
ಜೈಪುರದ ಹೆದ್ದಾರಿಯಲ್ಲಿ ಸಂಭವಿಸಿದ ಎಲ್‌ಪಿಜಿ ಟ್ಯಾಂಕರ್ ಅಪಘಾತದಲ್ಲಿ 19 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಇದೀಗ ಈ ಅಪಘಾತಕ್ಕೆ ಸಂಬಂಧಿಸಿದ ಮೂರು ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಜೈಪುರ ಅಪಘಾತದ ಸಂತ್ರಸ್ತರಿಗೆ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಪಘಾತದಲ್ಲಿ ಗಾಯಗೊಂಡವರಿಗೆ ಧೋನಿ 50 ಕೋಟಿ ನೀಡಿದ್ದರೆ, ಕೊಹ್ಲಿ 120 ಕೋಟಿ ನೀಡಿದ್ದಾರೆ ಎಂದು ಕೆಲವು ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ.
ಫೇಸ್‌ಬುಕ್ ಬಳಕೆದಾರರೊಬ್ಬರು ಟ್ಯಾಂಕರ್ ಸ್ಪೋಟಗೊಂಡಿರುವ ಹಾಗೂ ಧೋನಿಯ ಫೋಟೋವನ್ನು ಹಂಚಿಕೊಂಡು, “ಮಹೇಂದ್ರ ಸಿಂಗ್ ಧೋನಿ ಅವರು ಜೈಪುರದಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ 50 ಕೋಟಿ ರೂಪಾಯಿಗಳನ್ನು ನೀಡಿದರು, ನೀವು ಮಹೇಂದ್ರ ಸಿಂಗ್ ಧೋನಿಯನ್ನು ಎಷ್ಟೇ ಟ್ರೋಲ್ ಮಾಡಿದರೂ, ಧೋನಿ ಉತ್ತಮ ನಾಯಕ ಮಾತ್ರವಲ್ಲದೆ ಒಳ್ಳೆಯ ವ್ಯಕ್ತಿ ಕೂಡ” ಎಂದು ಬರೆದುಕೊಂಡಿದ್ದಾರೆ.
ಮತ್ತೊಬ್ಬ ಫೇಸ್‌ಬುಕ್ ಬಳಕೆದಾರ, ‘‘ಡಿಸೆಂಬರ್ 25 ರಂದು ಜೈಪುರ ಅಪಘಾತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ವಿರಾಟ್ ಕೊಹ್ಲಿ 10 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ’’ ಎಂದು ಪೋಸ್ಟ್ ಮಾಡಿದ್ದಾರೆ.
ಹಾಗೆಯೆ ಹಾರ್ದಿಕ್ ಪಾಂಡ್ಯ ಕುರಿತು, ‘‘ಜೈಪುರ ಅಪಘಾತದಲ್ಲಿ ಮೃತಪಟ್ಟವರಿಗೆ ಹಾರ್ದಿಕ್ ಪಾಂಡ್ಯ 20 ಕೋಟಿ ರೂ. ನೀಡಿದ್ದಾರೆ. ಇವರಿಗೆ ಅಭಿನಂದನೆಗಳು’’ ಎಂದು ಬರೆದಿಕೊಂಡಿದ್ದಾರೆ.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ವೈರಲ್ ಹಕ್ಕುಗಳು ನಕಲಿ ಎಂದು ಕಂಡುಬಂದಿದೆ. ಜೈಪುರ ಅಪಘಾತದ ಸಂತ್ರಸ್ತರಿಗೆ ಧೋನಿ, ಹಾರ್ದಿಕ್ ಮತ್ತು ಕೊಹ್ಲಿ ಹಣಕಾಸಿನ ನೆರವು ನೀಡಿಲ್ಲ. ವೈರಲ್ ಹೇಳಿಕೆಯನ್ನು ತನಿಖೆ ಮಾಡುವ ಮೊದಲು, ನಾವು ಜೈಪುರ ಅಪಘಾತದ ಬಗ್ಗೆ ಕೀವರ್ಡ್‌ಗಳನ್ನು ಹುಡುಕಿದ್ದೇವೆ. ಆಗ ಡಿಸೆಂಬರ್ 20 ರಂದು ಟಿವಿ9 ಕನ್ನಡ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಜೈಪುರ ಗ್ಯಾಸ್ ಟ್ಯಾಂಕರ್ ದುರಂತದಲ್ಲಿ 11 ಜನರು ಸಾವನ್ನಪ್ಪಿದ್ದಾರೆ (ಈಗ ಸಾವಿನ ಸಂಖ್ಯೆ 19ಕ್ಕೆ ಏರಿಕೆಯಾಗಿದೆ), 41 ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಜೈಪುರ ಅಗ್ನಿ ದುರಂತದ ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಹಾಗೇ, ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50,000 ರೂ. ಪರಿಹಾರವನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ’’ ಎಂಬ ಮಾಹಿತಿ ಇದೆ.
ಜೈಪುರ ಗ್ಯಾಸ್ ಟ್ಯಾಂಕರ್ ದುರಂತ; 11 ಜನರ ಸಾವಿಗೆ ಮೋದಿ ಸಂತಾಪ, 2 ಲಕ್ಷ ಪರಿಹಾರ ಘೋಷಣೆ
ಇದರ ನಂತರ, ನಾವು ಎಂಎಸ್ ಧೋನಿ, ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಅವರು ಈ ಅಪಘಾತದ ಸಂತ್ರಸ್ತರಿಗೆ ದೇಣಿಗೆ ನೀಡಿದ್ದಾರೆಯೇ ಎಂದು ಗೂಗಲ್ನಲ್ಲಿ ಹುಡುಕಿದ್ದೇವೆ. ಆದರೆ ವೈರಲ್ ಹೇಳಿಕೆಯನ್ನು ದೃಢೀಕರಿಸುವ ಯಾವುದೇ ವರದಿ ಕಂಡುಬಂದಿಲ್ಲ. ಸ್ಟಾರ್ ಕ್ರಿಕೆಟಿಗರು ಇಷ್ಟು ದೊಡ್ಡ ಮೊತ್ತವನ್ನು ದೇಣಿಗೆಯಾಗಿ ನೀಡಿದ್ದರೆ ಅದು ದೊಡ್ಡ ಸುದ್ದಿಯೇ ಆಗಿರುತ್ತಿತ್ತು. ಆದರೆ, ಅಂತಹ ಯಾವುದೇ ವರದಿಗಳು ನಮಗೆ ಕಂಡುಬಂದಿಲ್ಲ.
ಜೊತೆಗೆ ನಾವು ವಿರಾಟ್ ಕೊಹ್ಲಿ, ಎಂ ಎಸ್ ಧೋನಿ ಹಾಗೂ ಹಾರ್ದಿಕ್ ಪಾಂಡ್ಯ ಅವರ ಇನ್ಸ್ಟಾ, ಫೇಸ್‌ಬುಕ್ ಹಾಗೂ ಎಕ್ಸ್ ಖಾತೆಯಲ್ಲಿ ಈ ಅಪಘಾತಕ್ಕೆ ಸಂಬಂಧಿಸಿದಂತೆ ಏನಾದರು ಪೋಸ್ಟ್ ಮಾಡಿದ್ದಾರ ಎಂದು ಹುಡುಕಿದ್ದೇವೆ. ಅಲ್ಲಿಯೂ ಅಂತಹ ಯಾವುದೇ ಪೋಸ್ಟ್ ಕಂಡುಬಂದಿಲ್ಲ.
ಟಿವಿ9 ಕನ್ನಡದ ಕ್ರೀಡಾ ಸಂಪಾದಕ ಪೃಥ್ವಿ ಅವರು ಕೂಡ ಈ ಹೇಳಿಕೆ ನಕಲಿ ಎಂದು ಹೇಳಿದ್ದಾರೆ. ಧೋನಿ, ಹಾರ್ದಿಕ್ ಮತ್ತು ಕೊಹ್ಲಿ ಈ ವೈರಲ್ ಪೋಸ್ಟ್ನಲ್ಲಿರುವಂತೆ ಯಾವುದೇ ರೀತಿಯ ಸಹಾಯ ಮಾಡಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಜೈಪುರ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಧೋನಿ, ಕೊಹ್ಲಿ ಮತ್ತು ಹಾರ್ದಿಕ್ ಹಣಕಾಸಿನ ನೆರವು ನೀಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹೇಳಿಕೆ ಸುಳ್ಳು.
ಈ ಹಿಂದೆ ಕೂಡ ಧೋನಿ ಮತ್ತು ವಿರಾಟ್ ಕೊಹ್ಲಿ ಬಗ್ಗೆ ಇಂತಹ ಅನೇಕ ಹೇಳಿಕೆಗಳು ವೈರಲ್ ಆಗಿತ್ತು. ಒಡಿಶಾ ರೈಲು ಅಪಘಾತದ ಸಂತ್ರಸ್ತರಿಗೆ ಧೋನಿ ಮತ್ತು ವಿರಾಟ್ ಕೊಹ್ಲಿ ಹಣಕಾಸಿನ ನೆರವು ನೀಡುತ್ತಿದ್ದಾರೆ ಎಂಬ ಹೇಳಿಕೆ ಎಲ್ಲೆಡೆ ಹರಿದಾಡಿದ್ದವು.
ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ