ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಜಸ್ಪ್ರೀತ್ ಬುಮ್ರಾ
Australia vs India, 1st Test: ಪರ್ತ್ನ ಒಪ್ಟಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ 150 ರನ್ಗಳಿಗೆ ಆಲೌಟ್ ಆದರೆ, ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್ನಲ್ಲಿ 103 ರನ್ಗಳಿಗೆ ಮುಗ್ಗರಿಸಿದೆ.
ಪರ್ತ್ನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡವು ಕೇವಲ 83 ರನ್ಗಳಿಗೆ ಆಲೌಟ್ ಆಗಬೇಕಿತ್ತು. ಆದರೆ ಟೀಮ್ ಇಂಡಿಯಾ ವಿಕೆಟ್ ಕೀಪರ್ ಮಾಡಿದ ಸಣ್ಣ ತಪ್ಪಿನಿಂದಾಗಿ ಆಸ್ಟ್ರೇಲಿಯಾ ತಂಡವು ಹೆಚ್ಚುವರಿ 25 ರನ್ ಕಲೆಹಾಕಿತು.
ಆಸ್ಟ್ರೇಲಿಯಾ ಇನಿಂಗ್ಸ್ನ 37ನೇ ಓವರ್ನ ಕೊನೆಯ ಎಸೆತದಲ್ಲಿ ಜಸ್ಪ್ರೀತ್ ಬುಮ್ರಾ ತನ್ನ ವೇಗಾಸ್ತ್ರವನ್ನು ಪ್ರಯೋಗಿಸಿದ್ದರು. ಈ ಚೆಂಡು ಜೋಶ್ ಹ್ಯಾಝಲ್ವುಡ್ ಅವರ ಬ್ಯಾಟ್ ಸವರಿ ವಿಕೆಟ್ ಕೀಪರ್ನತ್ತ ಚಿಮ್ಮಿತ್ತು. ಆದರೆ ಕೀಪರ್ನತ್ತ ಸಾಗಿ ಬಂದ ಚೆಂಡನ್ನು ಹಿಡಿಯುವಲ್ಲಿ ರಿಷಭ್ ಪಂತ್ ವಿಫಲರಾದರು.
ಅತ್ತ ರಿಷಭ್ ಪಂತ್ ಕ್ಯಾಚ್ ಕೈಚೆಲ್ಲುತ್ತಿದ್ದಂತೆ ಜಸ್ಪ್ರೀತ್ ಬುಮ್ರಾ ಅವರ ಕೋಪ ನೆತ್ತಿಗೇರಿತು. ಈ ಕೋಪವನ್ನು ಅದುಮಿಟ್ಟುಕೊಳ್ಳುತ್ತಾ ಬುಮ್ರಾ ಪಂತ್ ಅವರನ್ನು ಗುರಾಯಿಸಿದ್ದರು. ಇದೀಗ ಬುಮ್ರಾ ಅವರ ಕೋಪ ತಾಪದ ವಿಡಿಯೋ ವೈರಲ್ ಆಗಿದೆ.
ಇನ್ನು ರಿಷಭ್ ಪಂತ್ ಮೂಲಕ ಸಿಕ್ಕ ಅವಕಾಶವನ್ನು ಬಳಿಸಿಕೊಂಡ ಆಸ್ಟ್ರೇಲಿಯಾದ ಕೊನೆಯ ವಿಕೆಟ್ ಜೋಡಿ ಮಿಚೆಲ್ ಸ್ಟಾರ್ಕ್ ಹಾಗೂ ಜೋಶ್ ಹ್ಯಾಝಲ್ವುಡ್ 25 ರನ್ಗಳ ಜೊತೆಯಾಟವಾಡಿದರು. ಈ ಮೂಲಕ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. ಇದಾಗ್ಯೂ ಅಂತಿಮವಾಗಿ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್ 104 ರನ್ಗಳಿಸಿ ಆಲೌಟ್ ಆಯಿತು.
ಟೀಮ್ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ 5 ವಿಕೆಟ್ ಕಬಳಿಸಿದರೆ, ಹರ್ಷಿತ್ ರಾಣಾ 3 ವಿಕೆಟ್ ಪಡೆದರು. ಇನ್ನು ಮೊಹಮ್ಮದ್ ಸಿರಾಜ್ 2 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.