India vs England Test Series: ವಿರಾಟ್ ಕೊಹ್ಲಿ ಶತಕಗಳ ಬರ ಅಹಮದಾಬಾದ್​ನಲ್ಲಿ ನೀಗುವುದೇ

|

Updated on: Feb 22, 2021 | 7:31 PM

ವಿರಾಟ್ ಕೊಹ್ಲಿ 2008ರಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ ನಂತರ ಪ್ರತಿ ವರ್ಷ ಶತಕಗಳನ್ನು ದಾಖಲಿಸುತ್ತಲೇ ಇದ್ದಾರೆ. ಆದರೆ 2020ರಲ್ಲಿ ಅವರ ಬ್ಯಾಟ್​ನಿಂದ ಕ್ರಿಕೆಟ್​ನ ಯಾವುದೇ ಫಾರ್ಮಾಟ್​ನಲ್ಲಿ ಒಂದೇ ಒಂದು ಶತಕ ದಾಖಲಾಗಲಿಲ್ಲ.

India vs England Test Series: ವಿರಾಟ್ ಕೊಹ್ಲಿ ಶತಕಗಳ ಬರ ಅಹಮದಾಬಾದ್​ನಲ್ಲಿ ನೀಗುವುದೇ
ವಿರಾಟ್​ ಕೊಹ್ಲಿ
Follow us on

ಭಾರತದ ಲೆಜೆಂಡರಿ ಬ್ಯಾಟ್ಸ್​ಮನ್ ಸಚಿನ್ ತೆಂಡೂಲ್ಕರ್ ಈಗ ವಿರಾಟ್ ಕೊಹ್ಲಿ ಅನುಭವಿಸುತ್ತಿರುವಂಥ ಸ್ಥಿತಿಯನ್ನು ಹಿಂದೆ ಎದುರಿಸಿದ್ದರು. ಈ ಮಹಾನ್ ಆಟಗಾರರು ಪಂದ್ಯಗಳಲ್ಲಿ ಅದ್ಯಾವ ಮಟ್ಟಿನ ಸ್ಥಿರತೆಯೊಂದಿಗೆ ರನ್ ಗಳಿಸುತ್ತಾರೆಂದರೆ, ಒಂದೆರಡು ಟೆಸ್ಟ್​ಗಳಲ್ಲಿ ರನ್ ಗಳಿಸಲು ವಿಫಲರಾದರೆ, ಮಾಧ್ಯಮಗಳಲ್ಲಿ ಚರ್ಚೆ ಶುರುವಾಗಿ, ಅವರ ಮೇಲೆ ಒತ್ತಡ ಬೀಳುತ್ತದೆ. ಟೀಮ್ ಇಂಡಿಯಾದ ನಾಯಕ 2008ರಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ ನಂತರ ಪ್ರತಿ ವರ್ಷ ಶತಕಗಳನ್ನು ದಾಖಲಿಸುತ್ತಲೇ ಇದ್ದಾರೆ. ಆದರೆ 2020ರಲ್ಲಿ ಅವರ ಬ್ಯಾಟ್​ನಿಂದ ಕ್ರಿಕೆಟ್​ನ ಯಾವುದೇ ಫಾರ್ಮಾಟ್​ನಲ್ಲಿ ಒಂದೇ ಒಂದು ಶತಕ ದಾಖಲಾಗಲಿಲ್ಲ. ನಿಮಗೆ ಗೊತ್ತಿದೆ, 2015ರಲ್ಲಿ ಟೆಸ್ಟ್​ ಕ್ರಿಕೆಟ್​ ತಂಡದ ನಾಯಕತ್ವ ವಹಿಸಿಕೊಂಡ ನಂತರ ಅವರು ಹೇರಳವಾಗಿ ರನ್ ಸಂಪಾದಿಸಿ, ಒಂದಾದ ನಂತರ ಒಂದರಂತೆ ಶತಕಗಳನ್ನು ಬಾರಿಸಲಾರಂಭಿಸಿದರು. ಕೆಲ ಕ್ರಿಕೆಟ್ ಪರಿಣಿತರು ಅವರನ್ನು ಎಲ್ಲ ಆವೃತ್ತಿಗಳಲ್ಲೂ ವಿಶ್ವದ ನಂಬರ್ ಒನ್ ಬ್ಯಾಟ್ಸ್​ಮನ್ ಎಂದು ಪರಿಗಣಿಸುತ್ತಾರೆ.

ಹಾಗೆ ನೋಡಿದರೆ, 2021ರಲ್ಲೂ ವಿರಾಟ್ ಕೊಹ್ಲಿಯ ಬ್ಯಾಟ್​ನಿಂದ ಈವರೆಗೆ ಶತಕ ಸಿಡಿದಿಲ್ಲ. 2016 ಮತ್ತು 2017ರ ಸ್ವದೇಶದ ಸರಣಿಗಳಲ್ಲಿ ಅವರು ಟನ್​ಗಟ್ಟಲೆ ರನ್ ಗಳಿಸಿದ್ದು ಅವರ ಅಭಿಮಾನಿಗಳಿಗೆ ಚೆನ್ನಾಗಿ ನೆನಪಿದೆ. 2018ರ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಪ್ರವಾಸಗಳಲ್ಲಿ ಅವರು ಉತ್ತಮ ಪ್ರದರ್ಶನಗಳನ್ನು ನೀಡಿದರು. 2019ರಲ್ಲಿ ದಕ್ಷಿಣ ಅಫ್ರಿಕಾ ವಿರುದ್ಧ ಅಜೇಯ 254 ರನ್​ಗಳ ಇನ್ನಿಂಗ್ಸ್ ಆಡಿದ ನಂತರ ಬಾಂಗ್ಲಾದೇಶದ ವಿರುದ್ಧ ಭಾರತ ಆಡಿದ ಪ್ರಥಮ ಅಹರ್ನಿಶಿ ಪಂದ್ಯದಲ್ಲಿ 136 ರನ್​ಗಳ ಉತ್ಕೃಷ್ಟ ಇನ್ನಿಂಗ್ಸ್ ಆಡಿದರು. ಅದಾದ ಮೇಲೆ 2020ರ ಆರಂಭದಲ್ಲಿ ಭಾರತ ನ್ಯೂಜಿಲೆಂಡ್ ಪ್ರವಾಸ ತೆರಳಿದಾಗ ಅವರು ರನ್ ಹೊಳೆ ಹರಿಸಬಹುದೆಂಬ ನಿರೀಕ್ಷೆಯಿತ್ತು. ಆದರೆ ಅಲ್ಲಿ ಆಡಿದ ಎರಡು ಟೆಸ್ಟ್​ಗಳಲ್ಲಿ ಅವರು 2, 19, 3, 14 ರನ್​ಗಳಿಸಿ ನಿರಾಶೆಗೊಳಿಸಿದರು.

ಕೊವಿಡ್-19 ಪಿಡುಗಿನಿಂದಾಗಿ ಭಾರತವೂ ಸೇರಿದಂತೆ ವಿಶ್ವದೆಲ್ಲೆಡೆ ಕ್ರೀಡಾ ಚಟುವಟಿಕೆಗಳೂ ಸ್ಥಗಿತಗೊಂಡವು. ಭಾರತ ಪುನಃ ಟೆಸ್ಟ್ ಆಡಿದು ಡಿಸೆಂಬರ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ. ಆದರೆ 4-ಟೆಸ್ಟ್​ಗಳ ಸರಣಿಯಲ್ಲಿ ಕೊಹ್ಲಿ ಆಡಿದ್ದು, ಅಡಿಲೇಡ್​ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಮಾತ್ರ. ಆ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ತಮ್ಮ ಎಂದಿನ ಆಟ ಪ್ರದರ್ಶಿಸುತ್ತಿದ್ದ ಕೊಹ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ತಮ್ಮ 28ನೇ ಶತಕ ಬಾರಿಸುವತ್ತ ಮುನ್ನಡೆದಿದ್ದರು. ಆದರೆ ಅವರ ವೈಯಕ್ತಿಕ ಸ್ಕೋರ್ 74 ಅಗಿದ್ದಾಗ, ರನ್ ಕದಿಯುವ ಭರದಲ್ಲಿ ಉಪನಾಯಕ ಅಜಿಂಕ್ಯಾ ರಹಾನೆ ಅವರೊಂದಿಗೆ ನಡೆದ ಗಲಿಬಿಲಿಯಲ್ಲಿ ರನೌಟ್ ಆದರು.

ಸಚಿನ್ ತೆಂಡೂಲ್ಕರ್ ಕವರ್ ಡ್ರೈವ್ ಭಂಗಿ

ಎರಡನೇ ಇನ್ನಿಂಗ್ಸ್​ನಲ್ಲಿ ಭಾರತ ತನ್ನ ಕ್ರಿಕೆಟ್ ಇತಿಹಾಸದ ಅತಿ ಕಡಿಮೆ ಮೊತ್ತಕ್ಕೆ ಆಲೌಟ್​ ಆದಾಗ ಕೊಹ್ಲಿಯ ಕಾಣಿಕೆ ಕೇವಲ 4 ರನ್ ಆಗಿತ್ತು. ಪಿತೃತ್ವದ ರಜೆ ಮೇಲೆ ಭಾರತಕ್ಕೆ ಹಿಂತಿರುಗಿದ ಕೊಹ್ಲಿ ಇಂಗ್ಲೆಂಡ್​ ವಿರುದ್ಧ ಆರಂಭವಾದ ಟೆಸ್ಟ್​ ಸರಣಿಗೆ ವಾಪಸ್ಸಾದರು. ಎರಡು ಟೆಸ್ಟ್​ಗಳ ನಾಲ್ಕು ಇನ್ನಿಂಗ್ಸ್​ಗಳಲ್ಲಿ ಅವರು ಎರಡು ಅರ್ಧ ಶತಕಗಳನ್ನು ದಾಖಲಿಸಿದ್ದಾರೆ. ಎರಡೂ ಫಿಫ್ಟಿಗಳು ಪಂದ್ಯಗಳ ಎರಡನೇ ಇನ್ನಿಂಗ್ಸ್​ನಲ್ಲಿ ಬಾರಿಸಿರುವುದು ವಿಶೇಷ.

ಕೊಹ್ಲಿಯ ಕಟ್ಟಾ ಅಭಿಮಾನಿಗಳಿಗೆ ಇದು ಗೊತ್ತಿರಬಹುದು, ಟೆಸ್ಟ್​ ಕರೀಯರ್​ ಆರಂಭದ ದಿನಗಳಲ್ಲಿ ಒಮ್ಮೆ ಕೊಹ್ಲಿ ಸತತವಾಗಿ 13 ಇನ್ನಿಂಗ್ಸ್​ಗಳಲ್ಲಿ ಶತಕ ದಾಖಲಿಸಲು ವಿಫಲರಾಗಿದ್ದರು. ಆಮೇಲೆ, 2015 ರಲ್ಲಿ ಅವರ 11 ಇನ್ನಿಂಗ್ಸ್​ಗಳಲ್ಲಿ ಶತಕ ಬಾರಿಸಿರಲಿಲ್ಲ. ಕ್ರಿಕೆಟ್ ಪರಿಣಿತರು ಹೇಳುವ ಹಾಗೆ, ಕೊಹ್ಲಿ ಕರೀಯರ್​ನ ಉಲ್ಲೇಖನೀಯ ಅಂಶವೆಂದರೆ ಅರ್ಧ ಶತಕಗಳನ್ನು ಶತಕಗಳಲ್ಲಿ ಪರಿವರ್ತಿಸುವ ದರ. ಹಾಗಾಗೇ ಅವರು ಶತಕಗಳನ್ನು ದಾಖಲಿಸುವ ಸಾಧನೆಯಲ್ಲಿ ಸಚಿನ್ ನಂತರದ ಸ್ಥಾನದಲ್ಲಿದ್ದಾರೆ. ಮಾಸ್ಟರ್ ಬ್ಲಾಸ್ಟರ್​ 100 ಅಂತರರಾಷ್ಟ್ರೀಯ ಶತಕಗಳೊಂದಿಗೆ ರಿಟೈರಾದರೆ, ಕೊಹ್ಲಿ ಇದುವರೆಗೆ 70 ಸೆಂಚುರಿಗಳನ್ನು ಬಾರಿಸಿದ್ದಾರೆ.

ವಿರಾಟ್​ ಕೊಹ್ಲಿ ಬ್ಯಾಟ್​ನಿಂದ ಆಕರ್ಷಕ ಕವರ್ ಡ್ರೈವ್

ಆದರೆ, 2019ರಿಂದ ಕೊಹ್ಲಿಯವರ ಪರಿವರ್ತನಾ ಪ್ರಮಾಣ ತಗ್ಗಿದ್ದು ಅವರ ಟೆಸ್ಟ್​ ಕ್ರಿಕೆಟ್​ ಸರಾಸರಿ ಸಹ ಇಳಿದಿದೆ. ಭಾರತದ ಕ್ರಿಕೆಟ್​ ಪ್ರೇಮಿಗಳು ಕೊಹ್ಲಿ ಶತಕ ಬಾರಿಸುವುದನ್ನು ಮುಂದುವರಿಸಲಿ ಅಂತ ಕಾಯುತ್ತಿದ್ದಾರೆ. ಭಾರತ ವಿಶ್ವ ಟೆಸ್ಟ್​ ಕ್ರಿಕೆಟ್​ ಚಾಂಪಿಯಶಿಪ್ (ಡಬ್ಲ್ಯುಟಿಸಿ) ಫೈನಲ್​ಗೆ ಅರ್ಹತೆ ಗಿಟ್ಟಿಸಬೇಕಾದರೆ ಇಂಗ್ಲೆಂಡ್​ ಅನ್ನು ಕನಿಷ್ಠ 2-1 ಅಂತರದಿಂದ ಸೋಲಿಸಬೇಕು. ಅದು ಸಾಧ್ಯವಾಗಬೇಕಾದರೆ ಕೊಹ್ಲಿಯ ಬ್ಯಾಟ್​ನಿಂದ ಶತಕಗಳು ಸಿಡಿಯಬೇಕು. ಇಂಗ್ಲೆಂಡ್ ವಿರುದ್ಧ ಮೂರು ಮತ್ತು ನಾಲ್ಕನೇ ಟೆಸ್​ಗಳು ಅಹಮದಾದಿನಲ್ಲಿ ನಡೆಯಲಿವೆ.

ಡಬ್ಲ್ಯುಟಿಸಿ ಫೈನಲ್​ಗೆ ನ್ಯೂಜಿಲೆಂಡ್ ಈಗಾಗಲೇ ಅರ್ಹತೆ ಗಳಿಸಿದ್ದು, ಈ ಪಂದ್ಯ ಲಾರ್ಡ್ಸ್​ನಲ್ಲಿ ಇದೇ ಜೂನ್ ತಿಂಗಳಲ್ಲಿ ನಡೆಯಲಿದೆ.

ಇದನ್ನೂ ಓದಿ: India vs England Test Series: ತಂಡಕ್ಕೆ ಮರಳಿದ ಉಮೇಶ ಯಾದವ್, ಶಾರ್ದುಲ್ ಠಾಕೂರ್​ಗೆ ಕೊಕ್

 

Published On - 7:03 pm, Mon, 22 February 21