ಹಿಂಜರಿಯಬೇಡಿ, ಬೇಗ ಲಸಿಕೆ ಪಡೆಯಿರಿ; ಕೊವಿಡ್ ಲಸಿಕೆ ಪಡೆದ ಟೀಂ ಇಂಡಿಯಾದ ಮೊದಲ ಕ್ರಿಕೆಟಿಗ ಶಿಖರ್​ ಧವನ್

| Updated By: Skanda

Updated on: May 07, 2021 | 8:30 AM

ಕೊರೊನಾ ಯೋಧರ ತ್ಯಾಗ ಮತ್ತು ಬದ್ಧತೆಗೆ ಧನ್ಯವಾದಗಳು. ದಯವಿಟ್ಟು ಹಿಂಜರಿಯಬೇಡಿ, ಶೀಘ್ರದಲ್ಲೇ ಲಸಿಕೆ ಪಡೆಯಿರಿ: ಶಿಖರ್ ಧವನ್​

ಹಿಂಜರಿಯಬೇಡಿ, ಬೇಗ ಲಸಿಕೆ ಪಡೆಯಿರಿ; ಕೊವಿಡ್ ಲಸಿಕೆ ಪಡೆದ ಟೀಂ ಇಂಡಿಯಾದ ಮೊದಲ ಕ್ರಿಕೆಟಿಗ ಶಿಖರ್​ ಧವನ್
ಕೋವಿಡ್ ಲಸಿಕೆ ಪಡೆದ ಟೀಂ ಇಂಡಿಯಾದ ಮೊದಲ ಕ್ರಿಕೆಟಿಗ ಶಿಖರ್​ ಧವನ್
Follow us on

ಐಪಿಎಲ್ 2021 ಮುಂದೂಡಲ್ಪಟ್ಟ ನಂತರ, ಭಾರತೀಯ ಕ್ರಿಕೆಟಿಗರು ಸೇರಿದಂತೆ ಎಲ್ಲಾ ಆಟಗಾರರು ತಮ್ಮ ತಮ್ಮ ಮನೆಗಳಿಗೆ ಮರಳಲು ಪ್ರಾರಂಭಿಸಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತಾ, ಟೀಮ್ ಇಂಡಿಯಾದ ಹಿರಿಯ ಬ್ಯಾಟ್ಸ್‌ಮನ್ ಶಿಖರ್ ಧವನ್ ಮೊದಲು ಅತ್ಯಂತ ಪ್ರಮುಖವಾದ ಕೆಲಸವನ್ನು ಮಾಡಿದ್ದಾರೆ. ಕೊರೊನಾ ವೈರಸ್ ವಿರುದ್ಧದ ಲಸಿಕೆ ಪಡೆಯಲು ಅತ್ಯುತ್ಸಾಹದಿಂದ ಮುಂದಡಿ ಇಟ್ಟ ಧವನ್​ ಇತರ ಭಾರತೀಯ ಆಟಗಾರರು ಸೇರಿದಂತೆ ಜನಸಾಮಾನ್ಯರೆಲ್ಲರಿಗೂ ಮಾದರಿಯಾಗಿದ್ದಾರೆ. ಮೇ 6 ರ ಗುರುವಾರದಂದು ಶಿಖರ್ ಧವನ್ ಕೊರೊನಾ ಲಸಿಕೆಯ ಮೊದಲ ಡೋಸ್​ ತೆಗೆದುಕೊಂಡಿದ್ದಾರೆ. ಲಸಿಕೆ ಪಡೆಯುವ ಪೋಟೋ ಹಂಚಿಕೊಂಡಿರುವ ಅವರು ಸಾಂಕ್ರಾಮಿಕ ರೋಗ ಉಲ್ಬಣಿಸುತ್ತಿರುವ ಈ ಹಂತದಲ್ಲಿ ಅದನ್ನು ಮಣಿಸಲು ಮುಂಚೂಣಿಯಲ್ಲಿ ನಿಂತಿರುವ ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದ್ದಾರೆ. ಲಸಿಕೆ ತೆಗೆದುಕೊಂಡ ಟೀಮ್ ಇಂಡಿಯಾದ ಮೊದಲ ಆಟಗಾರ ಶಿಖರ್ ಧವನ್ ಎನ್ನುವುದು ಗಮನಾರ್ಹವಾಗಿದೆ.

ಐಪಿಎಲ್‌ನಲ್ಲಿ ದೆಹಲಿ ಕ್ಯಾಪಿಟಲ್ಸ್ ಓಪನರ್ ಶಿಖರ್ ಧವನ್ ಮುಂದಿನ ಬಾರಿ ಕೆಲ ನಿರ್ದಿಷ್ಟ ಪಂದ್ಯಾವಳಿಗಳಿಂದ ದೂರವಿರಲಿದ್ದಾರೆ. ಐಪಿಎಲ್​ ಕೂಡಾ ತಕ್ಷಣಕ್ಕೆ ಪುನಾರಂಭಗೊಳ್ಳುವ ಸಾಧ್ಯತೆ ಕಾಣುತ್ತಿಲ್ಲ. ಅಲ್ಲದೆ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ನಂತರ ಟೆಸ್ಟ್ ಸರಣಿಯ ಫೈನಲ್‌ಗಾಗಿ ಭಾರತ ತಂಡ ಇಂಗ್ಲೆಂಡ್‌ಗೆ ಹೋಗಲಿದೆ. ಧವನ್ ಭಾರತೀಯ ಟೆಸ್ಟ್ ತಂಡದ ಭಾಗವಲ್ಲ. ಅಂತಹ ಪರಿಸ್ಥಿತಿಯಲ್ಲಿ ಶಿಖರ್​ ಧವನ್ ಕೊರೊನಾ ಲಸಿಕೆ ಪಡೆಯಲು ಇದು ಉತ್ತಮ ಸಮಯವೆಂದು ಮುಂದೆ ಬಂದಿದ್ದಾರೆ.

ಲಸಿಕೆ ಮನವಿ
ಐಪಿಎಲ್​ 2021ರಲ್ಲಿ ಇದುವರೆಗೆ ಧವನ್ ಅತಿ ಹೆಚ್ಚು ಅಂದರೆ 380 ರನ್ ಗಳಿಸಿದ್ದಾರೆ. ರನ್​ ಗಳಿಕೆಯಲ್ಲಿ ಮುಂಚೂಣಿಯಲ್ಲಿರುವ ಧವನ್ ಲಸಿಕೆ ಪಡೆಯುವುದರಲ್ಲಿಯೂ ಮೊದಲಿಗರಾಗಿದ್ದಾರೆ. ಗುರುವಾರ ಲಸಿಕೆ ಪಡೆದ ನಂತರ ಧವನ್, ನಾನು ಲಸಿಕೆ ತೆಗೆದುಕೊಂಡಿದ್ದೇನೆ. ಕೊರೊನಾ ಯೋಧರ ತ್ಯಾಗ ಮತ್ತು ಬದ್ಧತೆಗೆ ಧನ್ಯವಾದಗಳು. ದಯವಿಟ್ಟು ಹಿಂಜರಿಯಬೇಡಿ ಮತ್ತು ಶೀಘ್ರದಲ್ಲೇ ಲಸಿಕೆ ಪಡೆಯಿರಿ. ಇದರಿಂದ ವೈರಸ್‌ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಇತರ ಆಟಗಾರರು ಯಾವಾಗ ಲಸಿಕೆ ಪಡೆಯುತ್ತಾರೆ?
ಆಟಗಾರರ ಪೈಕಿ ಧವನ್ ಮೊದಲು ಲಸಿಕೆ ತೆಗೆದುಕೊಂಡಿರುವರಾದರೂ,​ ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿಶಾಸ್ತ್ರಿ ಮಾರ್ಚ್ ಮೊದಲ ವಾರದಲ್ಲೇ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಸದ್ಯ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಇತರ ಪ್ರಮುಖ ಕ್ರಿಕೆಟಿಗರಿಗೆ ಲಸಿಕೆ ಹಾಕಲು ಯಾವ ವ್ಯವಸ್ಥೆಗಳನ್ನು ಮಾಡಲಾಗುವುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಏಕೆಂದರೆ ಟೀಮ್ ಇಂಡಿಯಾ ಈ ತಿಂಗಳ ಕೊನೆಯಲ್ಲಿ ಇಂಗ್ಲೆಂಡ್‌ಗೆ ಪ್ರಯಾಣಿಸಲಿದೆ ಹಾಗೂ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಟೆಸ್ಟ್ ಸರಣಿ ಅಂತ್ಯದ ನಂತರ ಹಿಂತಿರುಗಲಿದೆ. ಅಂತಹ ಪರಿಸ್ಥಿತಿಯಲ್ಲಿ, ಟೀಮ್ ಇಂಡಿಯಾದ ಆಟಗಾರರು ಹಿಂದಿರುಗಿದ ನಂತರ ಲಸಿಕೆ ಹಾಕುತ್ತಾರೆಯೇ ಅಥವಾ ಇಂಗ್ಲೆಂಡ್‌ನಲ್ಲಿ ಈ ಸೌಲಭ್ಯವನ್ನು ಪಡೆಯುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ:
IPL 2021: ಐಪಿಎಲ್​ನಲ್ಲಿ ಭಾಗಿಯಾಗಿದ್ದ ಆಸಿಸ್ ಆಟಗಾರರನ್ನು ಸ್ವದೇಶಕ್ಕೆ ಕಳುಹಿಸಲು ಹೊಸ ಉಪಾಯ, ಬಿಸಿಸಿಐ ಸಹಾಯ!

Published On - 8:27 am, Fri, 7 May 21