IND vs AUS: ಅದ್ಭುತ ಕ್ಯಾಚ್ ಹಿಡಿದ ವಿರಾಟ್ ಕೊಹ್ಲಿ
Australia vs India, 3rd Test: ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಬ್ಯಾಟ್ ಮಾಡುತ್ತಿರುವ ಆಸ್ಟ್ರೇಲಿಯಾ ತಂಡವು ಭೋಜನಾ ವಿರಾಮದ ವೇಳೆಗೆ 3 ವಿಕೆಟ್ ಕಳೆದುಕೊಂಡು 104 ರನ್ ಕಲೆಹಾಕಿದೆ. ಟೀಮ್ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ 2 ವಿಕೆಟ್ ಪಡೆದರೆ, ನಿತೀಶ್ ಕುಮಾರ್ ರೆಡ್ಡಿ ಒಂದು ವಿಕೆಟ್ ಕಬಳಿಸಿದ್ದಾರೆ.
ಬ್ರಿಸ್ಬೇನ್ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದ್ಬುತ ಫೀಲ್ಡಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಬೌಲಿಂಗ್ ಆಯ್ದುಕೊಂಡಿದೆ. ಅದರಂತೆ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು ದ್ವಿತೀಯ ದಿನದಾಟದ ಭೋಜನಾ ವಿರಾಮದ ವೇಳೆಗೆ 3 ವಿಕೆಟ್ ಕಳೆದುಕೊಂಡಿದೆ. ಈ ಮೂರು ವಿಕೆಟ್ಗಳಲ್ಲಿ 2 ಕ್ಯಾಚ್ಗಳನ್ನು ಹಿಡಿದಿರುವುದು ವಿರಾಟ್ ಕೊಹ್ಲಿ.
ಜಸ್ಪ್ರೀತ್ ಬುಮ್ರಾ ಎಸೆದ 19ನೇ ಓವರ್ನ 3ನೇ ಎಸೆತದಲ್ಲಿ ನಾಥನ್ ಮೆಕ್ಸ್ವೀನಿ ಸ್ಲಿಪ್ನಲ್ಲಿ ನೀಡಿದ ಕ್ಯಾಚ್ ಅನ್ನು ವಿರಾಟ್ ಕೊಹ್ಲಿ ಅತ್ಯಂತ ಸುಲಭವಾಗಿ ಹಿಡಿದರು. ಇನ್ನು ನಿತೀಶ್ ಕುಮಾರ್ ರೆಡ್ಡಿ ಎಸೆದ 34ನೇ ಓವರ್ನ 2ನೇ ಎಸೆತದಲ್ಲಿ ಮಾರ್ನಸ್ ಲಾಬುಶೇನ್ ಸೆಕೆಂಡ್ ಸ್ಲಿಪ್ನಲ್ಲಿ ಕ್ಯಾಚ್ ನೀಡಿದ್ದರು.
ಕ್ಷಣಾರ್ಧದಲ್ಲಿ ತೂರಿ ಬಂದ ಚೆಂಡನ್ನು ಅದ್ಭುತವಾಗಿ ಹಿಡಿಯುವ ಮೂಲಕ ವಿರಾಟ್ ಕೊಹ್ಲಿ ಭಾರತ ತಂಡಕ್ಕೆ ಮೂರನೇ ಯಶಸ್ಸು ತಂದು ಕೊಟ್ಟರು. ಇದೀಗ ಕಿಂಗ್ ಕೊಹ್ಲಿಯ ಅತ್ಯುತ್ತಮ ಫೀಲ್ಡಿಂಗ್ ವಿಡಿಯೋ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಇನ್ನು ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಬ್ಯಾಟ್ ಮಾಡುತ್ತಿರುವ ಆಸ್ಟ್ರೇಲಿಯಾ ತಂಡವು ಭೋಜನಾ ವಿರಾಮದ ವೇಳೆಗೆ 3 ವಿಕೆಟ್ ಕಳೆದುಕೊಂಡು 104 ರನ್ ಕಲೆಹಾಕಿದೆ. ಟೀಮ್ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ 2 ವಿಕೆಟ್ ಪಡೆದರೆ, ನಿತೀಶ್ ಕುಮಾರ್ ರೆಡ್ಡಿ ಒಂದು ವಿಕೆಟ್ ಕಬಳಿಸಿದ್ದಾರೆ. ಸದ್ಯ ಕ್ರೀಸ್ನಲ್ಲಿ ಸ್ಟೀವ್ ಸ್ಮಿತ್ (25) ಹಾಗೂ ಟ್ರಾವಿಸ್ ಹೆಡ್ (20) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.