ವಿಶ್ವ ಚಾಂಪಿಯನ್ ಬಾಕ್ಸರ್ ಎಂಸಿ ಮೇರಿ ಕೋಮ್ (MC Mary Kom) ತಾನು ನಿವೃತ್ತಿ ಘೋಷಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬುಧವಾರ ಅವರು ತಮ್ಮ ಬಾಕ್ಸಿಂಗ್ ಕೆರಿಯರ್ಗೆ ನಿವೃತ್ತಿ ಘೋಷಿಸಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಮೇರಿ ಕೋಮ್, ತನ್ನ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ. ನಾನು ಯಾವುದೇ ನಿವೃತ್ತಿ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.
“ನಾನು ಇನ್ನೂ ನಿವೃತ್ತಿ ಘೋಷಿಸಿಲ್ಲ. ನನ್ನ ಮಾತನನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ. ನಿವೃತ್ತಿ ಘೋಷಿಸಲು ಬಯಸಿದಾಗ ನಾನು ವೈಯಕ್ತಿಕವಾಗಿ ಮಾಧ್ಯಮಗಳ ಮುಂದೆ ಬಂದು ತಿಳಿಸುತ್ತೇನೆ. ಹೀಗಾಗಿ ಪ್ರಸ್ತುತ ಹರಿದಾಡುತ್ತಿರುವ ಸುದ್ದಿಗಳು ನಿಜವಲ್ಲ ಎಂದು ಮೇರಿ ಕೋಮ್ ಹೇಳಿದ್ದಾರೆ.
ಜನವರಿ 24, 2024 ರಂದು ದಿಬ್ರುಗಢ್‌ನಲ್ಲಿ ಶಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೇರಿ ಕೋಮ್, ನಾನು ನನ್ನ ಜೀವನದಲ್ಲಿ ಎಲ್ಲವನ್ನೂ ಸಾಧಿಸಿದ್ದೇನೆ. ನನಗೆ ಇನ್ನೂ ಸ್ಪರ್ಧಿಸುವ ಹಸಿವು ಇದೆ. ಆದರೆ ಅಂತರಾಷ್ಟ್ರೀಯ ಬಾಕ್ಸಿಂಗ್ ಫೆಡರೇಶನ್ ನಿಯಮಗಳು ನನಗೆ ಹಾಗೆ ಮಾಡಲು ಅನುಮತಿಸುವುದಿಲ್ಲ. ಪುರುಷ ಮತ್ತು ಮಹಿಳಾ ಬಾಕ್ಸರ್‌ಗಳಿಗೆ 40 ವರ್ಷ ವಯಸ್ಸಿನವರೆಗೆ ಮಾತ್ರ ಹೋರಾಡಲು ಅವಕಾಶವಿದೆ ಎಂದು ತಿಳಿಸಿದ್ದರು.
ಇದರ ಬೆನ್ನಲ್ಲೇ 41 ವರ್ಷದ ಮೇರಿ ಕೋಮ್ ಬಾಕ್ಸಿಂಗ್ ಅಖಾಡಕ್ಕೆ ವಿದಾಯ ಹೇಳಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದೀಗ ಈ ಬಗ್ಗೆ ಸ್ಪಷ್ಟನೆ ನೀಡುವ ಮೂಲಕ ನಿವೃತ್ತಿ ಸುದ್ದಿಯನ್ನು ಅವರು ಅಲ್ಲೆಗೆಳೆದಿದ್ದಾರೆ. ಹೀಗಾಗಿ ಭಾರತೀಯ ಬಾಕ್ಸಿಂಗ್ ರಿಂಗ್ನಲ್ಲಿ ಮತ್ತೊಮ್ಮೆ ಮೇರಿ ಕೋಮ್ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.
ಮೇರಿ ಕೋಮ್ 6 ಬಾರಿ ವಿಶ್ವ ಚಾಂಪಿಯನ್ ಕಿರೀಟ ತಮ್ಮದಾಗಿಸಿಕೊಂಡಿದ್ದರು. ನಿಖರ ಪಂಚ್ಗಳಿಗೆ ಹೆಸರುವಾಸಿಯಾಗಿದ್ದ ಕೋಮ್ ಈ ಸಾಧನೆ ಮಾಡಿದ ಏಕೈಕ ಮಹಿಳಾ ಬಾಕ್ಸರ್ ಎಂಬುದು ವಿಶೇಷ. ಇದಲ್ಲದೆ 5 ಬಾರಿ ಏಷ್ಯನ್ ಚಾಂಪಿಯನ್‌ಶಿಪ್ ಗೆದ್ದ ಏಕೈಕ ಆಟಗಾರ್ತಿ ಎಂಬ ದಾಖಲೆ ಕೂಡ ಮೇರಿ ಕೋಮ್ ಹೆಸರಿನಲ್ಲಿದೆ.
18ನೇ ವಯಸ್ಸಿನಲ್ಲಿ ಅಖಾಡಕ್ಕೆ: ಮೇರಿ ಕೋಮ್ ತಮ್ಮ ಬಾಕ್ಸಿಂಗ್ ವೃತ್ತಿಜೀವನವನ್ನು 18ನೇ ವಯಸ್ಸಿನಲ್ಲಿ ಪೆನ್ಸಿಲ್ವೇನಿಯಾದ ಸ್ಕ್ರಾಂಟನ್‌ನಲ್ಲಿ ಪ್ರಾರಂಭಿಸಿದರು. ಮೊದಲ ಪಂದ್ಯದಲ್ಲೇ ತಮ್ಮ ನಿಖರ ಬಾಕ್ಸಿಂಗ್ ತಂತ್ರದಿಂದ ಎಲ್ಲರ ಗಮನ ಸೆಳೆದಿದ್ದರು. ಅಷ್ಟೇ ಅಲ್ಲದೆ ಚೊಚ್ಚಲ ಪಂದ್ಯದಲ್ಲೇ 48 ಕೆಜಿ ವಿಭಾಗದಲ್ಲಿ ಫೈನಲ್‌ಗೆ ತಲುಪಿದ್ದರು. ಆದರೆ ಕೊನೆಯ ಸುತ್ತಿನಲ್ಲಿ ಸೋತರೂ ಅದಾಗಲೇ ಬಾಕ್ಸಿಂಗ್ ರಿಂಗ್ನೊಳಗೆ ಹೊಸ ಸಂಚಲನ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದರು.
ಮೇರಿ ಕೋಮ್ ಅಂತರರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ (ಐಬಿಎ) ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ. 2005, 2006, 2008 ಮತ್ತು 2010 ರಲ್ಲಿ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದಿದ್ದರು. 2008 ರ ಪ್ರಶಸ್ತಿಯನ್ನು ಗೆದ್ದ ನಂತರ ಮೇರಿ ಕೋಮ್ ತನ್ನ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಹಾಗೆಯೇ ಮಕ್ಕಳ ಪಾಲನೆಗಾಗಿ ಕೆಲ ಕಾಲ ರಿಂಗ್ನಿಂದ ಹೊರಗುಳಿದರು.
ಮೇರಿ ಕೋಮ್ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ 51ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಇತ್ತ ವೃತ್ತಿಜೀವನದ ಜೊತೆ ಸಾಂಸರಿಕ ಜೀವನವನ್ನು ಸರಿದೂಗಿಸಿದ ಕೋಮ್, ಈ ಸಾಧನೆ ಬೆನ್ನಲ್ಲೇ ಮಕ್ಕಳಿಗಾಗಿ ಮತ್ತೆ ಬ್ರೇಕ್ ತೆಗೆದುಕೊಂಡಿದ್ದರು. ಆ ಬಳಿಕ ಮತ್ತೆ ಬಾಕ್ಸಿಂಗ್ಗೆ ಮರಳಿದ್ದ ಮೇರಿ 2018 ರಲ್ಲಿ ದೆಹಲಿಯಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಆರನೇ ಪ್ರಶಸ್ತಿಯನ್ನು ಗೆದ್ದರು. ಅಂದು ಅವರು ಉಕ್ರೇನ್‌ನ ಹನ್ನಾ ಒಖೋಟಾ ವಿರುದ್ಧ 5-0 ಅಂತರದಿಂದ ಗೆದ್ದಿದ್ದು ವಿಶೇಷ.
ಇದನ್ನೂ ಓದಿ: ಅಫ್ಘಾನಿಸ್ತಾನ್ ವಿರುದ್ಧ ಗೆದ್ದು ಪಾಕಿಸ್ತಾನ್ ತಂಡದ ವಿಶ್ವ ದಾಖಲೆ ಮುರಿದ ಟೀಮ್ ಇಂಡಿಯಾ
ಬಾಕ್ಸಿಂಗ್ ರಿಂಗ್ನಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದ ಮೇರಿ ಕೋಮ್ ಅವರ ಜೀವನಾಧರಿತ ಸಿನಿಮಾ ಕೂಡ ನಿರ್ಮಾಣವಾಗಿದೆ. 2014 ರಲ್ಲಿ ಮೇರಿ ಕೋಮ್ ಹೆಸರಿನೊಂದಿಗೆ ಬಾಲಿವುಡ್ ಚಿತ್ರವೊಂದು ಬಿಡುಗಡೆಯಾಗಿ ಅಭೂತಪೂರ್ವ ಯಶಸ್ಸು ಸಾಧಿಸಿತ್ತು. ಈ ಚಿತ್ರದಲ್ಲಿ ಮೇರಿ ಅವರ ಪಾತ್ರದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದರು. ಈ ಚಿತ್ರದ ಮೂಲಕ ಅವರ ತೆರೆಮರೆಯ ಕಹಾನಿಗಳು ಬೆಳಕಿಗೆ ಬಂದವು. ಇದೀಗ ತಮ್ಮ 41ನೇ ವಯಸ್ಸಿನಲ್ಲೂ ವೃತ್ತಿ ಜೀವನ ಮುಂದುವರೆಸಿರುವ ಮೇರಿ ಕೋಮ್ ಮತ್ತಷ್ಟು ಸಾಧನೆ ಮಾಡುವ ವಿಶ್ವಾಸದಲ್ಲಿದ್ದಾರೆ.
Published On - 7:45 am, Thu, 25 January 24