ಮಾಜಿ ವೇಗದ ಬೌಲರ್ ಚೇತನ್ ಶರ್ಮ ಅವರ ನೇತೃತ್ವದಲ್ಲಿ ಇತ್ತೀಚಿಗೆ ರೂಪುಗೊಂಡಿರುವ ರಾಷ್ಟ್ರೀಯ ಕ್ರಿಕೆಟ್ ಆಯ್ಕೆ ಸಮಿತಿಯು ನಾಳೆ (ಮಂಗಳವಾರ) ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯ ಮೊದಲಿನರೆಡು ಪಂದ್ಯಗಳಿಗೆ ಟೀಮನ್ನು ಆಯ್ಕೆ ಮಾಡಲಿದೆ. ಝೂಮ್ ಕರೆ ಮೂಲಕ ನಡೆಯಲಿರುವ ಸಭೆಯಲ್ಲಿ ಪಿತೃತ್ವದ ರಜೆ ಮೇಲಿರುವ ಟೀಮಿನ ನಾಯಕ ವಿರಾಟ್ ಕೊಹ್ಲಿ ಸಹ ಪಾಲ್ಗೊಳ್ಳಲಿದ್ದಾರೆ.
ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಬಾರತೀಯ ತಂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದರೂ ಟೀಮಿನಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡುವ ನಿರೀಕ್ಷೆಯಿದೆ. ಶರ್ಮ ಅವರೊಂದಿಗೆ, ಸಮಿತಿಯ ಇತರ ಸದಸ್ಯರಾದ ಸುನಿಲ್ ಜೋಷಿ, ದೇಬಶಿಷ್ ಮೊಹಂತಿ, ಹರ್ವಿಂದರ್ ಸಿಂಗ್ ಮತ್ತು ಅಬೀ ಕುರುವಿಲ್ಲ್ಲಾ ಆಟಗಾರರ ಫಿಟ್ನೆಸ್ಗೆ ಪ್ರಾಮುಖ್ಯತೆ ನೀಡಲಿದ್ದಾರೆ, ಫಿಟ್ ಇಲ್ಲದವರನ್ನು ಪರಿಗಣಿಸದಿರಲು ನಿರ್ಧರಿಸಲಾಗಿದೆ ಎಂದು ಮಂಡಳಿಯ ಮೂಲಗಳಿಂದ ಗೊತ್ತಾಗಿದೆ.
ಸಮಿತಿ ಸದಸ್ಯರ ಗಮನ ನಿಸ್ಸಂದೇಹವಾಗಿ ಬಾರತದ ಚಾಂಪಿಯನ್ ಬೌಲರ್ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ರವಿಚಂದ್ರನ್ ಅಶ್ವಿನ್ ಅವರ ಮೇಲಿರಲಿದೆ. ಅವರಿಬ್ಬರ ಫಿಟ್ನೆಸ್ ಬಗ್ಗೆ ದೀರ್ಘವಾದ ಚರ್ಚೆ ನಡೆಯುವ ಸಾಧ್ಯತೆಯಿದೆ. ಟೆಸ್ಟ್ ತಂಡದ ಖಾಯಂ ಸದಸ್ಯರಾಗಿರುವ ಹನುಮ ವಿಹಾರಿ ಮತ್ತು ರವೀಂದ್ರ ಜಡೇಜಾ ಗಾಯಗೊಂಡಿರುವುದರಿಂದ ಅವರನ್ನು ಆಯ್ಕೆಗೆ ಪರಿಗಣಿಸಲಾಗದು. ಹಾಗೆಯೇ ಗಾಯಗೊಂಡಿರುವ ವೇಗದ ಬೌಲರ್ಗಳು ಮೊಹಮ್ಮದ್ ಶಮಿ ಮತ್ತು ಉಮೇಶ ಯಾದವ್ ಅವರನ್ನೂ ಆಯ್ಕೆಗೆ ಪರಿಗಣಿಸುವುದಿಲ್ಲ.
ಪ್ರಸಕ್ತ ಆಸ್ಟ್ರೇಲಿಯಾ ಸರಣಿಯು ಬಾರತದ ಬೆಂಚ್ ಬಲದ ಬಗ್ಗೆ ಸಾಕಷ್ಟು ಬೆಳಕು ಚೆಲ್ಲಿದೆ. ತಮಗೆ ನೀಡಿರುವ ಅವಕಾಶಗಳನ್ನು ಟಿ ನಟರಾಜನ್, ಶಾರ್ದುಲ್ ಠಾಕೂರ್ ಮತ್ತು ವಾಷಿಂಗ್ಟನ್ ಸುಂದರ್ ಎರಡೂ ಕೈಗಳಿಂದ ಬಾಚಿಕೊಂಡು ಆಯ್ಕೆ ಸಮಿತಿಗೆ ಆರೋಗ್ಯಕರ ತಲೆನೋವು ನೀಡಿದ್ದಾರೆ.
ಆಸ್ಟ್ರೇಲಿಯಾಲ್ಲಿರುವ ಹರ್ವಿಂದರ್ ಸಿಂಗ್ ಅವರನ್ನು ಹೊರತುಪಡಿಸಿ ಆಯ್ಕೆ ಸಮಿತಿಯ ಉಳಿದೆಲ್ಲ ಬೇರೆ ಬೇರೆ ಕೇಂದ್ರಗಳಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗಾಗಿ ನಡೆಯುತ್ತಿರುವ ಪಂದ್ಯಗಳನ್ನು ವೀಕ್ಷಿಸುತ್ತಿದ್ದಾರೆ. 10 ದಿನಗಳ ಹಿಂದೆ ನಡೆದ ವರ್ಚ್ಯುಯಲ್ ಸಭೆಯೊಂದರಲ್ಲಿ, ಈ ಟ್ರೋಪಿಯಲ್ಲಿ ಭಾಗಿಯಾಗಿರುವ ಪ್ರಥಮ ದರ್ಜೆಯಲ್ಲಾಡುವ ಆಟಗಾರರ ಮೇಲೆ ನಿಗಾ ಇಡಲು ಸೂಚಿಸಲಾಗಿದೆ.
ಆಯ್ಕೆ ಸಮಿತಿಯು ಒಂದರೆಡು ನಿರ್ಧಾರಗಳನ್ನು ಈಗಾಗಲೇ ತೆಗೆದುಕೊಂಡಿದೆ. ಅವುಗಳಲ್ಲಿ ಮೊದಲನೆಯದೆಂದರೆ, ಆಸ್ಟ್ರೇಲಿಯಾ ಪ್ರವಾಸದಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಸುಂದರ್, ನಟರಾಜನ್ ಮತ್ತು ಠಾಕೂರ್ ಅವರನ್ನು ಟೆಸ್ಟ್ ತಂಡದಲ್ಲಿ ಉಳಿಸಿಕೊಂಡಿದ್ದು ಮತ್ತು ಎರಡನೆಯದ್ದು; ಚೇತೇಶ್ವರ ಪೂಜಾರಾ ಸ್ಥಾನದಲ್ಲಿ ರೋಹಿತ್ ಶರ್ಮ ಅವರನ್ನು ತಂಡದ ಉಪನಾಯಕನಾಗಿ ಮಾಡಿದ್ದು. ರೋಹಿತ್ ಸೀನಿಯರ್ ಆಟಗಾರಾಗಿರುವುದರಿಂದ ಅವರನ್ನು ವೈಸ್ ಕ್ಯಾಪ್ಟನ್ ಮಾಡದಿರುವುದು ಸೂಕ್ತವಲ್ಲ ಎಂದು ಸಮಿತಿ ಭಾವಿಸಿ ಈ ಬದಲಾವಣೆಯನ್ನು ಮಾಡಿತ್ತು.
ಆದರೆ, ಇಂಗ್ಲೆಂಡ್ ವಿರುದ್ಧ ನಡೆಯುವ ಸರಣಿಗೆ ಕೊಹ್ಲಿ ವಾಪಸ್ಸಾಗುವುದರಿಂದ, ಪರಿಸ್ಥಿತಿ ಪುನಃ ಸಾಮಾನ್ಯವಾಗಲಿದೆ. ಕೊಹ್ಲಿ ನಾಯಕತ್ವಕ್ಕೆ ವಾಪಸ್ಸಾಗುತ್ತಾರೆ ಮತ್ತು ಅಜಿಂಕ್ಯಾ ರಹಾನೆ ಉಪ ನಾಯಕನ ಸ್ಥಾನಕ್ಕೆ ವಾಪಸ್ಸು ಹೋಗಲಿದ್ದಾರೆ.
ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳು ಚೆನೈಯಲ್ಲೇ ಫೆಬ್ರುವರಿ 5-9 ಮತ್ತು ಎರಡನೆಯದ್ದು 13-17ರಂದು ನಡೆಯಲಿವೆ. ಇಂಗ್ಲಿಷ್ ತಂಡ ಶ್ರೀಲಂಕಾದಿಂದ ಎರಡು ಬ್ಯಾಚ್ಗಳಲ್ಲಿ ಬಾರತಕ್ಕೆ ಆಗಮಿಸಲಿದೆ. ಅಲ್ಲಿ ಈಗ ಆಡುತ್ತಿರುವ ತಂಡ ಜನೆವರಿ 27ರಂದು ಒಂದು ಚಾರ್ಟರ್ಡ್ ವಿಮಾನದ ಮೂಲಕ ಚೆನೈಗೆ ಬಂದಿಳಿಯಲಿದೆ. ಶ್ರೀಲಂಕಾ ಪ್ರವಾಸದಲ್ಲಿರದ ಆದರೆ ಭಾರತ ವಿರುದ್ಧ ನಡೆಯುವ ಪಂದ್ಯಗಳಿಗೆ ಆಯ್ಕೆಯಾಗಲಿರುವ ಕೆಲ ಆಟಗಾರರು ಜನೆವರಿ 23ರಂದು ಭಾರತಕ್ಕೆ ಆಗಮಿಸಲಿದ್ದಾರೆ.