K Gowtham: 9.25 ಕೋಟಿಗೆ ಚೆನ್ನೈ ಸೂಪರ್ ಕಿಂಗ್ಸ್ ಪಾಲಾದ ಕನ್ನಡಿಗ ಕೆ. ಗೌತಮ್..
IPL 2021 Auction: ಕೃಷ್ಣಪ್ಪ ಗೌತಮ್ ಈ ಮೊದಲು ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಆದರೆ, ಅಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ.
ಐಪಿಎಲ್ನಲ್ಲಿ ಚೆನ್ನೈ ಹಾಗೂ ಬೆಂಗಳೂರು ತಂಡಗಳ ನಡುವಣ ಮ್ಯಾಚ್ ಯಾವಾಗಲೂ ಹೈ ವೋಲ್ಟೇಜ್ನಿಂದ ಕೂಡಿರುತ್ತದೆ. ಇದಕ್ಕೆ ಕಾರಣ, ತಮಿಳುನಾಡು ಹಾಗೂ ಕರ್ನಾಟಕದ ನಡುವೆ ಇರುವ ವೈಷಮ್ಯಗಳು ಕಾರಣವಾಗಿರಬಹುದು. ಆರ್ಸಿಬಿಗೆ ವಿರಾಟ್ ಕೊಹ್ಲಿ ನಾಯಕನಾದರೆ, ಚೆನ್ನೈಗೆ ಧೋನಿ ನಾಯಕ. ವಿರಾಟ್-ಧೋನಿ ಅಭಿಮಾನಿಗಳ ನಡುವೆ ಶೀತಲ ಸಮರ ನಡೆಯುತ್ತಲೇ ಇರುತ್ತದೆ ಎನ್ನುವುದು ಗುಟ್ಟಾಗೇನು ಉಳಿದಿಲ್ಲ. ಹೀಗಿರುವಾಗಲೇ ಇಂದಿನ ಐಪಿಎಲ್ ಹರಾಜಿನಲ್ಲಿ ಕನ್ನಡಿಗ ಕೃಷ್ಣಪ್ಪ ಗೌತಮ್ ದೊಡ್ಡ ಮೊತ್ತಕ್ಕೆ ಚೆನ್ನೈ ಪಾಲಾಗಿದ್ದಾರೆ.
ಕೃಷ್ಣಪ್ಪ ಗೌತಮ್ ಈ ಮೊದಲು ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಆದರೆ, ಅಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಆದರೆ, ಇಂದಿನ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಗೌತಮ್ ಸೇಲ್ ಆಗಿದ್ದಾರೆ.
ಗೌತಮ್ ಮೂಲ ಬೆಲೆ 20 ಲಕ್ಷ ರೂಪಾಯಿ ಆಗಿತ್ತು. ಒಂದೊಂದೇ ತಂಡಗಳು ಗೌತಮ್ ಮೇಲೆ ಬಿಡ್ ಮಾಡಲು ಆರಂಭಿಸಿದ್ದವು. ಗೌತಮ್ನನ್ನು ಪಡೆಯಲು ಡೆಲ್ಲಿ ಕ್ಯಾಪಿಟಲ್ಸ್, ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ನಡುವೆ ಬಿಗ್ ಫೈಟ್ ಏರ್ಪಟ್ಟಿತ್ತು. ಕೊನೆಗೆ ಸಿಎಸ್ಕೆ ಕೂಡ ಈ ರೇಸ್ನಲ್ಲಿ ಸೇರಿಕೊಂಡು, ಅಂತಿಮವಾಗಿ 9.25 ಕೋಟಿ ರೂಪಾಯಿಗೆ ಗೌತಮ್ರನ್ನು ಖರೀದಿಸಿತ್ತು.
ದಾಖಲೆ ಬರೆದ ಕ್ರಿಸ್ ಮಾರಿಸ್..
2021ರ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕ್ರಿಸ್ ಮೊರಿಸ್ 16.25 ಕೋಟಿ ರೂಪಾಯಿಗೆ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ. ಈ ಮೂಲಕ ಅವರು ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಇಂದಿನ ಹರಾಜು ಪ್ರಕ್ರಿಯೆಯಲ್ಲಿ ಕ್ರಿಸ್ ಮೊರಿಸ್ ಮೂಲ ಬೆಲೆ 75 ಲಕ್ಷ ರೂಪಾಯಿ ಇತ್ತು. ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕ್ರಿಸ್ 2020ರಲ್ಲಿ ಆರ್ಸಿಬಿ ಪರ ಆಡಿದ್ದರು. ಗಾಯದ ಸಮಸ್ಯೆಯಿಂದ ಕೆಲ ಮ್ಯಾಚ್ಗಳಿಗೆ ಅವರು ಅಲಭ್ಯರಾಗಿದ್ದರು. ಆದರೆ, ಆಡಿದ ಕೆಲವೇ ಮ್ಯಾಚ್ಗಳಲ್ಲಿ ಅವರು ಮಿಂಚಿದ್ದರು. ಆದಾಗ್ಯೂ, ಆರ್ಸಿಬಿ ಅವರನ್ನು ತಂಡದಿಂದ ಕೈಬಿಟ್ಟಿತ್ತು.
ಇದನ್ನೂ ಓದಿ: Chris Morris; IPL Auction 2021: 16.25 ಕೋಟಿ ರೂಪಾಯಿಗೆ ಮಾರಾಟವಾಗಿ ಹೊಸ ದಾಖಲೆ ಬರೆದ ಕ್ರಿಸ್ ಮೊರಿಸ್