ಹೈದ್ರಾಬಾದ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ ಅವರ ತಂದೆ ಮೊಹಮ್ಮದ್ ಗೌಸ್ (53) ಅವರು ಶ್ವಾಸಕೋಶದ ಕಾಯಿಲೆಯಿಂದಾಗಿ ಶುಕ್ರವಾರ ತಮ್ಮ ಹೈದರಾಬಾದ್ ನಿವಾಸದಲ್ಲಿ ನಿಧನರಾಗಿದ್ದಾರೆ.
ಈ ನೋವಿನ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೊಹಮ್ಮದ್ ಸಿರಾಜ್, ಆರಂಭಿಕ ದಿನಗಳಲ್ಲಿ ಆಟೋ ರಿಕ್ಷಾ ಚಾಲನೆ ಮಾಡುವಾಗ ನನ್ನ ತಂದೆ ಯಾವ ರೀತಿಯ ಕಷ್ಟಗಳನ್ನು ಎದುರಿಸಿದ್ದಾರೆಂದು ನನಗೆ ತಿಳಿದಿದೆ ಎಂದು ಸಿರಾಜ್ ತಮ್ಮ ತಂದೆಯೊಂದಿಗಿನ ಬಾಲ್ಯದ ದಿನಗಳನ್ನು ನೆನೆದಿದ್ದಾರೆ. ಜೊತೆಗೆ ನನ್ನ ದೇಶ ಹೆಮ್ಮೆ ಪಡುವಂತ ಕೆಲಸವನ್ನು ನಾನು ಮಾಡಬೇಕು ಎಂಬುದು ನನ್ನ ತಂದೆಯ ಆಸೆಯಾಗಿತ್ತು ಎಂದಿರುವ ಸಿರಾಜ್ ನಾನು ಅದನ್ನು ಖಚಿತವಾಗಿ ಮಾಡುತ್ತೇನೆ ಎಂದಿದ್ದಾರೆ.
2016-2017 ರಣಜಿ ಟ್ರೋಪಿಯಲ್ಲಿ 41 ವಿಕೆಟ್ ಪಡೆದಿದ್ದ ಸಿರಾಜ್ ಸನ್‌ರೈಸರ್ಸ್ ಹೈದರಾಬಾದ್ ಪರ ಐಪಿಎಲ್ ಕ್ಯಾಪ್ ಧರಿಸಿದರು. ಪ್ರಸ್ತುತ ಆರ್ಸಿಬಿ ಪರ ಪ್ರಮುಖ ಬೌಲರ್ ಆಗಿ ಗುರುತಿಸಿಕೊಂಡಿರುವ ಮೊಹಮ್ಮದ್ ಸಿರಾಜ್ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ.
ಈ ಆಘಾತ ಸುದ್ದಿ ತಿಳಿದ ಕೂಡಲೇ ದುಃಖ ಹೊರಹಾಕಿರುವ ಸಿರಾಜ್, ಇದು ಆಘಾತಕಾರಿ. ನನ್ನ ಜೀವನದ ದೊಡ್ಡ ಬೆಂಬಲವನ್ನು ನಾನು ಕಳೆದುಕೊಂಡೆ. ನಾನು ದೇಶಕ್ಕಾಗಿ ಆಡುವುದನ್ನು ನೋಡುವುದು ಅವರ ಕನಸಾಗಿತ್ತು. ಹೀಗಾಗಿ ಅದನ್ನು ಅರಿತುಕೊಂಡ ನಾನು ನನ್ನ ಈ ಸಾಧನೆಯ ಮೂಲಕ ಅವರಿಗೆ ಸಂತೋಷವನ್ನು ತಂದುಕೊಟ್ಟಿದ್ದು ನನಗೆ ತೃಪ್ತಿ ತಂದಿದೆ ಎಂದು ವಿಚಲಿತರಾದ ಸಿರಾಜ್ ಮಾಹಿತಿ ನೀಡಿದ್ದಾರೆ.
ಕೋಚ್ ಶಾಸ್ತ್ರಿ ಸರ್ ಮತ್ತು ನಾಯಕ ವಿರಾಟ್ ಕೊಹ್ಲಿ ಅವರು ನನಗೆ ಧೈರ್ಯವಾಗಿರಲು ಹೇಳಿದರು ಮತ್ತು ಎಲ್ಲಾ ಬೆಂಬಲವನ್ನು ನೀಡುತ್ತಿದ್ದಾರೆ ಎಂದು ಸಿರಾಜ್ ಹೇಳಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಸಿರಾಜ್ ಕ್ವಾರಂಟೈನ್ ನಿಯಮಗಳನ್ನು ಪಾಲಿಸಲೇಬೇಕಾಗಿರುವುದರಿಂದ ಅವರು ತಮ್ಮ ತಂದೆಯ ಅಂತಿಮ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ.