ಬೃಹತ್ ಮೊತ್ತ ಬೆನ್ನತ್ತಿ ಟಿ20 ಸರಣಿ ಗೆದ್ದ ಭಾರತಕ್ಕೆ ‘ಹಾರ್ದಿಕ’ ಅಭಿನಂದನೆಗಳು
ಗೆಲ್ಲುವ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿ ಅಬ್ಬರದ ಆಟವಾಡಿದ ಪಾಂಡ್ಯ 3 ಫೋರ್, 2 ಸಿಕ್ಸ್ ಬಾರಿಸಿ 22 ಎಸೆತದಲ್ಲಿ 42 ರನ್ ಗಳಿಸಿದರು. ಕೊನೆಯ ಓವರ್ನಲ್ಲಿ 14 ರನ್ ಬೇಕಿರುವಾಗ ಧೃಡವಾಗಿ ನಿಂತ ಪಾಂಡ್ಯ ಅನಾಯಾಸವಾಗಿ 2 ಸಿಕ್ಸರ್ ಸಿಡಿಸಿ ಗೆಲುವಿಗೆ ಕಾರಣರಾದರು.
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ಅದ್ಭುತ ಗೆಲುವು ಸಾಧಿಸಿದೆ. ಟಿ20 ಸರಣಿಯಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡಿದ್ದ ಭಾರತಕ್ಕೆ ಆಸಿಸ್ ಬ್ಯಾಟ್ಸ್ಮನ್ ಆರಂಭದಲ್ಲೇ ಆಘಾತ ನೀಡಿದರು. ಫಿಂಚ್ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿಕೊಂಡಿದ್ದ ಮ್ಯಾಥ್ಯೂ ವೇಡ್ 32 ಎಸೆತಗಳಲ್ಲಿ 58 ರನ್ ಬಾರಿಸಿ ಅತ್ಯದ್ಭುತ ಆರಂಭ ನೀಡಿದರು.
ಆಸಿಸ್ ಪರವಾಗಿ ಡಿ ಆರ್ಕಿ ಶಾರ್ಟ್ ಒಬ್ಬರನ್ನು ಹೊರತುಪಡಿಸಿದರೆ ಕ್ರೀಸ್ಗೆ ಬಂದ ಎಲ್ಲಾ ಆಟಗಾರರು ಭಾರತೀಯ ಬೌಲರ್ಸ್ಗಳನ್ನು ಮನಸೋ ಇಚ್ಛೆ ದಂಡಿಸಿದರು. 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಭರ್ಜರಿ 194 ರನ್ ಕಲೆಹಾಕಿದ ಕಾಂಗರೂ ಪಡೆ ಭಾರತಕ್ಕೆ ದೊಡ್ಡ ಮಟ್ಟದ ಸವಾಲನ್ನೇ ನೀಡಿತು.
ಬೃಹತ್ ಮೊತ್ತದ ಸವಾಲನ್ನು ಬೆನ್ನಟ್ಟಿ ಹೊರಟ ಭಾರತಕ್ಕೆ ಆರಂಭಿಕ ಆಟಗಾರರಾಗಿ ಕೆ.ಎಲ್.ರಾಹುಲ್ ಮತ್ತು ಶಿಖರ್ ಧವನ್ ಜೊತೆಯಾದರು. ಮೊದಲ ಓವರ್ ಅಂತ್ಯಕ್ಕೆ 5 ರನ್ ಪಡೆದ ಜೋಡಿ 2ನೇ ಓವರ್ ಮುಗಿಸುವಾಗ 9 ರನ್ ಕಲೆಹಾಕಿತು.
ಆರಂಭಿಕ ಓವರ್ಗಳಲ್ಲಿ ರಾಹುಲ್ ಮತ್ತು ಧವನ್ ಬೌಂಡರಿ ಸಿಡಿಸುವ ಅವಕಾಶಕ್ಕಾಗಿ ಎಷ್ಟೇ ಹವಣಿಸಿದರೂ ಆಸಿಸ್ ಪರವಾದ ಬೌಲರ್ಸ್ ಉತ್ತಮ ದಾಳಿ ನಡೆಸಿ ಅವರಿಬ್ಬರನ್ನೂ ಕಟ್ಟಿಹಾಕಿದರು. ಮೇಲಾಗಿ ಉತ್ತಮವಾದ ಫೀಲ್ಡಿಂಗ್ ಇದ್ದ ಕಾರಣ ದೊಡ್ಡ ಮೊತ್ತ ಗಳಿಸಲು ಅವಕಾಶ ಸಿಗಲಿಲ್ಲ.
ಆದರೆ, ಮೂರನೇ ಓವರ್ನಲ್ಲಿ ಆಂಡ್ರ್ಯೂ ಟೈ ಎಸೆದ ನೋ ಬಾಲ್ ಭಾರತ ತಂಡಕ್ಕೆ ವರದಾನವಾಯಿತು. ನಂತರದ ಫ್ರೀ ಹಿಟ್ನಲ್ಲಿ ರಾಹುಲ್ ಸಿಕ್ಸರ್ ಸಿಡಿಸಿದರೆ ಅದೇ ಓವರ್ನ ಕೊನೆಯ ಎಸೆತದಲ್ಲಿ ಧವನ್ ಫೋರ್ ಬಾರಿಸುವ ಮೂಲಕ ತಂಡದ ವೇಗ ಹೆಚ್ಚಲು ಕಾರಣರಾದರು.
ನಾಲ್ಕನೇ ಓವರ್ನಲ್ಲಿ 2 ಫೋರ್, 1 ಸಿಕ್ಸ್ ಸಿಡಿಸಿ ಉತ್ತಮ ಜೊತೆಯಾಟ ಆರಂಭಿಸಿದ ರಾಹುಲ್ ಮತ್ತು ಧವನ್ 5ನೇ ಓವರ್ ಮುಗಿಯುವಾಗ 56 ರನ್ ಗಳಿಸಿದ್ದರು. 22 ಎಸೆತದಲ್ಲಿ 30 ರನ್ ಬಾರಿಸಿ ಉತ್ತಮವಾಗಿ ಆಡುತ್ತಿದ್ದ ಕೆ.ಎಲ್.ರಾಹುಲ್ ಆಂಡ್ರ್ಯೂ ಟೈ ಎಸೆತದಲ್ಲಿ ಸ್ವೆಪ್ಸನ್ ಕೈಗೆ ಕ್ಯಾಚ್ ನೀಡುವ ಮೂಲಕ ಔಟ್ ಆದರು.
ನಂತರ ಧವನ್ಗೆ ಜೊತೆಯಾದ ವಿರಾಟ್ ಕೊಹ್ಲಿ ಅಬ್ಬರಿಸಲು ಪ್ರಯತ್ನಿಸಿದರೂ ಆಸಿಸ್ ಬೌಲರ್ಸ್ ಬಿಗಿ ದಾಳಿ ನಡೆಸಿದ ಪರಿಣಾಮ ಕೊಂಚ ಕಠಿಣ ಪರಿಸ್ಥಿತಿ ಎದುರಾಯಿತು. ಆ ಸಂದರ್ಭವನ್ನೂ ಸಮರ್ಥವಾಗಿ ನಿಭಾಯಿಸಿದ ಶಿಖರ್, ಕೊಹ್ಲಿ ಜೋಡಿ ಉತ್ತಮ ಜೊತೆಯಾಟ ನೀಡಿದರು. 34 ಎಸೆತಗಳಲ್ಲಿ ಅರ್ಧ ಶತಕ ಗಳಿಸಿದ ಧವನ್ ಮತ್ತಷ್ಟು ಬಲ ತುಂಬಿದರು.
11ನೇ ಓವರ್ ಮುಕ್ತಾಯದ ವೇಳೆಗೆ ತಂಡದ ಮೊತ್ತವು 94/1 ರನ್ ಆಗಿತ್ತು. ನಂತರದ ಓವರ್ನಲ್ಲಿ ಆ್ಯಡಮ್ ಝಂಪಾ ಎಸೆತವನ್ನು ಎದುರಿಸಿದ ಧವನ್ ಕ್ಯಾಚ್ ನೀಡುವ ಮೂಲಕ ನಿರ್ಗಮಿಸಿದರು. ಧವನ್ ಒಟ್ಟು 4 ಫೋರ್ ಹಾಗೂ 2 ಸಿಕ್ಸ್ ಸಿಡಿಸಿ ತಂಡಕ್ಕೆ ನೆರವಾಗಿದ್ದರು.
ಬಳಿಕ ಬಂದ ಸಂಜು ಸ್ಯಾಮ್ಸನ್ 15 (10) ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆ ನಂತರ ಬಂದ ಹಾರ್ದಿಕ್ ಪಾಂಡ್ಯ ಕೊಹ್ಲಿಗೆ ಉತ್ತಮ ಜೊತೆಯಾಟ ನೀಡಿದರು. 24 ಎಸೆತಗಳಲ್ಲಿ 40 ರನ್ ಗಳಿಸಿ ಕೊಹ್ಲಿ ನಿರ್ಗಮಿಸುವ ಹೊತ್ತಿನಲ್ಲಿ ತಂಡದ ಮೊತ್ತ 16ನೇ ಓವರ್ ಅಂತ್ಯಕ್ಕೆ 149 ಆಗಿತ್ತು.
23 ಎಸೆತಕ್ಕೆ 46 ರನ್ ಬೇಕಿರುವಾಗ ಪಾಂಡ್ಯಗೆ ಜೊತೆಯಾದ ಶ್ರೇಯಸ್ ಅಯ್ಯರ್ ಉತ್ತಮ ಪ್ರದರ್ಶನ ನೀಡಿದರು. 5 ಎಸೆತಗಳಲ್ಲಿ 1 ಫೋರ್, 1 ಸಿಕ್ಸ್ ಸಿಡಿಸುವ ಮೂಲಕ 12 ರನ್ ಗಳಿಸಿದ ಶ್ರೇಯಸ್ ಚೇತರಿಕೆ ನೀಡಿದರು.
ತಂಡಕ್ಕೆ ಆಸರೆಯಾದ ಪಾಂಡ್ಯ ಶ್ರೇಯಸ್ ಅಯ್ಯರ್ ಜೊತೆಯಾಗುವ ವೇಳೆಗೆ 6 ಎಸೆತದಲ್ಲಿ 8 ರನ್ ಗಳಿಸಿದ್ದ ಪಾಂಡ್ಯ ನಂತರದಲ್ಲಿ ಅಕ್ಷರಶಃ ಆರ್ಭಟಿಸಿದರು. ಗೆಲ್ಲುವ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿ ಅಬ್ಬರದ ಆಟವಾಡಿದ ಪಾಂಡ್ಯ 3 ಫೋರ್, 2 ಸಿಕ್ಸ್ ಬಾರಿಸಿ 22 ಎಸೆತದಲ್ಲಿ 42 ರನ್ ಗಳಿಸಿದರು.
ಕೊನೆಯ ಓವರ್ನಲ್ಲಿ 14 ರನ್ ಬೇಕಿರುವಾಗ ಧೃಡವಾಗಿ ನಿಂತ ಪಾಂಡ್ಯ ಅನಾಯಾಸವಾಗಿ 2 ಸಿಕ್ಸರ್ ಸಿಡಿಸಿ ಗೆಲುವಿಗೆ ಕಾರಣರಾದರು. ಆ ಮೂಲಕ ಕೊನೆಯ 2 ಎಸೆತ ಇರುವಾಗಲೇ ಬೃಹತ್ ಮೊತ್ತವನ್ನು ಭೇದಿಸಿದ ಭಾರತ ಆಸಿಸ್ ವಿರುದ್ಧ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿ ಟಿ20 ಸರಣಿಯನ್ನು 2-0 ಮೂಲಕ ತನ್ನದಾಗಿಸಿಕೊಂಡಿತು.
India vs Australia 2020, 2nd T20, LIVE Scores : ಟಿ20 ಸರಣಿ ಭಾರತದ ಪಾಲು
Published On - 6:52 pm, Sun, 6 December 20