ಕೊರೊನಾ ಸೋಂಕಿನ ಸಮಸ್ಯೆ ಕಾರಣದಿಂದ ಐಪಿಎಲ್ 2021 ಸರಣಿ ಅರ್ಧಕ್ಕೆ ಮೊಟಕುಗೊಂಡಿದೆ. ಈ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಜೂನ್ 18ರಿಂದ 22ರ ವರೆಗೆ ಸೌತಾಂಪ್ಟನ್‌ನಲ್ಲಿ ಈ ಪಂದ್ಯ ನಡೆಯಲಿದೆ. ಬಳಿಕ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲಿದೆ. ಆಗಸ್ಟ್ 4ರಿಂದ 8ರ ವರೆಗೆ ನಾಟಿಂಗ್‌ಹಾಮ್‌ನಲ್ಲಿ, ಆಗಸ್ಟ್ 12ರಿಂದ 16ರ ವರೆಗೆ ಲಾರ್ಡ್ಸ್ ಮೈದಾನದಲ್ಲಿ, ಆಗಸ್ಟ್ 25ರಿಂದ 29ರ ವರೆಗೆ ಲೀಡ್ಸ್‌ನಲ್ಲಿ, ಸಪ್ಟೆಂಬರ್ 2ರಿಂದ 6ರ ವರೆಗೆ ಒವಲ್‌ನಲ್ಲಿ ಮತ್ತು ಸಪ್ಟೆಂಬರ್ 10ರಿಂದ 14ರ ವರೆಗೆ ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿ ನಡೆಯಲಿದೆ.
ಕೊರೊನಾ ಸೋಂಕು ತೀವ್ರವಾಗಿ ಇರುವುದರಿಂದ ಆಟಗಾರರು, ವಿದೇಶ ಪ್ರವಾಸ ಕೈಗೊಳ್ಳುವ ಮುನ್ನ 14 ದಿನಗಳ ಕ್ವಾರಂಟೈನ್‌ಗೆ ಒಳಗಾಗುವುದು ಕಡ್ಡಾಯವಾಗಿದೆ. ಅಷ್ಟೇ ಅಲ್ಲದೆ, ಭಾರತಕ್ಕೆ 30 ಜನ ಆಟಗಾರರ ತಂಡವನ್ನು ಕಳುಹಿಸಿಕೊಡುವುದು ಕೂಡ ಅನಿವಾರ್ಯವಾಗಿದೆ. ಈಗಾಗಲೇ ಒಂದಷ್ಟು ಆಟಗಾರರು ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಅದರ ಹೊರತಾಗಿ ಕೆಲವು ಸ್ಥಾನಗಳು ಹೊಸ ಆಟಗಾರರಿಗೆ ಲಭ್ಯವಾಗಲಿದೆ.
ಆರಂಭಿಕ ಸ್ಥಾನಕ್ಕೆ ಪೈಪೋಟಿ ಜೋರಾಗಿದೆ. ಅಭಿಮನ್ಯು ಈಶ್ವರನ್, ಪ್ರಿಯಾಂಕ್ ಪಾಂಚಾಲ್ ಮತ್ತು ದೇವದತ್ ಪಡಿಕ್ಕಲ್ ತಂಡದಲ್ಲಿ ಸ್ಥಾನ ಪಡೆಯುವ ಉತ್ಸಾಹದಲ್ಲಿದ್ದಾರೆ. ಜೊತೆಗೆ ಐಪಿಎಲ್ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಪೃಥ್ವಿ ಶಾ ಮತ್ತೆ ತಂಡ ಸೇರುವ ಸಾಧ್ಯತೆ ಇದೆ.
ರಿಷಭ್ ಪಂತ್ ಹಾಗೂ ವೃದ್ಧಿಮಾನ್ ಸಹಾ ಬಳಿಕ ಇಶಾನ್ ಕಿಶನ್ ಮತ್ತು ಕೊನಾ ಭರತ್ ಮೂರನೇ ವಿಕೆಟ್ ಕೀಪರ್ ಸ್ಥಾನ ಪಡೆಯಲು ಕಾತುರರಾಗಿದ್ದಾರೆ. ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ನಂತರ ಅಕ್ಸರ್ ಪಟೇಲ್ ಮತ್ತು ರಾಹುಲ್ ಚಹಾರ್ ಸ್ಪಿನ್ನರ್ ಸ್ಥಾನಕ್ಕೆ ಸ್ಪರ್ಧೆಯೊಡ್ಡುವ ಸಾಧ್ಯತೆ ಇದೆ.
ಆಲ್‌ರೌಂಡರ್ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯ ಮತ್ತು ಶಾರ್ದುಲ್ ಠಾಕುರ್ ನಿರೀಕ್ಷೆ ಇದೆ. ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಹೇಳಿಕೊಳ್ಳುವಂಥ ಪ್ರದರ್ಶನ ತೋರಿಲ್ಲ. ಹಾಗಾಗಿ ಪಾಂಡ್ಯ ಬ್ಯಾಟಿಂಗ್ ಆಲ್‌ರೌಂಡರ್ ಆಗಿ ಮತ್ತು ಶಾರ್ದುಲ್ ಠಾಕುರ್ ಬೌಲಿಂಗ್ ಆಲ್‌ರೌಂಡರ್ ಆಗಿ ತಂಡ ಸೇರುವ ಅವಕಾಶವಿದೆ.
ಟಿ ನಟರಾಜನ್ ಅನುಪಸ್ಥಿತಿಯಲ್ಲಿ, ಎಡಗೈ ಬೌಲರ್ ಜಯದೇವ್ ಉನಾದ್ಕತ್, ಯುವ ಬೌಲರ್‌ಗಳಾದ ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್ ಕೂಡ ತಂಡದಲ್ಲಿ ಸ್ಥಾನ ಪಡೆಯಬಹುದು. ಮೊಹಮ್ಮದ್ ಶಮಿ, ಹನುಮ ವಿಹಾರಿ ಹಾಗೂ ಭುವನೇಶ್ವರ್ ಕುಮಾರ್ ತಂಡದಲ್ಲಿರುವ ಸಾಧ್ಯತೆ ದಟ್ಟವಾಗಿದೆ.
ಭಾರತದ ಸಂಪೂರ್ಣ ಸಂಭಾವ್ಯ ತಂಡ:
ಆರಂಭಿಕ ಆಟಗಾರರು:
ರೋಹಿತ್ ಶರ್ಮಾ, ಶುಬ್‌ಮನ್ ಗಿಲ್, ಪೃಥ್ವಿ ಶಾ, ಮಯಾಂಕ್ ಅಗರ್‌ವಾಲ್, ಅಭಿಮನ್ಯು ಈಶ್ವರನ್, ಪ್ರಿಯಾಂಕ್ ಪಾಂಚಾಲ್/ ದೇವದತ್ ಪಡಿಕ್ಕಲ್
ಮಧ್ಯಮ ಕ್ರಮಾಂಕ:
ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ಹನುಮ ವಿಹಾರಿ, ಕೆ.ಎಲ್. ರಾಹುಲ್
ಆಲ್‌ರೌಂಡರ್ ಆಟಗಾರರು:
ವಾಷಿಂಗ್ಟನ್ ಸುಂದರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ
ಸ್ಪಿನ್ನರ್ಸ್ :
ರವಿಚಂದ್ರನ್ ಅಶ್ವಿನ್, ವಾಷಿಂಗ್ಟನ್ ಸುಂದರ್, ಅಕ್ಸರ್ ಪಟೇಲ್, ರಾಹುಲ್ ಚಹಾರ್
ವೇಗದ ಬೌಲರ್‌ಗಳು:
ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಶಾರ್ದುಲ್ ಠಾಕುರ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಭುವನೇಶ್ವರ್ ಕುಮಾರ್
ನೆಟ್ ಬೌಲರ್ಸ್ :
ಚೇತನ್ ಸಕಾರಿಯಾ, ಅಂಕಿತ್ ರಜಪೂತ್
ಇದನ್ನೂ ಓದಿ: ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಭಾರತೀಯ ಕ್ರಿಕೆಟಿಗರಿಗೆ ಕೊವಿಶೀಲ್ಡ್ ಲಸಿಕೆ ಪಡೆಯಲು ಸಲಹೆ; ಕಾರಣವೇನು?
(Indian Squad for England Tour Probable 30 Cricket Players List is here)
Published On - 4:33 pm, Fri, 7 May 21