ಫೈನಲ್ನಲ್ಲಿ ಸಿಕ್ಸ್ ಸಿಡಿಸಿ ಟ್ರೋಫಿ ಗೆಲ್ಲಿಸಿಕೊಟ್ಟ ದೀಪ್ತಿ ಶರ್ಮಾ
Deepthi Sharma: ಭಾರತದ ಪರ ದೀಪ್ತಿ ಶರ್ಮಾ 5 ಟೆಸ್ಟ್, 89 ಏಕದಿನ ಮತ್ತು 117 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಕ್ರಮವಾಗಿ 20, 106 ಮತ್ತು 131 ವಿಕೆಟ್ಗಳನ್ನು ಕಬಳಿಸಿದ್ದಾರೆ. ಹಾಗೆಯೇ ಬ್ಯಾಟಿಂಗ್ನಲ್ಲೂ ಕೊಡುಗೆ ನೀಡುವ ಮೂಲಕ ಭಾರತ ತಂಡದ ಆಲ್ರೌಂಡರ್ ಆಗಿ ಮಿಂಚಿದ್ದಾರೆ. ಇದೀಗ ದಿ ಹಂಡ್ರೆಡ್ ಲೀಗ್ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ದೀಪ್ತಿ ಎಲ್ಲರ ಗಮನ ಸೆಳೆದಿದ್ದಾರೆ.
ದಿ ಹಂಡ್ರೆಡ್ ಲೀಗ್ ಮಹಿಳಾ ಟೂರ್ನಿಯ ಫೈನಲ್ ಪಂದ್ಯದಲ್ಲಿ ಲಂಡನ್ ಸ್ಪಿರಿಟ್ ತಂಡ ರೋಚಕ ಜಯ ಸಾಧಿಸಿದೆ. ಅದು ಸಹ ಕೊನೆಯ ಓವರ್ನಲ್ಲಿ ದೀಪ್ತಿ ಶರ್ಮಾ ಬಾರಿಸಿದ ಸಿಕ್ಸ್ನಿಂದ ಎಂಬುದು ವಿಶೇಷ. ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಮೊದಲು ಬ್ಯಾಟ್ ಮಾಡಿದ ವೆಲ್ಷ್ ಫೈರ್ ವುಮೆನ್ ತಂಡವು 100 ಎಸೆತಗಳಲ್ಲಿ 8 ವಿಕೆಟ್ ಕಳೆದುಕೊಂಡು 115 ರನ್ ಕಲೆಹಾಕಿತು.
116 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಲಂಡನ್ ಸ್ಪಿರಿಟ್ ತಂಡವು 88 ರನ್ಗಳಿಸುವಷ್ಟರಲ್ಲಿ 4 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ಇದಾಗ್ಯೂ ಇನಿಂಗ್ಸ್ ಕಟ್ಟುವ ಜವಾಬ್ದಾರಿ ವಹಿಸಿಕೊಂಡ ದೀಪ್ತಿ ಶರ್ಮಾ ಜಾರ್ಜಿಯಾ ಜೊತೆಗೂಡಿ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು.
ಇದಾಗ್ಯೂ ಕೊನೆಯ 5 ಎಸೆತಗಳಲ್ಲಿ ಲಂಡನ್ ಸ್ಪಿರಿಟ್ ತಂಡಕ್ಕೆ 6 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ ದಾಳಿಗಿಳಿದ ಅನುಭವಿ ಆಟಗಾರ್ತಿ ಹೇಲಿ ಮ್ಯಾಥ್ಯೂಸ್ ಮೊದಲ ಎರಡು ಎಸೆತಗಳಲ್ಲಿ ಕೇವಲ 2 ರನ್ ಮಾತ್ರ ನೀಡಿದರು. ಪರಿಣಾಮ ಕೊನೆಯ 3 ಎಸೆತಗಳಲ್ಲಿ 4 ರನ್ಗಳು ಬೇಕಿತ್ತು. ಈ ವೇಳೆ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ದೀಪ್ತಿ ಶರ್ಮಾ ಲಂಡನ್ ಸ್ಪಿರಿಟ್ ತಂಡಕ್ಕೆ ರೋಚಕ ಜಯ ತಂದುಕೊಟ್ಟರು. ಇದೀಗ ಟೀಮ್ ಇಂಡಿಯಾ ಆಟಗಾರ್ತಿಯ ಕೆಚ್ಚೆದೆಯ ಬ್ಯಾಟಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.