ಇಂಡಿಯನ್ ಪ್ರಿಮೀಯರ್ ಲೀಗಿನ ಹರಾಜು ಪ್ರಕ್ರಿಯೆಯಲ್ಲಿ ವಿಸ್ಮಯಗಳು, ಸೋಜಿಗ ಹುಟ್ಟಿಸುವ ಖರೀದಿಗಳು ಸಂಭವಿಸುವುದನ್ನು ನಾವು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಆದರೆ ಪವಾಡದಂಥ ಸಂಗತಿಯೊಂದು ಪ್ರಾಯಶಃ ಮೊದಲ ಬಾರಿಗೆ 2021ರ ಐಪಿಎಲ್ ಮಿನಿ-ಲಿಲಾವಿನಲ್ಲಿ ನಡೆದಿದೆ. ಈ ಪವಾಡವನ್ನು ಸೃಷ್ಟಿಸಿದವರು ಬೇರೆ ಯಾರೂ ಅಲ್ಲ, ಆಸ್ಟ್ರೇಲಿಯಾದ ಆಲ್-ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್! ಯಾಕೆ ಅಂತೀರಾ? ನೀವೇ ಒಮ್ಮೆ ನಿಧಾನಕ್ಕೆ ಯೋಚಿಸಿ ನೋಡಿ. ಕಳೆದ ಸೀಸನ್ನಲ್ಲಿ ರೂ.10.75 ಕೋಟಿಗಳಿಗೆ ಬಿಕರಿಯಾದರೂ ಆಡಿದ 13 ಪಂದ್ಯಗಳಲ್ಲಿ 15.42ರ ಸರಾಸರಿಯಲ್ಲಿ ಕೇವಲ 103 ರನ್ ಗಳಿಸಿ, ಇಡೀ ಟೂನಿರ್ಯಲ್ಲಿ ಒಂದೇ ಒಂದು ಸಿಕ್ಸರ್ ಸಹ ಬಾರಿಸಲು ವಿಫಲನಾದ ಮತ್ತು ಕೇವಲ 3 ವಿಕೆಟ್ಗಳನ್ನು ಪಡೆದ ಮ್ಯಾಕ್ಸ್ವೆಲ್ರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ಫ್ರಾಂಚೈಸಿಯ ಮಾಲೀಕರು ರಿಲೀಸ್ ಮಾಡಿದ್ದು ನ್ಯಾಯಸಮ್ಮತವಾಗಿತ್ತು. ಆದರೆ, ಇಂಥ ಮಹಾನುಭಾವನನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಧಣಿಗಳು ರೂ. 14.25 ಕೋಟಿಗೆ ಖರೀದಿಸುತ್ತಾರೆಂದರೆ ಅದು ಪವಾಡವಲ್ಲದೆ ಮತ್ತೇನು?
ಆರ್ಸಿಬಿ ತಂಡದ ಅಭಿಮಾನಿಗಳಿಗೆ ಈ ಪರ್ಚೇಸ್ ಖಂಡಿತವಾಗಿಯೂ ಸಂತೋಷವನ್ನುಂಟು ಮಾಡಿರುವುದಿಲ್ಲ. ಆದರೆ ಕಥಾನಾಯಕ ಮಾತ್ರ ಫುಲ್ ಖುಷ್ ಆಗಿದ್ದಾರೆ. ಆಗದೆ ಏನು? ಐಪಿಎಲ್ 2021 ಸೀಸನ್ಗೆ ತನ್ನನ್ನು ಯಾವುದಾದರೂ ಫ್ರಾಂಚೈಸಿ ಖರೀದಿಸಬಹುದೆಂದು ಖುದ್ದು ಮ್ಯಾಕ್ಸ್ವೆಲ್ಗೆ ವಿಶ್ವಾಸವಿರಲಿಲ್ಲ. ಸುದ್ದಿ ತಿಳಿದ ಮೇಲೆ ಸಂತೋಷದ ಅಲೆಯಲ್ಲಿ ತೇಲುತ್ತಿರುವ ಅವರು ಆರ್ಸಿಬಿ ರಿಲೀಸ್ ವಿಡಿಯೊವೊಂದರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಡಿ ಮತ್ತು ತಂಡದ ಸ್ಟಾರ್ ಬ್ಯಾಟ್ಸ್ಮನ್ ಎಬಿ ಡಿ ವಿಲಿಯರ್ಸ್ ಜೊತೆ ಆಡಲು ಉತ್ಸುಕನಾಗಿದ್ದೇನೆ ಅಂತ ಹೇಳಿದ್ದಾರೆ.
‘ಎಲ್ಲರಿಗೂ ನಮಸ್ಕಾರ! ನಾನು ಗ್ಲೆನ್ ಮ್ಯಾಕ್ಸ್ವೆಲ್ ಮಾತಾಡ್ತಿದ್ದೀನಿ. ಆರ್ಸಿಬಿಯ ಭಾಗವಾಗಿರುವುದಕ್ಕೆ ಸಂತೋಷವಾಗಿದೆಯೆಂದು ನಿಮಗೆ ಹೇಳಬಯಸುತ್ತೇನೆ. ಗುರುವಾರದಂದು ನಡೆದ ಹರಾಜು ಪ್ರಕ್ರಿಯೆ ಆದ್ಭುತವಾಗಿತ್ತು. ರಾತ್ರಿಯಿಡೀ ನಾನು ಎಚ್ಚರವಾಗಿದ್ದೆ, ನನಗೆ ಶುಭ ಕೋರಿರುವವರಿಗೆಲ್ಲ ಧನ್ಯವಾದಗಳು,’ ಆಂತ ಮಾಕ್ಸ್ವೆಲ್ ಹೇಳಿರುವ ವಿಡಿಯೊವನ್ನು ಆರ್ಸಿಬಿ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಶೇರ್ ಮಾಡಿದೆ.
‘ಈ ಬಾರಿಯ ಐಪಿಎಲ್ ಸೀಸನ್ಗೆ ಮುಂಚೆ ಸಿಗುತ್ತಿರುವ ಸಹಕಾರ ಮತ್ತು ಟೂರ್ನಮೆಂಟ್ ಸೃಷ್ಟಿಸುತ್ತಿರುವ ರೋಮಾಂಚನ ಕಂಡು ಬೆರಗುಗೊಂಡಿದ್ದೇನೆ. ಹಾಗೆಯೇ ವಿರಾಟ್ ಕೊಹ್ಲಿ ನಾಯಕತ್ವದಡಿಯಲ್ಲಿ ಮತ್ತು ಎಬಿ ಡಿ ವಿಲಿಯರ್ಸ್ ಅವರೊಂದಿಗೆ ಆಡುವುದನ್ನು ಕಾತುರತೆಯಿಂದ ಎದುರುನೋಡುತ್ತಿದ್ದೇನೆ,’ ಎಂದು ವಿಡಿಯೊದಲ್ಲಿ ಮ್ಯಾಕ್ಸ್ವೆಲ್ ಹೇಳಿದ್ದಾರೆ.
‘ನನ್ನಿಬ್ಬರು ಸ್ನೇಹಿತರಾಗಿರುವ ಆಡಮ್ ಜಂಪಾ ಮತ್ತು ಕೇನ್ ರಿಚರ್ಡ್ಸನ್ ಆರ್ಸಿಬಿಯಲ್ಲೇ ಇದ್ದಾರೆ. ಯುಜ್ವೇಂದ್ರ ಚಹಲ್ ನನ್ನ ಹಳೆಯ ಮಿತ್ರರಲ್ಲೊಬ್ಬರು. ಮುಂಬೈ ಟೀಮಿಗೆ ಆಡಿದ ನಂತರ ನಾವಿಬ್ಬರು ಪುನಃ ಜೊತೆಯಾಗಿ ಆಡಿಲ್ಲ. ಇವರೆಲ್ಲರೊಂದಿಗೆ ಆಡಲು ಮತ್ತು ಆರ್ಸಿಬಿ ಈ ಸಲ ಮೊದಲ ಬಾರಿಗೆ ಟ್ರೋಫಿ ಗೆಲ್ಲಲು ಸಾಧ್ಯವಾಗುವಂತೆ ಮಾಡಲು ಕಾತುರನಾಗಿದ್ದೇನೆ,’ ಎಂದು ಮಾಕ್ಸ್ವೆಲ್ ಹೇಳಿದ್ದಾರೆ
ಅಂದಹಾಗೆ, ಮಾಕ್ಸ್ವೆಲ್ ಈ ಬಾರಿಯ ಐಪಿಎಲ್ ಸೀಸನ್ಗೆ ಅತಿಹೆಚ್ಚು ಮೊತ್ತಕ್ಕೆ ಬಿಕರಿಯಾಗಿರುವ ವಿದೇಶಿ ಆಟಗಾರನೇನೂ ಅಲ್ಲ. ನ್ಯೂಜಿಲೆಂಡ್ನ ವೇಗ್ ಬೌಲರ್ ಕೈಲ್ ಮಿಲ್ಸ್ ರೂ15 ಕೋಟಿಗೆ ಬಿಕರಿಯಾಗಿದ್ದರೆ, ದಕ್ಷಿಣ ಆಫ್ರಿಕಾದ ಆಲ್-ರೌಂಡರ್ ಕ್ರಿಸ್ ಮೊರಿಸ್ಗೆ ರೂ. 16.25 ಕೊಟಿ ಸಿಕ್ಕಿದೆ.
2012ರಿಂದ ಐಪಿಎಲ್ ಆಡುತ್ತಿರುವ ಮ್ಯಾಕ್ಸ್ವೆಲ್ ಇದುವೆರೆಗೆ ಆಡಿರುವ 82 ಪಂದ್ಯಗಳಿಂದ 22.13 ಸರಾಸರಿಯಲ್ಲಿ 1,505 ರನ್ ಗಳಿಸಿದ್ದಾರೆ. 95 ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಮತ್ತು 6 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ತಮ್ಮ ಆಫ್-ಸ್ಪಿನ್ ಬೌಲಿಂಗ್ನಿಂದ 19 ವಿಕೆಟ್ಗಳನ್ನು ಪಡೆದಿದ್ದಾರೆ.
2014ರ ಐಪಿಎಲ್ ಸೀಸನ್ನಲ್ಲಿ ಮಾತ್ರ ಮ್ಯಾಕ್ಸ್ವೆಲ್ ಉತ್ಕೃಷ್ಟ ಪ್ರದರ್ಶನಗಳನ್ನು ನೀಡಿದ್ದರು. ಆ ಸೀಸನ್ನಲ್ಲಿ ಆಡಿದ 16 ಪಂದ್ಯಗಳಲ್ಲಿ ಅವರು 34.50 ಸರಾಸರಿಯಲ್ಲಿ 552 ರನ್ಗಳನ್ನು 187.75 ಸ್ಟ್ರೈಕ್ ರೇಟ್ನೊಂದಿಗೆ ಬಾರಿಸಿದ್ದರು.
ಇದನ್ನೂ ಓದಿ: IPL 2021 Auction RCB Players List: ಈ ಸಲವಾದರೂ ಕಪ್ ನಮ್ದೇ? ಹೀಗಿದೆ ನೋಡಿ ಆರ್ಸಿಬಿ ಹೊಸ ತಂಡ..
Published On - 4:49 pm, Sat, 20 February 21