ಜಾಕೆಟ್‌ನಲ್ಲಿ ಇಯರ್‌ಬಡ್ಸ್ ಪತ್ತೆ; ವಿಶ್ವ ಚಾಂಪಿಯನ್‌ಶಿಪ್‌ನಿಂದ ಭಾರತದ ಚೆಸ್ ಪಟು ಔಟ್..!

| Updated By: ಪೃಥ್ವಿಶಂಕರ

Updated on: Oct 19, 2022 | 11:18 AM

World Championship: ಉದ್ದೇಶ ಪೂರಿತವಾಗಿಯೇ ಪ್ರಿಯಾಂಕ ಈ ಇಯರ್‌ಬಡ್ಸ್​ಗಳನ್ನು ತಮ್ಮ ಜಾಕೆಟ್​ನಲ್ಲಿ ಇರಿಸಿಕೊಂಡಿದ್ದರು ಎಂಬುದಕ್ಕೆ ಯಾವುದೇ ಸಾಕ್ಷ್ಯ ದೊರೆತಿಲ್ಲ ಎಂದು ವಿಶ್ವ ಚೆಸ್ ಫೆಡರೇಶನ್ ಹೇಳಿಕೆಯನ್ನು ಪ್ರಕಟಿಸುವ ಮೂಲಕ ಸ್ಪಷ್ಟಪಡಿಸಿದೆ.

ಜಾಕೆಟ್‌ನಲ್ಲಿ ಇಯರ್‌ಬಡ್ಸ್ ಪತ್ತೆ; ವಿಶ್ವ ಚಾಂಪಿಯನ್‌ಶಿಪ್‌ನಿಂದ ಭಾರತದ ಚೆಸ್ ಪಟು ಔಟ್..!
Priyanka Nutakki
Follow us on

ಭಾರತದ ಮಹಿಳಾ ಗ್ರ್ಯಾಂಡ್‌ಮಾಸ್ಟರ್ (India’s Grandmaster) ಮತ್ತು 7 ನೇ ಶ್ರೇಯಾಂಕದ ಪ್ರಿಯಾಂಕಾ ನುಟಕ್ಕಿ ಅವರನ್ನು ಇಟಲಿಯಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಶಿಪ್‌ನಿಂದ (World Championship) ಹೊರಹಾಕಲಾಗಿದೆ. ಪ್ರಿಯಾಂಕಾ ಧರಿಸಿದ್ದ ಜಾಕೆಟ್‌ನ ಜೇಬಿನಲ್ಲಿ ಇಯರ್‌ಬಡ್ಸ್ ಪತ್ತೆಯಾಗಿದ್ದು, ಈ ಕಾರಣದಿಂದಾಗಿ ಅವರನ್ನು ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಿಂದ (World Junior Chess Championship) ಹೊರಗಿಟ್ಟಿರುವುದಾಗಿ ವಿಶ್ವ ಚೆಸ್ ಫೆಡರೇಶನ್ (FIDE) ಖಚಿತಪಡಿಸಿದೆ. ಪಂದ್ಯಾವಳಿಯಲ್ಲಿ ನಿಷೇಧಿತ ವಸ್ತುಗಳಲ್ಲಿ ಇಯರ್‌ಬಡ್ಸ್ ಕೂಡ ಒಂದಾಗಿದ್ದು, ಪ್ರಿಯಾಂಕಾ ಜಾಕೆಟ್​ನಲ್ಲಿ ಇದು ಪತ್ತೆಯಾದ ಬಳಿಕ ಅವರನ್ನು ಚಾಂಪಿಯನ್‌ಶಿಪ್‌ನಿಂದ ಹೊರಗಿಡುವ ನಿರ್ಧಾರ ಕೈಗೊಳ್ಳಲಾಗಿದೆ.

ಆದರೆ ಉದ್ದೇಶ ಪೂರಿತವಾಗಿಯೇ ಪ್ರಿಯಾಂಕ ಈ ಇಯರ್‌ಬಡ್ಸ್​ಗಳನ್ನು ತಮ್ಮ ಜಾಕೆಟ್​ನಲ್ಲಿ ಇರಿಸಿಕೊಂಡಿದ್ದರು ಎಂಬುದಕ್ಕೆ ಯಾವುದೇ ಸಾಕ್ಷ್ಯ ದೊರೆತಿಲ್ಲ ಎಂದು ವಿಶ್ವ ಚೆಸ್ ಫೆಡರೇಶನ್ ಹೇಳಿಕೆಯನ್ನು ಪ್ರಕಟಿಸುವ ಮೂಲಕ ಸ್ಪಷ್ಟಪಡಿಸಿದೆ. ಹಾಗೆಯೇ ಪ್ರಿಯಾಂಕ ಅವರ ಅಜಾಗರೂಕತೆಯಿಂದ ಇಯರ್‌ಬಡ್ಸ್​ಗಳು ಜಾಕೆಟ್​ನಲ್ಲಿ ಉಳಿದುಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಫೇರ್‌ಪ್ಲೇ ನೀತಿಗಳ ಉಲ್ಲಂಘನೆ

ವಾಸ್ತವವಾಗಿ, ಪಂದ್ಯಾವಳಿಯ ಸಮಯದಲ್ಲಿ ಇಯರ್‌ಬಡ್ಸ್​ಗಳನ್ನು ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹಾಗೆಯೇ ಆಟದ ಸಮಯದಲ್ಲಿ ಇಯರ್‌ಬಡ್ಸ್​ಗಳಂತಹ ಸಾಧನಗಳನ್ನು ಆಟಗಾರರು ತಮ್ಮ ಜೊತೆ ಒಯ್ಯುವುದು ಫೇರ್‌ಪ್ಲೇ ನೀತಿಗಳ ಉಲ್ಲಂಘನೆಯಾಗಿದೆ. ಯಾವುದೇ ಆಟಗಾರ ಈ ಕೆಲಸವನ್ನು ಮಾಡಿದರೆ, ಆತನನ್ನು ಕೂಡಲೇ ಆಟದಿಂದ ಹೊರಗಿಡಲಾಗುತ್ತದೆ ಅಥವಾ ಶಿಕ್ಷೆಯಾಗಿ ಆ ಆಟಗಾರ ಇಡೀ ಪಂದ್ಯಾವಳಿಯಿಂದಲೇ ಹೊರಗುಳಿಯಬೇಕಾಗುತ್ತದೆ.

ಎದುರಾಳಿಗೆ ಲಾಭ

ಈಗ ಈ ಚಾಂಪಿಯನ್‌ಶಿಪ್‌ನಿಂದ ಪ್ರಿಯಾಂಕಾ ನಿರ್ಗಮಿಸಿರುವುದು ಅವರ ಪ್ರತಿಸ್ಪರ್ಧಿಗೆ ಪ್ರಯೋಜನವಾಗಿದೆ. ವಾಸ್ತವವಾಗಿ, ಆರನೇ ಸುತ್ತಿನಲ್ಲಿ ಪ್ರಿಯಾಂಕ ಗಳಿಸಿದ ಅಂಕಗಳನ್ನು ಅವರ ಪ್ರತಿಸ್ಪರ್ಧಿ ಗೋವಾಹರ್ ಬೆದುಲೇವಾಗೆ ವರ್ಗಾಯಿಸಲಾಗಿದೆ. ವಿಶ್ವ ಚೆಸ್ ಫೆಡರೇಶನ್​ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಭಾರತ ತಂಡ ಪಂದ್ಯಾವಳಿಯ ಮೇಲ್ಮನವಿ ಸಮಿತಿಯ ಮೊರೆ ಹೋಗಿತ್ತು. ಆದರೆ ಮೇಲ್ಮನವಿ ಸಮಿತಿ ಕೂಡ ವಿಶ್ವ ಚೆಸ್ ಫೆಡರೇಶನ್ ನಿರ್ಧಾರವನ್ನು ಎತ್ತಿಹಿಡಿದಿದೆ. ಈ ಟೂರ್ನಿಯಲ್ಲಿ ಆಡಿದ 5 ಸುತ್ತುಗಳಲ್ಲಿ ಪ್ರಿಯಾಂಕ 3 ಜಯ ಹಾಗೂ 2 ಡ್ರಾ ಸಾಧಿಸಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:18 am, Wed, 19 October 22