
ನವದೆಹಲಿ: ಹೊಸ ವಿಶ್ವ ಅಥ್ಲೆಟಿಕ್ಸ್ ರ‍್ಯಾಕಿಂಗ್ ಬುಧವಾರದಂದು ಬಿಡುಗಡೆಯಾಗಿದ್ದು ಟೋಕಿಯೋ ಒಲಂಪಿಕ್ಸ್ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಎರಡನೇ ಸ್ಥಾನದಲ್ಲಿದ್ದಾರೆ. ಭಾರತೀಯನ ಸ್ಕೋರ್ 1,315 ಆಗಿದ್ದು, 1,396 ಸ್ಕೋರ್ ಹೊಂದಿರುವ ಜರ್ಮನಿಯ ಜೊಹಾನ್ನೆಸ್ ವೆಟ್ಟರ್ ಮೊದಲ ಸ್ಥಾನದಲ್ಲಿದ್ದಾರೆ. ಪೋಲೆಂಡಿನ ಮಾರ್ಸಿನ್ ಕ್ರುಕೋವ್ಸ್ಕಿ ಮೂರು ಮತ್ತು ಜೆಕ್ ಗಣರಾಜ್ಯದ ಜೇಕಬ್ ವಾಡ್ಲೆಚ್ ನಾಲ್ಕು ಮತ್ತು ಜರ್ಮನಿಯವರೇ ಆಗಿರುವ ಜೂಲಿಯನ್ ವೀಬರ್ 5 ನೇ ಸ್ಥಾನದಲ್ಲಿದ್ದಾರೆ.
ಟೋಕಿಯೋ ಒಲಂಪಿಕ್ಸ್ನಲ್ಲಿ 87.58 ಮೀ ದೂರ ಜಾವೆಲಿನ್ ಎಸೆದು ತಮ್ಮ ಕರೀಯರ್ನ ಅತ್ಯುತ್ತಮ ಸಾಧನೆ ಮೆರೆದ ನೀರಜ್ ಅವರು ಭಾರತಕ್ಕೆ ಟ್ರ್ಯಾಕ್ ಅಂಡ್ ಫೀಲ್ಡ್ನಲ್ಲಿ ಮೊಟ್ಟ ಮೊದಲ ಪದಕ ಗೆದ್ದರು. ಈ ಬಾರಿ ಒಂದು ಚಿನ್ನದ ಪದಕ ಸೇರಿದಂತೆ ಒಟ್ಟು 7 ಪದಕ ತನ್ನದಾಗಿಸಿಕೊಂಡ ಭಾರತ ಇದುವರೆಗಿನ ಇತಿಹಾಸದಲ್ಲಿ ಅತ್ಯುತ್ಮಮ ಸಾಧನೆಯೊಂದಿಗೆ ಮರಳಿತು.
ಟೊಕಿಯೋನಿಂದ ವಾಪಸ್ಸಾದ ನೀರಜ್ ಮತ್ತು ಬೇರೆ ಪದಕ ವಿಜೇತರಿಗೆ ಅಭೂತಪೂರ್ವ ಸ್ವಾಗತ ಸಿಕ್ಕಿತು. ಕೇಂದ್ರ ಕ್ರೀಡಾ ಸಚಿವ ಅನುರಾಗ ಠಾಕೂರ್ ಮತ್ತು ಅವರಿಗಿಂತ ಮೊದಲು ಆ ಖಾತೆ ಹೊಂದಿದ್ದ ಕಿರಣ್ ರಿಜಿಜು ಅವರು ಕ್ರೀಡಾಪಟುಗಳಿಗೆ ದೆಹಲಿಯಲ್ಲಿ ನಡೆದ ಒಂದು ಅದ್ದೂರಿ ಸಮಾರಂಭದಲ್ಲಿ ಸತ್ಕರಿಸಿದರು.
ಅದೇ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ನೀರಜ್ ಅವರು, ಚಿನ್ನದ ಪದಕ ಗೆದ್ದಿರುವುದರಿಂದ ತಾನೇನೂ ಅಕಾಶದಲ್ಲಿ ಹಾರಾಡುವುದಿಲ್ಲ ಎಂದು ಹೇಳಿದ್ದರು.
‘ನನ್ನ ಗಮನವೆಲ್ಲ ಕ್ರೀಡೆಯ ಮೇಲಿತ್ತು. ನಾವು ಪ್ರತಿನಿಧಿಸುವ ಕ್ರೀಡೆಯಲ್ಲಿ ಸತತವಾಗಿ ಉತ್ತಮ ಪ್ರದರ್ಶನಗಳನ್ನು ನೀಡುತ್ತಿದ್ದರೆ ಪ್ರಾಯೋಜಕತ್ವ ಮತ್ತು ಹಣ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಇದನ್ನು ನಾನು ಯೋಗ್ಯವಾದ ರೀತಿಯಲ್ಲಿ ಇನ್ವೆಸ್ಟ್ ಮಾಡಲು ಪ್ರಯತ್ನಿಸುತ್ತೇನೆ ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡುತ್ತೇನೆ. ನನ್ನ ಪ್ರಮುಖ ಆದ್ಯತೆ ಎಂದರೆ, ಗಮನವನ್ನೆಲ್ಲ ಕ್ರೀಡೆಯ ಮೇಲೆ ಕೇಂದ್ರೀಕರಿಸುವುದು ಮತ್ತು ಯಶಸ್ಸು ತಲೆಗೇರದಂತೆ ನೋಡಿಕೊಳ್ಳುವುದು,’ ಎಂದು ನೀರಜ್ ಹೇಳಿದ್ದರು.
‘ಒಲಂಪಿಕ್ಸ್ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಸುದೀರ್ಘಾವಧಿಯ ಪದಕ ನಿರೀಕ್ಷೆಯನ್ನು ಕೊನೆಗಾಣಿಸಲು ಸಾಧ್ಯವಾಗಿದ್ದು ನನ್ನ ಆದೃಷ್ಟವೆಂದೇ ಭಾವಿಸುತ್ತೇನೆ. ಕೇವಲ ಅಥ್ಲೆಟಿಕ್ಸ್ ಮಾತ್ರ ಅಲ್ಲ, ಟೋಕಿಯೋ ಒಲಂಪಿಕ್ಸ್ನಲ್ಲಿ ನಾವು ಭಾಗವಹಿಸಿದ ಎಲ್ಲ ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆವು,’ ಎಂದು ನೀರಜ್ ಹೇಳಿದ್ದರು.
ವಿಶ್ವ ಅಥ್ಲೆಟಿಕ್ಸ್ ಸಂಸ್ಥೆಯು ಪಟ್ಟಿ ಮಾಡಿರುವ ಟೊಕಿಯೋ ಒಲಂಪಿಕ್ಸ್ನ 10 ಸ್ಮರಣೀಯ ಕ್ಷಣಗಳಲ್ಲಿ ನೀರಜ್ ಅವರ ಚಿನ್ನದ ಪದಕ ಗೆಲ್ಲುವ ಸಾಧನೆಯೂ ಒಂದಾಗಿದೆ.
ಇದನ್ನೂ ಓದಿ: ನೀರಜ್ ಚೋಪ್ರಾಗೆ ಕೊಟ್ಟ ಗೋಲ್ಡನ್ ಪಾಸ್ ನೀರಲ್ಲಿ ಹೋಮ ಮಾಡಿದಂತೆ; ಕೆಎಸ್ಆರ್ಟಿಸಿಗೆ ತಿರುಗೇಟು ನೀಡಿದ ನೆಟ್ಟಿಗರು