T20 World Cup 2022: ಶಮಿ ಬೆನ್ನಲ್ಲೇ ಟೀಮ್ ಇಂಡಿಯಾವನ್ನು ಸೇರಿಕೊಂಡ ಮತ್ತೋರ್ವ ಆಟಗಾರ
T20 World Cup 2022: ಈ ಹಿಂದೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದ ಜಸ್ಪ್ರೀತ್ ಬುಮ್ರಾ ಗಾಯಗೊಂಡ ಪರಿಣಾಮ ಮೀಸಲು ಆಟಗಾರರ ಪಟ್ಟಿಯಲ್ಲಿದ್ದ ಮೊಹಮ್ಮದ್ ಶಮಿ ಅವರನ್ನು ಮುಖ್ಯ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.
ಟಿ20 ವಿಶ್ವಕಪ್ಗಾಗಿ ಭರ್ಜರಿ ತಯಾರಿಯಲ್ಲಿರುವ ಟೀಮ್ ಇಂಡಿಯಾ ಇದೀಗ 2ನೇ ಅಭ್ಯಾಸ ಪಂದ್ಯಕ್ಕಾಗಿ ಸಜ್ಜಾಗಿದೆ. ಬುಧವಾರ ಬ್ರಿಸ್ಬೇನ್ನಲ್ಲಿ ನಡೆಯಲಿರುವ 2ನೇ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ. ಇದಾದ ಬಳಿಕ ಟೀಮ್ ಇಂಡಿಯಾ ಅಕ್ಟೋಬರ್ 23 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಇದೀಗ ಟೀಮ್ ಇಂಡಿಯಾ ಬಳಗವನ್ನು ಸೇರಿಕೊಂಡಿದ್ದಾರೆ ವೇಗಿ ಮೊಹಮ್ಮದ್ ಸಿರಾಜ್.
ಈ ಹಿಂದೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದ ಜಸ್ಪ್ರೀತ್ ಬುಮ್ರಾ ಗಾಯಗೊಂಡ ಪರಿಣಾಮ ಮೀಸಲು ಆಟಗಾರರ ಪಟ್ಟಿಯಲ್ಲಿದ್ದ ಮೊಹಮ್ಮದ್ ಶಮಿ ಅವರನ್ನು ಮುಖ್ಯ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಹೀಗಾಗಿ ಮೀಸಲು ಆಟಗಾರರ ಪಟ್ಟಿಯಲ್ಲಿ ಶಮಿಯ ಸ್ಥಾನದಲ್ಲಿ ಸಿರಾಜ್ ಅವರನ್ನು ಆಯ್ಕೆ ಮಾಡಲಾಗಿದೆ.
ಇದೀಗ ಆಸ್ಟ್ರೇಲಿಯಾ ತಲುಪಿರುವ ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾದ ನೆಟ್ ಬೌಲರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಅಷ್ಟೇ ಅಲ್ಲದೆ ಮುಖ್ಯ ತಂಡದಿಂದ ಯಾವುದಾದರೂ ಬೌಲರ್ ಗಾಯಗೊಂಡು ಅಥವಾ ಇನ್ನಿತರ ಕಾರಣಗಳಿಂದ ಹೊರಗುಳಿದರೆ ಸಿರಾಜ್ಗೆ ಅವಕಾಶ ಸಿಗಬಹುದು.
ಸದ್ಯ ಆಸ್ಟ್ರೇಲಿಯಾದಲ್ಲಿರುವ ಮೊಹಮ್ಮದ್ ಸಿರಾಜ್ ಸಹ ಆಟಗಾರ ಅಕ್ಷರ್ ಪಟೇಲ್ ಜೊತೆಗಿನ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ಸಿರಾಜ್ ಕೂಡ ಟೀಮ್ ಇಂಡಿಯಾವನ್ನು ಕೂಡಿಕೊಂಡಿರುವುದು ಕನ್ಫರ್ಮ್ ಆಗಿದೆ.
ಟಿ20 ವಿಶ್ವಕಪ್ ಟೀಮ್ ಇಂಡಿಯಾ ವೇಳಾಪಟ್ಟಿ:
- ಅಕ್ಟೋಬರ್-23 : ಭಾರತ vs ಪಾಕಿಸ್ತಾನ – ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ
- ಅಕ್ಟೋಬರ್-27: ಭಾರತ vs ಅರ್ಹತಾ ಸುತ್ತಿನ A ಗ್ರೂಪ್ನ ರನ್ನರ್ ಅಪ್ ತಂಡ – ಸಿಡ್ನಿ ಕ್ರಿಕೆಟ್ ಸ್ಟೇಡಿಯಂ
- ಅಕ್ಟೋಬರ್- 30: ಭಾರತ vs ದಕ್ಷಿಣ ಆಫ್ರಿಕಾ – ಪರ್ತ್ ಸ್ಟೇಡಿಯಂ
- ನವೆಂಬರ್-2: ಭಾರತ vs ಬಾಂಗ್ಲಾದೇಶ -ಅಡಿಲೇಡ್ ಓವಲ್
- ನವೆಂಬರ್-6: ಭಾರತ vs ಅರ್ಹತಾ ಸುತ್ತಿನ B ಗ್ರೂಪ್ನ ವಿನ್ನರ್ ತಂಡ
ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಮೀಸಲು ಆಟಗಾರರು: ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್.