ಟೀಮ್ ಇಂಡಿಯಾ (Team India) ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ (Yuvraj Singh) ಕಂಬ್ಯಾಕ್ ಮಾಡಲಿದ್ದಾರೆ ಎಂಬ ಸುದ್ದಿಗಳು ಹಲವು ಬಾರಿ ಹರಿದಾಡಿದ್ದವು. ಆದರೆ ಬಾರಿ ಖುದ್ದು ಯುವಿ ಭರ್ಜರಿ ಅಭ್ಯಾಸದಲ್ಲಿ ನಿರತರಾಗುವ ಮೂಲಕ ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳುವ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಮುಂಬರುವ ಟೂರ್ನಮೆಂಟ್ಗಾಗಿ ಅಭ್ಯಾಸ ಎಂದು ಕೂಡ ತಿಳಿಸಿದ್ದಾರೆ. ಆದರೆ ಯುವರಾಜ್ ಸಿಂಗ್ ಈಗ ಯಾವುದೇ ಟೂರ್ನಿಯನ್ನು ಆಡುತ್ತಿಲ್ಲ ಎಂಬುದು ವಿಶೇಷ. ಈಗಾಗಲೇ ಅವರ ಐಪಿಎಲ್ ಒಪ್ಪಂದ ಕೂಡ ಮುಗಿದಿದೆ. ಹೀಗಾಗಿ ಮತ್ತೆ ಐಪಿಎಲ್ಗೆ ಕಂಬ್ಯಾಕ್ ಮಾಡಲು ಸಾಧ್ಯವಿಲ್ಲ.
ಆದರೆ ಇನ್ನೊಂದೆಡೆ ಯುಎಇ ಟಿ20 ಲೀಗ್ ಹಾಗೂ ಸೌತ್ ಆಫ್ರಿಕಾ ಟಿ20 ಲೀಗ್ಗಳು ಬರುತ್ತಿವೆ. ಬಿಸಿಸಿಐ ಜೊತೆಗಿನ ಒಪ್ಪಂದ ಕೊನೆಗೊಳಿಸಿರುವ ಆಟಗಾರರು ಈ ಲೀಗ್ನಲ್ಲಿ ಭಾಗವಹಿಸಬಹುದು. ಇದೀಗ ಯುವರಾಜ್ ಸಿಂಗ್ ದಿಢೀರಣೆ ಮೈದಾನದಲ್ಲಿ ಕಾಣಿಸಿಕೊಳ್ಳುವ ಮೂಲಕ ಹೊಸ ಟಿ20 ಲೀಗ್ ಆಡುವ ಸೂಚನೆ ನೀಡಿದ್ದಾರೆ. ಏಕೆಂದರೆ ಇತ್ತ ಯುವರಾಜ್ ಸಿಂಗ್ ಲೆಜೆಂಡ್ಸ್ ಕ್ರಿಕೆಟ್ ಲೀಗ್ನ ಮಹರಾಜಾಸ್ ತಂಡದಲ್ಲೂ ಹೆಸರು ನೀಡಿಲ್ಲ. ಇದಾಗ್ಯೂ ಅವರು ಪೂರ್ಣ ಪ್ರಮಾಣದ ಮೈದಾನದಲ್ಲೇ ಅಭ್ಯಾಸಕ್ಕೆ ಮುಂದಾಗಿರುವುದು ಕಂಬ್ಯಾಕ್ ಮಾಡುವ ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇನ್ನು ಅಭ್ಯಾಸದ ವೇಳೆ ಸಿಕ್ಸ್ ಫೋರ್ಗಳ ಮೂಲಕ ವಿಜ್ರಂಭಿಸಿರುವ ಯುವರಾಜ್ ಸಿಂಗ್ ತಮ್ಮ ಹಳೆಯ ಖದರ್ ತೋರಿಸಿದ್ದಾರೆ.
ಯುವಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಈ ಆಕ್ರಮಣಕಾರಿ ಬ್ಯಾಟಿಂಗ್ ವಿಡಿಯೋಗೆ ವೆಸ್ಟ್ ಇಂಡೀಸ್ ಮಾಜಿ ನಾಯಕ ಬ್ರಿಯಾನ್ ಲಾರಾ ಸೇರಿದಂತೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ಅದರಲ್ಲೂ ಕ್ಲಾಸ್ ಪರ್ಮನೆಂಟ್ ಎಂದು ಶಿಖರ್ ಧವನ್ ಕಮೆಂಟಿಸಿದ್ದಾರೆ. ಇದಲ್ಲದೇ ಸೂರ್ಯಕುಮಾರ್ ಯಾದವ್ ಎಮೋಜಿಯನ್ನು ಶೇರ್ ಮಾಡುವ ಮೂಲಕ ಅದ್ಭುತ ಎಂದಿದ್ದಾರೆ.
ಒಟ್ಟಿನಲ್ಲಿ ಟೂರ್ನಿಗಾಗಿ ಸಜ್ಜಾಗುತ್ತಿದ್ದೇನೆ ಎಂದಿರುವ ಯುವರಾಜ್ ಸಿಂಗ್ ಯಾವ ಟೂರ್ನಮೆಂಟ್ ಎಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ. ಅತ್ತ ಯುಎಇ ಟಿ20 ಲೀಗ್ ಹಾಗೂ ಸೌತ್ ಆಫ್ರಿಕಾ ಟಿ20 ಲೀಗ್ಗಳಲ್ಲಿ ಐಪಿಎಲ್ ಫ್ರಾಂಚೈಸಿಗಳು ಬಂಡವಾಳ ಹೂಡಿದ್ದಾರೆ. ಇದಾಗ್ಯೂ ಐಪಿಎಲ್ ಆಡುವ ಭಾರತೀಯ ಆಟಗಾರರಿಗೆ ಈ ಲೀಗ್ನಲ್ಲಿ ಭಾಗವಹಿಸಲು ಅವಕಾಶವಿಲ್ಲ ಎಂದು ಬಿಸಿಸಿಐ ತಿಳಿಸಿದೆ.
ಇದನ್ನೂ ಓದಿ: CSA T20: ಜೋಹಾನ್ಸ್ಬರ್ಗ್ ಸೂಪರ್ ಕಿಂಗ್ಸ್ ತಂಡಕ್ಕೆ ಐವರು ಆಟಗಾರರು ಆಯ್ಕೆ
ಇದೇ ಕಾರಣದಿಂದಾಗಿ ಇದೀಗ ಯುವರಾಜ್ ಸಿಂಗ್ನಂತಹ ಸ್ಟಾರ್ ಆಟಗಾರರನ್ನು ಹೊಸ ಲೀಗ್ಗೆ ಕರೆತರುವ ಪ್ರಯತ್ನಕ್ಕೆ ಐಪಿಎಲ್ ಫ್ರಾಂಚೈಸಿಗಳು ಮುಂದಾಗಿಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಒಟ್ಟಿನಲ್ಲಿ ಕಳೆದ ಕೆಲ ವರ್ಷಗಳಿಂದ ಮೈದಾನದಿಂದ ಮರೆಯಾಗಿದ್ದ ಯುವರಾಜ್ ಸಿಂಗ್ ಮತ್ತೆ ಟಿ20 ಲೀಗ್ನಲ್ಲಿ ಕಾಣಿಸಿಕೊಂಡರೆ ಅವರ ಅಭಿಮಾನಿಗಳಿಗೆ ಅದಕ್ಕಿಂತ ದೊಡ್ಡ ಖುಷಿ ಬೇರೊಂದಿಲ್ಲ ಎನ್ನಬಹುದು.