ಚರ್ಚೆಯಲ್ಲಿದೆ ನರೇಂದ್ರ ಮೋದಿ ಕ್ರಿಕೆಟ್​ ಕ್ರೀಡಾಂಗಣ: ಅದಾನಿ, ರಿಲಯನ್ಸ್ ಎಂಡ್​ಗಳ ಹಿಂದಿರುವ ಸತ್ಯಾಸತ್ಯತೆ ಏನು? ಇಲ್ಲಿದೆ ವಿವರ

Narendra Modi Stadium: ನರೇಂದ್ರ ಮೋದಿ ಕ್ರಿಕೆಟ್​ ಕ್ರೀಡಾಂಗಣವು ವಿಸ್ತಾರವಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್ ಎನ್‌ಕ್ಲೇವ್‌ನ ಒಂದು ಭಾಗವಾಗಿದೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣದ ನಿರ್ಮಾಣ ಯೋಜನೆಗಾಗಿ ಎರಡೂ ಕಂಪನಿಗಳು ಭಾರಿ ಮೊತ್ತದ ದೇಣಿಗೆ ನೀಡಿವೆ

ಚರ್ಚೆಯಲ್ಲಿದೆ ನರೇಂದ್ರ ಮೋದಿ ಕ್ರಿಕೆಟ್​ ಕ್ರೀಡಾಂಗಣ: ಅದಾನಿ, ರಿಲಯನ್ಸ್ ಎಂಡ್​ಗಳ ಹಿಂದಿರುವ ಸತ್ಯಾಸತ್ಯತೆ ಏನು? ಇಲ್ಲಿದೆ ವಿವರ
ಮೊಟೆರಾ ಕ್ರೀಡಾಂಗಣ
Follow us
ಪೃಥ್ವಿಶಂಕರ
|

Updated on:Feb 26, 2021 | 5:55 PM

ಅಹಮದಾಬಾದ್‌: ಭಾರತದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಉದ್ಘಾಟಿಸಿದ ನರೇಂದ್ರ ಮೋದಿ ಕ್ರಿಕೆಟ್​ ಕ್ರೀಡಾಂಗಣ ಈಗ ವಿವಾದದ ಕೇಂದ್ರಬಿಂದುವಾಗಿದೆ. ಈ ವಿವಾದಕ್ಕೆ ಗ್ರಾಸವಾಗಿರುವುದು ಕ್ರೀಡಾಂಗಣದ ಮರುನಾಮಕರಣದ ಜೊತೆಗೆ, ಎರಡೂ ಬೌಲಿಂಗ್ ತುದಿಗಳಾದ ರಿಲಯನ್ಸ್ ಎಂಡ್ ಮತ್ತು ಅದಾನಿ ಎಂಡ್! ಸರ್ದಾರ್ ಪಟೇಲ್ ಅವರ ಪರಂಪರೆಯನ್ನು ಪಕ್ಷ ಅವಮಾನಿಸುತ್ತಿದೆ ಎಂದು ಆರೋಪಿಸಿ ರಾಜಕಾರಣಿಗಳು, ನೆಟ್ಟಿಗರು ಬಿಜೆಪಿಯನ್ನು ಇನ್ನಿಲ್ಲದಂತೆ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಇದರ ಹಿಂದಿರುವ ಸತ್ಯ, ಈ ಆರೋಪಕ್ಕೆ ಬೇರೆಯದ್ದೇ ಆಯಾಮವನ್ನು ನೀಡುತ್ತಿದೆ.

ನರೇಂದ್ರ ಮೋದಿ ಕ್ರೀಡಾಂಗಣವಾಗಿ ಮರುನಾಮಕರಣ.. ಮೊದಲನೆಯದು, ಸರ್ದಾರ್ ವಲ್ಲಭಭಾಯಿ ಪಟೇಲ್ ಕ್ರೀಡಾಂಗಣವನ್ನು ನರೇಂದ್ರ ಮೋದಿ ಕ್ರೀಡಾಂಗಣವಾಗಿ ಮರುನಾಮಕರಣ ಮಾಡಲಾಗಿದೆ ಎಂಬ ಮಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಿಜಾಂಶವೆಂದರೆ, ನರೇಂದ್ರ ಮೋದಿ ಕ್ರಿಕೆಟ್​ ಕ್ರೀಡಾಂಗಣವು ವಿಸ್ತಾರವಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್ ಎನ್‌ಕ್ಲೇವ್‌ನ ಒಂದು ಭಾಗವಾಗಿದೆ ಅಷ್ಟೇ. ಒಲಿಂಪಿಕ್ಸ್​ನಲ್ಲಿ ಬಳಸಲಾಗುವಂತಹ ಅಂತಾರಾಷ್ಟ್ರೀಯ ದರ್ಜೆಯ ಈಜುಕೊಳ, ಸ್ಕ್ವ್ಯಾಷ್ ಅರೇನಾ, ಬ್ಯಾಡ್ಮಿಂಟನ್ ಮತ್ತು ಟೆನಿಸ್ ಕೋರ್ಟ್‌ಗಳು ಸೇರಿದಂತೆ ಇತರ ಕ್ರೀಡಾ ಸೌಲಭ್ಯಗಳ ಜೊತೆಜೊತೆಯಲ್ಲಿ ಈ ಕ್ರಿಕೆಟ್​ ಮೈದಾನವು ಒಂದಾಗಿದೆ. ಸೋ, ಮೂಲತಃ ಇಡೀ ಕ್ರೀಡಾಂಣಗಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್ ಎನ್‌ಕ್ಲೇವ್ ಎಂಬ ಹೆಸರನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.

ಅದಾನಿ ಮತ್ತು ರಿಲಯನ್ಸ್ ಎಂಡ್​ಗಳ ಗೊಡವೆ..  ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣದ ನಿರ್ಮಾಣ ಯೋಜನೆಗಾಗಿ ಎರಡೂ ಕಂಪನಿಗಳು ಭಾರಿ ಮೊತ್ತದ ದೇಣಿಗೆ ನೀಡಿವೆ ಎಂದು ಮೂಲಗಳು ದೃಢಪಡಿಸಿವೆ. ವಾಸ್ತವವಾಗಿ, ದೇಣಿಗೆ ಜೊತೆಗೆ ಎರಡೂ ಕಂಪನಿಗಳು ಸ್ಟ್ಯಾಂಡ್​​ನಲ್ಲಿ ತಲಾ ಒಂದು ಕಾರ್ಪೊರೇಟ್ ಬಾಕ್ಸ್​ ಖರೀದಿಸಿವೆ. ಇದರ ವೆಚ್ಚವು 25 ವರ್ಷಗಳ ಅವಧಿಗೆ 250 ಕೋಟಿ + ಜಿಎಸ್​ಟಿ ಆಗಿದೆ. ದಾನಿಗಳ ಬೇಡಿಕೆಗೆ ಅನುಗುಣವಾಗಿ ಬೌಲಿಂಗ್​ ದಿಕ್ಕುಗಳನ್ನು ಹೆಸರಿಸಲಾಗುವುದು ಎಂದು ಒಪ್ಪಂದದಲ್ಲಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಬೌಲಿಂಗ್ ಎಂಡ್​ಗೆ ಅದಾನಿ ಮತ್ತು ರಿಲಯನ್ಸ್ ಎಂಡ್​ ಎಂದು ನಾಮಕರಣ ಮಾಡಲಾಗಿದೆ.

motera stadium ಅದಾನಿ ಎಂಡ್ ನಾಮಕರಣವನ್ನು ವಾಸ್ತವವಾಗಿ, ಗುಜರಾತ್​ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಚಿಮನ್‌ಭಾಯ್ ಪಟೇಲ್ ಅವರ ಅಧಿಕಾರಾವಧಿಯಲ್ಲಿಯೇ ನೀಡಲಾಗಿದೆ! ಇನ್ನು, ರಿಲಯನ್ಸ್ ಎಂಡ್ ಈ ಮೊದಲು ಸರ್ಕಾರಿ ಸಂಸ್ಥೆಯಾದ ಜಿಡಿಎಂಸಿಗೆ ನೀಡಲಾಗಿತ್ತು. ಆದರೆ ರಿಲಯನ್ಸ್ ಹೊಸ ದಾನಿಗಳಾಗಿರುವುದರಿಂದ ಅದನ್ನು ರಿಲಯನ್ಸ್ ಎಂಡ್ ಎಂದು ಇದೀಗ ಕರೆಯಲಾಗುತ್ತಿದೆ.

ಪೂರ್ವ ಮತ್ತು ಪಶ್ಚಿಮ ಸ್ಟ್ಯಾಂಡ್‌ಗಳನ್ನು ಮಾರಾಟ ಮಾಡಲು ಕಾರ್ಪೊರೇಟ್‌ಗಳ ಜೊತೆ ಮಾತುಕತೆ ನಡೆಯುತ್ತಿದೆ. ನರೇಂದ್ರ ಮೋದಿ ಕ್ರಿಕೆಟ್​ ಕ್ರೀಡಾಂಗಣದಲ್ಲಿ ಒಟ್ಟು 76 ಕಾರ್ಪೊರೇಟ್ ಬಾಕ್ಸ್​ಗಳಿವೆ. ನರೇಂದ್ರ ಮೋದಿ ಕ್ರೀಡಾಂಗಣವು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ವಿಶ್ವದ ವಿಶಿಷ್ಟ ಕ್ರಿಕೆಟ್ ಕ್ರೀಡಾಂಗಣವಾಗಿದೆ. ಡ್ರೆಸ್ಸಿಂಗ್ ಕೋಣೆಗಳಿಗೆ ಸಂಪರ್ಕ ಹೊಂದಿದ ಜಿಮ್‌ಗಳಿಂದ ಹಿಡಿದು ಆಟ ಮತ್ತು ಅಭ್ಯಾಸಕ್ಕಾಗಿ ಒಂದೇ ತರಹದ ಪಿಚ್‌ಗಳ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.

MOTERA STADIUM

ಇದನ್ನೂ ಓದಿ:India vs England: ಕೇವಲ 842 ಎಸೆತಗಳಲ್ಲಿ ಮುಗಿದ 3ನೇ ಟೆಸ್ಟ್​ಗೆ 7ನೇ ಸ್ಥಾನ.. ಇದಕ್ಕೂ ಮೊದಲಿನವು ಯಾವುವು ಗೊತ್ತಾ?

Published On - 5:36 pm, Fri, 26 February 21