ಪಾಂಡ್ಯ, ಧೋನಿಯ ನಂತರ ಭಾರತಕ್ಕೆ ಲಭ್ಯವಾಗಿರುವ ಶ್ರೇಷ್ಠ ಫಿನಿಶರ್: ಜಸ್ಟಿನ್ ಲ್ಯಾಂಗರ್

|

Updated on: Dec 07, 2020 | 4:27 PM

ಮೊನ್ನೆ ಭಾರತೀಯರಿಗೆ ಕನ್ಕಷನ್ ಸಬ್​ಸ್ಟಿಟ್ಯೂಟ್ ಆಡಿಸಲು ಅನುಮತಿ ನೀಡಿದ ಮ್ಯಾಚ್​ ರೆಫರಿ ಜೊತೆ ತೀವ್ರವಾಗಿ ವಾದಮಾಡಿದ ಆಸ್ಟ್ರೇಲಿಯ ಟೀಮಿನ ಕೋಚ್ ಜಸ್ಟಿನ್ ಲ್ಯಾಂಗರ್ ರವಿವಾರ ಎಸ್​ಸಿಜಿಯಲ್ಲಿ ಎರಡನೇ ಮುಗಿದ ಪಂದ್ಯ ಮುಗಿದ ನಂತರ ಭಾರತೀಯ ಆಟಗಾರರನ್ನು ಶ್ಲಾಘಿಸಲಾರಂಭಿಸಿದ್ದಾರೆ. ಧೋನಿ ನಂತರ ಪಾಂಡ್ಯ ಟೀಮ್ ಇಂಡಿಯಾಗೆ ಗ್ರೇಟ್ ಫಿನಿಶರ್ ಆಗಿ ಲಭ್ಯವಾಗಿದ್ದಾರೆ ಅಂತ ಹೇಳಿದ್ದಾರೆ. 

ಪಾಂಡ್ಯ, ಧೋನಿಯ ನಂತರ ಭಾರತಕ್ಕೆ ಲಭ್ಯವಾಗಿರುವ ಶ್ರೇಷ್ಠ ಫಿನಿಶರ್: ಜಸ್ಟಿನ್ ಲ್ಯಾಂಗರ್
Follow us on

ವಿರಾಟ್​ ಕೊಹ್ಲಿ

ಆಸ್ಟ್ರೇಲಿಯ ಟೀಮಿನ ಬ್ಯಾಟಿಂಗ್ ಕೋಚ್ ಜಸ್ಟಿನ್ ಲ್ಯಾಂಗರ್, ಭಾರತದ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಬಗ್ಗೆ ಹೇಳಿರುವುದರಲ್ಲಿ ಕಿಂಚಿತ್ತೂ ಉತ್ಪ್ರೇಕ್ಷೆಯಿಲ್ಲ. ಮಹೇಂದ್ರಸಿಂಗ್ ಧೋನಿ ನಂತರ ಭಾರತಕ್ಕೆ ಪಂದ್ಯ ಮುಗಿಸಿಕೊಡಬಲ್ಲ ಆಟಗಾರನ ರೂಪದಲ್ಲಿ ಪಾಂಡ್ಯ ಲಭ್ಯರಾಗಿದ್ದಾರೆಂದು ರವಿವಾರದ ಟಿ20ಐ ಪಂದ್ಯ ಮುಗಿದ ನಂತರ ನಡೆದ ವರ್ಚ್ಯುಯಲ್ ಸುದ್ದಿಗೋಷ್ಟಿಯಲ್ಲಿ ಲ್ಯಾಂಗರ್, ಭಾರತಕ್ಕೆ ಪಂದ್ಯ ಗೆಲ್ಲಿಸಿಕೊಟ್ಟ ಪಾಂಡ್ಯ ಅವರ ಆಟವನ್ನು ಮನಸಾರೆ ಹೊಗಳಿದರು.

‘‘ಪಾಂಡ್ಯ, ಅಸಾಧಾರಣ ಮತ್ತು ಮನಸೂರೆಗೊಳ್ಳುವ ಪ್ರದರ್ಶನ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರು ಅತ್ಯಂತ ಅಪಾಯಕಾರಿ ಬ್ಯಾಟ್ಸ್​ಮನ್ ಅಂತ ನಮಗೆ ಗೊತ್ತಿತ್ತು. ಹಿಂದೆ ಭಾರತಕ್ಕೆ ಎಮ್ ಎಸ್ ಧೋನಿ ಪಂದ್ಯಗಳನ್ನು ಗೆದ್ದುಕೊಡುತ್ತಿದ್ದರು, ಈಗ ಆ ಕೆಲಸವನ್ನು ಪಾಂಡ್ಯ ಮಾಡುತ್ತಿದ್ದಾರೆ. ಎಲ್ಲ ಮ್ಯಾಚ್​ಗಳಲ್ಲೂ ಅವರು ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ರವಿವಾರದಂದು ಅವರು ಆಡಿದ್ದು ಗ್ರೇಟ್ ಇನ್ನಿಂಗ್ಸ್. ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನು ಅವರು ಒದಗಿಸಿದರು,’’ ಎಂದು ಲ್ಯಾಂಗರ್ ಹೇಳಿದರು.

ಎರಡನೇ ಟಿ20 ಪಂದ್ಯ ಒಂದು ಕ್ಲೋಸ್ ಗೇಮ್ ಆಗಿತ್ತೆಂದು ಹೇಳುವ ಲ್ಯಾಂಗರ್, ಭಾರತದ ಟೀಮಿನಲ್ಲಿ ಅನುಭವಿ ಆಟಗಾರರಿರುವುದು ಪಂದ್ಯ ಗೆಲ್ಲಲು ನೆರವಾಯಿತು ಎಂದು ಲ್ಯಾಂಗರ್ ಹೇಳಿದರು.
‘‘ರವಿವಾರದ ಪಂದ್ಯ ಕ್ಲೋಸ್ ಗೇಮ್ ಆಗಿತ್ತು. ನಮ್ಮ ಟೀಮಿನ ಫೀಲ್ಡಿಂಗ್ ಅದ್ಭುತ ಮತ್ತು ರೋಮಾಂಚಕಾರಿಯಾಗಿತ್ತು. ಆದರೆ ಇಂಡಿಯಾ ಟೀಮಿನಲ್ಲಿ ಅನುಭವಿ ಆಟಗಾರರಿರುವುದು ನಮ್ಮ ಪ್ರಯತ್ನಗಳನ್ನು ವಿಫಲಗೊಳಿಸಿತು. ಪಂದ್ಯದ ಎಲ್ಲ ವಿಭಾಗಗಳಲ್ಲೂ ಅವರು ಮೇಲುಗೈ ಸಾಧಿಸಿದರು. ಆದರೆ ನಮ್ಮ ಹುಡುಗರ ಹೋರಾಟ ನನ್ನಲ್ಲಿ ಹೆಮ್ಮೆ ಮೂಡಿಸಿದೆ,’’ ಎಂದದು ಲ್ಯಾಂಗರ್ ಹೇಳಿದರು.

ಅಂದಹಾಗೆ, ಆಸ್ಟ್ರೇಲಿಯಾದ ಕೋಚ್​ ಸಹ ಟೀಮ್ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿಯವರ ಅಭಿಮಾನಿಯಾಗಿದ್ದಾರೆ. ತಾವು ಇದುವರೆಗೆ ನೋಡಿರುವ ಬ್ಯಾಟ್ಸ್​ಮನ್​ಗಳಲ್ಲಿ ಕೊಹ್ಲಿಯೇ ಶ್ರೇಷ್ಠರು ಅಂತ ಅವರು ಹೇಳಿದರು.

‘‘ಈ ಪಂದ್ಯದಲ್ಲಿ ಕೊಹ್ಲಿ ಕೆಲವು ನಂಬಲಸದಳ ಹೊಡೆತಗಳನ್ನು ಬಾರಿಸಿದರು. ಅವರು ಬ್ಯಾಟ್​ ಮಾಡುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ನಾನು ಇದುವರೆಗೆ ನೋಡಿದ ಬ್ಯಾಟ್ಸ್​ಮನ್​ಗಳಲ್ಲಿ ಕೊಹ್ಲಿಯೇ ಎಲ್ಲರಿಗಿಂತ ಶ್ರೇಷ್ಠ. ಭಾರತದ ಗೆಲುವಿನಲ್ಲಿ ಅವರ ಆಟವೂ ನಿರ್ಣಾಯಕವಾಗಿತ್ತು,’’ ಎಂದು ಲ್ಯಾಂಗರ್ ಹೇಳಿದರು.

ವಿರಾಟ್​ ಕೊಹ್ಲಿ ಮತ್ತು ಜಸ್ಟಿನ್ ಲ್ಯಾಂಗರ್

ತಮ್ಮ ಟೀಮಿನ ಬ್ಯಾಟ್ಸ್​ಮನ್​ಗಳನ್ನು ಹೊಗಳಿದ ಲ್ಯಾಂಗರ್ 194 ರನ್​ಗಳ ಮೊತ್ತ ಸಾಧಾರಣವಾಗಿರಲಿಲ್ಲ ಆದರೆ, ಉತ್ಕೃಷ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ ಇಂಡಿಯಾದ ಆಟಗಾರರು ಗೆಲುವನ್ನು ಸಾಧ್ಯವಾಗಿಸಿದರು ಎಂದರು.

‘‘ನಮ್ಮ ಬ್ಯಾಟ್ಸ್​ಮನ್​ಗಳು ನಿಸ್ಸಂದೇಹವಾಗಿ ದೊಡ್ಡ ಮೊತ್ತವನ್ನು ಪೇರಿಸಿದರು, ಅವರ ಆಟದ ಬಗ್ಗೆ ನನಗೆ ಹೆಮ್ಮೆಯಿದೆ. ಆದರೆ ಟೀಮ್ ಇಂಡಿಯಾದ ಆಟಗಾರರು ಅಷ್ಟು ದೊಡ್ಡ ಮೊತ್ತವನ್ನು ಚೇಸ್​ ಮಾಡಿ ಗೆದ್ದಿದ್ದು ನಾನು ಆಗಲೇ ಹೇಳಿದಂತೆ ನಂಬಲಸದಳವಾಗಿತ್ತು. ಆದರೆ ಒಂದು ಮಾತು ಮಾತ್ರ ನಿಜ, ಆಸ್ಟ್ರೇಲಿಯ-ಇಂಡಿಯಾ ನಡುವಿನ ಪಂದ್ಯ ಎಂದಿನಂತೆ ರೋಮಾಂಚಕವಾಗಿತ್ತು ಮತ್ತು ರವಿವಾರದ ದಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ರಸದೌತಣವನ್ನು ಉಣಬಡಿಸಿತು,’’ ಎಂದು ಲ್ಯಾಂಗರ್ ಹೇಳಿದರು.

 

Published On - 4:08 pm, Mon, 7 December 20