ಟೀಮ್ ಇಂಡಿಯಾ, ಅದರ ಮ್ಯಾನೇಜ್ಮೆಂಟ್ ಮತ್ತು ನಾಯಕ ವಿರಾಟ್ ಕೊಹ್ಲಿಯನ್ನು ಟೀಕಿಸುವ ಯಾವುದೇ ಅವಕಾಶವನ್ನು ಭಾರತದ ಮಾಜಿ ಆರಂಭ ಅಟಗಾರ ಗೌತಮ್ ಗಂಭೀರ್ ಹೋಗಗೊಡುವುದಿಲ್ಲ. ಭಾರತ ಮತ್ತು ಇಂಗ್ಲೆಂಡ್ ನಡುವೆ ಜಾರಿಯಲ್ಲಿರುವ ಟಿ20ಐ ಸರಣಿಯ ಮೂರನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಡ್ರಾಪ್ ಮಾಡಿದ್ದನ್ನು ತೀವ್ರವಾಗಿ ಖಂಡಿಸಿರುವ ಗಂಭೀರ್, ತಾನು ಸೂರ್ಯನ ಸ್ಥಾನದಲ್ಲಿದ್ದಿದ್ದರೆ ತುಂಬಾ ನೋವು ಅನುಭವಿಸಿರುತ್ತಿದ್ದೆ ಎಂದು ಹೇಳಿದ್ದಾರೆ.
ಕ್ರಿಕೆಟ್ ಪ್ರೇಮಿಗಳಿಗೆ ಗೊತ್ತಿರುವ ಹಾಗೆ, ಮಂಗಳವಾರದಂದು ನಡೆದ ಮೂರನೆ ಪಂದ್ಯದಲ್ಲಿ ರೋಹಿತ್ ಶರ್ಮ ಅವರನ್ನು ಆಡುವ ಇಲೆವೆನ್ನಲ್ಲಿ ತಂದ ಮ್ಯಾನೇಜ್ಮೆಂಟ್, ಯಾದವ್ ಅವರನ್ನು ಕೈಬಿಟ್ಟಿತು. ಎರಡನೇ ಪಂದ್ಯದಲ್ಲಿ ವೀರೋಚಿತ ಅರ್ಧ ಶತಕ ಬಾರಿಸಿದ್ದ ಇಶಾನ್ ಕಿಷನ್ ಅವರನ್ನು ಮೂರನೇ ಸ್ಥಾನದಲ್ಲಿ ಆಡಿಸಲಾಯಿತು ಮತ್ತು ನಾಯಕ ಕೊಹ್ಲಿ 4ನೇ ಕ್ರಮಾಂಕದಲ್ಲಿ ಆಡಿದರು. ಯಾದವ್ ಸಹ ಕಿಷನ್ ಅವರಂತೆ ಎರಡನೇ ಪಂದ್ಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆ ಮಾಡಿದ್ದರು. ಅದರೆ ಅವರಿಗೆ ಬ್ಯಾಟ್ ಮಾಡುವ ಅವಕಾಶ ಸಿಗಲಿಲ್ಲ.
ಯಾದವ್ರನ್ನು ತಂಡದಿಂದ ಕೈಬಿಟ್ಟಿದ್ದು ಅಕ್ಷಮ್ಯ ಎಂದಿರುವ ಗಂಭೀರ್, ಅವರ ಸ್ಥಾನದಲ್ಲಿ ತಾನಿದ್ದಿದ್ದರೆ ಬಹಳ ವ್ಯಥೆಪಟ್ಟಿರುತ್ತಿದ್ದೆ ಎಂದು ಹೇಳಿದ್ದಾರೆ. ಕನ್ನಡಿಗ ಮನೀಶ್ ಪಾಂಡೆ ಮತ್ತು ಸಂಜು ಸ್ಯಾಮ್ಸನ್ ಅವರ ಉದಾಹರಣೆಯನ್ನು ಉಲ್ಲೇಖಿಸಿದ ಗಂಭೀರ್, ಈಇಬ್ಬರು ಪ್ರತಿಭಾವಂತ ಆಟಗಾರರಿಗೂ ಅವರ ಸಾಮರ್ಥ್ಯ ತೋರುವ ಅವಕಾಶ ನೀಡದೆ ಟೀಮಿನಿಂದ ಹೊರಹಾಕಲಾಯಿತು ಎಂದು ಹೇಳಿದರು.
‘ನಾನೀಗ 21 ವರ್ಷದವನಲ್ಲ, 30ನ್ನು ಮೀರಿದ್ದೇನೆ. ಆಟಗಾರನೊಬ್ಬನ ವಯಸ್ಸು 30 ದಾಟಿದರೆ ಅಭದ್ರತೆ ಕಾಡಲಾರಂಭಿಸುತ್ತದೆ. ಮನೀಶ್ ಪಾಂಡೆಗೆ ಏನಾಯ್ತು ಅಂತ ಸ್ವಲ್ಪ ಗಮನಿಸಿ, ಅವರ ಬಗ್ಗೆ ಯಾರೂ ಮಾತಾಡೋದಿಲ್ಲ, ಸಂಜು ಸ್ಯಾಮ್ಸನ್ ವಿಷಯದಲ್ಲೂ ಅದೇ ಅಗಿತ್ತು, ಅವರೆಲ್ಲಿದ್ದಾರೆ ಅಂತ ಯಾರಾದರೂ ವಿಚಾರಿಸುತ್ತಾರಾ’ ಎಂದು ಗಂಭೀರ್ ಕ್ರೀಡಾ ವೆಬ್ಸೈಟೊಂದರ ಜೊತೆ ಮಾತಾಡುವಾಗ ಹೇಳಿದರು.
ಸೂರ್ಯಕುಮಾರ ಯಾದವ್ಗೆ ಕನಿಷ್ಠ 3-4 ಪಂಂದ್ಯಗಳಲ್ಲಿ ಆಡಿಸಿ ಆವರ ಸಾಮರ್ಥ್ಯವೆನು ಅಂತ ಪರೀಕ್ಷಿಸಬೇಕಿತ್ತು ಅಂತ ಗಂಭೀರ್ ಹೇಳಿದರು. ‘ನೀವು ಅವರಿಗೆ ಪದಾರ್ಪಣೆ ಮಾಡುವ ಅವಕಾಶ ನೀಡಿದ್ದರೆ ಒಂದಷ್ಟು ಪಂದ್ಯಗಳನ್ನು ಆಡಿಸುವ ಅವಕಾಶವನ್ನು ಕಲ್ಪಿಸಬೇಕು. ಹೊಸ ಆಟಗಾರನೊಬ್ಬನಿಗೆ ಟೀಮ್ ಮ್ಯಾನೇಜ್ಮೆಂಟ್ನ ಬೆಂಬಲ ಸಿಗದೆ ಹೋದರೆ ಅವನು ಯಶ ಕಾಣಲಾರ’ ಎಂದು ಗಂಭೀರ್ ಹೇಳಿದರು.
‘ಇಶಾನ್ ಕಿಷನ್ ವಿಷಯವನ್ನೇ ತೆಗೆದುಕೊಳ್ಳಿ, ಮೊದಲ ಪಂದ್ಯದಲ್ಲಿ ಓಪನರ್ ಅಗಿ ಅರ್ಧ ಶತಕ ಬಾರಿಸಿದವನನ್ನು ಎರಡನೇ ಪಂದ್ಯದಲ್ಲಿ ಮೂರನೇ ಕ್ರಮಾಂಕಕ್ಕೆ ದೂಡುತ್ತಾರೆ’ ಎಂದು ಗಂಭೀರ್ ಹೇಳಿದರು. ಸೂರ್ಯಕುಮಾರ್ ಯಾದವ್ ಅವರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನು ಪರೀಕ್ಷಿಸದಿರುವುದರಿಂದ ವರ್ಷಾಂತ್ಯದಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯುವಾಗ ಹಠಾತ್ತಾಗಿ ಅವರ ಸ್ಥಾನದಲ್ಲಿ ಬೇರೆಯವರನ್ನು ಆರಿಸಿದರೆ ಅವರು ಘಾಸಿಗೊಳಗಾಗುತ್ತಾರೆ ಅಂತ ಗಂಭೀರ್ ಹೇಳಿದರು.
‘ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಸೂರ್ಯಕುಮಾರ ಯಾದವ್ ಅವರ ಸಾಮರ್ಥ್ಯವನ್ನು ಟೀಮ್ ಮ್ಯಾನೇಜ್ಮೆಂಟ್ ಪರೀಕ್ಷಿಸಿಯೇ ಇಲ್ಲ. ನಾಳೇ ಪುನಃ ಅವರನ್ನು ಆಡಿಸುವ ಪ್ರಮೇಯ ಎದುರಾದರೆ? ಹಾಗಾಗಲಾರದು ಅಂತ ನಾನು ಭಾವಿಸಿತ್ತೇನೆ. ಯಾಕೆಂದರೆ, ಯಾವುದಾದರೂ ಆಟಗಾರ ಗಾಯಗೊಳ್ಳಲಿ ಅಂತ ನಾನು ಯಾವತ್ತೂ ಆಶಿಸುವುದಿಲ್ಲ. ಉದಾಹರಣೆಗಾಗಿ ಇದನ್ನು ಹೇಳುತ್ತಿದ್ದೇನೆ, ಒಂದು ಪಕ್ಷ ಶ್ರೇಯಸ್ ಅಯ್ಯರ್ ಗಾಯಗೊಂಡರೆ ಅವರ ಸ್ಥಾನದಲ್ಲಿ ಯಾರನ್ನ ಆಡಿಸುತ್ತೀರಿ? ಈ ಹಿನ್ನೆಲೆಯಲ್ಲಿ ಹೊಸಬನೊಬ್ಬನಿಗೆ ಕನಿಷ್ಠ 3-4 ಪಂದ್ಯಗಳಲ್ಲಿ ಆಡುವ ಅವಕಾಶ ನೀಡಿ ಅವರ ಸಾಮರ್ಥ್ಯವನ್ನು ಅಳೆಯುವ ಪ್ರಯತ್ನವನ್ನಾದರೂ ಮಾಡಿ’ ಅಂತ ಟೀಮ್ ಮ್ಯಾನೇಜ್ಮೆಂಟ್ಗೆ ಗಂಭೀರ್ ತಾಕೀತು ಮಾಡಿದರು.
ಇದನ್ನೂ ಓದಿ: India vs England | ಸದಾ ನೆಚ್ಚಿಕೊಳ್ಳಬಹುದಾದ ಬೌಲರ್ ಭುವಿ ತಂಡಕ್ಕೆ ವಾಪಸ್ಸಾಗಿರುವುದು ಸಂತಸ ನೀಡಿದೆ: ವಿರಾಟ್ ಕೊಹ್ಲಿ
Published On - 6:11 pm, Wed, 17 March 21