ಐಪಿಎಲ್ 2021 ಹರಾಜು (IPL Auction 2021) ಪ್ರಕ್ರಿಯೆ ಹಲವು ಕುತೂಹಲಗಳಿಗೆ ಎಡೆಮಾಡಿಕೊಟ್ಟಿದೆ. ಹರಾಜಿನಲ್ಲಿ ಭಾಗವಹಿಸುತ್ತಿರುವ 8 ತಂಡಗಳು ತಮ್ಮ ಕೈಯಲ್ಲಿದ್ದ ಮೊತ್ತವನ್ನು ಉಪಯೋಗಿಸಿಕೊಂಡು ಯಾವ ಆಟಗಾರರನ್ನು ಖರೀದಿಸಲಿದೆ? ಯಾರಿಗೆ ಮಣೆ ಹಾಕಲಿದೆ? ಕಳೆದ ವರ್ಷಕ್ಕಿಂತ ಏನೆಲ್ಲಾ ಬದಲಾವಣೆಯಾಗಲಿದೆ? ಒಟ್ಟಾರೆ ತಂಡಗಳಲ್ಲಿ ಏನೆಲ್ಲಾ ಪ್ರಮುಖ ಬದಲಾವಣೆ ಆಗಲಿದೆ? ತಮ್ಮ ನೆಚ್ಚಿನ ಆಟಗಾರ ಯಾವ ತಂಡದ ಪಾಲಾಗಬಹುದು? ಇಷ್ಟದ ತಂಡ ಯಾವ ಆಟಗಾರರನ್ನು ಬರಸೆಳೆದುಕೊಳ್ಳಬಹುದು? ಎನ್ನುವುದನ್ನು ನೋಡಲು ಕ್ರಿಕೆಟ್ ಪ್ರೇಮಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.
ಈ ಪೈಕಿ ಕೆಲ ಪ್ರಮುಖ ಆಟಗಾರರು ಭಾರೀ ನಿರೀಕ್ಷೆ ಮೂಡಿಸಿದ್ದು, ಅವರು ಯಾವ ತಂಡವನ್ನು ಸೇರಿಕೊಳ್ಳಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಅದರಲ್ಲಿ ಮುಖ್ಯ 10 ಆಟಗಾರರೆಂದರೆ, ಕೇದಾರ್ ಜಾಧವ್, ಗ್ಲೆನ್ ಮ್ಯಾಕ್ಸ್ ವೆಲ್, ಸ್ಟೀವ್ ಸ್ಮಿತ್, ಜೇಸನ್ ರಾಯ್, ಲಿಯಾಮ್ ಪ್ಲಂಕೆಟ್, ಶಕೀಬ್ ಅಲ್ ಹಸನ್, ಜೇ ರಿಚರ್ಡ್ಸನ್, ಮುಸ್ತಫಿಜುರ್ ರೆಹಮಾನ್, ಕೈಲ್ ಜೆಮೀಸನ್ ಹಾಗೂ ಕ್ರಿಸ್ ಮೊರಿಸ್. ಈ ಪೈಕಿ ಗ್ಲೆನ್ ಮ್ಯಾಕ್ಸ್ ವೆಲ್ ಆರ್ಸಿಬಿ ಪರ ಆಡುವ ಇಂಗಿತ ವ್ಯಕ್ತಪಡಿಸಿರುವುದು ಹರಾಜು ಪ್ರಕ್ರಿಯೆಗೆ ಮತ್ತಷ್ಟು ಗಮನ ನೀಡುವಂತೆ ಮಾಡಿದೆ.
ಈ ಆಟಗಾರರ ಮೂಲ ಬೆಲೆ ಎಷ್ಟು?
ಐಪಿಎಲ್ 2021ರ ಹರಾಜು ಪ್ರಕ್ರಿಯೆಯಲ್ಲಿ ಕುತೂಹಲ ಹುಟ್ಟಿಸಿರುವ ಪ್ರಮುಖ ಹತ್ತು ಆಟಗಾರರ ಮೂಲ ಬೆಲೆ ಹೀಗಿದೆ.
1.ಕೇದಾರ್ ಜಾಧವ್ (ಭಾರತ), ಮೂಲ ಬೆಲೆ: ₹2 ಕೋಟಿ
2.ಗ್ಲೆನ್ ಮ್ಯಾಕ್ಸ್ ವೆಲ್ (ಆಸ್ಟ್ರೇಲಿಯಾ), ಮೂಲ ಬೆಲೆ: ₹2 ಕೋಟಿ
3.ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ), ಮೂಲ ಬೆಲೆ: ₹2 ಕೋಟ
4.ಜೇಸನ್ ರಾಯ್ (ಇಂಗ್ಲೆಂಡ್), ಮೂಲ ಬೆಲೆ: ₹2 ಕೋಟಿ
5.ಲಿಯಾಮ್ ಪ್ಲಂಕೆಟ್ (ಇಂಗ್ಲೆಂಡ್), ಮೂಲ ಬೆಲೆ: ₹2 ಕೋಟಿ
6.ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ), ಮೂಲ ಬೆಲೆ: ₹2 ಕೋಟಿ
7.ಜೇ ರಿಚರ್ಡ್ಸನ್ (ಆಸ್ಟ್ರೇಲಿಯಾ), ಮೂಲ ಬೆಲೆ: ₹1.5 ಕೋಟಿ
8.ಮುಸ್ತಫಿಜುರ್ ರೆಹಮಾನ್ (ಬಾಂಗ್ಲಾದೇಶ), ಮೂಲ ಬೆಲೆ: ₹1 ಕೋಟಿ
9.ಕೈಲ್ ಜೆಮೀಸನ್ (ನ್ಯೂಜಿಲೆಂಡ್), ಮೂಲ ಬೆಲೆ: ₹75 ಲಕ್ಷ
10.ಕ್ರಿಸ್ ಮೊರಿಸ್ (ದಕ್ಷಿಣ ಆಫ್ರಿಕಾ), ಮೂಲ ಬೆಲೆ: ₹75 ಲಕ್ಷ
ಇನ್ನು ಹರಾಜಿನಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ 8 ಫ್ರಾಂಚೈಸಿಗಳಿಗೆ ಗರಿಷ್ಠ ₹85 ಕೋಟಿ ವ್ಯಯಿಸುವ ಅವಕಾಶವಿದೆ. ಅಷ್ಟೂ ತಂಡಗಳ ಪೈಕಿ ಪಂಜಾಬ್ ಕಿಂಗ್ಸ್ ಅತಿ ಹೆಚ್ಚು ಅಂದರೆ ₹53.2 ಕೋಟಿ ಉಳಿಸಿಕೊಂಡಿದ್ದರೆ, ರಾಜಸ್ಥಾನ ₹37.85 ಕೋಟಿ ಉಳಿಸಿಕೊಳ್ಳುವ ಮೂಲಕ ಎರಡನೇ ಸ್ಥಾನದಲ್ಲಿದೆ. ಈ ಮೂಲಕ ತಮ್ಮಲ್ಲಿದ್ದ ಕೆಲ ಆಟಗಾರರನ್ನು ಕೈ ಬಿಟ್ಟು ಖಾತೆಯಲ್ಲಿ ಸದ್ಯ ಹೆಚ್ಚು ಹಣ ಉಳಿಸಿಕೊಂಡಿವೆ. ಇನ್ನೊಂದೆಡೆ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಅತಿ ಕಡಿಮೆ ಅಂದರೆ ಕೇವಲ ₹10.75 ಕೋಟಿಯನ್ನು ಕೈಯಲ್ಲಿ ಉಳಿಸಿಕೊಂಡಿವೆ. ಹೀಗಾಗಿ ಈ ತಂಡಗಳು ಹೊಸಬರನ್ನು ಖರೀದಿ ಮಾಡುವಾಗ ಹೆಚ್ಚು ವ್ಯಯಿಸುವುದು ಸಾಧ್ಯವಿಲ್ಲ.
ಇದನ್ನೂ ಓದಿ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಹೆಸರೇ ಬದಲಾಯ್ತು, ಹೊಸ ಹೆಸರು ಡಾಭಾದಂತಿದೆ ಎಂದು ಕಾಲೆಳೆದ ನೆಟ್ಟಿಗರು