ಭಾರತದ ಅತ್ಯಂತ ಕಡು ವೈರಿಯೂ ಇಂಥದೊಂದು ಸನ್ನಿವೇಶವನ್ನು ಯೋಚಿಸಿರಲಾರ. ತನ್ನ ಇದುವರೆಗಿನ ಕ್ರಿಕೆಟ್ ಇತಿಹಾಸದಲ್ಲಿ ಉಲ್ಲೇಖಿಸಲೂ ಸಾಧ್ಯವಾಗದಂಥ ಹೀನಾಯ ಸೋಲನ್ನು ಅಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ನಲ್ಲಿ ಭಾರತ ಅನುಭವಿಸಿದೆ. ‘ಸಮ್ಮರ್ ಆಫ್ 42’ ಕಹಿ ನೆನಪನ್ನು ಸಹ ಅಳಿಸಿಬಿಡುವ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ ಟೀಮ್ ಇಂಡಿಯಾದ ಆಟಗಾರರು ಅವರನ್ನು ಮನಸಾರೆ ಆರಾಧಿಸುವ ಕೋಟ್ಯಾಂತರ ಕ್ರೀಡಾಪ್ರೇಮಿಗಳು ಕ್ಷಮಿಸಲಾಗದ ಪ್ರಮಾದವನ್ನು ಅಡಿಲೇಡ್ನಲ್ಲಿ ಎಸಗಿದ್ದಾರೆ. ಎರಡನೆ ಇನ್ನಿಂಗ್ಸ್ನಲ್ಲಿ ತಂಡವನ್ನು ಶೋಚನೀಯ ಸ್ಥಿತಿಯಿಂದ ಮೇಲೆತ್ತಲು ವಿಫಲರಾದ ನಾಯಕ ವಿರಾಟ್ ಕೊಹ್ಲಿ ಹತಾಷೆಯಿಂದ ಸ್ವದೇಶಕ್ಕೆ ವಾಪಸ್ಸಾಗುತ್ತಿದ್ದಾರೆ.
ಕ್ರಿಕೆಟ್ ಪ್ರೇಮಿಗಳಿಗೆ ‘ಸಮ್ಮರ್ ಆಫ್ 42’ ಘಟನೆ ನೆನಪಿರಬಹುದು. 1974 ರ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ಕೇವಲ 77 ನಿಮಿಷಗಲ್ಲಿ 42 ರನ್ಗಳಿಗೆ ಆಲೌಟ್ ಆಗಿತ್ತು. ಅಜೇಯ 18 ರನ್ ಗಳಿಸಿದ್ದ ಏಕನಾಥ ಸೋಲ್ಕರ್ ಟೀಮಿನ ಪರ ಗರಿಷ್ಠ ಸ್ಕೋರ್ ದಾಖಲಿಸಿದ್ದರು. ಉಳಿದವರದ್ದು ಕ್ರೀಸಿನಿಂದ ಪೆವಿಲಿಯನ್ಗೆ ಮೆರವಣಿಗೆ!
ಇವತ್ತು ಅಡಿಲೇಡ್ನಲ್ಲಿ ಭಾರತದ ಸ್ಥಿತಿ ಮತ್ತೂ ಕೆಟ್ಟದ್ದಾಗಿತ್ತು. ಯಾವೊಬ್ಬ ಬ್ಯಾಟ್ಸ್ಮನ್ ಕೂಡ ಎರಡಂಕಿ ಸ್ಕೋರ್ ಗಳಿಸಲಿಲ್ಲ. ಆರಂಭ ಆಟಗಾರ ಮಾಯಾಂಕ್ ಅಗರ್ವಾಲ್ ಗಳಿಸಿದ 9ರನ್ ಇಂದು ದಾಖಲಾದ ವೈಯಕ್ತಿಕ ಗರಿಷ್ಠ ಮೊತ್ತ! 22ನೇ ಓವರ್ನಲ್ಲಿ ಭಾರತದ ಇನ್ನಿಂಗ್ಸ್ ಮುಕ್ತಾಯಗೊಂಡಿತೆಂದರೆ ಭಾರತೀಯ ಬ್ಯಾಟ್ಸ್ಮನ್ಗಳು ಹೇಗೆ ಆಡಿದರೆನ್ನುವುದು ಸ್ಪಷ್ಟವಾಗುತ್ತದೆ. ಪ್ಯಾಟ್ ಕಮ್ಮಿನ್ಸ್ ಮತ್ತು ಜೊಷ್ ಹೆಜೆಲ್ವುಡ್ ಟೀಮ್ ಇಂಡಿಯಾದ ಅಷ್ಟೂ ಬ್ಯಾಟ್ಸ್ಮನ್ಗಳನ್ನು ಮಟ್ಟ ಹಾಕಿದರು. ಕಳಪೆ ಶಬ್ದ ಭಾರತದ ಬ್ಯಾಟಿಂಗ್ ಕುರಿತು ಹೇಳಲು ಬಹಳ ಕಡಿಮೆಯೆನಿಸುತ್ತಿದೆ.
ಸೋಲು ಕ್ರೀಡೆಯ ಅವಿಭಾಜ್ಯ ಅಂಗ, ಅದರಲ್ಲಿ ಎರಡು ಮಾತಿಲ್ಲ. ಆದರೆ ಸೋಲುವ ಪರಿಗೂ ಒಂದು ಪರಿಧಿಯಿದೆ. ಭಾರತ ಟೆಸ್ಟ್ ಕ್ರಿಕೆಟ್ ರಂಗದಲ್ಲಿ ಹಸುಳೆಯೇನೂ ಅಲ್ಲ. ಸುಮಾರು 90 ವರ್ಷಗಳಿಂದ ಅದು ಈ ಫಾರ್ಮಾಟ್ನಲ್ಲಿ ಆಡುತ್ತಿದೆ. ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ಈಗ ಮೊದಲ ಸ್ಥಾನದಲ್ಲಿದೆ. ನಾಯಕ ಕೊಹ್ಲಿಯನ್ನು ವಿಶ್ವದ ಅಗ್ರಮಾನ್ಯ ಬ್ಯಾಟ್ಸ್ಮನ್ ಅಷ್ಟೇ ಅಲ್ಲ ಸರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಆದರೆ, ಅಡಿಲೇಡ್ನಲ್ಲಿ ಇಂದು ನಡೆದಿದ್ದು ಹೇವರಿಕೆ ಹುಟ್ಟಿಸುವಂಥ ಶರಣಾಗತಿ. ಇಂಥ ಶರಣಾಗತಿಗೆ ನಿಜಕ್ಕೂ ಕ್ಷಮೆಯಿಲ್ಲ.
ಮೊದಲ ಇನ್ನಿಂಗ್ಸ್ನಲ್ಲಿ 53ರನ್ಗಳ ಅಮೂಲ್ಯ ಮುನ್ನಡೆ ಭಾರತಕ್ಕೆ ದೊರಕಿತ್ತು. ಈ ಟೆಸ್ಟ್ ಗೆಲ್ಲಲು ಎರಡನೇ ಇನ್ನಿಂಗ್ಸ್ನಲ್ಲಿ ಭಾರತ 150-170 ರನ್ ಗಳಿಸಿದ್ದರೂ ಸಾಕಿತ್ತು. ಪಿಚ್ ಯಾವ ದೇಶದ್ದೇ ಆಗಿರಲಿ, ನಾಲ್ಕನೇ ಇನ್ನಿಂಗ್ಸ್ನಲ್ಲಿ 200 ಕ್ಕಿಂತ ಹೆಚ್ಚು ರನ್ ಗಳಿಸುವುದು ಭಾರಿ ಪ್ರಯಾಸಕರ. 180 ರನ್ ಗಳ ಕುಷನ್ ಸಿಕ್ಕಿದ್ದರೂ ಜಸ್ಪ್ರೀತ್ ಬುಮ್ರಾ ಮತ್ತು ಕಂಪನಿ ಭಾರತಕ್ಕೆ ಗೆಲುವು ದೊರಕಿಸಿಕೊಡುತ್ತಿದ್ದರು.
ಪಂದ್ಯದ ನಂತರ ಮಾತಾಡಿದ ಕೊಹ್ಲಿ ಬ್ಯಾಟ್ಸ್ಮನ್ಗಳಲ್ಲಿ ಹೋರಾಟ ನಡೆಸುವ ಮನೋಭಾವದ ಕೊರತೆಯಿಂದಾಗಿ ಅತ್ಯಂತ ಕೆಟ್ಟ ಸೋಲು ಅನುಭವಿಸಬೇಕಾಯಿತು ಎಂದರು.
‘‘ಈ ಸೋಲು ನನ್ನಲ್ಲಿರುವ ಭಾವನೆಗಳನ್ನು ಅದುಮಿಬಿಟ್ಟಿದೆ, ಹೇಗೆ ಪ್ರತಿಕ್ರಿಯಿಸಬೇಕು ಎಂದು ತೋಚುತ್ತಿಲ್ಲ. ಮೊದಲ ಇನ್ನಿಂಗ್ಸ್ನಲ್ಲಿ 50ಕ್ಕಿಂತ ಜಾಸ್ತಿ ರನ್ಗಳ ಲೀಡ್ ಹೊಂದಿದ್ದರೂ ನಮ್ಮ ಬ್ಯಾಟಿಂಗ್ ಕುಸಿದುಬಿಟ್ಟಿತು. ಮೊದಲೆರಡು ದಿನ ತೋರಿದ ಉತ್ತಮ ಆಟ ಇಂದು ಒಂದು ಗಂಟೆಯ ಆಟದಲ್ಲಿ ಕೊಚ್ಚಿಹೋಯಿತು. ನಮ್ಮಲ್ಲಿ ಯಾರೂ ಹೋರಾಟದ ಮನೋಭಾವ ತೋರಲಿಲ್ಲ. ಈ ಅಂಶವನ್ನು ಬೆಳಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ. ಎರಡನೆ ಇನ್ನಿಂಗ್ಸ್ನಲ್ಲಿ ಅವರ ಬೌಲಿಂಗ್ ಆಕ್ರಮಣ ಭಿನ್ನವಾಗೇನೂ ಇರಲಿಲ್ಲ, ಮೊದಲ ಇನ್ನಿಂಗ್ಸ್ನಲ್ಲಿ ನಾವು ರನ್ ಗಳಿಸುವ ಪ್ರಯತ್ನ ಮಾಡಿದೆವು. ಆದರೆ, ಎರಡನೆ ಇನ್ನಿಂಗ್ಸ್ನಲ್ಲಿ ನಮ್ಮಲ್ಲಿ ಆ ಮನಸ್ಥಿತಿ ಇರಲಿಲ್ಲ. ಅವರು ಕೆಲ ಉತ್ತಮ ಎಸೆತಗಳು ಬೌಲ್ ಮಾಡಿದ್ದು ನಿಜ, ಅವು ವಿಧ್ವಂಸಕಾರಿ ಆಗಿರಲಿಲ್ಲ. ರನ್ ಗಳಿಸುವುದು ಸಾಧ್ಯವೇ ಇಲ್ಲ ಎಂಬ ಸ್ಥಿತಿಯನ್ನ ನಾವು ಸೃಷ್ಟಿಸಿಕೊಂಡುಬಿಟ್ಟಿದ್ದೆವು. ಅವರ ಉತ್ತಮ ದಾಳಿ ಮತ್ತು ನಮ್ಮಲ್ಲಿ ಹೋರಾಟ ಮನೋಭಾವದ ಕೊರತೆ-ಎರಡರ ಮಿಶ್ರಣ ನಾವು ಭಾರಿ ಸೋಲುಣ್ಣುವಂತೆ ಮಾಡಿತು,’’ ಎಂದು ಕೊಹ್ಲಿ ಹೇಳಿದರು.
ಬಾಕ್ಸಿಂಗ್ ಡೇಯಂದು (ಡಿಸೆಂಬರ್ 26) ಶುರುವಾಗುವ ಎರಡನೆ ಟೆಸ್ಟ್ನಲ್ಲಿ ಭಾರತ ಸುಧಾರಿತ ಪ್ರದರ್ಶನ ನೀಡುವ ವಿಶ್ವಾಸವನ್ನು ಕೊಹ್ಲಿ ವ್ಯಕ್ತಪಡಿಸಿದರು.
ಗಾಯಗೊಂಡಿರುವ ಮೊಹಮ್ಮದ್ ಶಮಿ ಬಗ್ಗೆ ಯಾವುದೇ ವಿಷಯ ಗೊತ್ತಾಗಿಲ್ಲ, ಸಾಯಂಕಾಲ ಅವರನ್ನು ಸ್ಕ್ಯಾನಿಂಗ್ಗೆ ಕರೆದೊಯ್ಯಲಿದ್ದಾರೆ ಅಂತ ಕೊಹ್ಲಿ ಹೇಳಿದರು.
ಭಾರತದ ಇನ್ನಿಂಗ್ಸನ್ನು 36 ರನ್ಗಳಿಗೆ ಸೀಮಿತಗೊಳಿಸಿದ ನಂತರ ಗೆಲುವಿಗೆ ಬೇಕಿದ್ದ 90 ರನ್ಗಳನ್ನು ಅತಿಥೇಯರು ಹೆಚ್ಚಿನ ಆತಂಕಕ್ಕೊಳಗಾದೆ 2 ವಿಕೆಟ್ ಕಳೆದುಕೊಂಡು ಗಳಿಸಿದರು.