IND vs SA 1st Test: ವಿರಾಟ್ ಕೊಹ್ಲಿಯಿಂದ ಅಪಾಯಕಾರಿ ಅಭ್ಯಾಸ: ಸ್ವಲ್ಪ ಯಾಮಾರಿದ್ರೂ ಇಂಜುರಿ
Virat Kohli Practice: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ವಿರಾಟ್ ಕೊಹ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ವಿಶೇಷವಾಗಿ ಕೊಹ್ಲಿ ನೆಟ್ಸ್‌ನಲ್ಲಿ 18 ಯಾರ್ಡ್ ಪಿಚ್‌ನಲ್ಲಿ ಅಭ್ಯಾಸ ಮಾಡಿದ್ದಾರೆ. ಆದರೆ, ಇದರಿಂದ ಗಾಯಗೊಳ್ಳುವ ಭೀತಿಯೂ ಇದೆ. ಕೊಹ್ಲಿ ರಿಸ್ಕ್ ತೆಗೆದುಕೊಂಡು ಈರೀತಿ ಪ್ರ್ಯಾಕ್ಟೀಸ್ ನಡೆಸಿದ್ದಾರೆ.
ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಸೆಂಚುರಿಯನ್‌ನಲ್ಲಿ ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದಾರೆ. ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ಭಾರತ ಡಿಸೆಂಬರ್ 26 ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಆಡಬೇಕಾಗಿದೆ. ಟೆಸ್ಟ್ ಸರಣಿಗೆ ಸಿದ್ದರಾಗಲೆಂದು ಕೊಹ್ಲಿ ಬಹಳ ಹಿಂದೆಯೇ ದಕ್ಷಿಣ ಆಫ್ರಿಕಾ ತಲುಪಿದ್ದರು. ಆದರೆ ಇದರ ನಡುವೆ ಲಂಡನ್‌ಗೆ ತೆರಳಿದ್ದರು. ಕೊಹ್ಲಿ ಲಂಡನ್ ನಿಂದ ವಾಪಸಾಗಿದ್ದು, ಇದೀಗ ತಂಡದೊಂದಿಗೆ ಟೆಸ್ಟ್ ಸರಣಿಗೆ ತಯಾರಿ ನಡೆಸುತ್ತಿದ್ದಾರೆ. ಕೊಹ್ಲಿ ಭಾನುವಾರ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದರು. ಆದರೆ ಅವರ ಅಭ್ಯಾಸ ವಿಭಿನ್ನವಾಗಿತ್ತು.
ಭಾರತ ಇದುವರೆಗೆ ದಕ್ಷಿಣ ಆಫ್ರಿಕಾದಲ್ಲಿ ಯಾವುದೇ ಟೆಸ್ಟ್ ಸರಣಿ ಗೆದ್ದಿಲ್ಲ. ಹೀಗಾಗಿ ಈ ಬಾರಿ ಈ ಸರಣಿಗಾಗಿ ಟೀಮ್ ಇಂಡಿಯಾ ವಿಶೇಷ ತಯಾರಿ ನಡೆಸುತ್ತಿದೆ. ಹೇಗಾದರೂ ಮಾಡಿ ದಕ್ಷಿಣ ಆಫ್ರಿಕಾದಲ್ಲಿ ಈ ಟೆಸ್ಟ್ ಸರಣಿಯನ್ನು ಗೆಲ್ಲಲೇಬೇಕೆಂದು ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮಾ ಪಣತೊಟ್ಟಿದ್ದಾರೆ. ತಂಡದ ಈ ಗುರಿಯಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಭಾಗವಾಗಿದ್ದಾರೆ.
ಭಾರತ ತಂಡ ಈ ಸರಣಿಯನ್ನು ಗೆಲ್ಲಬೇಕಾದರೆ ಕೊಹ್ಲಿ ಅನುಭವ ಬಹಳ ಮುಖ್ಯ. ಹೀಗಾಗಿ ಈ ಸರಣಿಗೆ ವಿಶೇಷ ತಯಾರಿ ಆರಂಭಿಸಿದ್ದಾರೆ. ಕೊಹ್ಲಿ ನೆಟ್ಸ್‌ನಲ್ಲಿ 18 ಯಾರ್ಡ್ ಪಿಚ್‌ನಲ್ಲಿ ಅಭ್ಯಾಸ ಮಾಡಿದ್ದಾರೆ. ಸಾಮಾನ್ಯವಾಗಿ ಪಿಚ್ 22 ಗಜಗಳಷ್ಟು ಮತ್ತು ಅಭ್ಯಾಸದ ವೇಳೆ ಈ ದೂರದಿಂದ ಬೌಲ್ ಮಾಡುತ್ತಾರೆ. ಆದರೆ ಕೊಹ್ಲಿ 18 ಗಜಗಳಿಂದ ಬೌಲಿಂಗ್ ಮಾಡಿಸಿ ಅಭ್ಯಾಸ ನಡೆಸಿದರು.
ಕೊಹ್ಲಿಯ ಈ ಅಭ್ಯಾಸಕ್ಕೆ ಕಾರಣವೇನು?:
ದಕ್ಷಿಣ ಆಫ್ರಿಕಾದ ಪಿಚ್‌ಗಳಲ್ಲಿ ಸಾಕಷ್ಟು ಬೌನ್ಸ್ ಇದೆ. ಇದಲ್ಲದೇ ಚೆಂಡು ಇಲ್ಲಿ ಚೆನ್ನಾಗಿ ಟರ್ನ್ ಮತ್ತು ಸ್ವಿಂಗ್ ಆಗುತ್ತದೆ. ಆಫ್ರಿಕಾ ತಂಡದಲ್ಲಿ ಅತ್ಯಂತ ವೇಗವಾಗಿ ಬೌಲಿಂಗ್ ಮಾಡುವ ಬೌಲರ್‌ಗಳಿದ್ದಾರೆ. ಇದನ್ನೆಲ್ಲ ಎದುರಿಸಲು ಕೊಹ್ಲಿ ಈ ಕಸರತ್ತು ನಡೆಸಿದ್ದಾರೆ. ಬೌಲರ್ ಹತ್ತಿರದಿಂದ ಬೌಲ್ ಮಾಡಿದರೆ, ಚೆಂಡು ಹೆಚ್ಚು ಬೌನ್ಸ್‌ನೊಂದಿಗೆ ಬ್ಯಾಟ್ಸ್‌ಮನ್‌ಗೆ ಬರುತ್ತದೆ. ಇದು ಪಂದ್ಯದಲ್ಲಿ ಸಹಾಯ ಆಗುತ್ತದೆ. ಸ್ವಿಂಗ್ ಮತ್ತು ಸೀಮ್ ಕೂಡ ತುಂಬಾ ವೇಗವಾಗಿರುತ್ತದೆ. ಅನೇಕ ಬಾರಿ, ಈ ಎಲ್ಲಾ ವಿಷಯಗಳನ್ನು ಎದುರಿಸಲು, ಬ್ಯಾಟರ್ ಬೌಲರ್‌ಗೆ ಹತ್ತಿರದಿಂದ ಬೌಲಿಂಗ್ ಮಾಡಲು ಹೇಳುತ್ತಾರೆ. ಆದರೆ, ಹೆಚ್ಚಿನ ಬಾರಿ ಇದರಿಂದ ಗಾಯಗೊಳ್ಳುವ ಭೀತಿಯೂ ಇದೆ. ಕೊಹ್ಲಿ ಇದೀಗ ರಿಸ್ಕ್ ತೆಗೆದುಕೊಂಡು ಈರೀತಿ ಪ್ರ್ಯಾಕ್ಟೀಸ್ ನಡೆಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ