VIDEO: ಗೆದ್ದ ಖುಷಿಯಲ್ಲಿ ಹಾರ್ದಿಕ್ ಪಾಂಡ್ಯ ಅಪ್ಪಿಕೋ ಬಿಗಿದಪ್ಪಿಕೋ ಸಂಭ್ರಮ
Champions Trophy 2025 Final: ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 251 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 49 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 254 ರನ್ ಬಾರಿಸಿ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವನ್ನು ಮಣಿಸಿ ಟೀಮ್ ಇಂಡಿಯಾ ಮೂರನೇ ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿ ಹಿಡಿಯಿತು. ಇದಕ್ಕೂ ಮುನ್ನ ಭಾರತ ತಂಡ 2000 ಮತ್ತು 2013 ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಇತ್ತ ಮೂರನೇ ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗುತ್ತಿದ್ದಂತೆ ಟೀಮ್ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸಖತ್ ಖುಷಿಯಲ್ಲಿ ಸಂಭ್ರಮಿಸಿದ್ದರು.
ಏಕೆಂದರೆ 50 ಓವರ್ಗಳ ಸ್ವರೂಪದಲ್ಲಿ ಇದು ಹಾರ್ದಿಕ್ ಪಾಂಡ್ಯ ಅವರ ಚೊಚ್ಚಲ ಟ್ರೋಫಿ. ಅದರಲ್ಲೂ ಬ್ಯಾಕ್ ಟು ಬ್ಯಾಕ್ ಭಾರತ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ಪಾಂಡ್ಯ ಪ್ರಮುಖ ಪಾತ್ರವಹಿಸಿದ್ದಾರೆ. ಈ ಖುಷಿಯನ್ನು ಅಪ್ಪುಗೆಯೊಂದಿಗೆ ಹಾರ್ದಿಕ್ ಪಾಂಡ್ಯ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.
ಅದರಲ್ಲೂ ಮೈದಾನದಲ್ಲಿ ಕಾಣಿಸಿಕೊಂಡ ಪ್ರತಿಯೊಬ್ಬರಿಗೂ ಅಪ್ಪುಗೆ ನೀಡುವ ಮೂಲಕ ಹಾರ್ದಿಕ್ ಎಲ್ಲರ ಗಮನ ಸೆಳೆದರು. ಅಲ್ಲದೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇಹ್ ಹಾಗೂ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರನ್ನು ಆಲಂಗಿಸಿಕೊಳ್ಳುವ ಮೂಲಕ ತಮ್ಮ ಖುಷಿ ಹಂಚಿಕೊಂಡರು. ಇದೀಗ ಹಾರ್ದಿಕ್ ಪಾಂಡ್ಯ ಅವರ ಅಪ್ಪುಗೆಯ ವಿಡಿಯೋ ವೈರಲ್ ಆಗಿದೆ.