The Hundred: ಇಂಗ್ಲೆಂಡ್ ಸ್ಪಿನ್ನರ್ಗೆ ಬೌಲಿಂಗ್ ನಿಷೇಧ..!
Adam Lyth: ಪ್ರಸ್ತುತ ದೇಶೀಯ ಸೀಸನ್ನಲ್ಲಿ ಯಾರ್ಕ್‌ಷೈರ್‌ಗಾಗಿ 10 ಕೌಂಟಿ ಪಂದ್ಯಗಳನ್ನು ಆಡಿರುವ ಆ್ಯಡಮ್ ಲಿತ್ 38 ರ ಸರಾಸರಿಯಲ್ಲಿ 608 ರನ್ ಗಳಿಸಿದ್ದಾರೆ.
ಇಂಗ್ಲೆಂಡ್ ಕ್ರಿಕೆಟಿಗ ಆ್ಯಡಮ್ ಲಿತ್ ಅವರಿಗೆ ಬೌಲಿಂಗ್ ನಿಷೇಧ ಹೇರಲಾಗಿದೆ. ಅನುಮಾನಾಸ್ಪದ ಬೌಲಿಂಗ್ ಶೈಲಿ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ತಿಳಿಸಿದೆ. ಅದರಂತೆ ಇಂಗ್ಲೆಂಡ್ ಕ್ರಿಕೆಟಿಗನಿಗೆ ಪ್ರಮುಖ ಟೂರ್ನಿಗಳಲ್ಲಿ ಹಾಗೂ ದೇಶೀಯ ಲೀಗ್ನಲ್ಲಿ ಬೌಲಿಂಗ್ ಬ್ಯಾನ್ ಮಾಡಲಾಗಿದೆ. ಲೌಬರೋ ವಿಶ್ವವಿದ್ಯಾಲಯದಲ್ಲಿ ಆ್ಯಡಮ್ ಲಿತ್ ಅವರ ಬೌಲಿಂಗ್ ಶೈಲಿಯನ್ನು ಪರೀಕ್ಷಿಸಲಾಗಿದ್ದು, ಈ ವೇಳೆ ಅನುಮಾನಾಸ್ಪದ ಬೌಲಿಂಗ್ ಕ್ರಮ ಕಂಡು ಬಂದಿದೆ. ಈ ಬಗ್ಗೆ ಹೆಚ್ಚಿನ ಪರೀಕ್ಷೆಗಳನ್ನು ನಡೆಸಬೇಕಿದ್ದು, ಹೀಗಾಗಿ ಮಂಡಳಿಯ ನಿಯಮಗಳನ್ನು ಅನುಸರಿಸಿ ನಿಷೇಧದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಇಸಿಬಿ ಹೇಳಿದೆ.
34 ವರ್ಷದ ಆ್ಯಡಮ್ ಬ್ಯಾಟ್ಸ್‌ಮನ್ ಆಗಿದ್ದು, ದೇಶೀಯ ಕ್ರಿಕೆಟ್‌ನಲ್ಲಿ 20,000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅಲ್ಲದೆ ಬಲಗೈ ಆಫ್ ಸ್ಪಿನ್ ಕೂಡ ಮಾಡುತ್ತಾರೆ. ಇಂಗ್ಲೆಂಡ್ ದೇಶೀಯ ಅಂಗಳದಲ್ಲಿ ಯಾರ್ಕ್‌ಷೈರ್ ಪರ ಆಡುವ ಅವರು ಪ್ರಸ್ತುತ ದಿ ಹಂಡ್ರೆಡ್‌ನಲ್ಲಿ ನಾರ್ದರ್ನ್ ಸೂಪರ್ ಚಾರ್ಜರ್ಸ್ ತಂಡದಲ್ಲಿದ್ದಾರೆ.
ಜುಲೈ 16 ರಂದು ನಡೆದ ವಿಟಾಲಿಟಿ ಬ್ಲಾಸ್ಟ್‌ನ ಸೆಮಿ-ಫೈನಲ್‌ನಲ್ಲಿ ಲಂಕಾಶೈರ್ ವಿರುದ್ಧ ಒಂದು ಓವರ್ ಬೌಲ್ ಮಾಡಿದ್ದರು. ಈ ವೇಳೆ 15 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಈ ಪಂದ್ಯದ ವೇಳೆ ಫೀಲ್ಡ್ ಅಂಪೈರ್‌ಗಳಾದ ಡೇವಿಡ್ ಮಿಲನ್ಸ್ ಮತ್ತು ನೀಲ್ ಮಲಾಂಡರ್ ಆ್ಯಡಮ್ ಲಿತ್ ಅವರ ಬೌಲಿಂಗ್ ಶೈಲಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.
ಅಂಪೈರ್ಗಳ ದೂರಿನ ನಂತರ ಆ್ಯಡಮ್ ಅವರ ಬೌಲಿಂಗ್ ಶೈಲಿಯನ್ನು ಪರೀಕ್ಷಿಸಲಾಗಿದ್ದು, ಈ ವೇಳೆ ಅವರ ತೋಳು 15 ಡಿಗ್ರಿಗಿಂತ ಹೆಚ್ಚು ತಿರುಗಿರುವುದು ಕಂಡುಬಂದಿದೆ. ಇದೇ ಕಾರಣದಿಂದ ಪ್ರಸ್ತುತ ನಡೆಯುತ್ತಿರುವ ದಿ ಹಂಡ್ರೆಡ್ ಸೇರಿದಂತೆ ಇಸಿಬಿ ಪಂದ್ಯಾವಳಿಗಳಲ್ಲಿ ಬೌಲಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ. ಇನ್ನು ಅವರ ಬೌಲಿಂಗ್ ಶೈಲಿಯ ಬಗ್ಗೆ ಮತ್ತೊಂದು ಪರೀಕ್ಷೆ ನಡೆಸಲಾಗುವವರೆಗೂ ಈ ನಿಷೇಧ ಜಾರಿಯಲ್ಲಿರುತ್ತದೆ. ಇದಾಗ್ಯೂ ಅವರು ಟೂರ್ನಿಗಳಲ್ಲಿ ಕೇವಲ ಬ್ಯಾಟ್ಸ್‌ಮನ್ ಆಗಿ ಭಾಗವಹಿಸಲು ಅವಕಾಶ ನೀಡಲಾಗಿದೆ.
Adam Lyth has been suspended from bowling in ECB competitions following an independent assessment of his bowling action conducted at Loughborough University #OneRose
— Yorkshire CCC (@YorkshireCCC) August 12, 2022
ಪ್ರಸ್ತುತ ದೇಶೀಯ ಸೀಸನ್ನಲ್ಲಿ ಯಾರ್ಕ್‌ಷೈರ್‌ಗಾಗಿ 10 ಕೌಂಟಿ ಪಂದ್ಯಗಳನ್ನು ಆಡಿರುವ ಆ್ಯಡಮ್ ಲಿತ್ 38 ರ ಸರಾಸರಿಯಲ್ಲಿ 608 ರನ್ ಗಳಿಸಿದ್ದಾರೆ. ಹಾಗೆಯೇ ವಿಟಾಲಿಟಿ ಬ್ಲಾಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಕೇವಲ 16 ಪಂದ್ಯಗಳಲ್ಲಿ 177.36 ಸ್ಟ್ರೈಕ್ ರೇಟ್‌ನಲ್ಲಿ 525 ರನ್ ಗಳಿಸುವ ಮೂಲಕ ಆ್ಯಡಮ್ ಅಬ್ಬರಿಸಿದ್ದರು.
ಇನ್ನು ದಿ ಹಂಡ್ರೆಡ್ ಲೀಗ್ನಲ್ಲೂ ತಮ್ಮ ಫಾರ್ಮ್ ಮುಂದುವರಿಸಿದ್ದಾರೆ. ಆಗಸ್ಟ್ 3ರಂದು ಆರಂಭವಾದ ಈ ಟೂರ್ನಿಯಲ್ಲಿ ಓವಲ್ ಇನ್ವಿನ್ಸಿಬಲ್ಸ್ ತಂಡದ ವಿರುದ್ಧ 33 ಎಸೆತಗಳಲ್ಲಿ 79 ರನ್ ಸಿಡಿಸಿದ್ದರು. ಹಾಗೆಯೇ ಮ್ಯಾಂಚೆಸ್ಟರ್ ಒರಿಜಿನಲ್ಸ್ ವಿರುದ್ಧ 30 ಎಸೆತಗಳಲ್ಲಿ 51 ರನ್ ಬಾರಿಸುವ ಆ್ಯಡಮ್ ಲಿತ್ ಗಮನ ಸೆಳೆದಿದ್ದರು.