
ನೆದರ್ಲ್ಯಾಂಡ್ಸ್ ಮತ್ತು ಬೆಲ್ಜಿಯಂನಲ್ಲಿ ನಡೆಯುತ್ತಿರುವ 2026 ರ ಎಫ್ಐಎಚ್ ಹಾಕಿ ವಿಶ್ವಕಪ್‌ನಲ್ಲಿ (FIH Hockey World Cup 2026) ಭಾರತದ ಪುರುಷ ಮತ್ತು ಮಹಿಳಾ ತಂಡಗಳು ತಮ್ಮ ಅಮೋಘ ಪ್ರದರ್ಶನವನ್ನು ಮುಂದುವರೆಸಿವೆ. ಏಕಕಾಲದಲ್ಲಿ ನಡೆಯುತ್ತಿರುವ ಎರಡೂ ವಿಶ್ವಕಪ್‌ಗಳಲ್ಲಿ, ಭಾರತದ ಉಭಯ ತಂಡಗಳು ಮೊದಲ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿ ಎರಡನೇ ಸುತ್ತಿಗೆ ಅರ್ಹತೆ ಪಡೆದುಕೊಂಡಿವೆ. ಪುರುಷರ ತಂಡ ತನ್ನ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿ ಎರಡನೇ ಸುತ್ತಿಗೆ ಎಂಟ್ರಿ ಪಡೆದುಕೊಂಡರೆ, ಇತ್ತ ಭಾರತದ ವನಿತೆಯರ ತಂಡ ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಮೂಲಕ ಎರಡನೇ ಸುತ್ತಿಗೆ ಅರ್ಹತೆ ಪಡೆದಿದೆ.
ಈ ಪಂದ್ಯಾವಳಿಯ ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಚೀನಾ ವಿರುದ್ಧದ ಪಂದ್ಯವನ್ನು 2-2 ರಿಂದ ಡ್ರಾ ಮಾಡಿಕೊಂಡಿದ್ದ ಭಾರತ ಮಹಿಳಾ ತಂಡ, ತನ್ನ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 6-1 ಗೋಲುಗಳಿಂದ ಏಕಪಕ್ಷೀಯ ರೀತಿಯಲ್ಲಿ ಸೋಲಿಸಿ ಮುಂದಿನ ಸುತ್ತಿಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿತ್ತು. ಆದಾಗ್ಯೂ ಇಂಗ್ಲೆಂಡ್ ವಿರುದ್ಧದ ಪಂದ್ಯದ ಫಲಿತಾಂಶ ಎರಡೂ ತಂಡಗಳಿಗೆ ನಿರ್ಣಾಯಕವಾಗಿತ್ತು. ಏಕೆಂದರೆ ಎರಡೂ ತಂಡಗಳು ಮುಂದಿನ ಸುತ್ತಿಗೆ ಮುನ್ನಡೆಯುವ ಅವಕಾಶವನ್ನು ಹೊಂದಿದ್ದವು.
ಭಾರತ ತಂಡ ಈಗಾಗಲೇ ಇಂಗ್ಲೆಂಡ್‌ಗಿಂತ ನಾಲ್ಕು ಅಂಕಗಳ ಮುಂದಿತ್ತು. ಆದ್ದರಿಂದ, ಈ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲುವು ಇಲ್ಲದಿದ್ದರೆ ಡ್ರಾ ಅಗತ್ಯವಿತ್ತು. ಭಾರತ ತಂಡ ಗೆಲ್ಲಲು ಪ್ರಯತ್ನಿಸಿತ್ತಾದರೂ ಅದರಲ್ಲಿ ಸಫಲವಾಗಲಿಲ್ಲ. ಆದಾಗ್ಯೂ, ಭಾರತ ತಂಡ ಇತ್ತ ಇಂಗ್ಲೆಂಡ್ ಗೆಲುವಿಗೂ ಅವಕಾಶ ಮಾಡಿಕೊಡಲಿಲ್ಲ. ಪರಿಸ್ಥಿತಿ ಹೇಗಿತ್ತೆಂದರೆ, ಭಾರತೀಯ ತಂಡಕ್ಕೆ ಆರು ಪೆನಾಲ್ಟಿ ಕಾರ್ನರ್‌ಗಳು ಸಿಕ್ಕಿತ್ತಾದರೂ ಅವುಗಳಲ್ಲಿ ಯಾವುದನ್ನೂ ಗೋಲಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ, ಇಂಗ್ಲೆಂಡ್ ಕೂಡ 12 ಪೆನಾಲ್ಟಿ ಕಾರ್ನರ್‌ಗಳನ್ನು ಪಡೆದುಕೊಂಡಿತು. ಆದರೆ ಭಾರತ ತಂಡ ರಕ್ಷಣಾ ವಿಭಾಗ ಇಂಗ್ಲೆಂಡ್ ತಂಡಕ್ಕೂ ಗೋಲು ಬಾರಿಸಲು ಬಿಡಲಿಲ್ಲ.
A hard-fought battle against England saw the Indian Women’s Team play out a 0️⃣-0️⃣ draw in their final Pool D clash at the FIH Hockey World Cup Belgium & Netherlands 2026. 🏑
The Girls stay in the race for the Semifinals and have secured their spot in the next round! 💪🇮🇳
Relive… pic.twitter.com/m5WiRrX8GW
— Hockey India (@TheHockeyIndia) August 20, 2026
ಅಂತಿಮವಾಗಿ ಎರಡೂ ತಂಡಗಳು ಒಂದೇ ಒಂದು ಗೋಲು ಬಾರಿಸಲು ಸಾಧ್ಯವಾಗದೆ ಪಂದ್ಯವನ್ನು ಡ್ರಾ ಮಾಡಿಕೊಂಡವು. ಆದಾಗ್ಯೂ ಈ ಫಲಿತಾಂಶವು ಪೂಲ್ ಡಿಯಲ್ಲಿ ತನ್ನ ಮೂರು ಪಂದ್ಯಗಳನ್ನು ಆಡಿದ ಟೀಂ ಇಂಡಿಯಾಗೆ ಲಾಭವನ್ನು ತಂದುಕೊಟ್ಟಿತು. ಟೀಂ ಇಂಡಿಯಾ ಒಟ್ಟು ಐದು ಅಂಕಗಳನ್ನು ಗಳಿಸಿ ಎರಡನೇ ಸ್ಥಾನ ಪಡೆದರೆ, ಮತ್ತೊಂದೆಡೆ ಇಂಗ್ಲೆಂಡ್ ಕೇವಲ ನಾಲ್ಕು ಅಂಕಗಳನ್ನು ಗಳಿಸಿ ಸೆಮಿಫೈನಲ್ ರೇಸ್‌ನಿಂದ ಹೊರಬಿತ್ತು. ಚೀನಾ ಈ ಗುಂಪಿನಲ್ಲಿ ಏಳು ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದು, ಭಾರತದೊಂದಿಗೆ ಮುಂದಿನ ಸುತ್ತಿಗೆ ಮುನ್ನಡೆದಿದೆ. ಟೀಂ ಇಂಡಿಯಾ ಈಗ ಮುಂದಿನ ಸುತ್ತಿನಲ್ಲಿ ಎರಡು ಪಂದ್ಯಗಳನ್ನು ಆಡಬೇಕಾಗಿದೆ. ಈ ಸುತ್ತಿನಲ್ಲಿ ಟೀಂ ಇಂಡಿಯಾ ನೀಡುವ ಪ್ರದರ್ಶನ ಅದರ ಸೆಮಿಫೈನಲ್ ಸ್ಥಾನವನ್ನು ನಿರ್ಧರಿಸುತ್ತದೆ.