅದೇ ಸಮಯದಲ್ಲಿ, ಕೆಲವರು 2023 ರಲ್ಲಿ ಸಂಭವಿಸಿದ ಕೆಲವು ಸಿಹಿ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ ಕ್ರಿಕೆಟ್ ಅಭಿಮಾನಿಗಳೂ ಸೇರಿದ್ದಾರೆ. ತವರಿನಲ್ಲಿ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಸೋತಿದ್ದು ಈ ವರ್ಷದ ಅತ್ಯಂತ ಕಹಿ ನೆನಪು ಎಂದೇ ಹೇಳಬಹುದು. ಆದರೆ, ವಿಶ್ವಕಪ್ ಗೆಲ್ಲದಿದ್ದರೂ ಟೀಮ್ ಇಂಡಿಯಾದ ಬ್ಯಾಟರ್ಗಳು ಹಲವು ವೈಯಕ್ತಿಕ ದಾಖಲೆಗಳನ್ನು ಬರೆದಿದ್ದಾರೆ. ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೊತೆಗೆ ಯುವ ಆಟಗಾರರಾದ ಶುಭ್ಮನ್ ಗಿಲ್, ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್ ಮತ್ತು ಇತರರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಈ ವರ್ಷ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅಗ್ರ 3 ಆಟಗಾರರು ಭಾರತೀಯ ಕ್ರಿಕೆಟಿಗರು ಎಂಬುದು ಗಮನಾರ್ಹ. ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್‌ಗೆ ಈ ವರ್ಷ ತುಂಬಾ ವಿಶೇಷವಾಗಿದೆ. ಗಿಲ್ ಈ ವರ್ಷ ರನ್ ಮಳೆ ಸುರಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅವರು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಮೀರಿಸಿ ಹೆಚ್ಚು ರನ್ ಗಳಿಸಿದರು. ಗಿಲ್ ಈ ವರ್ಷ ಒಟ್ಟು 29 ಪಂದ್ಯಗಳನ್ನು ಆಡಿದ್ದು 1584 ರನ್ ಗಳಿಸಿದ್ದಾರೆ. ಇದರಲ್ಲಿ 5 ಶತಕ ಹಾಗೂ 9 ಅರ್ಧಶತಕಗಳಿವೆ. ಗಿಲ್ 2023 ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ನಂಬರ್ ಒನ್ ಬ್ಯಾಟ್ಸ್‌ಮನ್ ಆಗಿದ್ದಾರೆ.
ಹರ್ಮನ್ ಪಡೆಯ ಫೋಟೋ ಕ್ಲಿಕ್ಕಿಸುವ ಮೂಲಕ ಭಾರತದ ಐತಿಹಾಸಿಕ ಗೆಲುವನ್ನು ಸಂಭ್ರಮಿಸಿದ ಆಸೀಸ್ ನಾಯಕಿ!
ಈ ಪಟ್ಟಿಯಲ್ಲಿ ಭಾರತದ ದಿಗ್ಗಜ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಈ ವರ್ಷ 27 ಏಕದಿನ ಪಂದ್ಯಗಳನ್ನಾಡಿರುವ ಕೊಹ್ಲಿ 1377 ರನ್ ಗಳಿಸಿದ್ದಾರೆ. 6 ಶತಕ ಮತ್ತು 8 ಅರ್ಧಶತಕಗಳೊಂದಿಗೆ ಕೊಹ್ಲಿ ಈ ವರ್ಷ ಏಕದಿನದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಈ ಪಟ್ಟಿಯಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿದ್ದಾರೆ. ರೋಹಿತ್ ಒಟ್ಟು 27 ಏಕದಿನ ಪಂದ್ಯಗಳನ್ನಾಡಿದ್ದು 1255 ರನ್ ಗಳಿಸಿದ್ದಾರೆ. ಈ ವರ್ಷ 2 ಶತಕ ಹಾಗೂ 9 ಅರ್ಧಶತಕ ಸಿಡಿಸಿದ್ದರು. ನ್ಯೂಝಿಲೆಂಡ್ ಆಟಗಾರ ಡೆರೆಲ್ ಮಿಚೆಲ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇವರು 26 ಪಂದ್ಯಗಳಲ್ಲಿ 1204 ರನ್ ಗಳಿಸಿದ್ದಾರೆ. ಇದರಲ್ಲಿ 5 ಶತಕ ಹಾಗೂ 3 ಅರ್ಧಶತಕಗಳಿವೆ.
ಶ್ರೀಲಂಕಾ ಆಟಗಾರ ಪಾತುಮ್ ನಿಸಂಕಾ ಐದನೇ ಸ್ಥಾನದಲ್ಲಿದ್ದಾರೆ. 29 ಏಕದಿನ ಪಂದ್ಯಗಳಲ್ಲಿ 1151 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ 9 ಅರ್ಧ ಶತಕಗಳಿವೆ. ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಅಝಂ ಆರನೇ ಸ್ಥಾನದಲ್ಲಿದ್ದರೆ, ಕೆಎಲ್ ರಾಹುಲ್ ಏಳನೇ ಸ್ಥಾನದಲ್ಲಿ, ಏಡೆನ್ ಮಾರ್ಕ್ರಾಮ್ 8 ನೇ ಸ್ಥಾನದಲ್ಲಿ, ಮೊಹಮ್ಮದ್ ರಿಜ್ವಾನ್ ಒಂಬತ್ತನೇ ಸ್ಥಾನದಲ್ಲಿ ಮತ್ತು ವಿಲ್ ಯಂಗ್ ಹತ್ತನೇ ಸ್ಥಾನದಲ್ಲಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ