Vijay Hazare Trophy: ಭಾರತ ಕ್ರಿಕೆಟ್ ತಂಡಕ್ಕೆ ಹತ್ತಿರವಾಗ್ತಿದ್ದಾರೆ ದೇವದತ್ ಪಡಿಕ್ಕಲ್
ಈಗ ಜಾರಿಯಲ್ಲಿರುವ ವಿಜಯ್ ಹಜಾರೆ ಟ್ರೋಪಿ ಟೂರ್ನಿಯಲ್ಲಿ ಕರ್ನಾಟಕ ಆಡಿರುವ ಎಲ್ಲ ಮೂರು ಪಂದ್ದಗಳಲ್ಲೂ ಶತಕ ಬಾರಿಸಿ ತಮ್ಮ ಆಪಾರ ಪ್ರತಿಭೆಯನ್ನು ದೇವದತ್ ಪಡಿಕ್ಕಲ್ ಮತ್ತೊಮ್ಮೆ ಪ್ರಚುರಪಡಿಸಿದ್ದಾರೆ.
ಬೆಂಗಳೂರು: ‘ನಾವು ಎರಡನೇ ಮಗುವನ್ನು ಪ್ಲ್ಯಾನ್ ಮಾಡುವಾಗ ಒಂದು ಪಕ್ಷ ಅದೇನಾದರೂ ಗಂಡುಮಗುವಾದರೆ ಕ್ರಿಕೆಟ್ ಆಟಗಾರನನ್ನಾಗಿ ಮಾಡಬೇಕೆಂದು ನಿಶ್ಚಯಿಸಿಕೊಂಡಿದ್ದೆವು’ ಅಂತ ಹೇಳಿದ್ದು ಲಿಸ್ಟ್ ‘ಎ’ ಮತ್ತು ಪ್ರಥಮ ದರ್ಜೆ ಪಂದ್ಯಗಳಲ್ಲಿ ಕರ್ನಾಟಕದ ಓಪನಿಂಗ್ ಬ್ಯಾಟ್ಸ್ಮನ್ ಆಗಿ ದೇಶದಾದ್ಯಂತ ಸದ್ದು ಮಾಡುತ್ತಿರುವ ದೇವದತ್ ಪಡಿಕ್ಕಲ್ ಅವರ ಅಮ್ಮ ಅಂಬಿಲಿ ಪಡಿಕ್ಕಲ್. ಅವರು ತಾವಂದುಕೊಂಡ ಹಾಗೆಯೇ ಮಗನನ್ನು ಕ್ರಿಕೆಟರ್ ಮಾಡಿಯೇ ಬಿಟ್ಟರು! ಆದರೆ ಅದಕ್ಕಾಗಿ ನ್ಯೂಜಿಲೆಂಡ್ ರಾಯಭಾರ ಕಚೇರಿಯಲ್ಲಿ ಶಿಕ್ಷಣ ವಿಸಾ ಸಲಹೆಗಾರ್ತಿಯಾಗಿ ಕೆಲಸ ಮಾಡುವ ಆಂಬಿಲಿ ಮತ್ತು ಅವರ ಪತಿ ಬುಬುನು ಕುನ್ನತ್ ಪಡಿಕ್ಕಲ್ ಪಟ್ಟ ಶ್ರಮ ಚಿಕ್ಕದಲ್ಲ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಹಾಗೂ ಇತರ ಬಾಹ್ಯಾಕಾಶ ಸಂಸ್ಥೆಗಳೊಂದಿಗೆ ಸಹವರ್ತಿಯಾಗಿ ಕೆಲಸ ಮಾಡುವ ಬುಬುನು, ದೇವ್ದತ್ಗೋಸ್ಕರ ಹೈದರಾಬಾದಿನಲ್ಲಿರುವ ತಮ್ಮ ಸ್ವಂತ ಅಪಾರ್ಟ್ಮೆಂಟ್ ಬಿಟ್ಟು ಬೆಂಗಳೂರಿನ ಹಲಸೂರಿನಲ್ಲಿ ಒಂದು ಬಾಡಿಗೆ ಮನೆಯಲ್ಲಿ ವಾಸಮಾಡಲಾರಂಭಿಸಿದರು!
ಮೂಲತಃ ಕೇರಳದ ಎಡಪ್ಪಾಲ್ನವರಾಗಿರುವ ದಂಪತಿಗಳ ಕನಸು 2019ರಲ್ಲಿ ನನಸಾಯಿತು. ಹಾಗೆ ನೋಡಿದರೆ ಅದಕ್ಕೂ ಮೊದಲೇ ಅವರ ಆಸೆ ಕೈಗೂಡಿತ್ತು. 2017-18 ಸೀಸನ್ನಲ್ಲಿ ದೇವದತ್ ರಾಜ್ಯ ರಣಜಿ ತಂಡಕ್ಕೆ ಆಯ್ಕೆಯಾದರು. ಅಂಬಿಲಿ ಮತ್ತು ಬುಬುನು ಹೈದರಾಬಾದಿನಿಂದ ಬೆಂಗಳೂರಿಗೆ ಶಿಫ್ಟ್ ಆದಾಗ ದೇವದತ್ಗೆ 11 ರ ಪ್ರಾಯ. ಮಗನನ್ನು ಮೊದಲು ಆರ್ಮಿ ಪಬ್ಲಿಕ್ ಶಾಲೆಗೆ ಅವರು ಸೇರಿಸಿದರು.
ಆದರೆ, ಸದರಿ ಶಾಲೆಯಲ್ಲಿ ಕ್ರಿಕೆಟ್ಗೆ ಪೂರಕವಾದ ವಾತಾವರಣ ಇಲ್ಲದಿರುವುದನ್ನು ಮನಗಂಡ ದಂಪತಿಗಳು ಮಗನನ್ನು ಕ್ರೀಡಾ ಚಟುವಟಿಕೆಗಳ ಕೇಂದ್ರ ಎನಿಸಿರುವ ಸೆಂಟ್ ಜೋಸೆಫ್ಸ್ ಹೈಸ್ಕೂಲಿಗೆ ಸೇರಿಸಿದರು. ಅಲ್ಲೇ ಅವರಿಗೆ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ ಸಂಸ್ಥೆ (ಕೆಐಒಸಿ) ಮತ್ತು ಅದರ ಚೀಫ್ ಕೋಚ್ ಮಹಮ್ಮದ್ ನಸೀರುದ್ದೀನ್ ಪರಿಚಯವಾಗಿದ್ದು.
ದಂಪತಿಗಳ ಆಸೆ ಮತ್ತು ದೇವದತ್ ಅವರಲ್ಲಿದ್ದ ಆಸಕ್ತಿ ಮತ್ತು ಪ್ರತಿಭೆ ಗಮನಿಸಿದ ನಸೀರುದ್ದಿನ್, ಹುಡುಗನ್ನು ಕೆಐಒಸಿಗೆ ಸೇರಿಸಿಕೊಂಡರು. ದೇವದತ್ ಬ್ಯಾಟಿಂಗ್ ವೈಖರಿಯನ್ನು ನೋಡಿದ ನಂತರ ಅವರು ದೇವದತ್ರನ್ನು 12 ವರ್ಷದೊಳಗಿನವರ ಗುಂಪಿನಿಂದ ನೇರವಾಗಿ ಅಂಡರ್-14 ಗುಂಪಿಗೆ ಸೇರಿಸಿದರು. ತಮಗಿಂತ ದೊಡ್ಡ ವಯಸ್ಸಿನ ಹುಡುಗರ ಬೌಲಿಂಗ್ ಎದುರು ಬ್ಯಾಟ್ ಮಾಡಲು ಮೊದಲು ಸ್ವಲ್ಪ ಕಷ್ಟಪಟ್ಟ ದೇವದತ್ ನಂತರ ಅವರನ್ನು ಲೀಲಾಜಾಲವಾಗಿ ಅಡಲಾರಂಭಿಸಿದರು.
ನಸೀರುದ್ದೀನ್ ಅವರ ಯೋಗ್ಯ ಮಾರ್ಗದರ್ಶನದಲ್ಲಿ ದೇವದತ್ ಅವರ ಬ್ಯಾಟಿಂಗ್ ಕೌಶಲದಲ್ಲೂ ಭಾರೀ ಸುಧಾರಣೆಯಾಯಿತು. ತಾವು ಓದುತ್ತಿದ್ದ ಶಾಲೆ ಮತ್ತು ರಾಜ್ಯದ ಪರ ಅವರು ವಯೋಮಿತಿಗೆ ಅನುಗುಣವಾದ ಟೂರ್ನಿಗಳಲ್ಲಿ ಆಡಿ ಗಮನ ಸೆಳೆಯಲಾರಂಭಿಸಿದರು. ನಂತರದ ದಿನಗಳಲ್ಲಿ ಅವರು ಭಾರತದ ಅಂಡರ್-19 ತಂಡಕ್ಕೂ ಆಯ್ಕೆಯಾದರು. 2108ರಲ್ಲಿ ಕೂಚ್ ಬಿಹಾರ್ ಟ್ರೋಫಿಗಾಗಿ ನಡೆದ ಪಂದ್ಯಗಳಲ್ಲಿ ಅವರು 829 ರನ್ ಬಾರಿಸಿದರು!
ಆದರೆ, ಅಂಬಿಲಿ ಮತ್ತು ಬುಬುನುಗೆ ಅಪರಿಮಿತ ಸಂತೋಷವಾಗಿದ್ದು ದೇವದತ್ ಅವರನ್ನು 2019ರಲ್ಲಿ ಇಂಡಿಯನ್ ಪ್ರಿಮೀಯರ್ ಲೀಗ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಧಣಿಗಳು ದೇವದತ್ ಅವರನ್ನು ಮೂಲಬೆಲೆಗೆ (₹ 20 ಲಕ್ಷ) ಖರೀದಿಸಿದಾಗ. ಐಪಿಎಲ್ನಲ್ಲಿ ದೇಶ ವಿದೇಶದ ಅಟಗಾರರರೊಂದಿಗೆ ಆಡುವ ಅವಕಾಶ ಸಿಗುತ್ತದೆ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಈ ಟೂರ್ನಿಯಲ್ಲಿ ಮಿಂಚುವ ಆಟಗಾರರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಕಲ್ಪಿಸುತ್ತದೆ ಅನ್ನುವುದು ಅವರಿಗೆ ಗೊತ್ತಿತ್ತು.
ಆದರೆ, ದುರದೃಷ್ಟವಶಾತ್ 2019ರ ಸೀಸನ್ನಲ್ಲಿ ದೇವದತ್ ಬೆಂಚ್ ಕಾಯಿಸುವುದನ್ನು ಬಿಟ್ಟು ಬೇರೇನೂ ಮಾಡಲಾಗಲಿಲ್ಲ. ಪಡಿಕ್ಕಲ್ ಕುಟುಂಬ ಕೊಂಚ ನಿರಾಶೆಗೊಳಗಾಗಿದ್ದು ನಿಜವಾದರೂ ಅದು ದೇವದತ್ರನ್ನು ದೃತಿಗೆಡಿಸಲಿಲ್ಲ. ಅದಾಗಲೇ ಕರ್ನಾಟಕದ ರಣಜಿ ತಂಡಕ್ಕೂ ಆಯ್ಕೆಗಾಗಿದ್ದ ಅವರು ಪ್ರಥಮ ದರ್ಜೆ ಪಂದ್ಯ ಮತ್ತು ಕರ್ನಾಟಕ ಪ್ರಿಮೀಯರ್ ಲೀಗ್ನಲ್ಲಿ ಬಳ್ಳಾರಿ ಟಸ್ಕರ್ಸ್ ಪರ ಹೇರಳವಾಗಿ ರನ್ ಗಳಿಸುವುದನ್ನು ಮುಂದುವರೆಸಿದರು.
2020ರ ಐಪಿಎಲ್ ಸೀಸನ್ನಲ್ಲಿ ಆಡುವ ಆವಕಾಶಕ್ಕಾಗಿ ಕಾಯುತ್ತಿದ್ದ ದೇವದತ್ಗೆ ಕೊವಿಡ್-19 ಪಿಡುಗಿನಿಂದ ಕೊಂಚ ಹಿನ್ನಡೆ ಉಂಟಾಯಿತು. ಟೂರ್ನಮೆಂಟ್ ಸುಮಾರು ಆರು ತಿಂಗಳು ಮುಂದೂಡಲಾಯಿತಲ್ಲದೆ, ಭಾರತದಿಂದ ಯುಎಈಗೆ ಶಿಫ್ಟ್ ಕೂಡ ಆಯಿತು. ಆದರೆ ಮೈದಾನ ಯಾವುದಾದರೇನು? ದೇವದತ್ ಅವಲ್ಲರಿರುವ ಪ್ರಚಂಡ ಪ್ರತಿಭೆಗೆ ಕೊಲ್ಲಿ ರಾಷ್ಟ್ರಗಳಲ್ಲಿನ ಪಿಚ್ಗಳು ತಡೆಯೊಡ್ಡುವಂತಿರಲಿಲ್ಲ. ಅದಕ್ಕಿತ ಮಿಗಿಲಾದ ಸಂಗತಿಯೆಂದರೆ, ಆರ್ಸಿಬಿ, ದೇವದತ್ರನ್ನು ಆರನ್ ಫಿಂಚ್ ಅವರೊಂದಿಗೆ ಇನ್ನಿಂಗ್ಸ್ ಆರಂಬಿಸಳು ಕಳಿಸುವ ನಿರ್ಧಾರ ಮಾಡಿದ್ದು.
ಆರಂಭ ಆಟಗಾರನ ಐಪಿಎಲ್ ಟೂರ್ನಿಯ ಆರಂಭ ಅವರ ವೈರಿಗಳೂ ಸಹ ತಾವು ಕೂತ ಸ್ಥಳಗಳಿಂದ ಎದ್ದುನಿಂತು ಚಪ್ಪಾಳೆ ತಟ್ಟುವಂತಿತ್ತು. ಐಪಿಎಲ್ ಟೂರ್ನಿಯಲ್ಲ ತಾನಾಡಿದ ಮೊದಲ 4 ಪಂದ್ಯಗಳಲ್ಲಿ ಮೂರು ಅರ್ಧ ಶತಕಗಳನ್ನು ಬಾರಿಸಿದ ಮೊದಲ ಆಟಗಾರನೆಂಬ ಖ್ಯಾತಿಗೆ ಪಾತ್ರರಾದರು. ಈ ಸೀಸನ್ನಲ್ಲಿ ಆಡಿದ 15 ಪಂದ್ಯಗಳಿಂದ ಅವರು ತಮ್ಮ ಟೀಮಿನ ಪರ ಅತಿಹೆಚ್ಚು 473 ರನ್ ಗಳಿಸಿದರು.
ಹಾಗೆಯೇ, ಇದುವರೆಗೆ 14 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ದೇವದತ್ 99 ಗರಿಷ್ಠ ಸ್ಕೋರಿನೊಂದಿಗೆ 34.88 ಸರಾಸರಿಯಲ್ಲಿ 907 ರನ್ ಗಳಿಸಿದ್ದಾರೆ. ಕಳೆದ ವರ್ಷ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಗಳಲ್ಲಿ ಅವರು 175.75 ಸ್ಟ್ರೈಕ್ ರೇಟ್ನೊಂದಿಗೆ 580 ರನ್ ಗಳಿಸಿದ್ದರು.
ಇಂಥ ದೇವದತ್, ಈಗ ಜಾರಿಯಲ್ಲಿರುವ ವಿಜಯ್ ಹಜಾರೆ ಟ್ರೋಪಿ ಟೂರ್ನಿಯಲ್ಲಿ ಕರ್ನಾಟಕ ಆಡಿರುವ ಎಲ್ಲ ಮೂರು ಪಂದ್ದಗಳಲ್ಲೂ ಶತಕ ಬಾರಿಸಿ ತಮ್ಮ ಪ್ರತಿಭೆಯನ್ನು ಮತ್ತೊಮ್ಮೆ ಪ್ರಚುರಪಡಿಸಿದ್ದಾರೆ. ಮೊದಲ ಪಂದ್ಯದಲ್ಲಿ ಅವರು ಒಡಿಶಾ ವಿರುದ್ಧ 152 ಬಾರಿಸಿ, ಕೇರಳ ವಿರುದ್ಧ ಆಡಿದ ಎರಡನೇ ಪಂದ್ಯದಲ್ಲಿ ಅಜೇಯ 126 ರನ್ ಬಾರಿಸಿದರು. ರವಿವಾರದಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರೇಲ್ವೇಸ್ ವಿರುದ್ಧ ಆಡಿದ ಪಂದ್ಯದಲ್ಲಿ ಅಜೇಯ 145 ರನ್ ಗಳಿಸಿದರು. ಲಿಸ್ಟ್ ‘ಎ’ ಕ್ರಿಕೆಟ್ನಲ್ಲಿ ಇದು ಅವರ 5 ನೇ ಶತಕವಾಗಿದೆ.
ಅವರ ಫಾರ್ಮ್ ನೋಡುತ್ತಿದ್ದರೆ, ಅವರು ಸೀಮಿತ ಓವರ್ಗಳ ಕ್ರಿಕೆಟ್ಗೆ ಭಾರತದ ಪರ ಆಡುವ ದಿನ ದೂರವಿಲ್ಲ ಎನಿಸುತ್ತದೆ.
Published On - 6:22 pm, Mon, 1 March 21