ಭಾರತ ಮತ್ತು ಇಂಗ್ಲೆಂಡ್ ನಡುವಣ ಏಕದಿನ ಸರಣಿ ಇಂದಿನಿಂದ (ಫೆ.6) ಶುರುವಾಗಲಿದೆ. ನಾಗ್ಪುರದಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಣಕ್ಕಿಳಿಯುವವರು ಯಾರು ಎಂಬುದೇ ಪ್ರಶ್ನೆ. ಏಕೆಂದರೆ ತಂಡದಲ್ಲಿ ಸ್ಟಾರ್ ವಿಕೆಟ್ ಕೀಪರ್ಗಳಾಗಿ ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ಕಾಣಿಸಿಕೊಂಡಿದ್ದಾರೆ. ಇವರಿಬ್ಬರಲ್ಲಿ ಯಾರನ್ನು ಕಣಕ್ಕಿಳಿಸುತ್ತೀರಿ ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರನ್ನು ಕೇಳಲಾಗಿತ್ತು.
ಸರಣಿ ಆರಂಭಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ರೋಹಿತ್ ಶರ್ಮಾ ಅವರಲ್ಲಿ ಮೊದಲ ಪಂದ್ಯದಲ್ಲಿ ವಿಕೆಟ್ ಕೀಪರ್ ಆಗಿ ಆಡುವವರು ಯಾರು ಎಂದು ಕೇಳಲಾಯಿಯು. ಈ ಪ್ರಶ್ನೆಗೆ ಅದುವೇ ದೊಡ್ಡ ತಲೆನೋವು ಎಂಬಾರ್ಥದಲ್ಲಿ ಹಿಟ್ಮ್ಯಾನ್ ಉತ್ತರ ನೀಡಿದ್ದಾರೆ.
ಕೆಎಲ್ ರಾಹುಲ್ ಭಾರತದ ಪರ ವಿಕೆಟ್ ಕೀಪರ್ ಆಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇತ್ತ ರಿಷಭ್ ಪಂತ್ ಕೂಡ ಇದ್ದಾರೆ. ಇಬ್ಬರೂ ತಂಡಕ್ಕೆ ಪಂದ್ಯಗಳನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಇಬ್ಬರು ಅತ್ಯುತ್ತಮ ಆಟಗಾರರು ಇರುವುದೇ ಈಗ ದೊಡ್ಡ ತಲೆನೋವು. ಹೀಗಾಗಿ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕಿದ ಅನಿವಾರ್ಯತೆ ಇದೆ ಎಂದರು.
ಇನ್ನು ಕೆಎಲ್ ರಾಹುಲ್ ಹಲವಾರು ವರ್ಷಗಳಿಂದ ಏಕದಿನ ಮಾದರಿಯಲ್ಲಿ ನಮಗಾಗಿ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾರೆ. ಕಳೆದ 10-15 ಏಕದಿನ ಪಂದ್ಯಗಳನ್ನು ನೋಡಿದರೆ, ತಂಡಕ್ಕೆ ಏನು ಬೇಕೆಂಬುದನ್ನು ನಿಖರವಾಗಿ ಮಾಡಿದ್ದಾರೆ. ಹೀಗಾಗಿ ಈ ಹಿಂದಿನ ಪ್ರದರ್ಶನದ ಮೇಲೆ ಆಯ್ಕೆ ಮಾಡಲಿದ್ದೇವೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ರೋಹಿತ್ ಶರ್ಮಾ ಅವರ ಹೇಳಿಕೆಯಂತೆ ಮೊದಲ ಏಕದಿನ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕೆಎಲ್ ರಾಹುಲ್ ಕಣಕ್ಕಿಳಿಯುವುದು ಬಹುತೇಕ ಖಚಿತ. ಏಕೆಂದರೆ ಏಕದಿನ ವಿಶ್ವಕಪ್ನಲ್ಲಿ ರಾಹುಲ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ಕನ್ನಡಿಗನಿಗೆ ಚಾನ್ಸ್ ಸಿಗುವುದನ್ನು ಎದುರು ನೋಡಬಹುದು.
ಇದಾಗ್ಯೂ ರಿಷಭ್ ಪಂತ್ ಅವರನ್ನು 2ನೇ ಅಥವಾ 3ನೇ ಪಂದ್ಯದಲ್ಲಿ ಕಣಕ್ಕಿಳಿಸಿ ಪ್ರಯೋಗ ನಡೆಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದಲ್ಲಿ ಎಡಗೈ ಬ್ಯಾಟರ್ನ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಯಾರಾದರೂ ವಿಫಲರಾದರೆ ರಿಷಭ್ ಪಂತ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಸಬಹುದು. ಅದರಂತೆ ಮೊದಲ ಏಕದಿನ ಪಂದ್ಯಕ್ಕೆ ಟೀಮ್ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ.
ಭಾರತ ಪ್ಲೇಯಿಂಗ್ 11 (ಸಂಭಾವ್ಯ): ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.
ಇದನ್ನೂ ಓದಿ: ಬ್ರಾವೊ ವಿಶ್ವ ದಾಖಲೆ ಬೌಲ್ಡ್: ಹೊಸ ಇತಿಹಾಸ ನಿರ್ಮಿಸಿದ ರಶೀದ್ ಖಾನ್
ಇಂಗ್ಲೆಂಡ್ ಪ್ಲೇಯಿಂಗ್ 11: ಬೆನ್ ಡಕೆಟ್, ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆಥೆಲ್, ಬ್ರೈಡನ್ ಕಾರ್ಸ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಸಾಕಿಬ್ ಮಹಮೂದ್.