India vs New Zealand, WTC Final 2021, Day 3: ಮೂರನೇ ದಿನದಾಟ ಮುಕ್ತಾಯ; ನಾಳೆಯ ಆಟದ ಮೇಲೆ ಹೆಚ್ಚಿದ ಕುತೂಹಲ!

| Updated By: ganapathi bhat

Updated on: Jun 20, 2021 | 11:12 PM

India vs New Zealand: ನಾಯಕ ಕೇನ್ ವಿಲಿಯಮ್​ಸನ್ ಹಾಗೂ ರಾಸ್ ಟಯ್ಲರ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತ, ನ್ಯೂಜಿಲ್ಯಾಂಡ್​ನ ಆರಂಭಿಕ ಆಟಗಾರರ ಎರಡೂ ವಿಕೆಟ್ ಪಡೆಯಲು ಶಕ್ತವಾಗಿದ್ದು, ನಾಳೆಯ ಆಟದಲ್ಲಿ ಬೌಲರ್​ಗಳು ಮತ್ತಷ್ಟು ಪ್ರಾಬಲ್ಯ ಸಾಧಿಸಬೇಕಿದೆ.

India vs New Zealand, WTC Final 2021, Day 3: ಮೂರನೇ ದಿನದಾಟ ಮುಕ್ತಾಯ; ನಾಳೆಯ ಆಟದ ಮೇಲೆ ಹೆಚ್ಚಿದ ಕುತೂಹಲ!
ನ್ಯೂಜಿಲ್ಯಾಂಡ್ ಬ್ಯಾಟಿಂಗ್

ಸೌಥಾಂಪ್ಟನ್: ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಮುಕ್ತಾಯವಾಗಿದೆ. ನ್ಯೂಜಿಲ್ಯಾಂಡ್ ತಂಡ 49 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 101 ರನ್ ದಾಖಲಿಸಿದೆ. ನಾಯಕ ಕೇನ್ ವಿಲಿಯಮ್​ಸನ್ ಹಾಗೂ ರಾಸ್ ಟಯ್ಲರ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತ, ನ್ಯೂಜಿಲ್ಯಾಂಡ್​ನ ಆರಂಭಿಕ ಆಟಗಾರರ ಎರಡೂ ವಿಕೆಟ್ ಪಡೆಯಲು ಶಕ್ತವಾಗಿದ್ದು, ನಾಳೆಯ ಆಟದಲ್ಲಿ ಬೌಲರ್​ಗಳು ಮತ್ತಷ್ಟು ಪ್ರಾಬಲ್ಯ ಸಾಧಿಸಬೇಕಿದೆ. ಭಾರತಕ್ಕೆ ನ್ಯೂಜಿಲ್ಯಾಂಡ್ ದಾಂಡಿಗರ ವಿಕೆಟ್ ಪಡೆದು ರನ್ ಕಟ್ಟಿಹಾಕುವುದು ಅವಶ್ಯವಾಗಿದೆ. ನ್ಯೂಜಿಲ್ಯಾಂಡ್ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಭಾರತ ಆಲೌಟ್ ಆಗಿತ್ತು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ, 92.1 ಓವರ್ ಆಟವಾಡಿ, 217 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಭಾರತದ ಪರ ನಾಯಕ ವಿರಾಟ್ ಕೊಹ್ಲಿ 44, ಉಪನಾಯಕ ಅಜಿಂಕ್ಯ ರಹಾನೆ 49, ರೋಹಿತ್ ಶರ್ಮಾ 34 ಹಾಗೂ ಶುಬ್​ಮನ್ ಗಿಲ್ 28 ರನ್ ದಾಖಲಿಸಿದ್ದರು. ನ್ಯೂಜಿಲ್ಯಾಂಡ್ ಪರವಾಗಿ ಕೈಲ್ ಜಾಮಿಸನ್ ಅದ್ಭುತ ದಾಳಿ ಸಂಘಟಿಸಿದ್ದರು. ಜಾಮಿಸನ್ ಮುಖ್ಯ 5 ವಿಕೆಟ್ ಕಬಳಿಸಿದ್ದರು.

ಭಾರತ- ನ್ಯೂಜಿಲ್ಯಾಂಡ್ ಪಂದ್ಯದ ಸಂಪೂರ್ಣ ಅಪ್ಡೇಟ್​ಗಳನ್ನು ಈ ಕೆಳಗೆ ಓದಿರಿ

LIVE NEWS & UPDATES

The liveblog has ended.
  • 20 Jun 2021 11:07 PM (IST)

    ಮೂರನೇ ದಿನದಾಟ ಮುಕ್ತಾಯ

    ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಮೂರನೇ ದಿನದಾಟ ಮುಕ್ತಾಯವಾಗಿದೆ. ನ್ಯೂಜಿಲ್ಯಾಂಡ್ ತಂಡ 49 ಓವರ್​ಗಳನ್ನು ಆಡಿ 101 ದಾಖಲಿಸಿದೆ. ತನ್ನ ಎರಡು ಮುಖ್ಯ ವಿಕೆಟ್​ಗಳನ್ನು ಕಳೆದುಕೊಂಡಿದೆ. ದಿನದ ಕೊನೆಯ ಓವರ್​​ನಲ್ಲಿ 2ನೇ ವಿಕೆಟ್ ಪಡೆದು ಭಾರತ ನಿಟ್ಟುಸಿರು ಬಿಟ್ಟಿದೆ. ಅರ್ಧಶತಕ ಬಾರಿಸಿ ಆಡುತ್ತಿದ್ದ ಕಾನ್ವೆ ಇಶಾಂತ್ ಶರ್ಮಾ ಬೌಲಿಂಗ್​ಗೆ ಶಮಿಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. ನಾಯಕ ವಿಲಿಯಮ್ಸನ್ ಹಾಗೂ ಟಯ್ಲರ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ನ್ಯೂಜಿಲ್ಯಾಂಡ್ ತಂಡ ಭಾರತಕ್ಕಿಂತ 116 ರನ್ ಹಿಂದಿದೆ.

  • 20 Jun 2021 10:47 PM (IST)

    ಮೂರನೇ ದಿನದಾಟದ ಕೆಲಕ್ಷಣಗಳು

    ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ಮೂರನೇ ದಿನದಾಟವಾದ ಇಂದು ಕಂಡ ಕೆಲವು ಕ್ಷಣಗಳನ್ನು ಹೀಗೆ ಸೆರೆಹಿಡಿಯಲಾಗಿದೆ. ಅದನ್ನು ಐಸಿಸಿ ಟ್ವಿಟರ್ ಖಾತೆ ಹಂಚಿಕೊಂಡಿದೆ. ನೋಡಿ.


  • 20 Jun 2021 10:41 PM (IST)

    ಶತಕ ಪೂರೈಸಿದ ನ್ಯೂಜಿಲ್ಯಾಂಡ್

    ನ್ಯೂಜಿಲ್ಯಾಂಡ್ ತಂಡ 100 ರನ್ ಗಡಿದಾಟಿದೆ. ಕಾನ್ವೆ ಅರ್ಧಶತಕದ ಬೆನ್ನಲ್ಲೇ ತಂಡದ ಮೊತ್ತ 101 ಆಗಿದೆ. 45 ಓವರ್​ಗಳು ಮುಕ್ತಾಯವಾಗಿದ್ದು 1 ವಿಕೆಟ್​ನ್ನು ಭಾರತ ಪಡೆದುಕೊಂಡಿದೆ. ಮೊದಲನೇ ಇನ್ನಿಂಗ್ಸ್​ನಲ್ಲಿ ನ್ಯೂಜಿಲ್ಯಾಂಡ್ ಭಾರತಕ್ಕಿಂತ 116 ರನ್ ಹಿಂದಿದೆ.

    ಮೊದಲ ವಿಕೆಟ್ ಪಡೆದ ಸಂಭ್ರಮದಲ್ಲಿ ಭಾರತ. ಆ ಬಳಿಕ ಮತ್ತೊಂದು ವಿಕೆಟ್​ನ ಅವಶ್ಯಕತೆ ಭಾರತಕ್ಕೆ ಇದೆ. ಆದರೆ, ಯಾವುದೇ ವಿಕೆಟ್ ಉರುಳಿಲ್ಲ.

  • 20 Jun 2021 10:35 PM (IST)

    ಕಾನ್ವೆ ಅರ್ಧಶತಕ

    ನ್ಯೂಜಿಲ್ಯಾಂಡ್ ಪರ ದಾಂಡಿಗ ಡೆವಾನ್ ಕಾನ್ವೆ ಅರ್ಧಶತಕ ಪೂರೈಸಿದ್ದಾರೆ. 137 ಬಾಲ್​ಗೆ 52 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. 44 ಓವರ್​ಗೆ ನ್ಯೂಜಿಲ್ಯಾಂಡ್ ಮೊತ್ತ 1 ವಿಕೆಟ್ ನಷ್ಟಕ್ಕೆ 99 ರನ್ ಆಗಿದೆ. ನಾಯಕ ಕೇನ್ ವಿಲಿಯಮ್ಸನ್ 12 ರನ್ ಗಳಿಸಿ ಆಡುತ್ತಿದ್ದಾರೆ. ಮೊದಲನೇ ವಿಕೆಟ್ ಪತನದ ಬಳಿಕ ಮತ್ತೆ ವಿಕೆಟ್ ಪಡೆಯುವ ಅನಿವಾರ್ಯತೆ ಭಾರತಕ್ಕಿದೆ.

  • 20 Jun 2021 09:52 PM (IST)

    ಮೊದಲ ವಿಕೆಟ್ ಪತನ

    ನ್ಯೂಜಿಲ್ಯಾಂಡ್ ತಂಡದ ಮೊದಲ ವಿಕೆಟ್ ಪತನವಾಗಿದೆ. ಆರಂಭಿಕರಾಗಿ ಕಣಕ್ಕಿಳಿದ ಟಾಮ್ ಲತಮ್ 104 ಬಾಲ್​ಗೆ 30 ರನ್ ಗಳಿಸಿ ಔಟ್ ಆಗಿದ್ದಾರೆ. ರವಿಚಂದ್ರನ್ ಅಶ್ವಿನ್ ಬಾಲ್​ಗೆ ಕೊಹ್ಲಿ ಕ್ಯಾಚ್ ಪಡೆದಿದ್ದಾರೆ. ನ್ಯೂಜಿಲ್ಯಾಂಡ್ ಒಂದು ವಿಕೆಟ್ ಬಿದ್ದಿರುವುದು ಭಾರತದ ಪಾಲಿಗೆ ಇನ್ನಷ್ಟು ವಿಕೆಟ್ ಉರುಳಿಸುವ ಆಶಯ ಉಳಿಸಿಕೊಂಡಿದೆ. ನ್ಯೂಜಿಲ್ಯಾಂಡ್ ಪರ ನಾಯಕ ಕೇನ್ ವಿಲಿಯಮ್ಸನ್ ಕ್ರೀಸ್​ಗೆ ಇಳಿದಿದ್ದಾರೆ. ತಂಡದ ಮೊತ್ತ 35 ಓವರ್​ಗೆ 1 ವಿಕೆಟ್ ಕಳೆದುಕೊಂಡು 71 ರನ್ ಆಗಿದೆ.

  • 20 Jun 2021 09:42 PM (IST)

    ನ್ಯೂಜಿಲ್ಯಾಂಡ್ 69-0 (33 ಓವರ್)

    33 ಓವರ್​ಗಳ ಬಳಿಕ ನ್ಯೂಜಿಲ್ಯಾಂಡ್ ತಂಡದ ಮೊತ್ತ ವಿಕೆಟ್ ನಷ್ಟವಿಲ್ಲದೆ 69 ರನ್ ಆಗಿದೆ. ಆರಂಭಿಕರಾದ ಲತಮ್ ಹಾಗೂ ಕಾನ್ವೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಟಾಮ್ ಲತಮ್ 30 ಮತ್ತು ಡೆವಾನ್ ಕಾನ್ವೆ 38 ರನ್ ಗಳಿಸಿದ್ದಾರೆ.

  • 20 Jun 2021 09:26 PM (IST)

    50 ರನ್ ಪೂರೈಸಿದ ನ್ಯೂಜಿಲ್ಯಾಂಡ್

    ಟಾಸ್ ಗೆದ್ದು ಬೌಲಿಂಗ್ ಮಾಡಿದ ನ್ಯೂಜಿಲ್ಯಾಂಡ್ ತಂಡ ಭಾರತವನ್ನು 217 ರನ್​ಗಳಿಗೆ ಕಟ್ಟಿಹಾಕಿತು. ಇದೀಗ, ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ನ್ಯೂಜಿಲ್ಯಾಂಡ್ 50 ರನ್ ಪೂರೈಸಿ ಮುಂದೆ ಸಾಗುತ್ತಿದೆ. ಇಲ್ಲಿಯವರೆಗೂ ಯಾವುದೇ ವಿಕೆಟ್ ಬೀಳದಿರುವುದು ಭಾರತದ ಬೌಲರ್​ಗಳ ಒತ್ತಡ ಹೆಚ್ಚು ಮಾಡಿದೆ. ನ್ಯೂಜಿಲ್ಯಾಂಡ್ ತಂಡ 29 ಓವರ್​ಗಳ ಬಳಿಕ ವಿಕೆಟ್ ನಷ್ಟವಿಲ್ಲದೆ 57 ರನ್ ಕಲೆಹಾಕಿದೆ. ಆರಂಭಿಕ ದಾಂಡಿಗರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

  • 20 Jun 2021 09:13 PM (IST)

    ಕೊನೆಗೂ 1 ರನ್ ದಾಖಲು

    ಕಳೆದ ನಾಲ್ಕು ಓವರ್​ಗಳಿಂದ ಕೇವಲ 1 ರನ್ ದಾಖಲಾಗಿದೆ. 23, 24 ಹಾಗೂ 25ನೇ ಓವರ್​ನಲ್ಲಿ ಯಾವುದೇ ರನ್ ಬಂದಿರಲಿಲ್ಲ. ಅಶ್ವಿನ ಹಾಗೂ ಇಶಾಂತ್ ಶರ್ಮಾ ಬೌಲಿಂಗ್ ಮಾಡಿದ ಕೊನೆಯ ಮೂರು ಓವರ್​ಗಳು ಮೇಡನ್ ಆಗಿದ್ದವು. ಇದೀಗ ಇಶಾಂತ್ ಶರ್ಮಾ ಬೌಲಿಂಗ್​ನ 26ನೇ ಓವರ್​ನಲ್ಲಿ 1 ರನ್ ದಾಖಲಾಗಿದೆ. ಈ ಮೂಲಕ ನ್ಯೂಜಿಲ್ಯಾಂಡ್ ತಂಡ 26 ಓವರ್​ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 44 ರನ್ ದಾಖಲಿಸಿದೆ. ಕಾನ್ವೆ ಹಾಗೂ ಲತಮ್ ಆಡುತ್ತಿದ್ದಾರೆ.

  • 20 Jun 2021 08:55 PM (IST)

    ಮೂರನೇ ಸೆಷನ್ ಆರಂಭ

    ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಮೂರನೇ ದಿನದ, ಮೂರನೇ ಸೆಷನ್ ಆರಂಭವಾಗಿದೆ. ನ್ಯೂಜಿಲ್ಯಾಂಡ್ ತಂಡ 22 ಓವರ್​ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 43 ರನ್ ಕಲೆಹಾಕಿದೆ. ಡೆವಾನ್ ಕಾನ್ವೆ ಹಾಗೂ ಟಾಮ್ ಲತಮ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತದ ಪರವಾಗಿ ಇದುವರೆಗೆ ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮದ್ ಶಮಿ ಹಾಗೂ ರವಿಚಂದ್ರನ್ ಅಶ್ವಿನ್ ಬೌಲಿಂಗ್ ಮಾಡಿದ್ದಾರೆ.

  • 20 Jun 2021 08:33 PM (IST)

    ಚಹಾ ವಿರಾಮ

    ಚಹಾ ವಿರಾಮದ ವೇಳೆ ನ್ಯೂಜಿಲ್ಯಾಂಡ್ ತಂಡ 21 ಓವರ್​ಗಳನ್ನು ಆಡಿ 36 ರನ್ ದಾಖಲಿಸಿದೆ. ಯಾವುದೇ ವಿಕೆಟ್ ಕಳೆದುಕೊಂಡಿಲ್ಲ. 1.71 ರನ್ ಸರಾಸರಿಯಲ್ಲಿ ನ್ಯೂಜಿಲ್ಯಾಂಡ್ ಬ್ಯಾಟಿಂಗ್ ಮಾಡುತ್ತಿದ್ದು, ಭಾರತ ವಿಕೆಟ್ ಪಡೆಯುವ ತವಕದಲ್ಲಿದೆ. ಮೊದಲನೇ ಇನ್ನಿಂಗ್ಸ್​ನಲ್ಲಿ ನ್ಯೂಜಿಲ್ಯಾಂಡ್ ತಂಡ ಭಾರತಕ್ಕಿಂತ 181 ರನ್ ಹಿಂದಿದೆ. ಇನ್ನೂ ಸುಮಾರು ಮೂರು ಗಂಟೆಗಳ ಆಟ ಉಳಿದಿದ್ದು, ನ್ಯೂಜಿಲ್ಯಾಂಡ್ ಮಣಿಸಲು ಭಾರತ ಕೆಲವಷ್ಟು ಪ್ರಮುಖ ವಿಕೆಟ್​ಗಳನ್ನಾದರೂ ಇಂದೇ ಉರುಳಿಸಬೇಕಿದೆ.

  • 20 Jun 2021 08:14 PM (IST)

    ನ್ಯೂಜಿಲ್ಯಾಂಡ್ 24-0 (16 ಓವರ್)

    16ನೇ ಓವರ್ ಅಂತ್ಯಕ್ಕೆ ನ್ಯೂಜಿಲ್ಯಾಂಡ್ ತಂಡ ಒಂದೂ ವಿಕೆಟ್ ಕಳೆದುಕೊಳ್ಳದೆ 24 ರನ್ ದಾಖಲಿಸಿದೆ. 1.54 ಸರಾಸರಿಯಲ್ಲಿ ನಿಧಾನಗತಿಯ ಆಟವನ್ನು ನ್ಯೂಜಿಲ್ಯಾಂಡ್ ನೆಚ್ಚಿಕೊಂಡಿದೆ. ಮಳೆಯ ಕಾರಣದಿಂದಲೂ ಪಿಚ್ ವರ್ತನೆ ಗಮನಿಸಿ, ಜಾಗ್ರತೆಯ ಆಟಕ್ಕೆ ನ್ಯೂಜಿಲ್ಯಾಂಡ್ ಆರಂಭಿಕ ಬ್ಯಾಟ್ಸ್​ಮನ್​ಗಳು ಮುಂದಾಗಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ ಭಾರತಕ್ಕಿಂತ 193 ರನ್ ಹಿಂದಿದ್ದಾರೆ.

  • 20 Jun 2021 07:55 PM (IST)

    ಆಟ ಮತ್ತೆ ಆರಂಭ; ನ್ಯೂಜಿಲ್ಯಾಂಡ್ 20-0

    ಮಳೆಯಿಂದಾಗಿ ಸ್ವಲ್ಪವೇ ಹೊತ್ತು ಸ್ಥಗಿತಗೊಂಡಿದ್ದ ಪಂದ್ಯ ಮತ್ತೆ ಆರಂಭವಾಗಿದೆ. ನ್ಯೂಜಿಲ್ಯಾಂಡ್ ತಂಡ ವಿಕೆಟ್ ಕಳೆದುಕೊಳ್ಳದೇ 13 ಓವರ್​ಗೆ ವಿಕೆಟ್ ನಷ್ಟವಿಲ್ಲದೆ 20 ರನ್ ಕಲೆಹಾಕಿದೆ.

  • 20 Jun 2021 07:44 PM (IST)

    ಮೂರನೇ ದಿನವೂ ಮಳೆ ಅಡ್ಡಿ

    ಮೂರನೇ ದಿನವೂ ಪಂದ್ಯಕ್ಕೆ ಹವಾಮಾನ ಅಡ್ಡಿಪಡಿಸಿದೆ. ಮಳೆಯಿಂದಾಗಿ ಪಂದ್ಯ ಸ್ಥಗಿತಗೊಳ್ಳುವಂತಾಗಿದೆ. ಭಾರತೀಯ ಬೌಲರ್​ಗಳು ವಿಕೆಟ್ ಪಡೆಯುವ ಒತ್ತಡದಲ್ಲಿ ಇದ್ದಾರೆ. ನ್ಯೂಜಿಲ್ಯಾಂಡ್ ಆಟಗಾರರು ಸಮಾಧಾನದಿಂದಲೇ ಕ್ರೀಸ್ ಬಿಟ್ಟು ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದ್ದಾರೆ. ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿದೆ. ನ್ಯೂಜಿಲ್ಯಾಂಡ್ ತಂಡ 10.4 ಓವರ್​ಗೆ ವಿಕೆಟ್ ಕಳೆದುಕೊಳ್ಳದೇ 19 ರನ್ ದಾಖಲಿಸಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಭಾರತದ ಮೊತ್ತಕ್ಕಿಂತ 198 ರನ್ ಹಿಂದಿದೆ.

  • 20 Jun 2021 07:40 PM (IST)

    ನ್ಯೂಜಿಲ್ಯಾಂಡ್ 19-0 (10 ಓವರ್)

    ನ್ಯೂಜಿಲ್ಯಾಂಡ್ ತಂಡ 10 ಓವರ್​ಗೆ ವಿಕೆಟ್ ನಷ್ಟವಿಲ್ಲದೆ 19 ರನ್ ಗಳಿಸಿದ್ದಾರೆ. ಲತಮ್ 36 ಬಾಲ್ ಆಟವಾಡಿ 11 ರನ್ ಗಳಿಸಿದ್ದಾರೆ. ಕಾನ್ವೆ 25 ಬಾಲ್​ಗೆ 8 ರನ್ ಗಳಿಸಿದ್ದಾರೆ. ಇಶಾಂತ್ ಶರ್ಮಾ 5, ಜಸ್ಪ್ರೀತ್ ಬುಮ್ರಾ 4 ಹಾಗೂ ಮೊಹಮದ್ ಶಮಿ 1 ಓವರ್ ಬೌಲಿಂಗ್ ಮಾಡಿದ್ದಾರೆ.

  • 20 Jun 2021 07:25 PM (IST)

    ನ್ಯೂಜಿಲ್ಯಾಂಡ್ 12-0 (7 ಓವರ್)

    ಮೊದಲನೇ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲ್ಯಾಂಡ್ ತಂಡ 7 ಓವರ್​ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 12 ರನ್ ದಾಖಲಿಸಿದೆ. ಕಾನ್ವೆ 4 ರನ್ ಹಾಗೂ ಲತಮ್ 8 ರನ್ ಪೇರಿಸಿ ಕ್ರೀಸ್​ನಲ್ಲಿದ್ದಾರೆ. ಜಸ್ಪ್ರೀತ್ ಬುಮ್ರಾ ಹಾಗೂ ಇಶಾಂತ್ ಶರ್ಮಾ ಬೌಲಿಂಗ್ ಮಾಡುತ್ತಿದ್ದಾರೆ. ನ್ಯೂಜಿಲ್ಯಾಂಡ್ ವಿಕೆಟ್ ಪಡೆಯುವ ಒತ್ತಡ ಭಾರತೀಯ ಬೌಲರ್​ಗಳಿಗೆ ಇದೆ.

  • 20 Jun 2021 07:05 PM (IST)

    ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲ್ಯಾಂಡ್

    ನ್ಯೂಜಿಲ್ಯಾಂಡ್ ತಂಡ ಬ್ಯಾಟಿಂಗ್ ಆರಂಭಿಸಿದೆ. ಟಾಮ್ ಲತಮ್ ಹಾಗೂ ಡೆವಾನ್ ಕಾನ್ವೇ ಆರಂಭಿಕರಾಗಿ ಕ್ರೀಸ್​ಗೆ ಇಳಿದಿದ್ದಾರೆ. ಇಶಾಂತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡುತ್ತಿದ್ದಾರೆ. 3ನೇ ಓವರ್ ಅಂತ್ಯಕ್ಕೆ ನ್ಯೂಜಿಲ್ಯಾಂಡ್ ತಂಡದ ಮೊತ್ತ ವಿಕೆಟ್ ನಷ್ಟವಿಲ್ಲದೆ 3 ರನ್ ಆಗಿದೆ. ಮೊದಲ ಇನ್ನಿಂಗ್ಸ್​ನಲ್ಲಿ ನ್ಯೂಜಿಲ್ಯಾಂಡ್ ಭಾರತಕ್ಕಿಂತ 214 ರನ್ ಹಿಂದಿದೆ.

  • 20 Jun 2021 06:42 PM (IST)

    ಭಾರತ 217 ರನ್​ಗೆ ಆಲೌಟ್

    ನ್ಯೂಜಿಲ್ಯಾಂಡ್ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಭಾರತ ಆಲೌಟ್ ಆಗಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ, 92.1 ಓವರ್ ಆಟವಾಡಿ, 217 ರನ್ ಗಳಿಸಲಷ್ಟೇ ಶಕ್ತವಾಗಿದೆ. ಭಾರತದ ಪರ ನಾಯಕ ವಿರಾಟ್ ಕೊಹ್ಲಿ 44, ಉಪನಾಯಕ ಅಜಿಂಕ್ಯ ರಹಾನೆ 49, ರೋಹಿತ್ ಶರ್ಮಾ 34 ಹಾಗೂ ಶುಬ್​ಮನ್ ಗಿಲ್ 28 ರನ್ ದಾಖಲಿಸಿದ್ದಾರೆ. ನ್ಯೂಜಿಲ್ಯಾಂಡ್ ಪರವಾಗಿ ಕೈಲ್ ಜಾಮಿಸನ್ ಅದ್ಭುತ ದಾಳಿ ಸಂಘಟಿಸಿದ್ದಾರೆ. ಜಾಮಿಸನ್ ಮುಖ್ಯ 5 ವಿಕೆಟ್ ಕಬಳಿಸಿದ್ದಾರೆ. ನ್ಯೂಜಿಲ್ಯಾಂಡ್ ಇನ್ನಷ್ಟೇ ಬ್ಯಾಟಿಂಗ್ ಆರಂಭಿಸಬೇಕಿದೆ.

  • 20 Jun 2021 06:35 PM (IST)

    ಬೌಂಡರಿ ಹೊಡೆದು ಹ್ಯಾಟ್ರಿಕ್ ತಪ್ಪಿಸಿದ ಶಮಿ

    ಕೈಲ್ ಜಾಮಿಸನ್ ಬೌಲಿಂಗ್​ನ ಕೊನೆಯ ಓವರ್​ನಲ್ಲಿ ಭಾರತ ಬೆನ್ನುಬೆನ್ನಿಗೆ ಎರಡು ವಿಕೆಟ್ ಕಳೆದುಕೊಂಡಿತು. ಇಶಾಂತ್ ಶರ್ಮಾ ಹಾಗೂ ಬುಮ್ರಾ, ಜಾಮಿಸನ್​ ಓವರ್​ನ 4 ಹಾಗೂ 5ನೇ ಬಾಲ್​ಗೆ ಔಟ್ ಆದರು. ಆ ಮೂಲಕ, ಜಾಮಿಸನ್​ಗೆ ಹ್ಯಾಟ್ರಿಕ್ ಪಡೆಯುವ ಅವಕಾಶ ನೀಡಿದ್ದರು. ಆದರೆ, ಮೊಹಮ್ಮದ್ ಶಮಿ ಹ್ಯಾಟ್ರಿಕ್ ಬಾಲ್​ಗೆ ಬೌಂಡರಿ ಬಾರಿಸಿ ಮುಜುಗರ ತಪ್ಪಿಸಿದರು.

    ಜಾಮಿಸನ್ ಬೌಲಿಂಗ್ ಕಮಾಲ್

  • 20 Jun 2021 06:31 PM (IST)

    ಎರಡನೇ ಸೆಷನ್ ಆರಂಭ; ಭಾರತ ತತ್ತರ!

    ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ನ ಎರಡನೇ ದಿನವಾದ ಇಂದು, ಭಾರತ ತನ್ನ ವಿಕೆಟ್​ಗಳನ್ನು ಬೇಗನೇ ಕಳೆದುಕೊಳ್ಳುತ್ತಿದೆ. ಜಾಮಿಸನ್ ಕೊನೆಯ ಓವರ್​​ನಲ್ಲಿ ಮತ್ತೆ ಎರಡು ವಿಕೆಟ್ ಉರುಳಿಸಿದ್ದಾರೆ. ಇಶಾಂತ್ ಶರ್ಮಾ 4 ರನ್ ಗಳಿಸಿ ಟೆಯ್ಲರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ನಂತರ ಬಂದ ಬುಮ್ರಾ ಸೊನ್ನೆ ಸುತ್ತಿದ್ದಾರೆ. ಭಾರತ ತಂಡದ ಮೊತ್ತ 92 ಓವರ್​ಗೆ 217-9 ಆಗಿದೆ.

  • 20 Jun 2021 05:49 PM (IST)

    ಊಟದ ವಿರಾಮದ ವೇಳೆ ಭಾರತ 211-7 (89 ಓವರ್)

    ಮೂರನೇ ದಿನದಾಟದ ಊಟದ ವಿರಾಮದ ವೇಳೆಗೆ ಭಾರತ ತಂಡದ ಮೊತ್ತ 89 ಓವರ್​ಗಳ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 211 ರನ್ ಆಗಿದೆ. ಬ್ಯಾಟ್ಸ್​ಮನ್​ಗಳ ಬೇಗನೇ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದಾರೆ. ಇದೀಗ ಬೌಲರ್​ಗಳು ಕಣದಲ್ಲಿದ್ದಾರೆ. 300 ರನ್​ಗಳಾದರೂ ದಾಟಬೇಕು ಎಂಬುದು ಭಾರತದ ಕ್ರಿಕೆಟ್ ಅಭಿಮಾನಿಗಳ ಆಶಯವಾಗಿತ್ತು. ಇಂದಿನ ದಿನದ ಮುಂದಿನ ಆಟ ಹೇಗೆ ಸಾಗುತ್ತದೆ ಎಂದು ಕಾದುನೋಡಬೇಕಿದೆ.

    ಭಾರತ 200 ರನ್ ಗಡಿದಾಟಿದ ಸಂಭ್ರಮ

  • 20 Jun 2021 05:35 PM (IST)

    ಅಶ್ವಿನ್ ಔಟ್

    ಬಲಾಢ್ಯ ಬ್ಯಾಟ್ಸ್​ಮನ್​ಗಳ ವಿಕೆಟ್ ಪತನದ ಬಳಿಕ ಉತ್ತಮ ಆಟ ಆಡುತ್ತಿದ್ದ ಸ್ಪಿನ್ನರ್ ಜೋಡಿಯೂ ಬೇರ್ಪಟ್ಟಿದೆ. ರವೀಂದ್ರ ಜಡೇಜಾ ಜೊತೆಯಾಗಿದ್ದ ಅಶ್ವಿನ್ ವಿಕೆಟ್ ಒಪ್ಪಿಸಿದ್ದಾರೆ. 27 ಬಾಲ್​ಗೆ 22 ರನ್ ಗಳಿಸಿ ಟಿಮ್ ಸೌಥಿ ಬೌಲಿಂಗ್​ಗೆ ಲತಮ್​​ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ.

  • 20 Jun 2021 05:28 PM (IST)

    200 ರನ್ ಗಡಿ ದಾಟಿದ ಭಾರತದ ಸ್ಕೋರ್

    ಮುಖ್ಯ ದಾಂಡಿಗರ ವಿಕೆಟ್ ಪತನದ ಬಳಿಕವೂ ಭಾರತ ಸ್ಪಿನ್ನರ್​ಗಳ ಆಟದ ನೆರವಿನಿಂದ 200 ರನ್ ಗಡಿ ದಾಟಿದೆ. ಭಾರತ ತಂಡದ ಮೊತ್ತ 86 ಓವರ್​ಗಳ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 205 ರನ್​ ಆಗಿದೆ. ಆದರೆ, ಈ ಸಂಭ್ರಮದ ನಡುವೆ ರವಿಚಂದ್ರನ್ ಅಶ್ವಿನ್ ಔಟ್ ಆಗಿದ್ದಾರೆ. ಇದೀಗ ರವೀಂದ್ರ ಜಡೇಜಾ ಜೊತೆಗೆ ಇಶಾಂತ್ ಶರ್ಮಾ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 20 Jun 2021 05:01 PM (IST)

    ಭಾರತ 182-6 (82 ಓವರ್)

    ಭಾರತ ತಂಡ 82 ಓವರ್​ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 182 ರನ್ ದಾಖಲಿಸಿದೆ. ತಂಡದ ಪರವಾಗಿ ಇಬ್ಬರು ಸ್ಪಿ್ನರ್​ಗಳು ಬ್ಯಾಟಿಂಗ್ ಮಾಡುತ್ತಿದ್ದಾರೆ. ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಕ್ರೀಸ್​ನಲ್ಲಿದ್ದಾರೆ.

    ಅಜಿಂಕ್ಯ ರಹಾನೆ ಕೂಡ ಔಟ್ ಆಗಿರುವುದು ಭಾರತದ ಬ್ಯಾಟಿಂಗ್​ಗೆ ಆಘಾತ ನೀಡಿದೆ..

  • 20 Jun 2021 04:53 PM (IST)

    49 ರನ್ ಗಳಿಸಿ ರಹಾನೆ ಔಟ್

    ವಿರಾಟ್ ಕೊಹ್ಲಿ ಜೊತೆ ಉತ್ತಮ ಆಟ ಆಡುತ್ತಿದ್ದ ಅಜಿಂಕ್ಯ ರಹಾನೆ ಕೂಡ ಅರ್ಧಶತಕ ವಂಚಿತರಾಗಿ ಮರಳಿದ್ದಾರೆ. ವಿರಾಟ್ ಕೊಹ್ಲಿ ಬೆನ್ನಲ್ಲೇ ರಹಾನೆ ಕೂಡ ನಿರ್ಗಮಿಸಿದ್ದಾರೆ. ರಹಾನೆ, 117 ಬಾಲ್​ಗೆ 49 ರನ್ ಗಳಿಸಿ ವಾಗ್ನರ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಇದೀಗ ರವೀಂದ್ರ ಜಡೇಜಾ ಜೊತೆ ರವಿಚಂದ್ರನ್ ಅಶ್ವಿನ್ ಕ್ರೀಸ್​ನಲ್ಲಿದ್ದಾರೆ. ಇಬ್ಬರು ಸ್ಪಿನ್ನರ್​ಗಳ ಆಟ ತಂಡಕ್ಕೆ ಎಷ್ಟು ಸಹಕಾರಿ ಆಗಿರುತ್ತದೆ ಎಂದು ಕಾದುನೋಡಬೇಕಿದೆ. ಮೂರನೇ ದಿನದಾಟದ ಆರಂಭ ಮಾತ್ರ ಭಾರತಕ್ಕೆ ಆಶಾದಾಯಕವಾಗಿ ಕಂಡುಬರುತ್ತಿಲ್ಲ.

  • 20 Jun 2021 04:31 PM (IST)

    ಭಾರತ 166-5 (76 ಓವರ್)

    ಭಾರತ ತಂಡ 76 ಓವರ್​ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 166 ರನ್ ದಾಖಲಿಸಿದೆ. ಅಜಿಂಕ್ಯಾ ರಹಾನೆ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡುತ್ತಿದ್ದಾರೆ. ರಹಾನೆ 39 ರನ್ ಪೇರಿಸಿದ್ದಾರೆ. ಜಡೇಜಾ 1 ಬೌಂಡರಿ ಸಹಿತ 6 ರನ್ ಕಲೆಹಾಕಿದ್ದಾರೆ. ಮೂರನೇ ದಿನದಾಟದಲ್ಲಿ ಕೈಲ್ ಜಾಮಿಸನ್ ಭಾರತದ ಎರಡು ವಿಕೆಟ್ ಕಸಿದು ನ್ಯೂಜಿಲ್ಯಾಂಡ್ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ್ದಾರೆ.

  • 20 Jun 2021 04:20 PM (IST)

    ರಿಷಭ್ ಪಂತ್ ಔಟ್

    ಭಾರತದ 5ನೇ ವಿಕೆಟ್ ಪತನವಾಗಿದೆ. ಕೈಲ್ ಜಾಮಿಸನ್ ಬೌಲಿಂಗ್ ದಾಳಿಗೆ ಭಾರತ ತನ್ನ ಮುಖ್ಯ ವಿಕೆಟ್​ಗಳನ್ನು ಕಳೆದುಕೊಳ್ಳುತ್ತಿದೆ. ವಿರಾಟ್ ಕೊಹ್ಲಿ ಬಳಿಕ ಇದೀಗ ರಿಷಭ್ ಪಂತ್ ಔಟ್ ಆಗಿದ್ದಾರೆ. 22 ಬಾಲ್​ಗೆ 4 ರನ್ ಗಳಿಸಿದ್ದ ಪಂತ್ ನಿರ್ಗಮಿಸಿದ್ದಾರೆ. ಇದೀಗ ಅಇಂಕ್ಯ ರಹಾನೆ ಜೊತೆಗೆ ರವೀಂದ್ರ ಜಡೇಜಾ ಕ್ರೀಸ್​ಗೆ ಇಳಿದಿದ್ದಾರೆ. ಭಾರತ ತಂಡದ ಮೊತ್ತ 74 ಓವರ್​ಗೆ 5 ವಿಕೆಟ್ ಕಳೆದುಕೊಂಡು 156 ರನ್ ದಾಖಲಿಸಿದೆ.

  • 20 Jun 2021 04:07 PM (IST)

    ಭಾರತ 150-4 (71 ಓವರ್)

    ಭಾರತ ತಂಡ 71 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 150 ರನ್ ದಾಖಲಿಸಿದೆ. ಉಪನಾಯಕ ಅಜಿಂಕ್ಯ ರಹಾನೆ ಹಾಗೂ ರಿಷಭ್ ಪಂತ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ರಹಾನೆ 32 ರನ್ ಗಳಿಸಿ ಆಡುತ್ತಿದ್ದಾರೆ. ರಿಷಭ್ ಪಂತ್ 13 ಬಾಲ್​ಗೆ ಖಾತೆ ತೆರೆಯದೇ ಆಡುತ್ತಿದ್ದಾರೆ. ಕೈಲ್ ಜಾಮಿಸನ್ 2 ವಿಕೆಟ್ ಪಡೆದು ಬೌಲಿಂಗ್ ಮಾಡುತ್ತಿದ್ದಾರೆ.

    ಕೊಹ್ಲಿ ವಿಕೆಟ್ ಕಿತ್ತ ಕೈಲ್ ಜಾಮಿಸನ್

  • 20 Jun 2021 03:49 PM (IST)

    ವಿರಾಟ್ ಕೊಹ್ಲಿ ಔಟ್

    ಭಾರತದ ಪರವಾಗಿ ಉತ್ತಮ ಆಟವಾಡುತ್ತಿದ್ದ ನಾಯಕ ವಿರಾಟ್ ಕೊಹ್ಲಿ ಅರ್ಧಶತಕದ ಅಂಚಿನಲ್ಲಿ ಔಟ್ ಆಗಿದ್ದಾರೆ. ಅಜಿಂಕ್ಯ ರಹಾನೆ ಜೊತೆಯಾಗಿ ಇನ್ನಿಂಗ್ಸ್ ಕಟ್ಟುವ ಭರವಸೆ ನೀಡಿದ್ದ ಕೊಹ್ಲಿ ಮೂರನೇ ದಿನದಾಟದ ಆರಂಭದಲ್ಲೇ ನಿರ್ಗಮಿಸಿದ್ದಾರೆ. 132 ಬಾಲ್​ಗೆ 44 ರನ್ ಗಳಿಸಿ ಕೈಲ್ ಜಾಮಿಸನ್ ಎಲ್​ಬಿಡಬ್ಲ್ಯು ಬಲೆಗೆ ಬಿದ್ದಿದ್ದಾರೆ. ಇದೀಗ, ಉಪನಾಯಕ ಅಜಿಂಕ್ಯ ರಹಾನೆ ಜೊತೆಗೆ ರಿಷಭ್ ಪಂತ್ ಕಣಕ್ಕಿಳಿದಿದ್ದಾರೆ.

  • 20 Jun 2021 03:39 PM (IST)

    ಮೊದಲ ಸೆಷನ್ ಆರಂಭ

    ಭಾರತ- ನ್ಯೂಜಿಲ್ಯಾಂಡ್ ನಡುವಿನ ಐಸಿಸಿ ಡಬ್ಲ್ಯುಟಿಸಿ ಫೈನಲ್ ಪಂದ್ಯದ, ಮೂರನೇ ದಿನದ ಮೊದಲ ಸೆಷನ್ ಆರಂಭವಾಗಿದೆ. ಭಾರತ ತಂಡ 66 ಓವರ್​ಗೆ 3 ವಿಕೆಟ್ ಕಳೆದುಕೊಂಡು 147 ರನ್ ದಾಖಲಿಸಿದೆ. ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಕೈಲ್ ಜಾಮಿಸನ್ ಮತ್ತು ಟ್ರೆಂಟ್ ಬೋಲ್ಟ್ ಬೌಲಿಂಗ್ ದಾಳಿ ಆರಂಭಿಸಿದ್ದಾರೆ.

    ಪಂದ್ಯಕ್ಕೂ ಮುನ್ನ ಸೌಥಾಂಪ್ಟನ್ ಮೈದಾನ ಕಂಡುಬಂದಿದ್ದು ಹೀಗೆ:

  • 20 Jun 2021 03:30 PM (IST)

    2ನೇ ದಿನದಾಟ ಹೇಗಿತ್ತು?

    ಭಾರತ ನ್ಯೂಜಿಲ್ಯಾಂಡ್ ನಡುವಿನ ಎರಡನೇ ದಿನದಾಟ ಹೇಗಿತ್ತು? ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯಾ ರಹಾನೆ ಜೊತೆಯಾಟ, ರೋಹಿತ್ ಶರ್ಮಾ ಮತ್ತು ಶುಬ್​ಮನ್ ಗಿಲ್ ಆರಂಭಿಕ ಆಟ, ನ್ಯೂಜಿಲ್ಯಾಂಡ್ ಬೌಲಿಂಗ್.. ಪಂದ್ಯದ ಹೈಲೈಟ್ಸ್​ನ್ನು ನೀವು ಇಲ್ಲಿ ನೋಡಬಹುದು.

  • 20 Jun 2021 03:19 PM (IST)

    ಪಂದ್ಯ ಆರಂಭ ವಿಳಂಬ

    ಬೆಳಗ್ಗೆ ಸುರಿದ ಮಳೆಯ ಕಾರಣದಿಂದ ಮೈದಾನ ಪಂದ್ಯ ಆಡಲು ಸೂಕ್ತವಾಗಿ ತಯಾರಾಗಿಲ್ಲ. ಈ ಬಗ್ಗೆ 10.20ಕ್ಕೆ (ಸ್ಥಳೀಯ ಕಾಲಮಾನ) 2.50 (ಭಾರತೀಯ ಕಾಲಮಾನ) ಪರಿಶೀಲನೆ ನಡೆಸಲಾಗಿದೆ. ಅದರಂತೆ ಪಂದ್ಯ ಭಾರತೀಯ ಕಾಲಮಾನ 3 ಗಂಟೆಗೆ ಆರಂಭವಾಗಲಿದೆ.

     

  • 20 Jun 2021 03:10 PM (IST)

    ನ್ಯೂಜಿಲ್ಯಾಂಡ್ ಬೌಲಿಂಗ್ ಅಂಕಿಅಂಶ

    ಭಾರತದ ವಿರುದ್ಧ ಬೌಲಿಂಗ್​ಗೆ ಇಳಿದ ನ್ಯೂಜಿಲ್ಯಾಂಡ್ ಬೌಲರ್​ಗಳು 3 ವಿಕೆಟ್ ಕಬಳಿಸಿದರು. ಕೈಲ್ ಜಾಮಿಸನ್, ನೀಲ್ ವಾಗ್ನರ್ ಹಾಗೂ ಟ್ರೆಂಟ್ ಬೋಲ್ಟ್ ತಲಾ 1 ವಿಕೆಟ್ ಕಬಳಿಸಿದರು. ಟಿಮ್ ಸೌಥಿ ಅತಿಹೆಚ್ಚು ಅಂದರೆ 17 ಓವರ್ ಬೌಲಿಂಗ್ ಮಾಡಿದರು.

  • 20 Jun 2021 03:02 PM (IST)

    ಎರಡನೇ ದಿನದಾಟದ ಅಂತ್ಯದ ಸ್ಕೋರ್ ಹೀಗಿದೆ

    ನಿನ್ನೆ (ಜೂನ್ 19) ದಿನದಾಟ ಅಂತ್ಯವಾಗುವ ವೇಳೆಗೆ ಭಾರತದ ಸ್ಕೋರ್ 64.4 ಓವರ್​ಗೆ 3 ವಿಕೆಟ್ ಕಳೆದುಕೊಂಡು 146 ರನ್ ಆಗಿತ್ತು. ಆರಂಭಿಕರಾದ ರೋಹಿತ್ ಶರ್ಮಾ 34 (68), ಶುಬ್​ಮನ್ ಗಿಲ್ 28 (64), ನಂತರ ಆಡಿದ ಚೇತೇಶ್ವರ ಪೂಜಾರ 8 (54) ರನ್ ಗಳಿಸಿ ಔಟ್ ಆಗಿದ್ದರು. ಬಳಿಕ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ಉತ್ತಮ ಜೊತೆಯಾಟ ನೀಡಿದ್ದರು. ಕೊಹ್ಲಿ 124 ಬಾಲ್​ಗೆ 44 ರನ್ ಗಳಿಸಿ ಕಣದಲ್ಲಿದ್ದಾರೆ. ರಹಾನೆ 79 ಬಾಲ್ 29 ರನ್ ಗಳಿಸಿ ವಿಕೆಟ್ ಉಳಿಸಿಕೊಂಡಿದ್ದಾರೆ.

  • 20 Jun 2021 02:58 PM (IST)

    ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿಸುದ್ದಿ

    ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ಸಂಪೂರ್ಣ ಲೈವ್ ಮಾಹಿತಿಗಳು ಇಲ್ಲಿ ನಿಮಗೆ ಲಭ್ಯವಿರುತ್ತದೆ. ಪಂದ್ಯದ ಕುತೂಹಲವನ್ನು ಅಕ್ಷರಗಳಲ್ಲಿ ನೀವು ಆಸ್ವಾದಿಸಬಹುದು. ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಭಾರತ- ನ್ಯೂಜಿಲೆಂಡ್ ತಂಡಗಳು ಕಣಕ್ಕಿಳಿದಿದ್ದು. ಯಾರು ಗೆಲ್ಲುತ್ಥಾರೆ, ಪಂದ್ಯದಲ್ಲಿ ಏನೇನು ದಾಖಲೆ, ಬೆಳವಣಿಗೆಗಳು ಆಗುತ್ತವೆ ಎಂದು ಇಲ್ಲಿ ಮಾಹಿತಿ ಪಡೆಯಬಹುದು. ಟಿವಿ9 ಡಿಜಿಟಲ್​ನಲ್ಲಿ ಕ್ರಿಕೆಟ್​ಗಾಗಿ ವಿಶೇಷ ಪುಟ ತೆರೆಯಲಾಗಿದೆ. ಅಲ್ಲಿಯೂ ಕ್ರಿಕೆಟ್ ಬಗ್ಗೆ ಹಲವು ವಿಶೇಷ ಮಾಹಿತಿಗಳನ್ನು ಓದಬಹುದು. ಅದಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ ಟಿವಿ9 ಡಿಜಿಟಲ್- ಕ್ರಿಕೆಟ್

Follow us on