ಚೆನೈ: ಆಂಗ್ಲರ ಶಿಸ್ತಿನ ದಾಳಿಯೆದುರು ನಿರ್ಭೀತ ಮತ್ತು ಲೀಲಾಜಾಲ ಬ್ಯಾಟಿಂಗ್ ಪ್ರದರ್ಶನ ನೀಡಿ ಹಿಟ್ಮ್ಯಾನ್ ರೋಹಿತ್ ಶರ್ಮ ಬಾರಿಸಿದ ಆಧಿಕಾರಯುತ ಶತಕ ಭಾರತ ಮತ್ತು ಇಂಗ್ಲೆಂಡ್ ನಡುವೆ ಚೆನೈಯಲ್ಲಿ ಇಂದು ಶುರುವಾದ ಎರಡನೇ ಟೆಸ್ಟ್ನ ಮೊದಲ ದಿನದಾಟದ ವೈಶಿಷ್ಟ್ಯತೆಯಾಗಿತ್ತು.
ವೇಗ ಮತ್ತು ಸ್ಪಿನ್ ದಾಳಿಗಳೆರಡನ್ನೂ ಅತ್ಯಂತ ಸಮರ್ಥವಾಗಿ ಎದುರಿಸಿ ಆಡಿದ ಶರ್ಮ ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ 7 ನೇ ಶತಕವನ್ನು ದಾಖಲಿಸಿದರು.
ಅವರ ಶತಕ 131 ಎಸೆತಗಳಲ್ಲಿ 14 ಬೌಂಡರಿ ಮತ್ತು 2 ಸಿಕ್ಸರ್ಗಳೊಂದಿಗೆ ಬಂದಿತು. ಅಂತಿಮವಾಗಿ ಶರ್ಮ 161 ರನ್ (18 ಬೌಂಡರಿ 2 ಸಿಕ್ಸರ್) ಗಳಿಸಿ ಜ್ಯಾಕ್ ಲೀಚ್ಗೆ ವಿಕೆಟ್ ಒಪ್ಪಿಸಿದರು. ಔಟಾಗುವ ಮುನ್ನ ಅವರು 4ನೇ ವಿಕೆಟ್ಗೆ ಉಪನಾಯಕ ಅಜಿಂಕ್ಯಾ ರಹಾನೆ ಜೊತೆ 162 ರನ್ ಪೇರಿಸಿದರು. ರಹಾನೆ ಉಪಯುಕ್ತ 67 (9 ಬೌಂಡರಿ) ರನ್ಗಳ ಕಾಣಿಕೆ ನೀಡಿದರು.
ರೋಹಿತ್ ಶರ್ಮ ಅವರ ಎಲ್ಲ 7 ಟೆಸ್ಟ್ ಶತಕಗಳು ಭಾರತದಲ್ಲೇ ದಾಖಲಾಗಿವೆ.
212 ದಕ್ಷಿಣ ಆಫ್ರಿಕಾ ವಿರುದ್ಧ, ರಾಂಚಿಯಲ್ಲಿ 2019-29
177 ವೆಸ್ಟ್ ಇಂಡೀಸ್ ವಿರುದ್ಧ ಕೊಲ್ಕತಾ 2013-14
176 ದಕ್ಷಿಣ ಆಪ್ರಿಕಾ ವಿರುದ್ಧ ವೈಜಾಗ್ 2019-20
127 ದಕ್ಷಿಣ ಆಫ್ರಿಕಾ ವಿರುದ್ಧ 2019-20
111 ವೆಸ್ಟ್ ಇಂಡೀಸ್ ವಿರುದ್ಧ ಮುಂಬೈ 2013-14
102 ಶ್ರೀಲಂಕಾ ವಿರುದ್ಧ ನಾಗ್ಪುರ್ 2017-19
161 ಇಂಗ್ಲೆಂಡ್ ವಿರುದ್ಧ ಚೆನೈಯಲ್ಲಿ ಇಂದು (2021)
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತದ ಆರಂಭ ಕೆಟ್ಟದಾಗಿತ್ತು. ಶುಭ್ಮನ್ ಗಿಲ್ ಖಾತೆ ತೆರೆಯದೆ ಎರಡನೇ ಓವರಿನಲ್ಲಿ ಔಟಾದರು. ನಂತರ ರೋಹಿತ್, ಚೇತೇಶ್ವರ ಫೂಜಾರಾ ಒಂದಿಗೆ ಎರಡನೇ ವಿಕೆಟ್ಗೆ 85 ರನ್ ಸೇರಿಸಿದರು. ಪೂಜಾರಾ 21 ರನ್ ಗಳಿಸಿ ಜ್ಯಾಕ್ ಲೀಚ್ಗೆ ವಿಕೆಟ್ ಒಪ್ಪಿಸಿದರು.
ಭಾರತದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸಲಾಗಿತ್ತು, ಆದರೆ ಅವರು ಸೊನ್ನೆಗೆ ಔಟಾಗಿ ನಿರಾಶೆಗೊಳಿಸಿದರು. ಅವರನ್ನು ಆಫ್-ಸ್ಪಿನ್ನರ್ ಮೋಯಿನ್ ಅಲಿ ಔಟ್ ಮಾಡಿದರು.
ಕೊಹ್ಲಿ ಔಟಾದ ನಂತರ ಜೊತೆಗೂಡಿದ ರೋಹಿತ್ ಮತ್ತು ರಹಾನೆ ಅಮೋಘ ಹೊಂದಾಣಿಕೆಯ ಪ್ರದರ್ಶನ ನೀಡಿ 162 ರನ್ಗಳ ಜೊತೆಯಾಟದಲ್ಲಿ ಪಾಲ್ಗೊಂಡು ಭಾರತವನ್ನು ಅಪಾಯದಿಂದ ಪಾರು ಮಾಡಿದರು.
ರಹಾನೆ ಔಟಾದ ನಂತರ ಕ್ರೀಸಿಗೆ ಬಂದ ಅಶ್ವಿನ್ ಬಹಳ ಹೊತ್ತು ನಿಲ್ಲದೆ 13 ರನ್ ಗಳಿಸಿ ಔಟಾದರು. ದಿನದಾಟ ಕೊನೆಗೊಂಡಾಗ 33 ರನ್ ಗಳಿಸಿದ ರಿಷಭ್ ಮತ್ತು 5 ರನ್ ಗಳಿಸಿರುವ ಅಕ್ಸರ್ ಪಟೇಲ್ ಆಡುತ್ತಿದ್ದರು.
ಪ್ರವಾಸಿಗರ ಪರ ಯಶಸ್ವೀ ಬೌಲರ್ಗಳೆನಿಸಿದ ಮೋಯಿನ್ ಅಲಿ ಮತ್ತು ಜ್ಯಾಕ್ ಲೀಚ್ ತಲಾ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ಭಾರತ ಮೊದಲ ಇನ್ನಿಂಗ್ಸ್: 300/6 ( ರೋಹಿತ್ ಶರ್ಮ 161, ಅಜಿಂಕ್ಯಾ ರಹಾನೆ 67, ಚೇತೇಶ್ವರ್ ಪೂಜಾರಾ 21, ಪಂತ್ ಬ್ಯಾಟಿಂಗ್ 33, ಜ್ಯಾಕ್ ಲೀಚ್ 2/78 ಮತ್ತು ಮೋಯಿನ ಅಲಿ 2/112)
Published On - 5:37 pm, Sat, 13 February 21