194 ಅಂತರಾಷ್ಟ್ರೀಯ ಪಂದ್ಯ, ಎದುರಿಸಿದ್ದು ಬರೋಬ್ಬರಿ 2677 ಎಸೆತ, ಹೊಡೆದಿದ್ದು ಮಾತ್ರ ಕೇವಲ ಒಂದೇ ಸಿಕ್ಸರ್​.. ಯಾರು ಆ ಆಟಗಾರ?

|

Updated on: Feb 26, 2021 | 3:48 PM

ಇದುವರೆಗೆ 80 ಏಕದಿನ, 14 ಟಿ20 ಮತ್ತು 100 ಟೆಸ್ಟ್ ಪಂದ್ಯಗಳನ್ನು ಆಡಿರುವ ಇಶಾಂತ್​ ಶರ್ಮಾ ತಮ್ಮ 100ನೇ ಟೆಸ್ಟ್​ ಪಂದ್ಯದಲ್ಲಿ ತಮ್ಮ ವೃತ್ತಿ ಜೀವನದ ಮೊದಲ ಸಿಕ್ಸರ್​ ಬಾರಿಸಿದ್ದಾರೆ.

194 ಅಂತರಾಷ್ಟ್ರೀಯ ಪಂದ್ಯ, ಎದುರಿಸಿದ್ದು ಬರೋಬ್ಬರಿ 2677 ಎಸೆತ, ಹೊಡೆದಿದ್ದು ಮಾತ್ರ ಕೇವಲ ಒಂದೇ ಸಿಕ್ಸರ್​.. ಯಾರು ಆ ಆಟಗಾರ?
ಇಶಾಂತ್ ಶರ್ಮಾ
Follow us on

ಅಹಮದಾಬಾದ್‌: ಇಂದಿನ ವೇಗದ ಕ್ರಿಕೆಟ್‌ನಲ್ಲಿ ಸಿಕ್ಸರ್ ಮತ್ತು ಬೌಂಡರಿಗಳ ಮಳೆ ಸುರಿಯುವುದು ಸರ್ವೆಸಾಮಾನ್ಯವಾಗಿದೆ. ಇಂದಿನ ಕ್ರಿಕೆಟ್​ನಲ್ಲಿ ಯಾರಿಗೆ ಅವಕಾಶ ಸಿಕ್ಕರೂ, ಚೆಂಡನ್ನು ಬೌಂಡರಿ ಗೆರೆ ದಾಟಿಸುವುದಕ್ಕೆ ಪ್ರಯತ್ನಿಸುತ್ತಿರುತ್ತಾರೆ. ಆದರೆ ಇವೆಲ್ಲದರ ನಡುವೆ ಸುಮಾರು 194 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ನಂತರ ಮೊದಲ ಸಿಕ್ಸರ್ ಹೊಡೆದ ಆಟಗಾರನೂ ಸಹ ಇದ್ದಾನೆ. ಈ ಆಟಗಾರ ಬೇರೆ ಯಾರೂ ಅಲ್ಲ ಭಾರತದ ವೇಗದ ಬೌಲರ್ ಇಶಾಂತ್ ಶರ್ಮಾ. ತಮ್ಮ 100 ನೇ ಟೆಸ್ಟ್ ಪಂದ್ಯದಲ್ಲಿ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದ ಮೊದಲ ಸಿಕ್ಸರ್​ ಬಾರಿಸುವುದರಲ್ಲಿ ಇಶಾಂತ್​ ಯಶಸ್ವಿಯಾಗಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಹಗಲು-ರಾತ್ರಿ ಟೆಸ್ಟ್ ಪಂದ್ಯದ ಎರಡನೇ ದಿನದಂದು ಭಾರತದ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಹೆಣಗಾಡುತ್ತಿದ್ದರು. ಅಲ್ಲದೆ ರನ್​ಗಳಿಸುವ ಭರದಲ್ಲಿ ಬೇಗನೆ ಔಟಾಗಿ ಪೆವಿಲಿಯನ್​ ಸೇರಿಕೊಂಡರು. ಇದರಿಂದಾಗಿ ಇಶಾಂತ್‌ಗೆ ಬೇಗನೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತು. ಈ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡ ಇಶಾಂತ್, ಇಂಗ್ಲೆಂಡ್ ತಂಡದ ಎಡಗೈ ಸ್ಪಿನ್ನರ್ ಜ್ಯಾಕ್ ಲೀಚ್ ಎಸೆತವನ್ನು ಸಿಕ್ಸರ್​ ಬಾರಿಸುವ ಮೂಲಕ ತಮ್ಮ ವೃತ್ತಿಜೀವನದ ಮೊದಲ ಸಿಕ್ಸರನ್ನು ತಮ್ಮ ಖಾತೆಗೆ ಹಾಕಿಕೊಂಡರು.

ಆಡಿದ 2677 ಎಸೆತಗಳಲ್ಲಿ ಮೊದಲ ಸಿಕ್ಸರ್​..
ಮೇ 25, 2007 ರಂದು ಬಾಂಗ್ಲಾದೇಶ ವಿರುದ್ಧ ಆಡಿದ ಟೆಸ್ಟ್ ಪಂದ್ಯದ ಮೂಲಕ ಇಶಾಂತ್ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಅಂದಿನಿಂದ, ಇದುವರೆಗೆ 80 ಏಕದಿನ, 14 ಟಿ20 ಮತ್ತು 100 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಸಮಯದಲ್ಲಿ ಅವರು ಒಟ್ಟು 2677 ಎಸೆತಗಳನ್ನು ಆಡಿದರು ಇನ್ನೂ ಸಹ ಒಂದು ಸಿಕ್ಸರ್ ಬಾರಿಸಿರಲಿಲ್ಲ. 3ನೇ ಟೆಸ್ಟ್​ ಮೊದಲನೇ ಇನ್ನಿಂಗ್ಸ್​ನ 50 ನೇ ಓವರ್ ಎಸೆಯಲು ಬಂದ ಲೀಚ್​ ಎಸೆತವನ್ನು ಇಶಾಂತ್, ಲಾಂಗ್ ಆನ್ ದಿಕ್ಕಿನ ಕಡೆ ಬಾರಿಸಿ ತಮ್ಮ ವೃತ್ತಿ ಜೀವನದ ಮೊದಲ ಸಿಕ್ಸರ್​ ಪಡೆದುಕೊಂಡರು.

ಇಶಾಂತ್​ಗಿದು 100 ನೇ ಟೆಸ್ಟ್ ಪಂದ್ಯ..
ಈ ಪಂದ್ಯದಲ್ಲಿ ಇಶಾಂತ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇದು ಅವರ ವೃತ್ತಿಜೀವನದ 100 ನೇ ಟೆಸ್ಟ್ ಪಂದ್ಯವಾಗಿದೆ. ಈ ಮೈಲಿಗಲ್ಲು ತಲುಪಿದ ಭಾರತದ ಎರಡನೇ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಶಾಂತ್​ಗು ಮೊದಲು, 1983 ರಲ್ಲಿ ಭಾರತಕ್ಕೆ ಮೊದಲ ವಿಶ್ವಕಪ್ ತಂದುಕೊಟ್ಟ ಕ್ಯಾಪ್ಟನ್ ಕಪಿಲ್ ದೇವ್, ಭಾರತಕ್ಕಾಗಿ 100 ಟೆಸ್ಟ್ ಪಂದ್ಯಗಳನ್ನು ಆಡಿದ ಏಕೈಕ ವೇಗದ ಬೌಲರ್ ಆಗಿದ್ದಾರೆ. ಮತ್ತೊಂದೆಡೆ, 100 ಟೆಸ್ಟ್ ಪಂದ್ಯಗಳನ್ನು ಆಡಿದ ಭಾರತದ ನಾಲ್ಕನೇ ಬೌಲರ್ ಇಶಾಂತ್. ಇಶಾಂತ್​ಗು ಮೊದಲು ಅನಿಲ್ ಕುಂಬೆಲ್ 132 ಟೆಸ್ಟ್ ಪಂದ್ಯ, ಕಪಿಲ್ 131 ಟೆಸ್ಟ್ ಪಂದ್ಯ ಮತ್ತು ಹರ್ಭಜನ್ ಸಿಂಗ್ 103 ಟೆಸ್ಟ್ ಪಂದ್ಯಗಳನ್ನು ಭಾರತಕ್ಕಾಗಿ 100 ಅಥವಾ ಅದಕ್ಕಿಂತ ಹೆಚ್ಚಿನ ಟೆಸ್ಟ್ ಪಂದ್ಯಗಳನ್ನು ಆಡಿದ ಬೌಲರ್‌ಗಳಾಗಿದ್ದಾರೆ.

ಇದನ್ನೂ ಓದಿ:India vs England: ಕೇವಲ 842 ಎಸೆತಗಳಲ್ಲಿ ಮುಗಿದ 3ನೇ ಟೆಸ್ಟ್​ಗೆ 7ನೇ ಸ್ಥಾನ.. ಇದಕ್ಕೂ ಮೊದಲಿನವು ಯಾವುವು ಗೊತ್ತಾ?