ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳನ್ನು 1-2 ಅಂತರದಿಂದ ಸೋತ ಭಾರತ ಟಿ20ಐ ಕ್ರಿಕೆಟ್ ಪಂದ್ಯಗಳ ಸರಣಿಯಲ್ಲಿ ಶುಭಾರಂಭ ಮಾಡಿದೆ. ಕ್ಯಾನ್ಬೆರಾದ ಮನೌಕ ಓವಲ್ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪ್ರವಾಸಿಗರು ಅತಿಥೇಯರನ್ನು 11 ರನ್ ಗಳಿಂದ ಸೋಲಿಸಿದರು.
ಗೆಲ್ಲಲು 163 ರನ್ ಗಳಿಸಬೇಕಿದ್ದ ಆಸ್ಟ್ರೇಲಿಯ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 150 ರನ್ ಮಾತ್ರ ಸ್ಕೋರ್ ಮಾಡಿತು. ಭಾರತದ ಪರ ರವೀಂದ್ರ ಜಡೇಜಾ ಅವರ ಸ್ಥಾನದಲ್ಲಿ ಕನ್ಕಶನ್ ಸಬ್ಸ್ಟಿಟ್ಯೂಟ್ ಆಗಿ ಆಡಲು ಬಂದ ಯುಜ್ವೇಂದ್ರ ಚಹಲ್ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು. ತಮ್ಮ 4 ಓವರ್ಗಳಲ್ಲಿ ಅವರು ಕೇವಲ 25 ರನ್ ನೀಡಿ 3 ಪ್ರಮುಖ ವಿಕೆಟ್ ಪಡೆದರು. ಅವರಷ್ಟೇ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಮತ್ತು ಇದೇ ಮೊದಲ ಬಾರಿಗೆ ಟಿ20ಐ ಕ್ರಿಕೆಟ್ನಲ್ಲಿ ಭಾರತವನ್ನು ಪ್ರತಿನಿಧಿಸಿದ ಟಿ ನಟರಾಜನ್ 30 ರನ್ ನೀಡಿ 3 ವಿಕೆಟ್ ಪಡೆದರು.
ಇದಕ್ಕೆ ಮೊದಲು ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಆಮಂತ್ರಣ ಪಡೆದ ಭಾರತ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 161 ರನ್ ಮೊತ್ತ ಪೇರಿಸಿತು.
ಭಾರತದ ಪರ ಆರಂಭ ಆಟಗಾರ ಕೆ ಎಲ್ ರಾಹುಲ್ ಆಕರ್ಷಕ 51 ರನ್ (5×4 1×6) ಬಾರಿಸಿದರು. ತಂಡದ ಸ್ಕೋರ್ 160 ದಾಟುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ರವೀಂದ್ರ ಜಡೇಜಾ ಮತ್ತೊಮ್ಮೆ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಕೇವಲ 23 ಎಸೆತಗಳಲ್ಲಿ ಅಜೇಯ 44 ರನ್ (5×4 1×6) ಬಾರಿಸಿದರು.
ನಾಯಕ ವಿರಾಟ್ ಕೊಹ್ಲಿ ಕೇವಲ 9 ರನ್ ಗಳಿಸಿದರೆ, ಓಪನರ್ ಶಿಖರ್ ಧವನ್ 1 ರನ್ ಗಳಿಸಿ ಔಟಾದರು. ಸಂಜು ಸ್ಯಾಮ್ಸನ್ 23 ರನ್ ಬಾರಿಸಿದರು.
ಆಸ್ಟ್ರೇಲಿಯ ಪರ 4 ಓವರ್ಗಳಲ್ಲಿ ಕೇವಲ 22 ರನ್ ನೀಡಿ 3 ವಿಕೆಟ್ ಪಡೆದ ಮೊಸೆಸ್ ಹೆನ್ರಿಕೆ ಅತ್ಯಂತ ಯಶಸ್ವೀ ಬೌಲರ್ ಎನಿಸಿದರು.
Published On - 5:33 pm, Fri, 4 December 20