
ಲೀಡ್ಸ್ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದಕ್ಕಾಗಿ ಟೀಮ್ ಇಂಡಿಯಾ ನಾಯಕ ಶುಭ್ಮನ್ ಗಿಲ್ ಹಾಗೂ ಉಪನಾಯಕ ರಿಷಭ್ ಪಂತ್ ವಿರುದ್ಧ ಐಸಿಸಿ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಹೆಡಿಂಗ್ಲೆ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದ ಮೂರನೇ ದಿನದಾಟದ ವೇಳೆ ಚೆಂಡು ಬದಲಿಸಲು ಟೀಮ್ ಇಂಡಿಯಾ ಆಟಗಾರರು ಅಂಪೈರ್ಗೆ ಮನವಿ ಮಾಡಿದ್ದರು.
ಮೊದಲಿಗೆ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಚೆಂಡು ತುಂಬಾ ಸವೆದಿದ್ದು, ಹೀಗಾಗಿ ಬದಲಿಸುವಂತೆ ವಿನಂತಿಸಿದ್ದರು. ಆದರೆ ಅಂಪೈರ್ ಬಾಲ್ ಬದಲಾಯಿಸಲು ನಿರಾಕರಿಸಿದರು. ಇದಾದ ಬಳಿಕ ರಿಷಭ್ ಪಂತ್ ಅಂಪೈರ್ ಜೊತೆ ಮಾತನಾಡಿದರು. ಈ ವೇಳೆ ಚೆಂಡನ್ನು ಪರಿಶೀಲಿಸಿದ ಅಂಪರ್, ಬಾಲ್ ಆಡಲು ಯೋಗ್ಯವಾಗಿದೆ ಎಂದರು.
ಇದರಿಂದ ಆಕ್ರೋಶಗೊಂಡ ರಿಷಭ್ ಪಂತ್ ಅಂಪೈರ್ ಜೊತೆ ವಾಗ್ವಾದ ನಡೆಸಿ ಚೆಂಡನ್ನು ಕೋಪದಿಂದ ಮೊಹಮ್ಮದ್ ಸಿರಾಜ್ ಕಡೆಗೆ ಎಸೆದಿದ್ದಾರೆ. ಇದಾದ 2 ಓವರ್ಗಳ ಬಳಿಕ ಸಿರಾಜ್ ಕೂಡ ಚೆಂಡನ್ನು ಬದಲಿಸುವಂತೆ ಮನವಿ ಮಾಡಿದರು. ಈ ವೇಳೆ ಟೀಮ್ ಇಂಡಿಯಾ ನಾಯಕ ಶುಭ್ಮನ್ ಗಿಲ್ ಆಗಮಿಸಿದ ಅಂಪೈರ್ ಜೊತೆ ವಾದಕ್ಕಿಳಿದಿದ್ದಾರೆ.
ಈ ವೇಳೆ ಗೇಜ್ ಬಳಸಿ ಚೆಂಡನ್ನು ಪರಿಶೀಲಿಸಿದ ಅಂಪೈರ್, ಬಾಲ್ ಆಡಲು ಯೋಗ್ಯವಾಗಿದೆ ಎಂದು ಮತ್ತೊಮ್ಮೆ ಹೇಳಿದರು. ಅಂಪೈರ್ ಅವರ ಈ ನಡೆಗೆ ಶುಭ್ಮನ್ ಗಿಲ್ ಅಸಮಾಧಾನ ಹೊರಹಾಕಿದರು. ಇದಾಗ್ಯೂ ಅಂಪೈರ್ ಚೆಂಡು ಬದಲಿಸಲು ಮುಂದಾಗಿರಲಿಲ್ಲ.
ಇತ್ತ ಟೀಮ್ ಇಂಡಿಯಾ ಆಟಗಾರರು ಪದೇ ಪದೇ ಅಂಪೈರ್ ಬಳಿ ಹೋಗುವುದು ‘ಸರಿಯಲ್ಲ’ ಎಂದು ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಕಾಮೆಂಟ್ರಿ ಮೂಲಕ ಎಚ್ಚರಿಸಿದರು. ಅದರಲ್ಲೂ ಅಂಪೈರ್ ಒಮ್ಮೆ ತಮ್ಮ ನಿರ್ಧಾರ ತಿಳಿಸಿದ ಬಳಿಕ ಶುಭ್ಮನ್ ಗಿಲ್ 4-5 ಓವರ್ಗಳವರೆಗೆ ಕಾಯಬೇಕು ಎಂದು ಟೀಮ್ ಇಂಡಿಯಾದ ಮಾಜಿ ಕೋಚ್ ಅಭಿಪ್ರಾಯಪಟ್ಟಿದ್ದಾರೆ.
ಆದರೆ ಈ ಬಗ್ಗೆ ಅರಿವಿರದ ಕಾರಣವೊ ಅಥವಾ ಚೆಂಡಿನ ಮೇಲ್ಮೈ ಬೌಲಿಂಗ್ಗೆ ಯೋಗ್ಯವಾಗಿಲ್ಲ ಎಂಬುದು ಸ್ಪಷ್ಟವಾಗಿ ಕಾಣಿಸಿದ ಕಾರಣವೊ ಟೀಮ್ ಇಂಡಿಯಾ ಆಟಗಾರರು ಪದೇ ಪದೇ ಅಂಪೈರ್ ಜೊತೆ ವಾಗ್ವಾದ ನಡೆಸಿದರು. ಹೀಗಾಗಿ ಇದನ್ನು ಐಸಿಸಿ ಗಂಭೀರವಾಗಿ ಪರಿಗಣಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: KL Rahul: ಕ್ಲಾಸ್ ಕನ್ನಡಿಗನ ಹೆಸರಿಗೆ ಮತ್ತೊಂದು ಮೈಲುಗಲ್ಲು
ಇತ್ತ ಮೈದಾನದಲ್ಲಿ ಅಂಪೈರ್ ನಿರ್ಧಾರದ ವಿರುದ್ಧ ಅಸಮಾಧಾನ ಹೊರಹಾಕಿದ ರಿಷಭ್ ಪಂತ್ ಹಾಗೂ ಶುಭ್ಮನ್ ಗಿಲ್ಗೆ ಐಸಿಸಿ ದಂಡ ವಿಧಿಸುವ ಸಾಧ್ಯತೆಯಿದೆ. ಏಕೆಂದರೆ ಐಸಿಸಿ ನಿಯಮದ ಪ್ರಕಾರ, ಮೈದಾನದಲ್ಲಿ ಅಂಪೈರ್ ತೀರ್ಪು ಅಥವಾ ನಿರ್ಧಾರದ ವಿರುದ್ಧ ಆಟಗಾರರು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸುವಂತಿಲ್ಲ. ಇದೀಗ ಲೀಡ್ಸ್ನಲ್ಲಿ ನಡೆದಿರುವ ಘಟನೆಯನ್ನು ಮ್ಯಾಚ್ ರೆಫರಿ ಗಂಭೀರವಾಗಿ ಪರಿಗಣಿಸಿದರೆ, ರಿಷಭ್ ಪಂತ್ ಹಾಗೂ ಶುಭ್ಮನ್ ಗಿಲ್ ದಂಡದ ಶಿಕ್ಷೆಗೆ ಒಳಗಾಗಬಹುದು.