ಮೆಲ್ಬೋರ್ನ್: ಬಾಕ್ಸಿಂಗ್ ಡೇ ಟೆಸ್ಟ್ನ 2ನೇ ದಿನದಾಟ ಮಳೆಯಿಂದಾಗಿ ನಿಗದಿತ ಸಮಯಕ್ಕೂ ಮುನ್ನವೇ ನಿಲ್ಲಿಸಲಾಗಿದ್ದು, ನಾಯಕ ಅಜಿಂಕ್ಯ ರಹಾನೆ ಹಾಗೂ ರವೀಂದ್ರ ಜಡೇಜಾ ಅವರ ಉತ್ತಮ ಜೊತೆಯಾಟದಿಂದ ಭಾರತ 277 ರನ್ ಗಳಿಸಿದೆ. ಅಲ್ಲದೆ 82 ರನ್ಗಳ ಮುನ್ನಡೆ ಸಹ ಸಾಧಿಸಿದೆ.
ಭಾರತ ತಂಡದ ಈ ಅದ್ಭುತ ಆಟಕ್ಕೆ ಭಾರತೀಯ ಆಟಗಾರರು ಮಾತ್ರ ಕಾರಣರಲ್ಲ. ಆಸಿಸ್ ಆಟಗಾರರು ಟೀಂ ಇಂಡಿಯಾ ದಾಂಡಿಗರಿಗೆ ನೀಡಿದ ಜೀವದಾನ ಕೂಡ ಸಹಕಾರಿಯಾಗಿದೆ. ಅಡಿಲೇಡ್‌ನಲ್ಲಿ ನಡೆದ ಮೊದಲನೇ ಟೆಸ್ಟ್ನ 2ನೇ ಇನ್ನಿಂಗ್ಸ್‌ನಲ್ಲಿ ಭಾರತೀಯರ ಪಾಲಿಗೆ ಯಾವುದೇ ಅದೃಷ್ಟ ಕೈ ಹಿಡಿಯಲಿಲ್ಲ. ಆದರೆ ಇಂದು ಆಸಿಸ್ ಆಟಗಾರರ ಕಳಪೆ ಫಿಲ್ಡಿಂಗ್ನಿಂದಾಗಿ 5ಕ್ಕೂ ಹೆಚ್ಚು ಜೀವದಾನ ಪಡೆದರು.
ಮೊದಲನೆಯದಾಗಿ 28 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಶುಭಮನ್ ಗಿಲ್, ಆಸಿಸ್ ವೇಗಿ ಹ್ಯಾಝಲ್ವುಡ್ ಎಸೆದ ಎಸೆತವನ್ನು ಸರಿಯಾಗಿ ಜಡ್ಜ್ ಮಾಡಲಾಗದೆ ನಾಯಕ ಕಂ ವಿಕೆಟ್ ಕೀಪರ್ ಟೀಂ ಪೈನ್ಗೆ ಕ್ಯಾಚ್ ನೀಡಿದರು. ಆದರೆ ಗಿಲ್ ಬಾರಿಸಿದ ಬಾಲನ್ನು ಸರಿಯಾಗಿ ಜಡ್ಜ್ ಮಾಡದ ಕೀಪರ್ ಟೀಂ ಪೈನ್ ನೆಲಕ್ಕೆ ಚೆಲ್ಲಿದ್ದರು. ಇದರ ಪರಿಣಾಮವಾಗಿ ಗಿಲ್ ಅಮೋಘ 45 ರನ್ ಬಾರಿಸಿದರು.
ಎರಡನೆಯದಾಗಿ 26 ರನ್ ಗಳಿಸಿ ಮೈದಾನದಲ್ಲಿ ಬೌಂಡರಿಗಳ ಅಬ್ಬರ ಶುರು ಮಾಡಿದ್ದ ಟೀಂ ಇಂಡಿಯಾ ಕೀಪರ್ ರಿಶಬ್ ಪಂತ್, ಪ್ಯಾಟ್ ಕಮಿನ್ಸ್ ಬೌಲಿಂಗ್ನಲ್ಲಿ ಕ್ಯಾಮರೂನ್ ಗ್ರೀನ್ ಕಡೆಗೆ ಜೋರಾಗಿ ಬಾರಿಸಿದರು. ಆದರೆ ಪಂತ್ರ ರಭಸವಾದ ಹೊಡೆತವನ್ನು ಹಿಡಿಯಲು ವಿಫಲವಾದ ಗ್ರೀನ್ ಕೈಗೆ ಬಂದಿದ್ದ ಕ್ಯಾಚನ್ನು ಕೈಚೆಲ್ಲಿದರು.
ಮೂರನೆಯದಾಗಿ ತಂಡಕ್ಕೆ ಅವಶ್ಯಕವಾದ ಶತಕ ಬಾರಿಸಿ ಅಜೇಯರಾಗಿ ಉಳಿದಿರುವ ಅಜಿಂಕ್ಯ ರಹಾನೆ 66 ರನ್ ಗಳಿಸಿ ಆಡುವ ವೇಳೆ ನಾಥನ್ ಲಿಯಾನ್ ಬೌಲಿಂಗ್ನಲ್ಲಿ ಸ್ಲಿಪ್ ಕಡೆಗೆ ಬಾರಿಸಿದರು. ಆದರೆ ನಾಯಕ ಟೀಂ ಪೈನ್ ಹಾಗೂ ಸ್ಮಿತ್ ನಡುವಿನ ಸಂವಹನದ ಕೊರತೆಯಿಂದಾಗಿ ಇದೂ ಆಸ್ಟ್ರೇಲಿಯನ್ನರ ಕೈತಪ್ಪಿತು.
ಅಲ್ಲಿಗೆ ಸುಮ್ಮನಾಗದ ಅಜಿಂಕ್ಯ ರಹಾನೆ 73 ರನ್ ಗಳಿಸಿ ಆಡುವ ವೇಳೆ ಸ್ಟಾರ್ಕ್ ಎಸೆದ ಬೆಂಕಿಯುಗುಳುವ ಚೆಂಡಿಗೆ ತಮ್ಮ ಬ್ಯಾಟ್ನಿಂದ ಸುಮ್ಮನೆ ಮುತ್ತಿಕ್ಕಿದರು. ಮುತ್ತು ಪಡೆದ ಚೆಂಡು ಸೀದ ಸ್ಲಿಪ್ನಲ್ಲಿ ನಿಂತಿದ್ದ ಸ್ಟೀವ್ ಸ್ಮಿತ್ ಕಡೆಗೆ ಚಿಮ್ಮಿತ್ತು. ರಹಾನೆ ಬ್ಯಾಟ್ನ ಕಿಸ್ ಹೊಳಪಿಗೆ ಹೆದರಿದ ಸ್ಮಿತ್, ಕ್ಯಾಚ್ ಹಿಡಿಯುವಲ್ಲಿ ಎಡವಿ ರಹಾನೆಗೆ 2ನೇ ಜೀವದಾನ ನೀಡಿದರು. ಸ್ಮಿತ್ ನೀಡಿದ ಜೀವದಾನ ಸದುಪಯೋಗ ಪಡಿಸಿಕೊಂಡ ನಾಯಕ ರಹಾನೆ ಅಮೋಘ ಶತಕ ಬಾರಿಸಿ ಮಿಂಚಿದರು.
ಎರಡು ಜೀವದಾನಗಳನ್ನು ಮರೆತ ಅಜಿಂಕ್ಯ ರಹಾನೆ 104 ರನ್ ಗಳಿಸಿದ್ದಾಗ ಸ್ಟಾರ್ಕ್ ಬೌಲಿಂಗ್ನಲ್ಲಿ, ಮಿಡ್ಲ್ನಲ್ಲಿ ಫಿಲ್ಡಿಂಗ್ ಮಾಡುತ್ತಿದ್ದ ಟ್ರಾವಿಸ್ ಹೆಡ್ಗೆ ಅತೀ ಸುಲಭವಾಗಿ ಹಿಡಿಯುವಂತ ಕ್ಯಾಚ್ ನೀಡಿದರು. ಆದರೆ ಈಗಾಗಲೇ ರಹಾನೆ ಬ್ಯಾಟಿಂಗ್ ನೋಡಿ ಹೆದರಿದ್ದ ಹೆಡ್, ರಹಾನೆ ನೀಡಿದ ಕ್ಯಾಚ್ ಹಿಡಿಯುವಲ್ಲಿ ವಿಫಲರಾದರು.
ಆಸಿಸ್ ಆಟಗಾರರು ನೀಡಿದ ಜೀವದಾನಗಳನ್ನು ಸದುಪಯೋಗಪಡಿಸಿಕೊಂಡ ಟೀಂ ಇಂಡಿಯಾ ಆಟಗಾರರು ತಂಡದ ಮೊತ್ತ ಹೆಚ್ಚಿಸುವಲ್ಲಿ ಯಶಸ್ವಿಯಾದರು. ಮೂರು ಜೀವದಾನ ಪಡೆದ ನಾಯಕ ರಹಾನೆ ಮೂರನೇ ದಿನದ ಆಟಕ್ಕೂ ಬ್ಯಾಟಿಂಗ್ ಉಳಿಸಿಕೊಂಡಿದ್ದಾರೆ.
India vs Australia 2nd Test | ಭಾರತಕ್ಕೆ 82 ರನ್ ಮುನ್ನಡೆ, ಶತಕ ಬಾರಿಸಿದ ರಹಾನೆಗೆ ಉತ್ತಮ ಸಾಥ್ ನೀಡಿದ ಜಡೇಜಾ
Published On - 3:54 pm, Sun, 27 December 20