ನನ್ನ ರಾಜ್ಯ ಮಣಿಪುರ ಉರಿಯುತ್ತಿದೆ, ದಯವಿಟ್ಟು ಸಹಾಯ ಮಾಡಿ: ಮೋದಿ, ಅಮಿತ್ ಶಾಗೆ ಮೇರಿ ಕೋಮ್ ಮನವಿ

Manipur violence: ರಾಜ್ಯದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಮೈತೆ ಸಮುದಾಯವನ್ನು ಎಸ್‌ಟಿ ವರ್ಗಕ್ಕೆ ಸೇರಿಸಿದ ನಂತರ ಹಿಂಸಾಚಾರ ಭುಗಿಲೆದ್ದಿತು. ಈ ಕ್ರಮವನ್ನು ಇತರ ಸಮುದಾಯಗಳು ಪ್ರಶ್ನಿಸಿದ್ದಾರೆ, ಇದು ಅವರಿಗೆ ಸರ್ಕಾರಿ ಉದ್ಯೋಗಗಳಿಗೆ ಪ್ರವೇಶ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶವನ್ನು ನಿರಾಕರಿಸುತ್ತದೆ

ನನ್ನ ರಾಜ್ಯ ಮಣಿಪುರ ಉರಿಯುತ್ತಿದೆ, ದಯವಿಟ್ಟು ಸಹಾಯ ಮಾಡಿ: ಮೋದಿ, ಅಮಿತ್ ಶಾಗೆ ಮೇರಿ ಕೋಮ್ ಮನವಿ
ಹೊತ್ತಿ ಉರಿದ ಮಣಿಪುರ (ಬಲ)- ಮೇರಿ ಕೋಮ್ (ಎಡ)
Follow us
ರಶ್ಮಿ ಕಲ್ಲಕಟ್ಟ
|

Updated on:May 04, 2023 | 2:43 PM

ಮಣಿಪುರದಲ್ಲಿ (Manipur) ಬಹುಸಂಖ್ಯಾತ ಮೈತೆ ಸಮುದಾಯವನ್ನು ಪರಿಶಿಷ್ಟ ಪಂಗಡದ (ST) ವರ್ಗಕ್ಕೆ ಸೇರಿಸುವುದರ ವಿರುದ್ಧದ ಪ್ರತಿಭಟನೆಯ ನಡುವೆ ವ್ಯಾಪಕ ಹಿಂಸಾಚಾರ (Manipur Violence) ನಡೆದಿದೆ. ಈ ಬಗ್ಗೆ ಎಎನ್ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಒಲಂಪಿಕ್ ಪದಕ ವಿಜೇತ ಬಾಕ್ಸರ್ ಮತ್ತು ರಾಜ್ಯಸಭಾ ಸಂಸದೆ ಮೇರಿ ಕೋಮ್ (Mary Kom), ಮಣಿಪುರದ ಪರಿಸ್ಥಿತಿಯು ನನಗೆ ಅತೃಪ್ತಿ ತಂದಿದೆ. ಈ ಹಿಂದೆ ನನಗೆ ಇಷ್ಟು ಹಿಂಸಾಚಾರವನ್ನು ಊಹಿಸಲೂ ಸಾಧ್ಯವಾಗಲಿಲ್ಲ. ನಿನ್ನೆ ರಾತ್ರಿಯಿಂದ ಇದು ಹೆಚ್ಚು ಭಯಾನಕವಾಗಿದೆ ಎಂದಿದ್ದಾರೆ.

ರಾಜ್ಯ ಮತ್ತು ಕೇಂದ್ರವು ಒಟ್ಟಾಗಿ ಕೆಲಸ ಮಾಡುವಂತೆ ಮನವಿ ಮಾಡಿದ ಮೇರಿ ಕೋಮ್, ಸಮಾಧಾನ ಮತ್ತು ಭದ್ರತೆಯನ್ನು ಕಾಪಾಡಲು ಮತ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಕೇಳುತ್ತೇನೆ. ಇದು ನನ್ನ ವಿನಂತಿ ಎಂದು ಹೇಳಿದರು. ನಾನು ಎಲ್ಲ ಜನರನ್ನು ಗೌರವಿಸುತ್ತೇನೆ, ನಾವೆಲ್ಲರೂ ಶಾಂತಿಯಿಂದ ಬದುಕಲು ಸಾಧ್ಯವಿಲ್ಲವೇ. ಇದು ನನ್ನ ಪ್ರಶ್ನೆ, ನಾವು ಶಾಂತಿಯಿಂದ ಬದುಕಿದರೆ ನಮಗೆಲ್ಲರಿಗೂ ಒಳಿತು. ಈ ಹಿಂಸಾಚಾರದಲ್ಲಿ ಕೆಲವರು ಕುಟುಂಬ ಸದಸ್ಯರನ್ನು ಕಳೆದುಕೊಂಡಿರುವುದು ದುರದೃಷ್ಟಕರ. ಆದಷ್ಟು ಬೇಗ ಇದು ಕೊನೆಗೊಳ್ಳಲಿ… ಎಲ್ಲವೂ ಸರಿ ಹೋಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಬಾಕ್ಸರ್ ಹೇಳಿದ್ದಾರೆ.

ಹಿಂಸಾಚಾರದ ಫೋಟೋಗಳನ್ನು ಹಂಚಿಕೊಂಡ ಮೇರಿ ಕೋಮ್, ನನ್ನ ರಾಜ್ಯ ಮಣಿಪುರ ಹೊತ್ತಿ ಉರಿಯುತ್ತಿದೆ, ದಯವಿಟ್ಟು ಸಹಾಯ ಮಾಡಿ ಎಂದು ಟ್ವೀಟ್ ಮಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಕಚೇರಿ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಟ್ಯಾಗ್ ಮಾಡಿದ್ದಾರೆ.

ರಾಜ್ಯದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಮೈತೆ ಸಮುದಾಯವನ್ನು ಎಸ್‌ಟಿ ವರ್ಗಕ್ಕೆ ಸೇರಿಸಿದ ನಂತರ ಹಿಂಸಾಚಾರ ಭುಗಿಲೆದ್ದಿತು. ಈ ಕ್ರಮವನ್ನು ಇತರ ಸಮುದಾಯಗಳು ಪ್ರಶ್ನಿಸಿದ್ದಾರೆ, ಇದು ಅವರಿಗೆ ಸರ್ಕಾರಿ ಉದ್ಯೋಗಗಳಿಗೆ ಪ್ರವೇಶ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶವನ್ನು ನಿರಾಕರಿಸುತ್ತದೆ. ನಾಗಾಗಳು ಮತ್ತು ಕುಕಿಗಳು ಸೇರಿದಂತೆ ಬುಡಕಟ್ಟು ಜನಾಂಗದವರು ರಾಜ್ಯದ ಜನಸಂಖ್ಯೆಯ ಶೇಕಡಾ 40 ರಷ್ಟಿದ್ದಾರೆ.

ಚುರಾಚಂದ್‌ಪುರ ಜಿಲ್ಲೆಯ ಟೋರ್‌ಬಂಗ್ ಪ್ರದೇಶದಲ್ಲಿ ಆಲ್ ಟ್ರೈಬಲ ಸ್ಟೂಡೆಂಟ್ ಯೂನಿಯನ್ ಮಣಿಪುರ ಕರೆ ನೀಡಿದ್ದ ಬುಡಕಟ್ಟು ಐಕಮತ್ಯ ಮೆರವಣಿಗೆಯಲ್ಲಿ ಬುಧವಾರ ಹಿಂಸಾಚಾರ ಭುಗಿಲೆದ್ದಿದೆ. ಗುಡ್ಡಗಾಡು ರಾಜ್ಯದ ಎಲ್ಲಾ 10 ಜಿಲ್ಲೆಗಳಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಗಳು ಮತ್ತು ಕಾರ್ಯಕ್ರಮಗಳಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಸಮಾಜ ವಿರೋಧಿ ಶಕ್ತಿಗಳು ಚಿತ್ರಗಳು, ದ್ವೇಷದ ಭಾಷಣಗಳು ಮತ್ತು ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿವೆ ಎಂದು ಪೊಲೀಸರು ದೂರಿದ್ದಾರೆ.

ಹಿಂಸಾಚಾರ ಭುಗಿಲೆದ್ದಿದ್ದು, ಬೆಂಕಿ ಹಚ್ಚುವ ಘಟನೆಗಳು ವರದಿಯಾಗುತ್ತಿದ್ದಂತೆ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರ ಸರ್ಕಾರ ಬುಧವಾರ ಐದು ದಿನಗಳ ಕಾಲ ಮೊಬೈಲ್ ಇಂಟರ್ನೆಟ್ ಅನ್ನು ನಿಷೇಧಿಸಿದೆ.

ಇದನ್ನೂ ಓದಿ: ಇಷ್ಟೊಂದು ಅವಮಾನ ಮಾಡಿದ್ರು, ನಮ್ಮ ಪದಕ, ಪ್ರಶಸ್ತಿಗಳನ್ನು ವಾಪಸ್ ತೆಗೆದುಕೊಳ್ಳಿ: ನೊಂದು ನುಡಿದ ಕುಸ್ತಿಪಟುಗಳು

ಇಂದು ಮುಂಜಾನೆ ಸಿಂಗ್ ಅವರು ಹಿಂಸಾಚಾರಕ್ಕೆ ‘ಸಮಾಜದ ಎರಡು ವಿಭಾಗಗಳ ನಡುವೆ ಚಾಲ್ತಿಯಲ್ಲಿರುವ ತಪ್ಪು ತಿಳುವಳಿಕೆ’ಯನ್ನು ಕಾರಣ ಎಂದಿದ್ದಾರೆ. ಎಲ್ಲಾ ಕುಂದುಕೊರತೆಗಳನ್ನು ಸೂಕ್ತ ಸಮಾಲೋಚನೆಯ ನಂತರ ಪರಿಹರಿಸಲಾಗುವುದು ಎಂದು ಅವರು ಹೇಳಿದ್ದಾರೆ. ರಾಜಧಾನಿ ಇಂಫಾಲ್ ಮತ್ತು ಚುರಾಚಂದ್‌ಪುರ, ಬಿಷ್ಣುಪುರ್ ಮತ್ತು ಕಾಂಗ್‌ಪೋಕ್ಪಿ ಸೇರಿದಂತೆ ಇತರ ಪ್ರದೇಶಗಳಲ್ಲಿ ವಿಧ್ವಂಸಕ ಕೃತ್ಯಗಳು ಮತ್ತು ಬೆಂಕಿ ಹಚ್ಚಿದ ವರದಿಗಳನ್ನು ದೃಢಪಡಿದ ಅವರು ಹೆಚ್ಚಿನ ಸಂಖ್ಯೆಯಲ್ಲಿ ಸಾವು ನೋವು ಸಂಭವಿಸಿದು ಆಸ್ತಿಗಳಿಗೆ ಹಾನಿಯಾಗಿದೆ ಎಂದು ಹೇಳಿದರು. ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಮತ್ತು ಎಲ್ಲಾ ನಿವಾಸಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸೇನೆ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ.

ಹಿಂಸಾಚಾರ ಪೀಡಿತ ಪ್ರದೇಶಗಳಿಂದ ಇಲ್ಲಿಯವರೆಗೆ ಸುಮಾರು 4,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಗುವಾಹಟಿ ಮೂಲದ ಸಾರ್ವಜನಿಕ ಸಂಪರ್ಕ ಅಧಿಕಾರಿ (ರಕ್ಷಣಾ) ಲೆಫ್ಟಿನೆಂಟ್ ಕರ್ನಲ್ ಮಹೇಂದರ್ ರಾವತ್ ಹೇಳಿದ್ದಾರೆ.

ಮಣಿಪುರದಲ್ಲಿ ಕಳೆದ ವರ್ಷದ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ವಿಧಾನಸಭೆ ಚುನಾವಣೆ ನಡೆದಿದ್ದು, ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರ ಬಿಜೆಪಿ ಸರ್ಕಾರ ಅಧಿಕಾರ ಮತ್ತೆ ಗದ್ದುಗೆಗೇರಿತ್ತು. ಚುನಾವಣೆಯ ಮೊದಲು ಮತ್ತು ನಂತರ ಹಿಂಸಾಚಾರದಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:38 pm, Thu, 4 May 23