ಅಹಮದಾಬಾದ್: ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಎರಡನೇ ದಿನದಂದು ಟೀಂ ಇಂಡಿಯಾ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಟೀಂ ಇಂಡಿಯಾ ಪರ ಬೌಲಿಂಗ್ನಲ್ಲಿ ಮಿಂಚಿದ ಅಕ್ಷರ್ ಪಟೇಲ್ 2 ಇನ್ನಿಂಗ್ಸ್ ಸೇರಿ 11 ವಿಕೆಟ್ ಪಡೆದರೆ, ಅಶ್ವಿನ್ 7 ವಿಕೆಟ್ ಪಡೆದು ಮಿಂಚಿದರು. ಇಂಗ್ಲೆಂಡ್ ನೀಡಿದ 49 ರನ್ಗಳ ಸುಲಭ ಗುರಿಯನ್ನು ಟೀಂ ಇಂಡಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೆ ಮುಟ್ಟಿತು. ರೂಟ್ ಅವರ ಓವರ್ನಲ್ಲಿ 2 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್ನೊಂದಿಗೆ ರೋಹಿತ್ ಶರ್ಮಾ ಭಾರತಕ್ಕೆ ಗೆಲುವು ತಂದುಕೊಟ್ಟರು. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪ್ರವೇಶದ ಸಾಧ್ಯತೆ ಭಾರತ ಉಳಿಯಿತು. ಇಂಗ್ಲೆಂಡ್ ತಂಡಕ್ಕೆ ಅವಕಾಶದ ಬಾಗಿಲು ಮುಚ್ಚಿದಂತಾಯಿತು.
ಇಂಗ್ಲೆಂಡ್ ದಾಂಡಿಗರ ಪೆವಿಲಿಯನ್ ಪರೇಡ್
ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಇಂಗ್ಲೆಂಡ್ಗೆ ಆರಂಭದಿಂದಲೇ ಆಘಾತ ಎದುರಾಯಿತು. ಆರಂಭಿಕನಾಗಿ ಕಣಕ್ಕಿಳಿದ ಸಿಬ್ಲಿ ಶೂನ್ಯಕ್ಕೆ ಔಟಾದರೆ ನಂತರ ಬಂದ ಬೈರ್ಸ್ಟೋವ್ ಸಹ ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಶೂನ್ಯಕ್ಕೆ ಪೆವಿಲಿಯನ್ಗೆ ಮರಳಿದರು. ನಾಯಕ ರೂಟ್ ಸಹ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲಿಲ್ಲ. 17 ರನ್ಗಳಿಸಿ ರೂಟ್ ಪೆವಿಲಿಯನ್ ಸೇರಿದರೆ, ರೂಟ್ ನಂತರ ಬಂದ ಯಾವೊಬ್ಬ ಆಟಗಾರನೂ ನಿಂತು ಆಡುವ ಗೋಜಿಗೆ ಹೋಗಲಿಲ್ಲ. ಆದರೆ ಆರಂಭಿಕನಾಗಿ ಕಣಕ್ಕಿಳಿದ ಕ್ರಾವ್ಲೆ 53 ರನ್ ಸಿಡಿಸಿ ತಂಡಕ್ಕೆ ನೆರವಾದರು. ಉಳಿದಂತೆ ಎಲ್ಲರೂ ಪೆವಿಲಿಯನ್ ಪರೇಡ್ ನಡೆಸಿದರು. ಇದರ ಫಲವಾಗಿ ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ 112 ರನ್ಗಳಿಗೆ ಸರ್ವಪತನವಾಯಿತು.
ಮಿಂಚಿದ ಅಕ್ಷರ್, ಅಶ್ವಿನ್
ಟಾಸ್ ಸೋತು ಬೌಲಿಂಗ್ಗೆ ಇಳಿದ ಭಾರತಕ್ಕೆ ಆರಂಭದಲ್ಲೇ ಇಶಾಂತ್ ಶರ್ಮಾ ಯಶಸ್ಸು ತಂದುಕೊಟ್ಟರು. ಶೂನ್ಯಕ್ಕೆ ಸಿಬ್ಲಿ ವಿಕೆಟ್ ತೆಗೆಯುವ ಮೂಲಕ ತಂಡಕ್ಕೆ ನೆರವಾದರು. ಉಳಿದಂತೆ ಬೌಲಿಂಗ್ನಲ್ಲಿ ಮೆರೆದಿದ್ದು ಅಕ್ಷರ್ ಪಟೇಲ್ ಹಾಗೂ ಅಶ್ವಿನ್. ತಾನು ಎಸೆದ ಮೊದಲ ಓವರ್ನ ಮೊದಲ ಎಸೆತದಲ್ಲೇ ವಿಕೆಟ್ ಪಡೆಯುವಲ್ಲಿ ಅಕ್ಷರ್ ಯಶಸ್ವಿಯಾದರು. ಆರಂಭದಿಂದಲೂ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳ ಮೇಲೆ ಸವಾರಿ ಮಾಡಿದ ಅಕ್ಷರ್ ಪಟೇಲ್ ಪ್ರಮುಖ 6 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಇನ್ನೊಂದೆಡೆ ಇಂಗ್ಲೆಂಡ್ ದಾಂಡಿಗರನ್ನು ಇನ್ನಿಲ್ಲದಂತೆ ಕಾಡಿದ ಅಶ್ವಿನ್ ಪ್ರಮುಖ 3 ವಿಕೆಟ್ ಪಡೆದು ಮಿಂಚಿದರು.
ಭಾರತಕ್ಕೆ ಮೊದಲ ಇನ್ನಿಂಗ್ಸ್ ಮುನ್ನಡೆ
ಇಂಗ್ಲೆಂಡ್ ನೀಡಿದ 112 ರನ್ಗಳ ಅಲ್ಪ ಮೊತ್ತವನ್ನು ಬೆನ್ನತ್ತಿದ ಭಾರತದ ಆರಂಭವೂ ಅಷ್ಟೇನೂ ಉತ್ತಮವಾಗಿರಲಿಲ್ಲ. ಶುಭಮನ್ ಗಿಲ್ 11 ರನ್ ಗಳಿಸಿ ಔಟಾದರೆ, ನಂತರ ಬಂದ ಪೂಜಾರ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ರೋಹಿತ್ ಜೊತೆಯಾದ ನಾಯಕ ಕೊಹ್ಲಿ 27 ರನ್ ಸಿಡಿಸಿ ಔಟಾದರು. ಕೊಹ್ಲಿ ಬಳಿಕ ಬಂದ ಉಳಿದ ಆಟಗಾರರು ಹೆಚ್ಚು ಪ್ರತಿರೋಧ ತೋರದೆ ಬೇಗನೆ ಪೆವಿಲಿಯನ್ ಸೇರಿದರು. ಅಂತಿಮವಾಗಿ ರೋಹಿತ್ ಶರ್ಮಾ ಅವರ ಅಮೋಘ 66 ರನ್ಗಳ ಕೊಡುಗೆಯಿಂದಾಗಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 32 ರನ್ಗಳ ಮುನ್ನಡೆ ಪಡೆಯಿತು.
ಇಂಗ್ಲೆಂಡ್ಗೆ 2ನೇ ಇನ್ನಿಂಗ್ಸ್ನಲ್ಲಿಯೂ ಆಘಾತ
ಟೀಂ ಇಂಡಿಯಾದ 32 ರನ್ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ಗೆ ಆರಂಭದಿಂದಲೇ ಆಘಾತ ಎದುರಾಯಿತು. ಶೂನ್ಯಕ್ಕೆ ಇಬ್ಬರು ಆಟಗಾರರು ಔಟಾದರು. ನಂತರ ಜೊತೆಯಾದ ರೂಟ್ ಹಾಗೂ ಸ್ಟೋಕ್ಸ್ ಕೊಂಚ ಪ್ರತಿರೋಧ ತೋರಿದರಾದರೂ ತಂಡಕ್ಕೆ ಯಾವುದೇ ಪ್ರಯೋಜನವಾಗಲಿಲ್ಲ. ರೂಟ್ 17 ರನ್ಗಳಿಸಿ ಔಟಾದರೆ, ಸ್ಟೋಕ್ಸ್ 25 ರನ್ಗಳಿಸಿದರು. ಸ್ಟೋಕ್ಸ್ ಗಳಿಸಿದ 25 ರನ್ಗಳೇ ತಂಡದ ಆಟಗಾರನೊಬ್ಬ ಗಳಿಸಿದ ಅತ್ಯಧಿಕ ರನ್ ಆಯಿತು. ಉಳಿದಂತೆ ಎಲ್ಲಾ ಆಟಗಾರರು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ಇಂಗ್ಲೆಂಡ್ 81 ರನ್ಗಳಿಗೆ 2ನೇ ಇನ್ನಿಂಗ್ಸ್ ಮುಗಿಸಿತು.
2ನೇ ಇನ್ನಿಂಗ್ಸ್ನಲ್ಲೂ ಮಿಂಚಿದ್ದು ಅಕ್ಷರ್
ಮೊದಲನೇ ಇನ್ನಿಂಗ್ಸ್ನಂತೆ 2ನೇ ಇನ್ನಿಂಗ್ಸ್ನಲ್ಲೂ ಅಬ್ಬರಿಸಿದ ಅಕ್ಷರ್ ಎಸೆದ ಮೊದಲ ಓವರ್ನಲ್ಲಿಯೇ 2 ವಿಕೆಟ್ ತೆಗೆಯುವುದರಲ್ಲಿ ಯಶಸ್ವಿಯಾದರು. ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ಚೇತರಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಅಕ್ಷರ್ ಹಾಗೂ ಅಶ್ವಿನ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ದಾಂಡಿಗರು ಪೆವಿಲಿಯನ್ ಪರೇಡ್ ನಡೆಸಿದರು. 2ನೇ ಇನ್ನಿಂಗ್ಸ್ ಬರಿ ಸ್ಪಿನ್ನರ್ಗಳ ಅಬ್ಬರದಲ್ಲೇ ಮುಗಿದು ಹೋಯಿತು. ಅಕ್ಷರ್ 5 ವಿಕೆಟ್ ಪಡೆದರೆ, ಅಶ್ವಿನ್ 4 ವಿಕೆಟ್, ಹಾಗೂ ಸುಂದರ್ 1 ವಿಕೆಟ್ ಪಡೆದು ಮಿಂಚಿದರು.
ಭಾರತಕ್ಕೆ ಸುಲಭದ ಜಯ
ಕೇವಲ 49 ರನ್ಗಳ ಅಲ್ಪ ಮೊತ್ತದ ಸವಾಲು ಪಡೆದ ಟೀಂ ಇಂಡಿಯಾ ಸುಲಭವಾಗಿ ಜಯ ಸಾಧಿಸಿತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಹಾಗೂ ಗಿಲ್ ಅಬ್ಬರದ ಬ್ಯಾಟಿಂಗ್ ಮಾಡಿ ಭಾರತಕ್ಕೆ ಇಂದೇ ಗೆಲುವಿನ ಮಾಲೆ ತೋಡಿಸಿದರು. ರೋಹಿತ್ ಭರ್ಜರಿ ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿ 25 ರನ್ಗಳಿಸಿದರೆ, ಗಿಲ್ 15 ರನ್ಗಳಿಸಿ ಅಜೇಯರಾಗಿ ಉಳಿದರು. 2 ಇನ್ನಿಂಗ್ಸ್ನ ಬೌಲಿಂಗ್ನಲ್ಲಿ ಮಿಂಚಿದ ಅಕ್ಷರ್ ಪಟೇಲ್ ಪಂದ್ಯಪುರುಷ ಪ್ರಶಸ್ತಿಗೆ ಭಾಜನರಾದರು.
Published On - 8:48 pm, Thu, 25 February 21