ಈ ಬಾರಿಯ ಏಷ್ಯಾಕಪ್ ತಂಡದಲ್ಲಿ ಟೀಮ್ ಇಂಡಿಯಾದ (Team India) ಪ್ರಮುಖ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಹೊರಗುಳಿದಿದ್ದಾರೆ. ಇದು ಆಗಸ್ಟ್ 28 ರಂದು ನಡೆಯಲಿರುವ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ದದ ಪಂದ್ಯದಲ್ಲಿ ಪಾಕ್ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ. ಇದೇ ಖುಷಿಯಲ್ಲಿದ್ದ ಪಾಕ್ ತಂಡವು ಕೂಡ ಇದೀಗ ಭಾರೀ ಹಿನ್ನಡೆ ಎದುರಿಸುವಂತಾಗಿದೆ. ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಅಫ್ರಿದಿ ಭಾರತ ವಿರುದ್ಧದ ಪಂದ್ಯದಲ್ಲಿ ಆಡುವುದು ಅನುಮಾನ ಎಂಬ ಸುದ್ದಿಯೊಂದು ಹೊರಬಿದ್ದಿದೆ.
ಏಕೆಂದರೆ ಗಾಯಗೊಂಡಿರುವ ಶಾಹೀನ್ ಅಫ್ರಿದಿ ನೆದರ್ಲ್ಯಾಂಡ್ಸ್ ವಿರುದ್ದದ ಸರಣಿಯಲ್ಲಿ ಆಡುತ್ತಿಲ್ಲ. ಅವರಿಗೆ ಸಂಪೂರ್ಣ ವಿಶ್ರಾಂತಿ ನೀಡಲಾಗುತ್ತಿದೆ. ಇದಾಗ್ಯೂ ಅವರು ಏಷ್ಯಾಕಪ್ ಆಡಲಿದ್ದಾರಾ ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ.
ಶಾಹೀನ್ ಅಫ್ರಿದಿ ಅವರ ಫಿಟ್ನೆಸ್ ಬಗ್ಗೆ ಮಾತನಾಡಿರುವ ಪಾಕಿಸ್ತಾನದ ನಾಯಕ ಬಾಬರ್ ಆಜಂ, ನಮ್ಮ ಎಡಗೈ ವೇಗದ ಬೌಲರ್ ತಂಡದ ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ. ಫಿಟ್ ಆಗಿದ್ದರೆ ಮಾತ್ರ ಅವರು ನೆದರ್ಲ್ಯಾಂಡ್ಸ್ ವಿರುದ್ದ ಆಡಲಿದ್ದಾರೆ ಎಂದು ತಿಳಿಸಿದ್ದಾರೆ.
ಮುಂಬರುವ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್ ಅನ್ನು ಕೂಡ ಪರಿಗಣನೆಗೆ ತೆಗೆದುಕೊಂಡು ತಯಾರಿಗಳನ್ನು ನಡೆಸಲಾಗುತ್ತಿದೆ. ಹೀಗಾಗಿ ನಾವು ಆಟಗಾರರ ಫಿಟ್ನೆಸ್ ಬಗ್ಗೆ ಸುದೀರ್ಘ ಯೋಜನೆಯೊಂದಿಗೆ ಆಲೋಚಿಸುತ್ತಿದ್ದೇವೆ ಎಂದು ಬಾಬರ್ ಆಜಂ ಹೇಳಿದ್ದಾರೆ. ಇದಾಗ್ಯೂ ಅಫ್ರಿದಿ ಏಷ್ಯಾಕಪ್ ಆಡಲಿದ್ದಾರಾ ಎಂಬುದರ ಬಗ್ಗೆ ಪಾಕ್ ನಾಯಕ ಯಾವುದೇ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಶಾಹೀನ್ ಅಫ್ರಿದಿ ಕೂಡ ಏಷ್ಯಾಕಪ್ನಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಕಳೆದ ವರ್ಷ ನಡೆದ ಟಿ20 ವಿಶ್ವಕಪ್ನಲ್ಲಿ ಶಾಹೀನ್ ಅಫ್ರಿದಿ ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳನ್ನು ಪೆವಿಲಿಯನ್ಗೆ ಅಟ್ಟಿದ್ದರು. ಕೆಎಲ್ ರಾಹುಲ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ವಿಕೆಟ್ಗಳನ್ನು ಪಡೆಯುವ ಮೂಲಕ ಮಿಂಚಿದ್ದರು.
ಅಲ್ಲದೆ ಅವರ ಮಾರಕ ದಾಳಿಯಿಂದ ಆರಂಭಿಕ ಆಘಾತಕ್ಕೊಳಗಾದ ಟೀಮ್ ಇಂಡಿಯಾ ಬೃಹತ್ ಮೊತ್ತ ಪೇರಿಸುವಲ್ಲಿ ವಿಫಲರಾಗಿ ಪಾಕ್ ಮುಂದೆ ಮೊದಲ ಬಾರಿಗೆ ವಿಶ್ವಕಪ್ನಲ್ಲಿ ಮಂಡಿಯೂರಿತು. ಈ ಸೋಲಿನ ಸೇಡನ್ನು ತೀರಿಸುವ ತವಕದಲ್ಲಿ ಟೀಮ್ ಇಂಡಿಯಾವಿದ್ದು, ಹೀಗಾಗಿ ಆಗಸ್ಟ್ 28 ರಂದು ನಡೆಯಲಿರುವ ಭಾರತ-ಪಾಕ್ ಪಂದ್ಯವನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ಈ ಬಾರಿಯ ಏಷ್ಯಾಕಪ್ ಟಿ20 ಮಾದರಿಯಲ್ಲಿ ನಡೆಯಲಿದೆ. ಆಗಸ್ಟ್ 27 ರಿಂದ ಯುಎಇಯಲ್ಲಿ ಪ್ರಾರಂಭವಾಗುವ ಈ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಆಗಸ್ಟ್ 28 ರಂದು ಮುಖಾಮುಖಿಯಾಗಲಿದೆ. ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 7.30 ಕ್ಕೆ ಶುರುವಾಗಲಿದೆ.
ಏಷ್ಯಾಕಪ್ಗಾಗಿ ಪಾಕಿಸ್ತಾನ್ ತಂಡ ಹೀಗಿದೆ:
ಬಾಬರ್ ಆಜಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್, ವಾಸಿಮ್ ಜೂನಿಯರ್, ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ, ಶಾನವಾಜ್ ದಹಾನಿ ಮತ್ತು ಉಸ್ಮಾನ್ ಖಾದಿರ್.
ಏಷ್ಯಾಕಪ್ಗಾಗಿ ಟೀಮ್ ಇಂಡಿಯಾ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.
ಮೀಸಲು ಆಟಗಾರರು: ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್ ಹಾಗೂ ದೀಪಕ್ ಚಹರ್.