ಮತ್ತೆ ಸಂಕಷ್ಟಕ್ಕೆ ಸಿಲುಕಿದ ಪಾಕ್: ಚಾಂಪಿಯನ್ಸ್ ಟ್ರೋಫಿ ಟೂರ್ನಿ ಎತ್ತಂಗಡಿ..?
India vs Pakistan: ಒಂದು ವೇಳೆ ಟೂರ್ನಿಯನ್ನು ಸ್ಥಳಾಂತರಿಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಒಪ್ಪದಿದ್ದರೆ, ಚಾಂಪಿಯನ್ಸ್ ಟ್ರೋಫಿ ಕೂಡ ಹೈಬ್ರೀಡ್ ಮಾದರಿಯಲ್ಲಿ ನಡೆಯಲಿದೆ. ಅಂದರೆ ಟೀಮ್ ಇಂಡಿಯಾದ ಪಂದ್ಯಗಳಿಗೆ ಯುಎಇ ಆತಿಥ್ಯವಹಿಸುವ ಸಾಧ್ಯತೆ ದಟ್ಟವಾಗಿದೆ.
ಚಾಂಪಿಯನ್ಸ್ ಟ್ರೋಫಿ 2025 (Champions Trophy 2025) ಟೂರ್ನಿ ಎತ್ತಂಗಡಿಯಾಗಲಿದೆಯಾ? ಈ ಪ್ರಶ್ನೆಗೆ ಸದ್ಯ ಉತ್ತರ ಸಾಧ್ಯತೆಯಿಲ್ಲ ಎಂದಲ್ಲ. ಏಕೆಂದರೆ ಮುಂಬರುವ ಚಾಂಪಿಯನ್ಸ್ ಟ್ರೋಫಿ ಆಯೋಜನೆಯ ಹಕ್ಕನ್ನು ಹೊಂದಿರುವುದು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್. ಅದರಂತೆ 2025 ರ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿದೆ. ಆದರೆ ಪಾಕ್ನಲ್ಲಿ ಟೂರ್ನಿ ನಡೆದರೆ ಭಾರತ ಪಾಲ್ಗೊಳ್ಳುವುದು ಅನುಮಾನ. ಹೀಗಾಗಿಯೇ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸುವ ಬಗ್ಗೆ ಚರ್ಚೆಗಳು ಶುರುವಾಗಿದೆ.
ಒಂದು ವೇಳೆ ಟೂರ್ನಿಯನ್ನು ಸ್ಥಳಾಂತರಿಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಒಪ್ಪದಿದ್ದರೆ, ಚಾಂಪಿಯನ್ಸ್ ಟ್ರೋಫಿ ಕೂಡ ಹೈಬ್ರೀಡ್ ಮಾದರಿಯಲ್ಲಿ ನಡೆಯಲಿದೆ. ಅಂದರೆ ಟೀಮ್ ಇಂಡಿಯಾದ ಪಂದ್ಯಗಳಿಗೆ ಯುಎಇ ಆತಿಥ್ಯವಹಿಸುವ ಸಾಧ್ಯತೆ ದಟ್ಟವಾಗಿದೆ.
ಏಕೆಂದರೆ ಈ ಬಾರಿಯ ಏಷ್ಯಾಕಪ್ ಆಯೋಜನೆಯ ಹಕ್ಕನ್ನು ಪಾಕ್ ಕ್ರಿಕೆಟ್ ಮಂಡಳಿ ಹೊಂದಿತ್ತು. ಆದರೆ ಭಾರತ ತಂಡವು ಪಾಕ್ಗೆ ತೆರಳಲು ಹಿಂದೇಟು ಹಾಕಿದ್ದರಿಂದ ಟೂರ್ನಿಯನ್ನು ಹೈಬ್ರೀಡ್ ಮಾದರಿಯಲ್ಲಿ ಆಯೋಜಿಸಲಾಗಿತ್ತು.
ಅದರಂತೆ ಪಾಕಿಸ್ತಾನ್ ಹಾಗೂ ಶ್ರೀಲಂಕಾದಲ್ಲಿ ಏಷ್ಯಾಕಪ್ನ್ನು ಆಯೋಜಿಸಲಾಗಿತ್ತು. ಇಲ್ಲಿ ಭಾರತ ತಂಡವು ಫೈನಲ್ ಸೇರಿದಂತೆ ತನ್ನೆಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ಇದೀಗ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಬರಲು ಟೀಮ್ ಇಂಡಿಯಾ ಹಿಂದೇಟು ಹಾಕಿದರೆ ಟೂರ್ನಿಯನ್ನು ಸ್ಥಳಾಂತರಿಸಬಹುದು. ಇಲ್ಲ ಭಾರತದ ಪಂದ್ಯಗಳನ್ನು ಯುಎಇನಲ್ಲಿ ಆಯೋಜಿಸಲು ವ್ಯವಸ್ಥೆ ಮಾಡಲಾಗುತ್ತದೆ.
ಈ ಬಗ್ಗೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಕಾ ಅಶ್ರಫ್ ಮತ್ತು ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಉಪಾಧ್ಯಕ್ಷ ಖಾಲಿದ್ ಅಲ್ ಜರೂನಿ ಚರ್ಚಿಸಿದ್ದಾರೆ. ಇದೇ ವೇಳೆ ಭಾರತವು ಭಾಗವಹಿಸುವಿಕೆಯನ್ನು ವಿರೋಧಿಸಿದರೆ ಯುಎಇಗೆ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ಸ್ಥಳಾಂತರದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಭಾರತದ ಪಂದ್ಯಗಳು ಯುಎಇಗೆ ಸ್ಥಳಾಂತರಗೊಂಡರೂ ಅಚ್ಚರಿಪಡಬೇಕಿಲ್ಲ.
ಸದ್ಯ ಈ ಬಗ್ಗೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಜಾಣ ಮೌನದಲ್ಲಿದ್ದು, ಬಿಸಿಸಿಐನ ಮುಂದಿನ ನಡೆಯೇನು ಎಂಬುದನ್ನು ಕಾದು ನೋಡಲು ನಿರ್ಧರಿಸಿದೆ. ಅತ್ತ ಟೂರ್ನಿ ಆರಂಭಕ್ಕೆ ಇನ್ನೂ ಒಂದು ವರ್ಷ ಇರುವುದರಿಂದ ಭಾರತೀಯ ಕ್ರಿಕೆಟ್ ಮಂಡಳಿ ಕೂಡ ಈ ಬಗ್ಗೆ ಯಾವುದೇ ಹೇಳಿಕೆ ನೀಡುತ್ತಿಲ್ಲ.
ಏಕೆಂದರೆ ಐಸಿಸಿ ಟೂರ್ನಿಗಳನ್ನು ಸ್ಥಳಾಂತರಿಸಬೇಕಿದ್ದರೆ ನಿರ್ದಿಷ್ಠ ಕಾರಣಗಳಿರಬೇಕಾಗುತ್ತದೆ. ಇಲ್ಲಿ ಬಿಸಿಸಿಐ ಟೂರ್ನಿಯನ್ನು ಸ್ಥಳಾಂತರಿಸಲು ಸುರಕ್ಷತೆಯ ಕಾರಣಗಳನ್ನು ನೀಡಿದರೂ, ಅದಕ್ಕೆ ಇತರೆ ಕ್ರಿಕೆಟ್ ಮಂಡಳಿಗಳೂ ಕೂಡ ಕೈ ಜೋಡಿಸಬೇಕಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶ್, ಶ್ರೀಲಂಕಾ, ಅಫ್ಘಾನಿಸ್ತಾನ್, ಇಂಗ್ಲೆಂಡ್ ತಂಡಗಳು ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಿದೆ. ಹೀಗಾಗಿ 2025 ರಲ್ಲಿ ಬಿಸಿಸಿಐ ಯಾವ ಕಾರಣಗಳನ್ನು ಮುಂದಿಡಲಿದೆ ಎಂಬುದೇ ಈಗ ಕುತೂಹಲ.
ಇದನ್ನೂ ಓದಿ: ನಮ್ಮಿಬ್ಬರ ಜಗಳ ಮೈದಾನದಲ್ಲಿ ಮಾತ್ರ: ಕೊಹ್ಲಿ ಕುರಿತ ಪ್ರಶ್ನೆಗೆ ಗಂಭೀರ್ ಉತ್ತರ
ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದಿರುವ 8 ತಂಡಗಳು:
- ಭಾರತ
- ಸೌತ್ ಆಫ್ರಿಕಾ
- ಆಸ್ಟ್ರೇಲಿಯಾ
- ನ್ಯೂಝಿಲ್ಯಾಂಡ್
- ಪಾಕಿಸ್ತಾನ್ (ಆತಿಥೇಯ ರಾಷ್ಟ್ರ)
- ಅಫ್ಘಾನಿಸ್ತಾನ್
- ಇಂಗ್ಲೆಂಡ್
- ಬಾಂಗ್ಲಾದೇಶ್