
ಬಿಹಾರದ ರಾಜ್‌ಗಿರ್‌ನಲ್ಲಿ ನಡೆಯುತ್ತಿರುವ ಹಾಕಿ ಏಷ್ಯಾಕಪ್‌ನಲ್ಲಿ (Hockey Asia Cup) ಭಾರತ ಹಾಕಿ ತಂಡದ ಗೆಲುವಿನ ಓಟ ಮುಂದುವರೆದಿದೆ. ಸತತ ಮೂರನೇ ಪಂದ್ಯವನ್ನು ಗೆಲ್ಲುವ ಮೂಲಕ ಹರ್ಮನ್‌ಪ್ರೀತ್ ಸಿಂಗ್ (Harmanpreet Singh) ಪಡೆ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಮೊದಲ ಪಂದ್ಯದಲ್ಲಿ ಚೀನಾ ತಂಡವನ್ನು ಮಣಿಸಿದ್ದ ಭಾರತ ತಂಡ ಎರಡನೇ ಪಂದ್ಯದಲ್ಲಿ ಜಪಾನ್ ತಂಡವನ್ನು ಸೋಲಿಸಿತ್ತು. ಇದೀಗ ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಕಝಾಕಿಸ್ತಾನ್ ತಂಡವನ್ನು ಏಕಪಕ್ಷೀಯ ಸೋಲಿಸಿತು. ಕುತೂಹಲಕಾರಿ ವಿಷಯವೆಂದರೆ ಈ ಪಂದ್ಯದಲ್ಲಿ ಕಝಾಕಿಸ್ತಾನ್ ತಂಡಕ್ಕೆ ಒಂದೇ ಒಂದು ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಭಾರತ ತಂಡ ಮಾತ್ರ ಒಂದರ ಹಿಂದೆ ಒಂದರಂತೆ 15 ಗೋಲುಗಳನ್ನು ಬಾರಿಸಿ ಸೂಪರ್ 4 ರಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.
ಈ ಬಾರಿ ಭಾರತ ತಂಡ ಹಾಕಿ ಏಷ್ಯಾಕಪ್‌ನ ಮೊದಲ ಪಂದ್ಯದಲ್ಲಿ ಚೀನಾವನ್ನು ಸೋಲಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಈ ಪಂದ್ಯದಲ್ಲಿ ಭಾರತ, ಚೀನಾವನ್ನು 4-3 ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾಯಿತು. ಇದರ ನಂತರ, ಭಾರತ ಎರಡನೇ ಪಂದ್ಯದಲ್ಲಿ ಜಪಾನ್ ತಂಡವನ್ನು 3-2 ಅಂತರದಿಂದ ಗೆದ್ದುಕೊಂಡಿತು. ಇದೀಗ ಕಝಾಕಿಸ್ತಾನ್ ತಂಡದ ವಿರುದ್ಧ 15-0 ಅಂತರದಿಂದ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿತು. ಇತ್ತ ಕಝಾಕಿಸ್ತಾನ್ ತಂಡಕ್ಕೆ ಗೋಲು ಗಳಿಸಲು ಕೆಲವು ಅವಕಾಶಗಳನ್ನು ಸಿಕ್ಕರೂ, ಅದರಲ್ಲಿ ಯಶಸ್ವಿಯಾಗಲಿಲ್ಲ.
ಪಂದ್ಯದ 5 ನೇ ನಿಮಿಷದಲ್ಲಿ ಅಭಿಷೇಕ್ ಮೊದಲ ಗೋಲು ಬಾರಿಸುವ ಮೂಲಕ ಭಾರತ ತಂಡದ ಖಾತೆ ತೆರೆದರು. ನಂತರ 8 ನೇ ನಿಮಿಷದಲ್ಲಿಯೂ ಮತ್ತೊಂದು ಗೋಲು ಬಾರಿಸುವಲ್ಲಿ ಅಭಿಷೇಕ್ ಯಶಸ್ವಿಯಾದರು. ಆ ಬಳಿಕ ಪಂದ್ಯದ 20 ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದ ಅಭಿಷೇಕ್ ತಮ್ಮ ಹ್ಯಾಟ್ರಿಕ್ ಪೂರ್ಣಗೊಳಿಸಿದರು. ಹೀಗಾಗಿ ಪಂದ್ಯದ ಮೊದಲಾರ್ಧ ಮುಗಿಯುವ ಹೊತ್ತಿಗೆ ಭಾರತ ತಂಡ 7-0 ಅಂತರದಿಂದ ಮುನ್ನಡೆ ಸಾಧಿಸಿತ್ತು.
ದ್ವಿತೀಯಾರ್ಧದಲ್ಲಿಯೂ ಪಾರುಪತ್ಯ ಮುಂದುವರೆಸಿದ ಭಾರತ ತಂಡ ಆಟ ಆರಂಭವಾದ 30 ಸೆಕೆಂಡುಗಳಲ್ಲಿಯೇ 8 ನೇ ಗೋಲು ಗಳಿಸಿತು. ಅಲ್ಲದೆ ದ್ವಿತೀಯಾರ್ಧದ 101 ಸೆಕೆಂಡುಗಳಲ್ಲಿ 3 ಗೋಲುಗಳನ್ನು ಬಾರಿಸಿ ಅಂತರವನ್ನು 10-0 ಗೆ ಏರಿಸಿತು. ದ್ವಿತೀಯಾರ್ಧದಲ್ಲಿ ಭಾರತದ ಸುಖ್ಜೀತ್ ಸಿಂಗ್ ತಮ್ಮ ಹ್ಯಾಟ್ರಿಕ್ ಗೋಲುಗಳನ್ನು ಪೂರ್ಣಗೊಳಿಸಿದರು. ಅಂತಿಮವಾಗಿ, 59 ನೇ ನಿಮಿಷದಲ್ಲಿ, ಅಭಿಷೇಕ್ ತಮ್ಮ ನಾಲ್ಕನೇ ಮತ್ತು ತಂಡದ 15 ನೇ ಗೋಲು ಬಾರಿಸಿ ತಂಡಕ್ಕೆ 15-0 ಅಂತರದ ಏಕಪಕ್ಷೀಯ ಜಯವನ್ನು ತಂದುಕೊಟ್ಟರು. ಭಾರತ ಪರ, ಅಭಿಷೇಕ್ 4, ಸುಖ್ಜೀತ್ 3, ನಾಯಕ ಹರ್ಮನ್‌ಪ್ರೀತ್ 2 ಮತ್ತು ಜುಗ್ರಾಜ್ ಸಿಂಗ್ ಕೂಡ 2 ಗೋಲುಗಳನ್ನು ಬಾರಿಸಿದರು.
ಸೂಪರ್-4 ಸುತ್ತಿಗೆ ಈಗಾಗಲೇ 4 ತಂಡಗಳು ಎಂಟ್ರಿಕೊಟ್ಟಿವೆ. ಪೂಲ್ ಎ ನಿಂದ ಭಾರತ ಹಾಗೂ ಚೀನಾ ಎಂಟ್ರಿಕೊಟ್ಟಿವೆ. ಭಾರತ ತಂಡ ಒಟ್ಟು ಮೂರು ಗೆಲುವುಗಳೊಂದಿಗೆ 9 ಅಂಕಗಳನ್ನು ಹೊಂದಿದ್ದರೆ, ಚೀನಾ ಕೇವಲ ನಾಲ್ಕು ಅಂಕಗಳನ್ನು ಹೊಂದಿದೆ. ಇನ್ನು ಪೂಲ್ ಬಿ ಬಗ್ಗೆ ಹೇಳುವುದಾದರೆ, ಮಲೇಷ್ಯಾ ಮತ್ತು ಕೊರಿಯಾ ಸೂಪರ್ 4 ಗೆ ಪ್ರವೇಶಿಸಿವೆ. ಮಲೇಷ್ಯಾ ತನ್ನ ಎಲ್ಲಾ ಪಂದ್ಯಗಳನ್ನು ಗೆದ್ದು 9 ಅಂಕಗಳನ್ನು ಹೊಂದಿದ್ದರೆ, ಕೊರಿಯಾ 6 ಅಂಕಗಳನ್ನು ಹೊಂದಿದೆ. ಸೂಪರ್ 4 ರಲ್ಲಿನ ಪಂದ್ಯಗಳ ಬಗ್ಗೆ ಮಾತನಾಡಿದರೆ, ಎಲ್ಲಾ ನಾಲ್ಕು ತಂಡಗಳು ಪರಸ್ಪರ ಒಂದು ಪಂದ್ಯವನ್ನು ಆಡುತ್ತವೆ. ಅಂದರೆ, ಚೀನಾವನ್ನು ಹೊರತುಪಡಿಸಿ, ಭಾರತವು ಮಲೇಷ್ಯಾ ಮತ್ತು ಕೊರಿಯಾವನ್ನು ಸಹ ಎದುರಿಸಬೇಕಾಗುತ್ತದೆ. ಅದರ ನಂತರ, ಅಗ್ರ ತಂಡಗಳು ಫೈನಲ್‌ಗೆ ಹೋಗುತ್ತವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:34 pm, Mon, 1 September 25