ಪರ್ತ್ನ ಒಪ್ಟಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ಮೊದಲ ಟೆಸ್ಟ್ ಪಂದ್ಯವು 2ನೇ ದಿನದಾಟಕ್ಕೆ ಕಾಲಿಟ್ಟಿದೆ. ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ 150 ರನ್ಗಳಿಗೆ ಆಲೌಟ್ ಆದರೆ, ಆಸ್ಟ್ರೇಲಿಯಾ 67 ರನ್ಗಳಿಗೆ 7 ವಿಕೆಟ್ ಕಳೆದುಕೊಂಡಿತು.
ಆದರೆ ದ್ವಿತೀಯ ದಿನದಾಟದ ಆರಂಭದಲ್ಲೇ ಆಸ್ಟ್ರೇಲಿಯಾವನ್ನು ಆಲೌಟ್ ಮಾಡುವ ಯೋಜನೆಯೊಂದಿಗೆ ಕಣಕ್ಕಿಳಿದ ಟೀಮ್ ಇಂಡಿಯಾ ಪಾಲಿಗೆ ತೊಡಕಾಗಿದ್ದು ಮಿಚೆಲ್ ಸ್ಟಾರ್ಕ್. ಏಕೆಂದರೆ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಟಾರ್ಕ್ ಅಸಲಿ ಟೆಸ್ಟ್ ಆಟ ಪ್ರದರ್ಶಿಸಿ ಭಾರತೀಯ ಬೌಲರ್ಗಳನ್ನು ಹೈರಾಣರಾಗಿದರು.
ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಮಿಚೆಲ್ ಸ್ಟಾರ್ಕ್ ಬರೋಬ್ಬರಿ 112 ಎಸೆತಗಳನ್ನು ಎದುರಿಸಿದರು. ಇದರ ನಡುವೆ ಹ್ಯಾಝಲ್ವುಡ್ ಜೊತೆಗೂಡಿ ಕೊನೆಯ ವಿಕೆಟ್ಗೆ 25 ರನ್ಗಳ ಜೊತೆಯಾಟವಾಡಿದರು. ಈ ಮೂಲಕ ಆಸ್ಟ್ರೇಲಿಯಾ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು.
ಅಂದರೆ 79 ರನ್ಗಳಿಗೆ 9 ವಿಕೆಟ್ ಕಳೆದುಕೊಂಡು ಎರಡಂಕಿ ಮೊತ್ತಕ್ಕೆ ಆಲೌಟ್ ಆಗುವ ಭೀತಿಯಲ್ಲಿ ಆಸ್ಟ್ರೇಲಿಯಾಗೆ ಮಿಚೆಲ್ ಸ್ಟಾರ್ಕ್ ಹಾಗೂ ಜೋಶ್ ಹ್ಯಾಝಲ್ವುಡ್ ಆಸರೆಯಾಗಿ ನಿಂತರು. ಪರಿಣಾಮ ಟೀಮ್ ಇಂಡಿಯಾ ಬೌಲರ್ಗಳು ಕೊನೆಯ ವಿಕೆಟ್ ಪಡೆಯಲು ಹರಸಾಹಸ ಪಡಬೇಕಾಯಿತು.
ಅಂತಿಮವಾಗಿ 112 ಎಸೆತಗಳನ್ನು ಎದುರಿಸಿದ ಮಿಚೆಲ್ ಸ್ಟಾರ್ಕ್ 2 ಫೋರ್ಗಳೊಂದಿಗೆ 26 ರನ್ ಬಾರಿಸಿ ಔಟಾದರು. ಇದರೊಂದಿಗೆ 104 ರನ್ಗಳಿಗೆ ಆಸ್ಟ್ರೇಲಿಯಾ ತಂಡದ ಇನಿಂಗ್ಸ್ ಕೂಡ ಕೊನೆಗೊಂಡಿದೆ. ಇದೀಗ 46 ರನ್ಗಳ ಮುನ್ನಡೆಯೊಂದಿಗೆ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ ಆರಂಭಿಸಿದೆ.
Published On - 10:59 am, Sat, 23 November 24