India vs Australia Test Series | 5 ವಿಕೆಟ್ ಪಡೆದ ಸಿರಾಜ್ ಅಪರೂಪದ ಸಾಧನೆಗೆ ಅಪ್ಪನ ನೆನಪೇ ಆಸರೆ
ಸಾಂಪ್ರದಾಯಿಕ ಕ್ರಿಕೆಟ್ ಅವೃತ್ತಿಗೆ ಕಾಲಿಟ್ಟ ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಪಡೆದು ಅತ್ಯುತ್ತಮ ನೋಟ್ನೊಂದಿಗೆ ಕರೀಯರ್ ಆರಂಭಿಸಿದ ಸಿರಾಜ್ ಅದಕ್ಕೆ ಮೊದಲು ಅನುಭವಿಸಿದ ಯಾತನೆ ಸಾಮಾನ್ಯವಾದುದಲ್ಲ.
ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್ ಮೊದಲಾದ ಪ್ರಮುಖ ಬೌಲರ್ಗಳು ಗಾಯಗೊಂಡು ಸರಣಿಯಿಂದ ಹೊರನಡೆದ ಕಾರಣ ಟೀಮಿನಲ್ಲಿ ಸ್ಥಾನ ಗಿಟ್ಟಿಸಿದ ಹೈದರಾಬಾದಿನ 26 ವರ್ಷದ ಮೊಹಮ್ಮದ್ ಸಿರಾಜ್, ಕೇವಲ ತನ್ನ ಮೂರನೇ ಟೆಸ್ಟ್ನಲ್ಲಿ ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್ ಪಡೆಯುವ ಸಾಧನೆ ಮಾಡಿದ್ದಾರೆ. ನಿಮಗೆ ಗೊತ್ತಿರಲಿ, ಭಾರತೀಯ ಬೌಲರ್ನೊಬ್ಬ 17 ವರ್ಷಗಳ ನಂತರ ಬ್ರಿಸ್ಬೇನ್ನಲ್ಲಿ 5 ವಿಕೆಟ್ ಪಡೆಯುವ ಸಾಧನೆ ಮಾಡಿದ್ದಾನೆ. ಎಡಗೈ ವೇಗದ ಬೌಲರ್ ಜಹೀರ್ ಖಾನ್ 2003ರಲ್ಲಿ 93 ರನ್ಗಳಿಗೆ 5 ವಿಕೆಟ್ ಪಡೆದಿದ್ದರು.
ಟೆಸ್ಟ್ ಕ್ರಿಕೆಟ್ ಆಡಿರದ ಇಬ್ಬರು (ನಟರಾಜನ್ ಮತ್ತು ಸುಂದರ್) ಮತ್ತು ತನ್ನ ಪಾದಾರ್ಪಣೆಯ ಟೆಸ್ಟ್ನಲ್ಲಿ ಕೇವಲ 10 ಎಸೆತಗಳನ್ನು ಬೌಲ್ ಮಾಡಿದ ನಂತರ ಗಾಯಗೊಂಡು ನೇಫಥ್ಯಕ್ಕೆ ಸರಿದ ಒಬ್ಬ ಬೌಲರ್ (ಠಾಕೂರ್) ಮತ್ತು ಕೇವಲ ಎರಡನೇ ಟೆಸ್ಟ್ ಆಡುತ್ತಿರುವ (ನವದೀಪ್ ಸೈನಿ) ಬೌಲರ್ಗಳ ಪಡೆಯ ನೇತೃತ್ವವಹಿಸಿದ ಸಿರಾಜ್ ಸೋಮವಾರದಂದು ನೀಡಿರುವ ಪ್ರದರ್ಶನ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಬಹಳ ದಿನ ಉಳಿಯಲಿದೆ.
ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಪಡೆದು ಅತ್ಯುತ್ತಮ ನೋಟ್ನೊಂದಿಗೆ ಟೆಸ್ಟ್ ಬದುಕು ಆರಂಭಿಸಿದ ಸಿರಾಜ್ ಪಾದಾರ್ಪಣೆಗೆ ಮೊದಲು ಅನುಭವಿಸಿದ ಯಾತನೆ ಸಾಮಾನ್ಯವಾದುದಲ್ಲ. ಸರಣಿ ಆರಂಭಕ್ಕೆ ಕೆಲವೇ ದಿನಗಳ ಮೊದಲು ಅವರ ತಂದೆ ತೀರಿಕೊಂಡರು. ಕೊವಿಡ್-19ಗೆ ಸಂಬಂಧಿಸಿದ ಶಿಷ್ಟಾಚಾರಗಳಿಂದಾಗಿ ಅವರು ಅಪ್ಪನನ್ನು ಕೊನೆಯ ಬಾರಿ ನೋಡಲೂ ಸಾಧ್ಯವಾಗಲಿಲ್ಲ. ಒತ್ತರಿಸಿಕೊಂಡು ಬರುತ್ತಿದ್ದ ದುಃಖದೊಂದಿಗೆ ಅಮ್ಮನೊಂದಿಗೆ ಮಾತಾಡಿದಾಗ ಆಕೆಯೇ ಮಗನಲ್ಲಿ ಧೈರ್ಯ ತುಂಬಿದರು.
‘ನಾನು ಬಿಳಿಯುಡುಗೆ ತೊಟ್ಟು ಭಾರತಕ್ಕಾಗಿ ಟೆಸ್ಟ್ ಆಡುವುದನ್ನು ನೋಡುವ ಮಹತ್ವಾಕಾಂಕ್ಷೆ ನನ್ನ ತಂದೆ ಇಟ್ಟುಕೊಂಡಿದ್ದರು. ಆದರೆ ಅವರಿಗದು ಸಾಧ್ಯವಾಗಲಿಲ್ಲ. ನಾವು ಏನೋ ಅಂದುಕೊಳ್ಳುತ್ತೇವೆ, ಆದರೆ ವಿಧಿ ತನ್ನ ಆಟವನ್ನು ನಮ್ಮ ಬದುಕಿನಲ್ಲಿ ಆಡಿಬಿಡುತ್ತದೆ’ ಎಂದು ತಂದೆ ಸಾವಿನ ನಂತರ ಸಿರಾಜ್ ಹೇಳಿದ್ದರು.
ಬ್ರಿಸ್ಬೇನ್ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 77ರನ್ಗಳಿಗೆ 1 ವಿಕೆಟ್ ಪಡೆದಿದ್ದ ಸಿರಾಜ್ ಎರಡನೆ ಇನ್ನಿಂಗ್ಸ್ನಲ್ಲಿಂದು, ಮೊದಲ ಇನ್ನಿಂಗ್ಸ್ನಲ್ಲಿ ಆಕರ್ಷಕ ಶತಕ ಬಾರಿಸಿದ್ದ ಲಬುಶೇನ್ ಅವರ ವಿಕೆಟ್ ಮೊದಲು ಕಬಳಿಸಿದರು. ಮೂರು ಎಸೆತಗಳ ನಂತರ ಎಡಚ ಮ್ಯಾಥ್ಯೂ ವೇಡ್ ಅವರ ವಿಕೆಟ್ ಕಿತ್ತರು. ಲಂಚ್ ವಿರಾಮದ ನಂತರ ಅತ್ಯಂತ ಬೆಲೆಬಾಳುವ ವಿಕೆಟ್ ಅವರಿಗೆ ದೊರಕಿತು. 55 ರನ್ ಗಳಿಸಿ ಸೆಟ್ಲ್ ಆಗಿದ್ದ ಆಸ್ಸೀಗಳ ರನ್ ಮಶೀನ್ ಸ್ಟೀವ್ ಸ್ಮಿತ್ ಅವರನ್ನು ಹೈದರಾಬಾದಿ ಔಟ್ ಮಾಡಿದರು. ಆಮೇಲೆ ಕಾಂಗರೂಗಳ ಬಾಲವನ್ನೂ ಕತ್ತರಿಸಿ 5 ವಿಕಟ್ ಪಡೆಯುವ ಸಾಧನೆ ಮಾಡಿದರು.
ಸಿರಾಜ್ ಮತ್ತು ಜಹೀರ್ ಅವರನ್ನು ಬಿಟ್ಟರೆ ಕೇವಲ ಮೂವರು ಭಾರತೀಯ ಬೌಲರ್ಗಳು ಬ್ರಿಸ್ಬೇನ್ನಲ್ಲಿ ಇನ್ನಿಂಗ್ಸೊಂದರಲ್ಲಿ 5 ವಿಕೆಟ್ ಪಡೆಯುವ ಸಾಧನೆ ಮಾಡಿದ್ದಾರೆ. 1968ರಲ್ಲಿ ಕರ್ನಾಟಕದ ಇಎಎಸ್ ಪ್ರಸನ್ನ (6/104), ಬಿಷನ್ ಸಿಂಗ್ ಬೇಡಿ (5/55) ಈ ಸಾಧನೆ ಮಾಡಿದ್ದರು. 1977ರ ಸರಣಿಯಲ್ಲಿ, ಅದೇ ಸರಣಿ ಮತ್ತು ಅದೇ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಮದನ್ ಲಾಲ್ (5/72) ಐದು ವಿಕೆಟ್ ಪಡೆದಿದ್ದರು.
ಗಬ್ಬಾ ಮೈದಾನದಲ್ಲಿ 5 ವಿಕೆಟ್ ಪಡೆದ ಪ್ರವಾಸಿ ತಂಡಗಳ ವೇಗದ ಬೌಲರ್ಗಳಲ್ಲಿ ಇಂಗ್ಲೆಂಡಿನ ಹೆರಾಲ್ಟ್ ಲಾರ್ವುಡ್ 1928ರಲ್ಲಿ, ಅದೇ ದೇಶದವರಾದ ಕೆನ್ ಶಟ್ಲ್ವರ್ತ್ 1970ರಲ್ಲಿ, ಗ್ರಹಾಂ ಡಿಲ್ಲಿ 1986ರಲ್ಲಿ, ಆಲನ್ ಮುಲ್ಲಾಲಿ 1998ರಲ್ಲಿ ಮತ್ತು ಶ್ರೀಲಂಕಾದ ಗ್ರೀಮ್ ಲ್ಯಾಬ್ರಾಯ್ (1998) ಕೂಡ ಈ ಸಾಧನೆ ಮಾಡಿದ್ದರು.
Before the Border-Gavaskar Test series, Siraj lost his father. He then made a promise to himself. Today, he fulfilled it.
Siraj, we are all very proud of you. #TeamIndia #AUSvIND pic.twitter.com/VUMhgJsJO4
— BCCI (@BCCI) January 18, 2021
Published On - 7:21 pm, Mon, 18 January 21