ಅಡಿಲೇಡ್ನಲ್ಲಿ ಹೀನಾಯ ಸೋಲು ಕಂಡ ಭಾರತ; ಒಂದಂಕಿ ದಾಟದ ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳು
ಅಂತಿಮವಾಗಿ ಭಾರತ ನೀಡಿದ 90 ರನ್ಗಳ ಗುರಿ ಬೆನ್ನು ಹತ್ತಿದ ಆಸ್ಟ್ರೇಲಿಯಾ ಎರಡು ವಿಕೆಟ್ ಕಳೆದುಕೊಂಡು ಗೆದ್ದು ಬೀಗಿದೆ. ಈ ಮೂಲಕ ಎಂಟು ವಿಕೆಟ್ಗಳ ಜಯ ಕಂಡಿತು.
ಪಿಂಕ್ಬಾಲ್ ಮೊದಲ ಟೆಸ್ಟ್ನಲ್ಲಿ ಭಾರತದ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಆಸ್ಟ್ರೇಲಿಯಾ ಸುಲಭ ಗೆಲುವು ದಾಖಲಿಸಿತು. ಈ ಮೂಲಕ ನಾಲ್ಕು ಟೆಸ್ಟ್ ಸರಣಿಯಲ್ಲಿ ಮೊದಲನೇ ಟೆಸ್ಟ್ ಆಸ್ಟ್ರೇಲಿಯಾ ಬಾಚಿಕೊಂಡಿತು.
ಮೊದಲನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ನಲ್ಲಿ ಸಾಧಾರಣ ಹಾಗೂ ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ನಲ್ಲಿ ಕಳಪೆಯಲ್ಲೇ ಕಳಪೆ ಪ್ರದರ್ಶನ ನೀಡಿತು. ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 36 ರನ್ ಗಳಿಕೆ ಮಾಡಿತು. ಎಲ್ಲ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ವಿಚಿತ್ರ ಎಂದರೆ ಯಾವೊಬ್ಬ ಬ್ಯಾಟ್ಸ್ಮನ್ ಕೂಡ ಒಂದಕಿ ದಾಟಿಲ್ಲ! ಎರಡನೇ ಇನ್ನಿಂಗ್ಸ್ನಲ್ಲಿ ಅತಿ ಹೆಚ್ಚು ರನ್ ಗಳಿಕೆ ಮಾಡಿದ್ದು ಮಯಾಂಕ್ ಅಗರ್ವಾಲ್. ಅವರು ಬಾರಿಸಿದ್ದು 9 ರನ್ ಮಾತ್ರ!
ಮೊದಲ ಇನ್ನಿಂಗ್ಸ್ನಲ್ಲಿ 244 ರನ್ ಬಾರಿಸಿದ್ದ ಭಾರತ, ಆಸ್ಟ್ರೇಲಿಯಾವನ್ನು ಕೇವಲ 191ರನ್ಗಳಿಗೆ ಕಟ್ಟಿ ಹಾಕಿತ್ತು. ಈ ಮೂಲಕ 53 ರನ್ಗಳ ಲೀಡ್ ಕಾಯ್ದುಕೊಂಡಿತ್ತು. ಎರಡನೇ ಇನ್ನಿಂಗ್ಸ್ನಲ್ಲಿ ಓಪನರ್ಗಳಾಗಿ ಇಳಿದ ಪೃಥ್ವಿ ಶಾ ಹಾಗೂ ಮಯಾಂಕ್ ಅನುಕ್ರಮವಾಗಿ ನಾಲ್ಕು ಹಾಗೂ ಒಂಭತ್ತು ರನ್ ಗಳಿಸಿದರು.
ಶಾ ಔಟ್ ಆದ ನಂತರ ಬಂದ ಬೂಮ್ರಾ ಎರಡು ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಕಳೆದ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದ ಪೂಜಾರ ಡಕ್ಔಟ್ ಆದರೆ, ನಾಯಕ ಕೊಹ್ಲಿ ನಾಲ್ಕು ರನ್ ಬಾರಿಸಿ ಪೆವಿಲಿಯನ್ ಸೇರಿದರು. ಉಪನಾಯಕ ರಹಾನೆ ಶೂನ್ಯ ಸುತ್ತಿದರೆ, ಹನುಮ ವಿಹಾರಿ 8 ರನ್ ಗಳಿಸಲು ಪರದಾಡಿದರು. ಅಶ್ವಿನ್ ಸೊನ್ನೆ ಸುತ್ತಿದರು. ಕೊನೆಯ ವಿಕೆಟ್ನಲ್ಲಿ ಆಡುತ್ತಿದ್ದ ಉಮೇಶ್ ನಾಲ್ಕು ರನ್ ಗಳಿಸಿದರು. 1 ರನ್ ಬಾರಿಸಿದ್ದ ಶಮಿ ಗಾಯಗೊಂಡು ಪೆವಿಲಿಯನ್ ಸೇರಿದರು. ಕೊನೆಗೆ ಭಾರತ 36 ರನ್ ಗಳಿಸಲಷ್ಟೇ ಶಕ್ತವಾಯಿತು.
ಎರಡನೇ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ಬೌಲರ್ಗಳು ಭಾರತದ ವಿರುದ್ಧ ಮಿಂಚಿದ್ದಾರೆ. ಅದರಲ್ಲೂ ಜೋಷ್ ಹ್ಯಾಜ್ಲೆವುಡ್ 8 ರನ್ಗಳನ್ನು ನೀಡಿ ಐದು ವಿಕೆಟ್ ಪಡೆದರು. ಇನ್ನು ಪ್ಯಾಟ್ ಕಮ್ಮಿನ್ಸ್ ಕೂಡ ಮಿಂಚಿದ್ದು ನಾಲ್ಕು ವಿಕೆಟ್ ಗಳಿಸಿದರು.
ಅಂತಿಮವಾಗಿ ಭಾರತ ನೀಡಿದ 90 ರನ್ಗಳ ಗುರಿ ಬೆನ್ನು ಹತ್ತಿದ ಆಸ್ಟ್ರೇಲಿಯಾ ಎರಡು ವಿಕೆಟ್ ಕಳೆದುಕೊಂಡು ಗೆದ್ದು ಬೀಗಿತು. ಈ ಮೂಲಕ ಎಂಟು ವಿಕೆಟ್ಗಳ ಜಯ ಕಂಡಿತು.
ಮೂರೇ ದಿನಕ್ಕೆ ಮುಗಿದು ಹೋಯ್ತು ಟೆಸ್ಟ್
ಐದು ದಿನಗಳ ಹೊನಲು ಬೆಳಕಿನ ಟೆಸ್ಟ್ ಕೇವಲ ಮೂರೇ ದಿನಕ್ಕೆ ಪೂರ್ಣಗೊಂಡಿದೆ. ಮೊದಲ ಇನ್ನಿಂಗ್ಸ್ ಎರಡು ದಿನಕ್ಕೆ ಪೂರ್ಣಗೊಂಡರೆ ಎರಡನೇ ಇನ್ನಿಂಗ್ಸ್ ಕೇವಲ ಅರ್ಧ ದಿನಕ್ಕೆ ಅಂತ್ಯವಾಗಿದೆ.
ಕೊಹ್ಲಿಗೆ ಅರ್ಜೆಂಟ್ ಇದೆ ಎಂದ್ರು ನೆಟ್ಟಿಗರು
ಕೊಹ್ಲಿ ಈ ಟೆಸ್ಟ್ ಪೂರ್ಣಗೊಳಿಸಿ ಪಿತೃತ್ವ ರಜೆ ಪಡೆದು ಭಾರತಕ್ಕೆ ಮರಳುತ್ತಿದ್ದಾರೆ. ಟೀಂ ಇಂಡಿಯಾ ಕಳಪೆ ಪ್ರದರ್ಶನದ ಬಗ್ಗೆ ಕುಹಕ ಆಡಿರುವ ನೆಟ್ಟಿಗರು, ವಿರಾಟ್ ಕೊಹ್ಲಿಗೆ ಮನೆಗೆ ತೆರಳೋಕೆ ತಡವಾದಂತಿದೆ. ಹೀಗಾಗಿ, ಬೇಗ ಔಟ್ ಆಗಿದ್ದಾರೆ ಎಂದು ಟೀಕಿಸಿದ್ದಾರೆ.
India Vs Australia Test Series 2020 | ಭಾರತದ ಫೀಲ್ಡರ್ಗಳು ಕ್ರಿಸ್ಮಸ್ ಮೂಡ್ನಲ್ಲಿದ್ದಾರೆ: ಗಾವಸ್ಕರ್ ಟೀಕೆ
Published On - 1:34 pm, Sat, 19 December 20