CWG 2026: ಐದನೇ ದಿನ ಭಾರತಕ್ಕೆ ಮತ್ತೆರಡು ಬೆಳ್ಳಿ ಪದಕ!

Commonwealth Games 2026: ಕಾಮನ್‌ವೆಲ್ತ್ ಗೇಮ್ಸ್‌ನ ಐದನೇ ದಿನ ಭಾರತದ ಕ್ರೀಡಾಪಟುಗಳು ಐತಿಹಾಸಿಕ ಸಾಧನೆಗೈದಿದ್ದು, ಅಥ್ಲೆಟಿಕ್ಸ್ ಮತ್ತು ವೇಟ್‌ಲಿಫ್ಟಿಂಗ್‌ನಲ್ಲಿ ದೇಶಕ್ಕೆ ಎರಡು ಭರ್ಜರಿ ಬೆಳ್ಳಿ ಪದಕಗಳು ಲಭಿಸಿವೆ. ಪುರುಷರ 10 ಸಾವಿರ ಮೀಟರ್ ಓಟದ ಸ್ಪರ್ಧೆಯಲ್ಲಿ ಗುಲ್ವೀರ್ ಸಿಂಗ್ ಐತಿಹಾಸಿಕ ಬೆಳ್ಳಿ ಗೆದ್ದರೆ, ವೇಟ್‌ಲಿಫ್ಟಿಂಗ್‌ನಲ್ಲಿ ಹರ್ಜಿಂದರ್ ಕೌರ್ ದಾಖಲೆಯ ಪ್ರದರ್ಶನದೊಂದಿಗೆ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.

CWG 2026: ಐದನೇ ದಿನ ಭಾರತಕ್ಕೆ ಮತ್ತೆರಡು ಬೆಳ್ಳಿ ಪದಕ!
Harjinder Kaur - Gulveer Singh
Image Credit source: CWG

Updated on: Jul 29, 2026 | 7:36 AM

ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳ ಅದ್ಭುತ ಪ್ರದರ್ಶನ ಮುಂದುವರೆದಿದೆ. ಟ್ರ್ಯಾಕ್ ಅ್ಯಂಡ್ ಫೀಲ್ಡ್ ಹಾಗೂ ವೇಟ್‌ಲಿಫ್ಟಿಂಗ್ ಅಖಾಡದಲ್ಲಿ ಭಾರತಕ್ಕೆ ನಿನ್ನೆ ಎರಡು ಐತಿಹಾಸಿಕ ಬೆಳ್ಳಿ ಪದಕಗಳು ಲಭಿಸಿವೆ. ತಡರಾತ್ರಿ ನಡೆದ ರೋಚಕ ಸ್ಪರ್ಧೆಗಳಲ್ಲಿ ಭಾರತದ ಗುಲ್ವೀರ್ ಸಿಂಗ್ ಮತ್ತು ಹರ್ಜಿಂದರ್ ಕೌರ್ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಈ ಇಬ್ಬರ ಅಮೋಘ ಸಾಧನೆಯಿಂದಾಗಿ ಭಾರತದ ಒಟ್ಟು ಪದಕಗಳ ಸಂಖ್ಯೆ ಇದೀಗ 12ಕ್ಕೆ ತಲುಪಿದೆ.

ಟ್ರ್ಯಾಕ್‌ನಲ್ಲಿ ಇತಿಹಾಸ ಬರೆದ ಗುಲ್ವೀರ್ ಸಿಂಗ್

ಮಂಗಳವಾರ ನಡೆದ ಕ್ರೀಡಾಕೂಟದ ಅತ್ಯಂತ ರೋಚಕ ಮತ್ತು ಪ್ರಮುಖ ಆಕರ್ಷಣೆಯೆಂದರೆ ಪುರುಷರ 10,000 ಮೀಟರ್ ಓಟದ ಸ್ಪರ್ಧೆ. ಭಾರತದ ಪ್ರಮುಖ ದೀರ್ಘಾವಧಿ ಓಟಗಾರ ಹಾಗೂ ರಾಷ್ಟ್ರೀಯ ದಾಖಲೆ ಸರದಾರ ಗುಲ್ವೀರ್ ಸಿಂಗ್, ಈ ಕಠಿಣ ಸ್ಪರ್ಧೆಯನ್ನು ಕೇವಲ 27 ನಿಮಿಷ 49.78 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸುವ ಮೂಲಕ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡರು. ಆಸ್ಟ್ರೇಲಿಯಾದ ಕೈ ರಾಬಿನ್ಸನ್ ಚಿನ್ನ ಗೆದ್ದರೆ, ಗುಲ್ವೀರ್ ಕೇವಲ ಸೆಕೆಂಡ್‌ಗಳ ಅಂತರದಲ್ಲಿ ಚಿನ್ನದ ಅವಕಾಶ ಮಿಸ್ ಮಾಡಿಕೊಂಡರು.

ವೇಟ್‌ಲಿಫ್ಟಿಂಗ್‌ನಲ್ಲಿ ಹರ್ಜಿಂದರ್ ಕೌರ್ ಸಾಹಸ

ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಭರ್ಜರಿ ಪದಕದ ಬೇಟೆ ನಿನ್ನೆಯೂ ಮುಂದುವರಿಯಿತು. ಮಹಿಳೆಯರ 69 ಕೆಜಿ ವಿಭಾಗದ ಫೈನಲ್‌ನಲ್ಲಿ ಕಣಕ್ಕಿಳಿದಿದ್ದ ಬರ್ಮಿಂಗ್‌ಹ್ಯಾಮ್ 2022ರ ಕಂಚಿನ ಪದಕ ವಿಜೇತೆ ಹರ್ಜಿಂದರ್ ಕೌರ್, ಈ ಬಾರಿ ತಮ್ಮ ಪದಕದ ಬಣ್ಣವನ್ನು ಬದಲಾಯಿಸುವಲ್ಲಿ ಯಶಸ್ವಿಯಾದರು. ಮಹಿಳೆಯರ 69 ಕೆಜಿ ವಿಭಾಗದಲ್ಲಿ ಅದ್ಭುತ ಕೌಶಲ್ಯ ಪ್ರದರ್ಶಿಸಿದ ಹರ್ಜಿಂದರ್ ಒಟ್ಟು  227 ಕೆಜಿ. ತೂಕವನ್ನು ಎತ್ತುವ ಮೂಲಕ ಭಾರತದ ಖಾತೆಗೆ ಮತ್ತೊಂದು ಬೆಳ್ಳಿ ಪದಕವನ್ನು ತಂದು ಕೊಟ್ಟರು. ಇದರೊಂದಿಗೆ ಭಾರತದ ಪದಕಗಳ ಸಂಖ್ಯೆ 12 ಕ್ಕೇರಿತು.

ಇದನ್ನೂ ಓದಿ: ಟೀಮ್ ಇಂಡಿಯಾಗೆ ಕ್ಲೀನ್ ಸ್ವೀಪ್ ಗೆಲುವು ಅನಿವಾರ್ಯ!

ಜುಲೈ 28 ರವರೆಗಿನ ಪಂದ್ಯಗಳ ಮುಕ್ತಾಯಕ್ಕೆ ಭಾರತದ ಪರ ಯಾವ ಯಾವ ಕ್ರೀಡಾಪಟುಗಳು ಯಾವ ಪದಕ ಗೆದ್ದಿದ್ದಾರೆ ಎಂಬ ಸಂಪೂರ್ಣ ವಿವರ ಇಲ್ಲಿದೆ.

ಕ್ರ.ಸಂ. ಕ್ರೀಡಾಪಟು  ಕ್ರೀಡಾ ವಿಭಾಗ ಮತ್ತು ಸ್ಪರ್ಧೆ ಗೆದ್ದ ಪದಕ
1 ಮೀರಾಬಾಯಿ ಚಾನು ವೇಟ್‌ಲಿಫ್ಟಿಂಗ್ (ಮಹಿಳೆಯರ 48 ಕೆಜಿ) 🥇 ಚಿನ್ನ
2 ಶರ್ಮಿಳಾ ಧಂಕರ್ ಪ್ಯಾರಾ ಅಥ್ಲೆಟಿಕ್ಸ್ (ಮಹಿಳೆಯರ ಶಾಟ್‌ಪುಟ್ F57) 🥇 ಚಿನ್ನ
3 ರಿಷಿಕಾಂತ ಸಿಂಗ್ ವೇಟ್‌ಲಿಫ್ಟಿಂಗ್ (ಪುರುಷರ 60 ಕೆಜಿ) 🥈 ಬೆಳ್ಳಿ
4 ಮುತ್ತುಪಾಂಡಿ ರಾಜಾ ವೇಟ್‌ಲಿಫ್ಟಿಂಗ್ (ಪುರುಷರ 65 ಕೆಜಿ) 🥈 ಬೆಳ್ಳಿ
5 ಜ್ಞಾನೇಶ್ವರಿ ಯಾದವ್ ವೇಟ್‌ಲಿಫ್ಟಿಂಗ್ (ಮಹಿಳೆಯರ 53 ಕೆಜಿ) 🥈 ಬೆಳ್ಳಿ
6 ವಲ್ಲೂರಿ ಅಜಯ್ ಬಾಬು ವೇಟ್‌ಲಿಫ್ಟಿಂಗ್ (ಪುರುಷರ 79 ಕೆಜಿ) 🥈 ಬೆಳ್ಳಿ
7 ಸರ್ವೇಶ್ ಕುಶಾರೆ ಅಥ್ಲೆಟಿಕ್ಸ್ (ಪುರುಷರ ಹೈಜಂಪ್) 🥈 ಬೆಳ್ಳಿ
8 ಗುಲ್ವೀರ್ ಸಿಂಗ್  ಅಥ್ಲೆಟಿಕ್ಸ್ (ಪುರುಷರ 10,000 ಮೀಟರ್ ಓಟ) 🥈 ಬೆಳ್ಳಿ
9 ಹರ್ಜಿಂದರ್ ಕೌರ್ ವೇಟ್‌ಲಿಫ್ಟಿಂಗ್ (ಮಹಿಳೆಯರ 69 ಕೆಜಿ) 🥈 ಬೆಳ್ಳಿ
10 ಝಂಡು ಕುಮಾರ್ ಪ್ಯಾರಾ ಪವರ್‌ಲಿಫ್ಟಿಂಗ್ (ಪುರುಷರ ವಿಭಾಗ) 🥉 ಕಂಚು
11 ಬಿಂದ್ಯಾರಾಣಿ ದೇವಿ ವೇಟ್‌ಲಿಫ್ಟಿಂಗ್ (ಮಹಿಳೆಯರ 58 ಕೆಜಿ) 🥉 ಕಂಚು
12 ಶಿಲ್ಪಾ ಕೆ. ಶೈಲಾ ಪ್ಯಾರಾ ಅಥ್ಲೆಟಿಕ್ಸ್ (ಮಹಿಳೆಯರ ಶಾಟ್‌ಪುಟ್ F57) 🥉 ಕಂಚು

 

 

Published On - 7:29 am, Wed, 29 July 26

Loading...
Unable to load recommendations.
Follow Us