India-Australia Test Series 2020 | ಮೊದಲ ದಿನದಾಟದ ಗೌರವ ಬಾಚಿಕೊಂಡ ಆಸ್ಟ್ರೇಲಿಯಾ

ಪಿಂಕ್ ಬಾಲ್ ಟೆಸ್ಟ್ ಆಡಲು ಭಾರತೀಯರು ಪೂರ್ಣ ಪ್ರಮಾಣದ ತಯಾರಿ ಮಾಡಿಕೊಂಡಿಲ್ಲದಿರುವುದು ಅಡಿಲೇಡ್ ಓವಲ್ ಮೈದಾನದಲ್ಲಿ ಸಾಬೀತಾಯಿತು. ಟೀಮ್ ಇಂಡಿಯಾದ ಬ್ಯಾಟ್ಸ್​ಮನ್​ಗಳು ಆಮೆಗತಿಯಲ್ಲಿ ರನ್ ಗಳಿಸಿದರಲ್ಲದೆ ವಿಕೆಟ್​ಗಳನ್ನೂ ಕಳೆದುಕೊಂಡು ಅತಿಥೇಯರು ಮೊದಲ ದಿನದಾಟದಲ್ಲಿ ಮೇಲುಗೈ ಸಾಧಿಸಲು ಅವಕಾಶ ಮಾಡಿಕೊಟ್ಟರು.

India-Australia Test Series 2020 | ಮೊದಲ ದಿನದಾಟದ ಗೌರವ ಬಾಚಿಕೊಂಡ ಆಸ್ಟ್ರೇಲಿಯಾ
ಎಸೆತವೊಂದನ್ನು ಬೌಂಡರಿಗಟ್ಟುತ್ತಿರುವ ವಿರಾಟ್ ಕೊಹ್ಲಿ
Arun Belly

|

Dec 17, 2020 | 8:30 PM

ಅಸ್ಟ್ರೇಲಿಯ ವಿರುದ್ಧ ಅಡಿಲೇಡ್​ನ ಓವಲ್ ಮೈದಾನದಲ್ಲಿ ಇಂದು ಪ್ರಾರಂಭವಾದ ಸರಣಿ ಮೊದಲ ಟೆಸ್ಟ್​ನಲ್ಲಿ ಟೀಮ್ ಇಂಡಿಯ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದಾಗ ಭಾರತೀಯರೆಲ್ಲ ಶುಭಾರಂಭವಾಯಿತು ಅಂದುಕೊಂಡರು. ಕೊಹ್ಲಿ ಮೊದಲು ಬ್ಯಾಟ್ ಮಾಡುವ ನಿರ್ಧಾರ ಪ್ರಕಟಿಸಿದಾಗ ಅವರ ಖುಷಿ ಇಮ್ಮಡಿಸಿತು. ಆದರೆ ಮೊದಲ ಓವರ್​ನಲ್ಲೇ ಭಾರತ ತನ್ನ ಮೊದಲ ವಿಕೆಟ್ ಕಳೆದುಕೊಂಡಾಗ ಮತ್ತು ಅದಾದ ನಂತರ ರನ್ ಗಳಿಸಲು ತೀವ್ರ ಪ್ರಯಾಸ ಪಡುತ್ತಿರುವುದನ್ನು ನೋಡಿದಾಗ ಅವರ ಉತ್ಸಾಹ ಬತ್ತಿದ್ದು ನಿಜ.

ನಿಸ್ಸಂದೇಹವಾಗಿ ಮೊದಲ ದಿನದಾಟದ ಗೌರವವನ್ನು ಅತಿಥೇಯರು ಬಾಚಿಕೊಂಡರು. ಉಪ ನಾಯಕ ಅಜಿಂಕ್ಯಾ ರಹಾನೆ ಅವರೊಂದಿಗಿನ ಆಘಾತಕಾರಿ ಮಿಕ್ಸ್​ಅಪ್​ನಲ್ಲಿ ಕೊಹ್ಲಿ ರನೌಟ್ ಆಗಿರದಿದ್ದರೆ, ಭಾರತೀಯ ನಾಯಕನ ನಿರ್ಧಾರಕ್ಕೆ ಸಮರ್ಥನೆ ಸಿಗುತಿತ್ತು. ಆದರೆ ಇದು ಕ್ರಿಕೆಟ್, ಅಮೋಘ ಅನಿಶ್ಚಿತತೆಗಳ ಆಟ.

ಪ್ರವಾಸಕ್ಕೆ ಮೊದಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳ ಪಿಂಕ್ ಬಾಲ್ ಟೆಸ್ಟ್ ಆಡಲು ನಿರಾಕರಿಸಿತ್ತು. ಅದರ ಹಿಂದಿನ ಕಾರಣವೇನೇ ಇರಲಿ, ಟೀಮ್ ಇಂಡಿಯಾದ ಆಟಗಾರರು ಹೊನಲು ಬೆಳಕಿನಲ್ಲಿ ಆಡಲು ಸಂಪೂರ್ಣವಾಗಿಸನ್ನದ್ಧರಾಗಿಲ್ಲವೆನ್ನುವುದು ಇಂದು ಸಾಬೀತಾಯಿತು.

ಆರಂಭ ಆಟಗಾರ ಪೃಥ್ವಿ ಶಾ ಬಗ್ಗೆ ನಿನ್ನೆ ಕೊಹ್ಲಿ ಬಹಳ ಭರವಸೆಯ ಮಾತುಗಳನ್ನಾಡಿದ್ದರು. ಆದರೆ, ಮುಂಬೈ ಯುವ ಆಟಗಾರ ನಾಯಕ ತನ್ನ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ಇಂದು ವಿಫಲರಾದರು. ಪಂದ್ಯದ ಎರಡನೇ ಎಸೆತದಲ್ಲಿ ಅವರು ವೇಗದ ಬೌಲರ್ ಮಿಚೆಲ್ ಸ್ಟಾರ್ಕ್್​ಗೆ ವಿಕೆಟ್ ಒಪ್ಪಿಸಿದರು.

ಚೇತೇಶ್ವರ ಪೂಜಾರಾ

ಕಳೆದ ಸರಣಿಯ ಚಾಂಪಿಯನ್ ಬ್ಯಾಟ್ಸ್​ಮನ್ ಚೇತೇಶ್ವರ್ ಪೂಜಾರಾ ಇಂದು ಅಕ್ಷರಶಃ ಆರಂಭ ಆಟಗಾರನಾಗಿ ಆಡಬೇಕಾಯಿತು. ಅವರು ಬ್ಯಾಟ್ ಮಾಡುವ ವಿಧಾನ ಎಲ್ಲರಿಗೂ ಗೊತ್ತಿದೆ. ಬೌಲರ್​ಗಳನ್ನು ದಣಿಯುವಂತೆ ಮಾಡುವಲ್ಲಿ ಅವರು ನಿಷ್ಣಾತರು. ಆದರೆ ಮತ್ತೊಂದು ತುದಿಯಲ್ಲಿದ್ದ ಕನ್ನಡಿಗ ಮಾಯಾಂಕ್ ಅಗರ್​ವಾಲ್ ಸಂಪೂರ್ಣವಾಗಿ ರಕ್ಷಣಾತ್ಮಕ ಆಟಕ್ಕೆ ಶರಣಾಗಿದ್ದು ಅತಿಥೇಯ ಬೌಲರ್​ಗಳು ಮೇಲುಗೈ ಸಾಧಿಸಲು ನೆರವಾಯಿತು. ಊಟದ ವಿರಾಮಕ್ಕೆ ಇನ್ನು ಐದಾರು ಓವರ್​ಗಳಿರುವಾಗ ಅಗರ್​ವಾಲ್ ಮೊದಲ ಬದಲಾವಣೆ ರೂಪದಲ್ಲಿ ದಾಳಿಗಿಳಿದಿದ್ದ ಪ್ಯಾಟ್ ಕಮಿನ್ಸ್​ಗೆ ಔಟಾದರು.

ಸೋಜಿಗದ ವಿಷಯವೆಂದರೆ, ಸಾಮಾನ್ಯವಾಗಿ ಬೌಲರ್​ಗಳು ಅಧಿಪತ್ಯ ಮೆರೆಯಲು ಅವಕಾಶ ನೀಡದ ಕೊಹ್ಲಿ ಸಹ ತಮ್ಮ ಎಂದಿನ ಆಟವಾಡಲು ಹಿಂಜರಿದರು. ಪ್ರಾಯಶಃ ಲಂಚ್ ವಿರಾಮಕ್ಕೆ ಮೊದಲು 2 ವಿಕೆಟ್ ಕಳೆದುಕೊಂಡಿದ್ದು ಮತ್ತು ಆಸ್ಟ್ರೇಲಿಯಾದಿಂದ ತೆರಳುವ ಮೊದಲು ಬ್ಯಾಟಿಂಗ್ ಹಿರಿಮೆ ಮೆರೆದು ಭಾರತಕ್ಕೆ ಈ ಟೆಸ್ಟ್​ನಲ್ಲಿ ಜಯ ದೊರಕಿಸಿಕೊಡುವ ಅವರ ಸಂಕಲ್ಪ ಎಚ್ಚರಿಕೆಯಿಂದ ಆಡಲು ಪ್ರೇರೇಮಿಸಿರಬಹುದು.

ಪೂಜಾರಾ ಮತ್ತು ಕೊಹ್ಲಿ ಜೋಡಿ ಸೆಟ್ಲ್ ಆದ ನಂತರವೂ ರನ್ ಗಳಿಸುವ ವೇಗ ವೃದ್ಧಿಸಲಿಲ್ಲ. ದುರ್ಬಲ ಎಸೆತಗಳನ್ನು ಬೌಂಡರಿಗಟ್ಟಿದ್ದರೆ ಬೌಲರ್​ಗಳ ಮೇಲೆ ಒತ್ತಡ ಬೀಳುತಿತ್ತು. ಅವರಿಬ್ಬರ ನಡುವೆ 68 ರನ್​ಗಳ ಜೊತೆಯಾಟ ಬಂದಿದ್ದು 32 ಓವರ್​ಗಳ ಆಟದಲ್ಲಿ! ಪೂಜಾರಾ 160 ಎಸೆತಗಳಲ್ಲಿ 2 ಬೌಂಡರಿಗಳಿದ್ದ 43 ರನ್ ಬಾರಿಸಿದರು. ಅವರ ವಿಕೆಟ್ ಕಬಳಿಸಿದ್ದು ಆಫ್ ಸ್ಪಿನ್ನರ್ ನೇಥನ್ ಲಿಯಾನ್.

ರಹಾನೆ ಆಗಮನ ನಿಸ್ಸಂದೇಹವಾಗಿ ರನ್​ಗತಿಯನ್ನು ಹೆಚ್ಚಿಸಿತು. ಏತನ್ಮಧ್ಯೆ, ಕೊಹ್ಲಿ ತಮ್ಮ ಅರ್ಧ ಶತಕವನ್ನು 125 ಎಸೆತಗಳಲ್ಲಿ ಪೂರೈಸಿದರು. ನಾಯಕ ಮತ್ತು ಉಪ ನಾಯಕನ ನಡುವೆ 27 ಓವರ್​ಗಳಲ್ಲಿ 88 ರನ್​ಗಳ ಜೊತೆಯಾಟ ದಾಖಲಾಗಿದ್ದಾಗ, ಶತಕ ಬಾರಿಸುವುದು ಖಚಿತವೆನಿಸುತ್ತಿದ್ದ ಕೊಹ್ಲಿ ತೀವ್ರ ಗೊಂದಲದ ನಡುವೆ ರನೌಟ್ ಆದರು. 180 ಎಸೆತಗಳಲ್ಲಿ 74 ರನ್ ಬಾರಿಸಿದ ಕೊಹ್ಲಿ 8 ಬಾರಿ ಚೆಂಡನ್ನು ಬೌಂಡರಿಗಟ್ಟಿದರು.

ವಿಕೆಟ್​ವೊಂದರ ಪತನವನ್ನು ಸಂಭ್ರಮಿಸುತ್ತಿರುವ ಅತಿಥೇಯರು

ಪಂದ್ಯದ 81ನೇ ಓವರ್​ನಲ್ಲಿ ಎರಡನೇ ಹೊಸ ಚೆಂಡು ತೆಗೆದುಕೊಳ್ಳಲು ನಿರ್ದರಿಸಿದ ಆಸ್ಸೀ ನಾಯಕ ಟಿಮ್ ಪೈನ್ ಅವರ ನಿರ್ಣಯ ಕೂಡಲೇ ಫಲ ನೀಡಿತು. ಸ್ಟಾರ್ಕ್, 42 ರನ್ ಗಳಿಸಿದ್ದ ರಹಾನೆಯನ್ನು ಎಲ್​ಬಿ ಬಲೆಗೆ ಕೆಡವಿದರು. ಅದಾದ ಮೂರು ಓವರ್​ಗಳ ನಂತರ ಮತ್ತೊಬ್ಬ ವೇಗದ ಬೌಲರ್ ಜೋಶ್ ಹೇಜೆಲ್​ವುಡ್ ಭಾರತದ ಆರನೆ ಕ್ರಮಾಂಕದ ಆಟಗಾರ ಹನುಮ ವಿಹಾರಿಯನ್ನು ಔಟ್ ಮಾಡಿ ಪ್ರವಾಸಿಗರನ್ನು ಸಂಕಷ್ಟಕ್ಕೆ ಸಿಕ್ಕಿಸಿದರು.

ವಿಕೆಟ್​ಕೀಪರ್-ಬ್ಯಾಟ್ಸ್​ಮನ್ ವೃದ್ಧಿಮಾನ್ ಸಹಾ ಮತ್ತು ಆಲ್​ರೌಂಡರ್ ರವಿಚಂದ್ರನ್ ಅಶ್ವಿನ್ ದಿನದಾಟದ ಕೊನೆಯ ಓವರ್​ಗಳಲ್ಲಿ ಭಾರತಕ್ಕೆ ಮತ್ಯಾವುದೇ ಅಘಾತವಾಗದಂತೆ ನೋಡಿಕೊಂಡರು. ಅಂತಿಮವಾಗಿ ಭಾರತದ ಸ್ಕೋರ್ 233/6.

ಮೊದಲ ದಿನದ ಸಂಕ್ಷಿಪ್ತ ಸ್ಕೋರ್: ಭಾರತ 233/6 ( ವಿರಾಟ್ ಕೊಹ್ಲಿ 74, ಚೇತೇಶ್ವರ್ ಪೂಜಾರಾ 43, ಅಜಿಂಕ್ಯಾ ರಹಾನೆ 42, ಮಿಚೆಲ್ ಸ್ಟಾರ್ಕ್ 2/49)

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada