IPL 2021 Auction Rules: ಐಪಿಎಲ್ 2021 ಹರಾಜು ಪ್ರಕ್ರಿಯೆ ವೇಳೆ ಫ್ರಾಂಚೈಸಿಗಳು ಪಾಲಿಸಲೇಬೇಕಾದ 5 ನಿಯಮಗಳು
IPL 2021 Auction: ಐಪಿಎಲ್ 2021 ಹರಾಜು ಇಂದು (ಫೆಬ್ರವರಿ 18, ಗುರುವಾರ) ಮಧ್ಯಾಹ್ನ 3 ಗಂಟೆಗೆ ಚೆನ್ನೈನಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ ಭಾಗವಹಿಸುವ ಫ್ರಾಂಚೈಸಿಗಳು ಕೆಲ ನಿಯಮಗಳನ್ನು ಪಾಲಿಸಬೇಕಾಗಿದ್ದು, ಆ ನಿಯಮಗಳು ಯಾವುವು? ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ 14 ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು (ಫೆಬ್ರವರಿ 18, ಗುರುವಾರ) ಮಧ್ಯಾಹ್ನ 3ಗಂಟೆಗೆ ಚೆನ್ನೈನಲ್ಲಿ ನಡೆಯಲಿರುವ ಐಪಿಎಲ್ 2021 ಹರಾಜು ಕಾರ್ಯಕ್ರಮದಲ್ಲಿ ಎಲ್ಲಾ ಫ್ರಾಂಚೈಸಿಗಳೂ ಪಾಲ್ಗೊಳ್ಳಲಿದ್ದು, ಅವರಿಗೆ ಕೆಲ ನಿಯಾಮವಳಿಗಳನ್ನು ರೂಪಿಸಲಾಗಿದೆ. ಒಟ್ಟು 292 ಆಟಗಾರರು ಖಾಲಿಯಿರುವ 61 ಸ್ಥಾನಗಳಿಗಾಗಿ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದು, 22 ವಿದೇಶಿ ಆಟಗಾರರು ಸಹ ಇರಲಿದ್ದಾರೆ. ತಮಗೆ ಬೇಕಾದ ಆಟಗಾರರ ಮೇಲೆ ಫ್ರಾಂಚೈಸಿಗಳು ಈಗಾಗಲೇ ಕಣ್ಣಿಟ್ಟಿದ್ದು ಖರೀದಿಗೆ ಸಿದ್ಧವಾಗಿವೆ. ಆದರೆ, ಈ ಹರಾಜಿನಲ್ಲಿ ಪಾಲ್ಗೊಳ್ಳಲು ಫ್ರಾಂಚೈಸಿಗಳು ಪಾಲಿಸಬೇಕಾದ ನಿಯಮಗಳೇನು? ಎನ್ನುವ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
1. ಪ್ರತಿ ಫ್ರಾಂಚೈಸಿಯೂ ಗರಿಷ್ಠ 85ಕೋಟಿ ವ್ಯಯಿಸಬಹುದು ಹರಾಜಿನಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ 8 ಫ್ರಾಂಚೈಸಿಗಳಿಗೆ ಗರಿಷ್ಠ ₹85 ಕೋಟಿ ವ್ಯಯಿಸುವ ಅವಕಾಶವಿದೆ. ಎಲ್ಲಾ ತಂಡಗಳ ಪೈಕಿ ಪಂಜಾಬ್ ಕಿಂಗ್ಸ್ ಅತಿ ಹೆಚ್ಚು ಅಂದರೆ ₹53.2 ಕೋಟಿ ಉಳಿಸಿಕೊಂಡಿದ್ದರೆ, ರಾಜಸ್ಥಾನ ₹37.85 ಕೋಟಿ ಉಳಿಸಿಕೊಳ್ಳುವ ಮೂಲಕ ಎರಡನೇ ಸ್ಥಾನದಲ್ಲಿದೆ. ಈ ಮೂಲಕ ತಮ್ಮಲ್ಲಿದ್ದ ಕೆಲ ಆಟಗಾರರನ್ನು ಕೈ ಬಿಟ್ಟು ಖಾತೆಯಲ್ಲಿ ಸದ್ಯ ಹೆಚ್ಚು ಹಣ ಉಳಿಸಿಕೊಂಡಿವೆ. ಇನ್ನೊಂದೆಡೆ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಅತಿ ಕಡಿಮೆ ಅಂದರೆ ಕೇವಲ ₹10.75 ಕೋಟಿಯನ್ನು ಕೈಯಲ್ಲಿ ಉಳಿಸಿಕೊಂಡಿವೆ. ಹೀಗಾಗಿ ಈ ತಂಡಗಳು ಹೊಸಬರನ್ನು ಖರೀದಿ ಮಾಡುವಾಗ ಹೆಚ್ಚು ವ್ಯಯಿಸುವುದು ಸಾಧ್ಯವಿಲ್ಲ.
2. ಪ್ರತಿ ತಂಡವೂ ₹85 ಕೋಟಿಯಲ್ಲಿ ಶೇ.75ರಷ್ಟು ಹಣವನ್ನಾದರೂ ಖರ್ಚು ಮಾಡಲೇಬೇಕು ಐಪಿಎಲ್ನಲ್ಲಿ ಭಾಗವಹಿಸುವ ಪ್ರತಿ ತಂಡವೂ ತಮ್ಮ ಬಳಿಯಿರುವ ₹85 ಕೋಟಿಯಲ್ಲಿ ಶೇ.75ರಷ್ಟು ಹಣವನ್ನು ವ್ಯಯಿಸಲೇಬೇಕು. ಒಂದುವೇಳೆ, ಶೇ.75ರಷ್ಟು ಹಣ ಖರ್ಚು ಮಾಡಲಾಗದಿದ್ದರೆ ಅಥವಾ ಹಾಗೆಯೇ ಉಳಿಸಿಕೊಂಡರೆ ಆ ಮೊತ್ತ ಬಿಸಿಸಿಐ ಪಾಲಾಗಲಿದೆ.
3. ರೈಟ್ ಟು ಮ್ಯಾಚ್ (RTM) ಕಾರ್ಡ್ ಬಳಕೆಗೆ ಅವಕಾಶವಿಲ್ಲ ಐಪಿಎಲ್ ತಂಡಗಳು ತಾವು ಕೈಬಿಟ್ಟ ಆಟಗಾರರನ್ನು ರೈಟ್ ಟು ಮ್ಯಾಚ್ (RTM) ಕಾರ್ಡ್ ಮೂಲಕ ಹಿಂಪಡೆಯುವ ಅವಕಾಶ ಈ ಹಿಂದೆ ಇತ್ತು. ಅಂದರೆ ತಾವು ಕೈಬಿಟ್ಟ ಆಟಗಾರರನ್ನು ಬೇರೆ ಫ್ರಾಂಚೈಸಿಗಳು ಖರೀದಿಸಿದ ನಂತರವೂ ಹಳೇ ತಂಡ ಅವರನ್ನು ಹಿಂಪಡೆಯಬಹುದಾಗಿತ್ತು. ಆದರೆ, ಈ ನಿಯಮ ಕೇವಲ ಮೆಗಾ ಹರಾಜಿನಲ್ಲಿ ಮಾತ್ರ ಅನ್ವಯವಾಗಲಿದ್ದು, ಈ ಬಾರಿ ಮಿನಿ ಹರಾಜಿನಲ್ಲಿ (RTM) ಕಾರ್ಡ್ ಬಳಕೆ ಸಾಧ್ಯವಿಲ್ಲ. ಹೀಗಾಗಿ ಕೈಬಿಟ್ಟ ಆಟಗಾರರನ್ನು ಮರಳಿ ಪಡೆಯಬೇಕೆಂದರೆ ತಂಡಗಳು ಪುನಃ ಮೊತ್ತ ಪಾವತಿಸಿ ಕೊಂಡುಕೊಳ್ಳಬೇಕು.
4. ಗರಿಷ್ಠ 25 ಮತ್ತು ಕನಿಷ್ಠ 18 ಆಟಗಾರರು ತಂಡದಲ್ಲಿರಬಹುದು ಪ್ರತಿ ತಂಡವೂ ಗರಿಷ್ಠ 25 ಆಟಗಾರ ಮತ್ತು ಕನಿಷ್ಠ 18 ಆಟಗಾರರನ್ನು ತಂಡದಲ್ಲಿರಿಸಿಕೊಳ್ಳಬಹುದು. ಸದ್ಯ ಆರ್ಸಿಬಿ ತಂಡ ತಂಡದಿಂದ ಬಹುತೇಕ ಆಟಗಾರರನ್ನು ಕೈಬಿಟ್ಟ ಕಾರಣ ಹೊಸದಾಗಿ 11 ಜನರನ್ನು ಬರಮಾಡಿಕೊಳ್ಳಬಹುದಾಗಿದ್ದು, ಸನ್ ರೈಸರ್ಸ್ ಹೈದರಾಬಾದ್ ಕಳೆದ ಸಾಲಿನಲ್ಲಿದ್ದ ಹೆಚ್ಚಿನ ಆಟಗಾರರನ್ನು ಉಳಿಸಿಕೊಂಡಿರುವ ಕಾರಣ ಕೇವಲ 3 ಜನರನ್ನು ಈ ಬಾರಿ ಸೇರಿಸಿಕೊಳ್ಳಬಹುದಾಗಿದೆ.
5. ಗರಿಷ್ಠ 8 ಜನ ವಿದೇಶಿ ಆಟಗಾರರು ಇರಬಹುದು, ಕನಿಷ್ಠ ಇಂತಿಷ್ಟೇ ಇರಬೇಕೆಂಬ ನಿಯಮವಿಲ್ಲ ಐಪಿಎಲ್ನಲ್ಲಿ ಭಾಗವಹಿಸುವ ತಂಡಗಳು ಭಾರತೀಯ ಆಟಗಾರರಿಗೆ ಮನ್ನಣೆ ನೀಡಬೇಕೆಂಬ ಕಾರಣಕ್ಕೆ ಒಟ್ಟು 25 ಆಟಗಾರರ ಪೈಕಿ ಗರಿಷ್ಠ 8 ಮಂದಿ ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ. ಆದರೆ, ಕನಿಷ್ಠ ಇಂತಿಷ್ಟು ವಿದೇಶಿಗರನ್ನು ಹೊಂದಲೇಬೇಕೆಂಬ ನಿಯಮವಿಲ್ಲದ ಕಾರಣ, ಯಾವುದಾದರೂ ತಂಡ ಇಚ್ಛೆಪಟ್ಟರೆ ಯಾವುದೇ ವಿದೇಶಿಗರನ್ನು ಖರೀದಿಸದೇ ಕೇವಲ ಭಾರತೀಯ ಆಟಗಾರರನ್ನಷ್ಟೇ ಇಟ್ಟುಕೊಳ್ಳಲು ಅವಕಾಶವಿದೆ.
ಇದನ್ನೂ ಓದಿ: ಐಪಿಎಲ್ 2021 ಹರಾಜು ಪ್ರಕ್ರಿಯೆ ಎಲ್ಲಿ, ಯಾವಾಗ, ಎಷ್ಟು ಗಂಟೆಗೆ ನಡೆಯಲಿದೆ? ಇಲ್ಲಿದೆ ಮಾಹಿತಿ