- Kannada News Photo gallery Cricket photos Virat Kohli not returning to India due to a family emergency its was planned says BCCI official
IND vs SA Test: ಫ್ಯಾಮಿಲಿ ಎಮರ್ಜೆನ್ಸಿ ಇರ್ಲಿಲ್ಲ, ಭಾರತಕ್ಕೆ ಬಂದೇ ಇಲ್ಲ: ಕೊಹ್ಲಿ ಬಗ್ಗೆ ಬಿಸಿಸಿಐ ಅಧಿಕಾರಿ ಶಾಕಿಂಗ್ ಹೇಳಿಕೆ
Virat Kohli family emergency: ಇತ್ತೀಚೆಗಷ್ಟೆ ವಿರಾಟ್ ಕೊಹ್ಲಿ ಕೌಟುಂಬಿಕ ಕಾರಣದಿಂದಾಗಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಾಪಸ್ಸಾದರು ಎಂದು ವರದಿ ಆಗಿತ್ತು. ಆದರೀಗ, ಇದರ ನಿಜಾಂಶ ಬಯಲಾಗಿದೆ. ಕೊಹ್ಲಿಗೇ ಯಾವುದೇ ಫ್ಯಾಮಿಲಿ ಎಮರ್ಜೆನ್ಸಿ ಇರ್ಲಿಲ್ಲ, ಅಲ್ಲದೆ ಅವರು ಭಾರತಕ್ಕೆ ಬಂದೇ ಇಲ್ಲ ಎಂಬ ಶಾಕಿಂಗ್ ವಿಚಾರ ತಿಳಿದುಬಂದಿದೆ.
Updated on: Dec 24, 2023 | 7:29 AM

ಡಿಸೆಂಬರ್ 26 ರಂದು ಸೆಂಚುರಿಯನ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಪಂದ್ಯದೊಂದಿಗೆ ಟೆಸ್ಟ್ ಸರಣಿ ಆರಂಭವಾಗಲಿದೆ. ಇದಕ್ಕಾಗಿ ಟೀಮ್ ಇಂಡಿಯಾ ಭರ್ಜರಿ ತಯಾರಿಯಲ್ಲಿ ತೊಡಗಿದೆ. ಆದರೆ, ಸರಣಿಗೂ ಮುನ್ನ ಭಾರತ ಕ್ರಿಕೆಟ್ ತಂಡ ಬೇರೆ ಬೇರೆ ಕಾರಣಗಳಿಂದ ಸುದ್ದಿಯಲ್ಲಿದೆ.

ಆರಂಭದಲ್ಲಿ ಮೊಹಮ್ಮದ್ ಶಮಿ ಮತ್ತು ರುತುರಾಜ್ ಗಾಯಕ್ವಾಡ್ ಗಾಯದ ಸಮಸ್ಯೆಯಿಂದ ಹೊರಗುಳಿದರೆ, ಇಶಾನ್ ಕಿಶನ್ ತಮ್ಮ ಹೆಸರನ್ನು ಹಿಂಪಡೆದಿದ್ದಾರೆ. ಇವರಲ್ಲದೆ, ಸ್ಟಾರ್ ಬ್ಯಾಟರ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಇದ್ದಕ್ಕಿದ್ದಂತೆ ಕೌಟುಂಬಿಕ ಕಾರಣದಿಂದಾಗಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಾಪಸ್ಸಾದರು ಎಂದು ವರದಿ ಆಗಿತ್ತು. ಆದರೀಗ, ಇದರ ಬಗ್ಗೆ ಮಹತ್ವದ ಮಾಹಿತಿ ಸಿಕ್ಕಿದೆ.

ವಿರಾಟ್ ಕೊಹ್ಲಿ, ಡಿಸೆಂಬರ್ 15 ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಭಾಗವಾಗಿ ಭಾರತದಿಂದ ಆಫ್ರಿಕಾ ತಲುಪಿದ್ದರು. ಆದಾಗ್ಯೂ, 3-4 ದಿನಗಳ ನಂತರ, ಅವರು ಇದ್ದಕ್ಕಿದ್ದಂತೆ ದಕ್ಷಿಣ ಆಫ್ರಿಕಾ ತೊರೆದು ಕೌಟುಂಬಿಕ ತುರ್ತುಪರಿಸ್ಥಿತಿಯಿಂದಾಗಿ ಭಾರತಕ್ಕೆ ಮರಳಬೇಕಾಯಿತು ಎಂದು ವರದಿಯಾಗಿತ್ತು. ಇದರಿಂದಾಗಿ ಅವರು 3 ದಿನಗಳ ಅಭ್ಯಾಸ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ.

ಕೊಹ್ಲಿ ಹಠಾತ್ ನಿರ್ಗಮನದ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯಾವುದೇ ಹೇಳಿಕೆ ನೀಡಿಲ್ಲ. ಇದೀಗ ಈ ಸಂಪೂರ್ಣ ವಿಷಯದಲ್ಲಿ ಹೊಸ ವರದಿಯೊಂದು ಬಂದಿದ್ದು , ಇದರಲ್ಲಿ ಕೊಹ್ಲಿ ಯಾವುದೇ ತುರ್ತು ಪರಿಸ್ಥಿತಿಯ ಕಾರಣದಿಂದ ಹೋಗಿಲ್ಲ ಎಂದು ಹೇಳಲಾಗಿದೆ, ಬದಲಿಗೆ ಅವರು ಈ 3-4 ದಿನಗಳವರೆಗೆ ಹೋಗುವುದನ್ನು ಮೊದಲೇ ನಿರ್ಧರಿಸಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕೊಹ್ಲಿ ಭಾರತಕ್ಕೇ ಬಂದಿಲ್ಲ, ಅವರು ಲಂಡನ್‌ಗೆ ತೆರಳಿದ್ದಾರೆ ಎಂದು ವರದಿ ಆಗಿದೆ.

ಕೊಹ್ಲಿ ಲಂಡನ್‌ಗೆ ತೆರಳುವ ಬಗ್ಗೆ ಮೊದಲೇ ನಿರ್ಧರಿಸಲಾಗಿತ್ತು. ಅದು ಎಮರ್ಜೆನ್ಸಿ ಅಲ್ಲ. ಅವರು ತಂಡದ ಮ್ಯಾನೇಜ್‌ಮೆಂಟ್ ಮತ್ತು ಮಂಡಳಿಗೆ ಮೊದಲೇ ತಿಳಿಸಿದ್ದರು ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದ್ದರಿಂದ ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ ಆಡಿಲ್ಲ. ಈಗ ಕೊಹ್ಲಿ ಟೆಸ್ಟ್ ಪಂದ್ಯಕ್ಕೆ ಲಭ್ಯರಿದ್ದಾರೆ ಎಂದು ಹೇಳಿದ್ದಾರೆ.

ಕೊಹ್ಲಿ ಇದೀಗ ವಾಪಸಾಗಿದ್ದು ಸೆಂಚುರಿಯನ್‌ನಲ್ಲಿ ಭಾರತ ತಂಡವನ್ನು ಸೇರಿಕೊಂಡಿರುವುದು ಸಮಾಧಾನದ ಸಂಗತಿಯಾಗಿದೆ. ಭಾನುವಾರ ಮತ್ತು ಸೋಮವಾರದಂದು ಕೊಹ್ಲಿ ತರಬೇತಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆದರೆ, ಈ ಸರಣಿಗೆ ಕೊಹ್ಲಿ ಯಾವುದೇ ಸಿದ್ಧತೆ ನಡೆಸಿಲ್ಲ. ಲಂಡನ್‌ಗೆ ತೆರಳುವ ಮುನ್ನ ಅವರು ದಕ್ಷಿಣ ಆಫ್ರಿಕಾದಲ್ಲಿ 3-4 ದಿನಗಳ ಕಾಲ ಮಾತ್ರ ತಂಡದೊಂದಿಗೆ ಅಭ್ಯಾಸ ನಡೆಸಿದರು.
